ದೇಶಾದ್ಯಂತ ದೀಪಾವಳಿ ಹಬ್ಬದ (Deepavali 2023) ಸಂಭ್ರಮ ಮನೆಮಾಡಿದೆ. ನಾಗರಿಕರು ಪಟಾಕಿ, ಹಣತೆ, ದೇವರ ಫೋಟೊ, ಮೂರ್ತಿ ಸೇರಿ ಹಲವು ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇದರ ಬೆನ್ನಲ್ಲೇ, “ದೇಶದ ಜನರು ದೇಶೀಯ ವಸ್ತುಗಳನ್ನೇ ಖರೀದಿಸಿ. ವೋಕಲ್ ಫಾರ್ ಲೋಕಲ್ (Vocal For Local) ಎಂಬ ಅಭಿಯಾನಕ್ಕೆ ಬೆಂಬಲ ನೀಡಿ” ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕರೆ ನೀಡಿದ್ದು, ದೇಶದ ನಾಗರಿಕರು, ಬಾಲಿವುಡ್ ನಟ-ನಟಿಯರು, ಉದ್ಯಮಿಗಳು ಸೇರಿ ಹತ್ತಾರು ಗಣ್ಯರು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಬಯೋಕಾನ್ ಸಂಸ್ಥೆ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಅವರು ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಬೆಂಬಲ ಘೋಷಿಸಿದ್ದು, ಹಲವು ದೇಶೀ ಉತ್ಪನ್ನಗಳನು ನೆನಪಿಸಿಕೊಂಡ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಬಾಲಿವುಡ್ ನಟನಟಿಯರು, ಉದ್ಯಮಿಗಳು, ವ್ಯಾಪಾರಿಗಳು ಕೂಡ ಬೆಂಬಲ ಸೂಚಿಸಿದ್ದಾರೆ.
ದೀಪಾವಳಿ ಸೇರಿ ಯಾವುದೇ ಪ್ರಮುಖ ಹಬ್ಬವಿರಲಿ, ಪಟಾಕಿ, ದೇವರ ಫೋಟೊದಿಂದ ಹಿಡಿದು, ಕುಂಕುಮದವರೆಗೆ ಚೀನಾದ ವಸ್ತುಗಳೇ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತವೆ. ಪ್ರತಿ ಹಬ್ಬದ ವೇಳೆ ಚೀನಾದ ಉತ್ಪನ್ನಗಳು ಭಾರತದ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಆದರೆ, ಪ್ರಧಾನಿ ಮೋದಿಯವರು ನೀಡಿದ ʼವೋಕಲ್ ಫಾರ್ ಲೋಕಲ್ʼ ಕರೆಯಿಂದಾಗಿ ಈ ಬಾರಿಯ ದೀಪಾವಳಿ ವೇಳೆ ಚೀನಾಗೆ ಒಂದು ಲಕ್ಷ ಕೋಟಿ ರೂ. ನಷ್ಟವಾಗಲಿದೆ ಎಂದು ತಿಳಿದುಬಂದಿದೆ. ಮನ್ ಕೀ ಬಾತ್ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಮೋದಿ ದೇಶದ ಜನರಿಗೆ ಕರೆ ನೀಡಿದ್ದರು. “ಹಬ್ಬಗಳ ಸಂದರ್ಭಗಳಲ್ಲಿ ದೇಶೀಯ ಉತ್ಪನ್ನಗಳನ್ನೇ ಖರೀದಿಸಿ. ವೋಕಲ್ ಫಾರ್ ಲೋಕಲ್ ಎಂಬುದು ಎಲ್ಲರ ಮಂತ್ರವಾಗಿರಲಿ. ಇದರಿಂದ ಸ್ಥಳೀಯ ರೈತರು, ಕರಕುಶಲಕರ್ಮಿಗಳಿಗೆ ಅನುಕೂಲವಾಗಲಿದೆ” ಎಂದು ಮೋದಿ ಕರೆ ನೀಡಿದ್ದರು. ಈಗ ಮೋದಿ ಅವರ ಕರೆಗೆ ಜನಬೆಂಬಲ ವ್ಯಕ್ತವಾಗುತ್ತಿದೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿ, ಬಟ್ಟೆ, ಹಣತೆ, ದೇವರ ಫೋಟೊಗಳು ಸೇರಿ ಹಲವು ಚೀನಾ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ಅದರಲ್ಲೂ, ಗೃಹೋಪಯೋಗಿ ವಸ್ತುಗಳು, ಮೊಬೈಲ್ ಸೇರಿ ಹಲವು ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಂತೂ ಚೀನಾ ಪ್ರಾಬಲ್ಯವಿದೆ. ಆದರೆ, ಈ ಬಾರಿ ದೇಶದ ಜನ ಹೆಚ್ಚಿನ ಪ್ರಮಾಣದಲ್ಲಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದಾಗಿ ಚೀನಾಗೆ ಭಾರಿ ಪ್ರಮಾಣದಲ್ಲಿ ನಷ್ಟವಾಗಲಿದೆ ಎಂದು ವರದಿಗಳು ತಿಳಿಸಿವೆ. ಸರಿಯಾಗಿ ಅನುಷ್ಠಾನಕ್ಕೆ ತಂದರೆ ʼವೋಕಲ್ ಫಾರ್ ಲೋಕಲ್ʼ ಎಂಬುದು ದೇಶದ ಆರ್ಥಿಕತೆಯ ನಾಡಿ ಹಿಡಿಯುವ ಒಂದು ದಿವ್ಯ ಮಂತ್ರವೇ ಆಗಬಹುದು. ಹಿಂದೆ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ʼವಿದೇಶಿ ವಸ್ತುಗಳಿಗೆ ಬಹಿಷ್ಕಾರʼ ಹಾಗೂ ʼದೇಸಿ ಖಾದಿಯ ಬಳಕೆʼಯ ಅಭಿಯಾನವು ಜನಪ್ರಿಯವಾಗಿತ್ತು ಮಾತ್ರವಲ್ಲದೆ, ಒಂದು ಮಹಾ ಚಳವಳಿಯನ್ನೇ ರೂಪಿಸಿತ್ತು. ಇದರ ರೂವಾರಿ ಆಗಿದ್ದವರೂ ಗುಜರಾತ್‌ನಿಂದ ಬಂದ ಮಹಾತ್ಮ ಗಾಂಧಿಯವರೇ ಆಗಿದ್ದರು ಎಂಬುದೂ ಗಮನಾರ್ಹ. ಆ ಅಭಿಯಾನದ ಪರಿಣಾಮ ಬ್ರಿಟಿಷರ ಬಟ್ಟೆ ಕಾರ್ಖಾನೆಗಳು ತೀವ್ರ ಹೊಡೆತ ಅನುಭವಿಸಿದವು ಎಂಬುದನ್ನು ಇಲ್ಲಿ ನೆನೆಯಬಹುದು.
ಹೀಗೆ, ಒಂದು ವಸಾಹತುಶಾಹಿಯನ್ನು ಎದುರಿಸಲು ಸ್ಥಳೀಯತೆ ಎಂಬುದು ಯಾವಾಗಲೂ ಬಳಕೆಯಾಗುತ್ತ ಬಂದಿದೆ. ಇಂದು ಚೀನಾ ಮೂಲದ ಉತ್ಪನ್ನ ಕಂಪನಿಗಳ ವಸಾಹತುಶಾಹಿ ತುಂಬ ಗಟ್ಟಿಯಾಗಿ ಭಾರತದಲ್ಲಿಯೂ ಇತರ ಏಷ್ಯಾ ರಾಷ್ಟ್ರಗಳಲ್ಲಿಯೂ ಬೇರೂರಬಿಟ್ಟಿದೆ. ಅಗ್ಗದ ವಸ್ತುಗಳ ಮೂಲಕ ನಮ್ಮ ಮನವನ್ನು ಗೆಲುವಲ್ಲಿ ಅವರು ಯಶಸ್ವಿ ಆಗಿಬಿಟ್ಟಿದ್ದಾರೆ. ಆದರೆ ಇದನ್ನು ನಾವು ಎದುರಿಸಲೇಬೇಕಿದೆ. ಅಗ್ಗದ ಚೀನಾ ಆಟಿಕೆಗಳ ಹಾವಳಿಯ ಪರಿಣಾಮ ನಮ್ಮದೇ ಆದ, ಅಂದದ ಚಂದದ ಚನ್ನಪಟ್ಟಣದ ಮರದ ಗೊಂಬೆಗಳ ಕರಕೌಶಲ ಉದ್ಯಮ ನೆಲಕಚ್ಚಿದುದನ್ನು ನಾವು ಗಮನಿಸಬಹುದು. ಹೀಗೆ ನೂರಾರು ದೇಸಿ ಉತ್ಪನ್ನಗಳು ಮಾಯವಾಗಿವೆ ಅಥವಾ ಅಳಿವಿನ ಅಂಚಿನಲ್ಲಿವೆ. ಇವುಗಳನ್ನು ಕಾಪಾಡಿಕೊಳ್ಳಬೇಕಿದ್ದರೆ ನಾವು ʼವೋಕಲ್ ಫಾರ್ ಲೋಕಲ್ʼ ಆಗಲೇಬೇಕಿದೆ. ಇದು ದೀಪಾವಳಿ ಸಂದರ್ಭದ ಒಂದು ಹೆಜ್ಜೆ ಮಾತ್ರವಾಗದೆ, ಒಂದು ಜನಪ್ರಿಯ ಅಭಿಯಾನವೇ ಆಗಿ ರೂಪುಗೊಳ್ಳಲಿ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಪಕ್ಷಕ್ಕೆ ಬಲ ತುಂಬಲಿ