Site icon Vistara News

ವಿಸ್ತಾರ ಸಂಪಾದಕೀಯ: ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ ಸ್ವಾಗತಾರ್ಹ

Vistara Editorial, Uniform Civil Code of Uttarakhand is welcome

ತ್ತರಾಖಂಡ (Uttarakhand) ಸರ್ಕಾರ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ವಿಧೇಯಕವನ್ನು (uniform civil code) ಮಂಡಿಸಿ ಅಂಗೀಕಾರ ಪಡೆದಿದೆ. ಆ ಮೂಲಕ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗೋವಾದಲ್ಲಿ ಈಗಾಗಲೇ ಪೋರ್ಚುಗೀಸ್ ಆಡಳಿತದಲ್ಲಿ ಜಾರಿಗೆ ತಂದಿದ್ದ ಒಂದು ಬಗೆಯ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ. ವಿಧೇಯಕ ಕುರಿತು ಮಾತನಾಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, “ಮದುವೆ, ಜೀವನಾಂಶ, ಉತ್ತರಾಧಿಕಾರ ಮತ್ತು ವಿಚ್ಛೇದನದಂತಹ ವಿಷಯಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಏಕರೂಪ ನಾಗರಿಕ ಸಂಹಿತೆ ಎಲ್ಲರಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ. ಏಕರೂಪ ನಾಗರಿಕ ಸಂಹಿತೆಯು ಮಹಿಳೆಯರ ವಿರುದ್ಧ ಅನ್ಯಾಯವನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಒಂದು ವೇಳೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದಾದರೆ, ಅದಕ್ಕೆ ಮಾದರಿಯಾಗಬಹುದಾದ ಹಲವು ಅಂಶಗಳು ಇದರಲ್ಲಿವೆ(Vistara Editorial).

ಮುಖ್ಯವಾಗಿ, ಇದರಲ್ಲಿ, ಹೆಚ್ಚುತ್ತಿರುವ ಲಿವ್-ಇನ್ ಸಂಬಂಧಗಳ ಬಗ್ಗೆ ತುಸು ಕಠಿಣ ನಿಲುವು ತೆಗೆದುಕೊಳ್ಳಲಾಗಿದೆ. ಇದನ್ನು ಜಿಲ್ಲಾಡಳಿತದ ಮುಂದೆ ನೋಂದಣಿ ಮಾಡಿಕೊಳ್ಳಬೇಕು; ಇಲ್ಲದಿದ್ದರೆ ಅಪರಾಧವಾಗುತ್ತದೆ. ನೋಂದಣಿ ಮಾಡದಿದ್ದರೆ ಅಂಥ ಜೋಡಿಯನ್ನು ಜೈಲಿಗೆ ಕಳಿಸಬಹುದು. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಒಟ್ಟಿಗೆ ವಾಸಿಸಲು ಬಯಸಿದ್ದರೆ ಅದಕ್ಕೆ ಪೋಷಕರ ಒಪ್ಪಿಗೆಯೂ ಅಗತ್ಯವಿದೆ. ʼಸಾರ್ವಜನಿಕ ನೈತಿಕತೆಗೆ ವಿರುದ್ಧವಾದ ಪ್ರಕರಣʼಗಳಲ್ಲಿ ಲಿವ್-ಇನ್ ಸಂಬಂಧಗಳನ್ನು ನೋಂದಾಯಿಸಲಾಗುವುದಿಲ್ಲ. ಜೋಡಿಯಲ್ಲಿ ಒಬ್ಬರು ಮೊದಲೇ ವಿವಾಹಿತನಾಗಿದ್ದರೆ ಅಥವಾ ಇನ್ನೊಂದು ಸಂಬಂಧದಲ್ಲಿದ್ದರೆ, ಒಬ್ಬರು ಅಪ್ರಾಪ್ತ ವಯಸ್ಕರಾಗಿದ್ದರೆ, ಅಥವಾ ಒಬ್ಬರ ಒಪ್ಪಿಗೆಯನ್ನು “ಬಲಾತ್ಕಾರ, ವಂಚನೆಯಿಂದ ಪಡೆದಿದ್ದರೆ” ಇವೆಲ್ಲ ಶಿಕ್ಷಾರ್ಹ ಅಪರಾಧಗಳಾಗುತ್ತವೆ. ನೋಂದಾಯಿತ ಲಿವ್-ಇನ್ ಸಂಬಂಧಗಳ ʼಮುಕ್ತಾಯʼಕ್ಕೆ ಕೂಡ ಲಿಖಿತ ಹೇಳಿಕೆಯ ಅಗತ್ಯವಿರುತ್ತದೆ. ಇದು ʼಸಂಶಯಾಸ್ಪದʼ ಎಂದು ರಿಜಿಸ್ಟ್ರಾರ್ ಭಾವಿಸಿದರೆ ಪೊಲೀಸ್ ತನಿಖೆಗೆ ನೀಡಬಹುದು.

ಇದುವರೆಗೆ ಯಾವುದೇ ಕಾಯಿದೆ, ಮದುವೆಯಿಂದ ಆಚೆಗಿನ ಸಂಬಂಧಗಳಿಂದ ಜನಿಸಿದ ಮಕ್ಕಳ ಆಸ್ತಿ ಹಕ್ಕಿನ ಬಗ್ಗೆ ಏನನ್ನೂ ಹೇಳಿರಲಿಲ್ಲ. ಉತ್ತರಾಖಂಡದ ಯುಸಿಸಿಯಲ್ಲಿರುಬ ಇನ್ನೊಂದು ಪ್ರಮುಖ ಅಂಶವೆಂದರೆ, ಲಿವ್-ಇನ್ ಸಂಬಂಧಗಳಿಂದ ಜನಿಸಿದ ಮಕ್ಕಳು ಕೂಡ ದಾಂಪತ್ಯದ ಮಕ್ಕಳಂತೆಯೇ ಕಾನೂನು ಮಾನ್ಯತೆಯನ್ನು ಪಡೆಯುತ್ತಾರೆ. ಅಂದರೆ ಅವರು ಕಾನೂನುಬದ್ಧ ಮಗುವಾಗುತ್ತಾರೆ. ಎಲ್ಲಾ ಮಕ್ಕಳ ಹಕ್ಕುಗಳೂ ಒಂದೇ ಆಗಿರುತ್ತವೆ. ಯಾವುದೇ ಮಗುವನ್ನು ʼಅಕ್ರಮ’ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲದಾಗುತ್ತದೆ.

ಇನ್ನು, ಈ ಕಾಯಿದೆಯಲ್ಲಿ ಬಾಲ್ಯವಿವಾಹ ಮತ್ತು ನಿಷೇಧಿತ ವ್ಯಾಪ್ತಿಯ ಸಂಬಂಧದೊಳಗೆ ಮದುವೆಯಾಗುವುದನ್ನು ಸಹ ಅಪರಾಧವೆಂದು ಪರಿಗಣಿಸಲಾಗಿದೆ. ಸಂಹಿತೆಯಡಿಯಲ್ಲಿ ಸೂಚಿಸಲಾದ ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಪಡೆಯುವ ವಿಚ್ಛೇದನದ ವಿಧಾನದ ಹೊರತಾಗಿ ಬೇರೆ ವಿಧಾನಗಳ ಮೂಲಕ ದಾಂಪತ್ಯದಿಂದ ಬಿಡುಗಡೆ ಪಡೆಯುವುದು ಅಪರಾಧವಾಗುತ್ತಿದ್ದು, ಅದಕ್ಕೆ ಜೈಲು ಶಿಕ್ಷೆ ಮತ್ತು ದಂಡವಿರುತ್ತದೆ. ಮತ್ತು, ಯಾವುದೇ ವ್ಯಕ್ತಿಗೆ ಮರುಮದುವೆಯಾಗಲು ಯಾವುದೇ ಷರತ್ತುಗಳನ್ನು ಅನುಸರಿಸಲು ಒತ್ತಾಯಿಸುವುದು, ಪ್ರಚೋದಿಸುವುದು ಸಹ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುವ ಶಿಕ್ಷೆಯಾಗಿದೆ.

ಈ ಕೋಡ್‌ನ ಇನ್ನೊಂದು ಗಮನಾರ್ಹ ಅಂಶವೆಂದರೆ ಇದು ಹಿಂದೂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಕೋಪರ್ಸನರಿ ಪ್ರಾಪರ್ಟಿ (ಜಂಟಿ ಆಸ್ತಿ ಅಧಿಕಾರ) ವ್ಯವಸ್ಥೆಯನ್ನು ರದ್ದುಗೊಳಿಸುತ್ತದೆ. ಹಿಂದೂ ಉತ್ತರಾಧಿಕಾರ ಕಾಯಿದೆ- 1956ರ ಅಡಿಯಲ್ಲಿ, ಆಸ್ತಿಯನ್ನು ಕೋಪರ್ಸನರಿ ಆಸ್ತಿ ಅಥವಾ ಸ್ವಯಂ-ಸ್ವಾಧೀನಪಡಿಸಿಕೊಂಡ ಆಸ್ತಿಯಾಗಿ ಇರಿಸಬಹುದು. ನಾಲ್ಕು ತಲೆಮಾರುಗಳ ಹಿಂದೂಗಳು ಪೂರ್ವಜರ ಆಸ್ತಿಯನ್ನು ಕೋಪರ್ಸನರ್‌ಗಳಾಗಿ ಹೊಂದಬಹುದು. ಸ್ವಯಂ-ಸ್ವಾಧೀನಪಡಿಸಿಕೊಂಡ ಆಸ್ತಿಯು ವೈಯಕ್ತಿಕ ಆಸ್ತಿಯಾಗಿರುತ್ತದೆ ಮತ್ತು ಮರಣದ ನಂತರ ನೇರ ಉತ್ತರಾಧಿಕಾರಿಗಳಿಗೆ ಹೋಗುತ್ತದೆ. ಕೋಪರ್ಸನರಿ ಆಸ್ತಿಯಲ್ಲಿ ಸತ್ತವರ ಪಾಲು ಮತ್ತೆ ಸಮಗ್ರ ಆಸ್ತಿಯ ಭಾಗವಾಗುತ್ತದೆ. ಪರಿಣಾಮವಾಗಿ, ಬದುಕುಳಿದವರು ಕೋಪರ್ಸನರಿ ಆಸ್ತಿಯಲ್ಲಿ ವೈಯಕ್ತಿಕ ಪಾಲನ್ನು ಪಡೆಯಲು, ಮತ್ತೆ ಆಸ್ತಿಯನ್ನು ವಿಭಜಿಸಬೇಕು. ಉತ್ತರಾಖಂಡದ UCC ಈ ವ್ಯವಸ್ಥೆಯನ್ನು ತೆಗೆದುಹಾಕುವುದರಿಂದ ಆಸ್ತಿಯಲ್ಲಿ ಸಮಾನ ಹಕ್ಕು ಪಡೆಯಲು ಸಾಧ್ಯವಾಗಲಿದೆ.

ಹೀಗೆ ಹಲವು ವಿಶಿಷ್ಟತೆಗಳನ್ನು ಹೊಂದಿರುವ ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆಯನ್ನು ಕಾನೂನು ತಜ್ಞರು ಗಮನಿಸಬೇಕಿದೆ. ಇಡೀ ದೇಶಕ್ಕೆ ಅನ್ವಯಿಸುವ ಮುನ್ನ ಇದರಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು. ಲಿವ್-ಇನ್‌ ಸಂಬಂಧಕ್ಕೆ ಸಂಬಂಧಿಸಿದ ಕೆಲವು ನಿಬಂಧನೆಗಳು ಅಧಿಕಾರಶಾಹಿಯಿಂದ ದುರ್ಬಳಕೆಗೆ ಒಳಗಾಗಬಹುದಾದ ಸಾಧ್ಯತೆಯೂ ಇರುವುದರಿಂದ, ಅದನ್ನು ಸೌಮ್ಯಗೊಳಿಸುವ ಅವಶ್ಯಕತೆ ಕಾಣಿಸಬಹುದು. ಹೀಗೆ ಈ ಸಂಹಿತೆಯ ವಿಮರ್ಶೆಗೂ ಆಸ್ಪದವಿದೆ. ಆದರೆ ಒಟ್ಟಾರೆಯಾಗಿ ಈ ನಡೆ ಸಮಾನ, ಸಾಮರಸ್ಯದ ಭಾರತವೊಂದನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಮುಂದಿಟ್ಟ ಹೆಜ್ಜೆಯಾಗಿದೆ. “ಏಕರೂಪ ನಾಗರಿಕ ಸಂಹಿತೆಯನ್ನು ತರುವಲ್ಲಿ ಸಾರ್ವಭೌಮ ಭಾರತ ಶ್ರಮಿಸಬೇಕುʼʼ ಎಂದು ಡಾ. ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಹೇಳಿರುವ ಮಾತಿಗೆ ಈ ಮೂಲಕ ಇನ್ನಷ್ಟು ಚಾಲನೆ ಸಿಗಲಿ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಲಿವ್‌ ಇನ್‌ ಸಂಬಂಧಕ್ಕೆ ಉತ್ತರದಾಯಿತ್ವ ಕಲ್ಪಿಸುವ ಸಂಹಿತೆ

Exit mobile version