ನಾವೀಗ ಕೃತಕ ಬುದ್ಧಿಮತ್ತೆ ಯುಗದಲ್ಲಿದ್ದೇವೆ. ಪ್ರತಿಕ್ಷೇತ್ರದಲ್ಲೂ ಕೃತಕ ಬದ್ಧಿಮತ್ತೆ (artificial intelligence – AI) ಬಳಕೆಯಾಗುತ್ತಿದೆ. ಕೈಗಾರಿಕೆಗಳು, ಮಾಹಿತಿ ತಂತ್ರಜ್ಞಾನ, ಸೇವಾ ಕ್ಷೇತ್ರಗಳಲ್ಲಂತೂ ಈ ತಂತ್ರಜ್ಞಾನ ಧೂಳೆಬ್ಬಿಸಿದೆ. ಅದರಲ್ಲೂ ಮೈಕ್ರೋಸಾಫ್ಟ್ ಚಾಟ್ಜಿಪಿಟಿ (ChatGPT) ಚಾಲ್ತಿಗೆ ಬಂದ ಮೇಲೆ ಕೆಲಸದ ವ್ಯಾಖ್ಯಾನಗಳೇ ಬದಲಾಗಿವೆ. ಈಗೀಗ ಸುದ್ದಿ ವಾಹಿನಿಗಳಲ್ಲಿ (News Channel) ಕೃತಕ ಬುದ್ಧಿಮತ್ತೆಯ ಕರಾಮತ್ತು ಶುರುವಾಗಿದೆ. ಭಾರತದ ಹಲವು ಚಾನೆಲ್ಗಳಲ್ಲಿ ಎಐ ಆ್ಯಂಕರ್ಗಳು (AI News Anchors) ಕಾಣಿಸಿಕೊಂಡಿದ್ದಾರೆ. ನಮ್ಮ ಕನ್ನಡ ಸುದ್ದಿವಾಹಿನಗಳಲ್ಲಿ ಎಐ ನಿರೂಪಕಿಯರ ಕಾರುಬಾರು ಶುರುವಾಗಿದೆ. ಏನಿದು ಎಐ ಆ್ಯಂಕರ್, ಹೇಗೆ ವರ್ಕ್ ಆಗುತ್ತದೆ, ಭವಿಷ್ಯದಲ್ಲಿಈ ಆ್ಯಂಕರ್ಗಳ ಯಾವ ಹಂತದಲ್ಲಿ ಇರಲಿದ್ದಾರೆ, ನಿಜವಾದ ನಿರೂಪಕರ ಉದ್ಯೋಗ ನಷ್ಟವಾಗುತ್ತಾ? ಇತ್ಯಾದಿ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ(Vistara Explainer).
ಏನಿದು ಎಐ ನ್ಯೂಸ್ ಆ್ಯಂಕರ್?
ಕನ್ನಡದ ಕೆಲವು ಸುದ್ದಿವಾಹಿನಿಗಳೂ ಸೇರಿದಂತೆ ಭಾರತದ ಹಲವು ಸುದ್ದಿವಾಹಿನಿಗಳಲ್ಲಿ ಕೃತಕ ಬುದ್ಧಿಮತ್ತೆ ಆಧರಿತ ಸುದ್ದಿ ವಾಚಕ/ವಾಚಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಸಿಂಪಲ್ ಭಾಷೆಯಲ್ಲಿ ಹೇಳಬೇಕು ಎಂದರೆ, ಇದೊಂದು ರೋಬೋ ನ್ಯೂಸ್ ಆ್ಯಂಕರ್ ಅಷ್ಟೇ. ಇದೊಂದು ಕಂಪ್ಯೂಟರ್ ಸೃಜಿತ ಮಾಡೆಲ್ ಆಗಿದ್ದು, ನ್ಯಾಚುರಲ್ ಲ್ಯಾಂಗ್ವೇಚ್ ಪ್ರೊಸೆಸಿಂಗ್ ಮತ್ತು ಡೀಪಲ್ ಲರ್ನಿಂಗ್ ಬಳಸಿಕೊಂಡು, ಮುಖದ ಅಭಿವ್ಯಕ್ತಿಗಳನ್ನು ಹಾಗೂ ವಾಸ್ತವಿಕ ಮಾತುಗಳನ್ನು ಹೊರಡಿಸುತ್ತದೆ. ಈ ಎಐ ನ್ಯೂಸ್ ಆ್ಯಂಕರ್ಗಳು ಯಾವುದೇ ನೀಡಲಾಗುವ ಪಠ್ಯವನ್ನು ಓದಬಲ್ಲವು ಮತ್ತು ಅದನ್ನು ಅಷ್ಟೇ ಸ್ವಾಭಾವಿಕವಾಗಿ ಹಾಗೂ ಎಂಗೇಂಜಿಂಗ್ ರೀತಿಯಲ್ಲಿ ಪ್ರಸ್ತುತಪಡಿಸಬಲ್ಲವು. ಅಂದರೆ, ಸೂಕ್ತ ಸನ್ನೆಗಳು, ದೃಷ್ಟಿ ಮತ್ತು ಭಾವನೆಗಳೊಂದಿಗೆ ಅಭಿವ್ಯಕ್ತಿಸಬಲ್ಲವು.
ಪ್ರಯೋಗ ಹಂತದಲ್ಲಿ ಎಐ ಆ್ಯಂಕರ್ಸ್
ಭಾರತದ ಮಟ್ಟಿಗೆ ಈ ಎಐ ಸುದ್ದಿ ವಾಚಕರು ಇನ್ನು ಪ್ರಯೋಗಾತ್ಮಕ ಹಂತದಲ್ಲಿದ್ದಾರೆ. ಸದ್ಯ ಕ್ಲಿಷ್ಟಕರವಾಗಿರುವಂಥ ಬ್ರೇಕಿಂಗ್ ನ್ಯೂಸ್ ಸೆಗ್ಮೆಂಟ್ನಲ್ಲಿ ಈ ಸುದ್ದಿವಾಚಕ/ವಾಚಕಿಯರು ಬಳಕೆಯಾಗುತ್ತಿಲ್ಲ. ಸುದ್ದಿವಾಹಿನಿಗಳು ಪ್ರಸ್ತುತ ಈ ಎಐ ಆ್ಯಂಕರ್ಗಳನ್ನು ಕಿರು ಸುದ್ದಿ ಬುಲೆಟಿನ್ಗಳನ್ನು ಪ್ರಸ್ತುತಪಡಿಸಲು ಬಳಸುತ್ತಿವೆ. ಕೆಲವೊಮ್ಮೆ ಎಐ ನಿರೂಪಕರಿಂದ ಲಿಪ್-ಸಿಂಕ್ ಮಾಡಲಾದ ಮಾನವ ಪತ್ರಕರ್ತರಿಂದ ಧ್ವನಿಮುದ್ರಣಗಳೊಂದಿಗೂ ಬಳಸಲಾಗುತ್ತದೆ. ಆದಾಗ್ಯೂ, ನ್ಯೂಸ್ರೂಮ್ಗಳಲ್ಲಿ ಕೃತಕ ಬುದ್ಧಿಮತ್ತೆಯ ಪ್ರವೇಶವು ಮಾನವ ಉದ್ಯೋಗಗಳಿಗೆ ಸಂಭಾವ್ಯ ಅಪಾಯವನ್ನುಂಟುಮಾಡುತ್ತದೆ ಎಂಬ ಚರ್ಚೆಗಳಿಗೆ ಇದು ಕಾರಣವಾಗಿದೆ. ಒಮ್ಮೆ ಪರಿಪೂರ್ಣವಾಗಿ ಈ ಎಐ ಆಧರಿತ ಸುದ್ದಿ ವಾಚಕಿ/ ವಾಚಕಿಯರ ಬಳಕೆಯು ಶುರುವಾದರೆ, ಉದ್ಯೋಗ ನಷ್ಟ ತಪ್ಪಿದ್ದಲ್ಲ.
ನೋಡುಗರನ್ನು ಸೆಳೆಯಬಲ್ಲವೇ?
ಕನ್ನಡದ ಎರಡು ಸುದ್ದಿವಾಹಿನಿಗಳಲ್ಲಿ ಬಳಸಲಾದ ಎಐ ನ್ಯೂಸ್ ಆಂಕರ್ಗಳನ್ನು ಗಮನಿಸಿದರೆ, ಇನ್ನೂ ಸಾಗಬೇಕಾದ ದಾರಿ ಬಹಳ ದೂರವಿದೆ ಎಂಬುದು ಗೊತ್ತಾಗುತ್ತದೆ. ಮೇಲ್ನೋಟಕ್ಕೆ ಗೊಂಬೆಯೊಂದು ಲಿಪ್ ಸಿಂಕ್ ಮಾಡುತ್ತಿರುವುದು ನೋಡುಗರಿಗೆ ಸ್ಪಷ್ಟವಾಗುತ್ತದೆ. ಅಲ್ಲಿ ಯಾವುದೇ ಭಾವನೆಗಳಾಗಲೀ, ರೋಚಕತೆಯಾಗಲೀ, ಸನ್ನೆಗಳು ಕಂಡು ಬರುವುದಿಲ್ಲ. ಹಾಗಿದ್ದಾಗ, ಗೊಂಬೆಯೊಂದು ಮಾತನಾಡಿದ ರೀತಿಯಲ್ಲಿ ಭಾಸವಾಗುತ್ತದೆ. ಈ ರೀತಿಯ ಸುದ್ದಿವಾಚನ ನೀರಸ ಎನಿಸಿಕೊಳ್ಳುತ್ತದೆ. ನೋಡುಗರನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಪರಿಪೂರ್ಣ ಎಐ ಬಳಕೆಯಲ್ಲ!
ಈಗ ಬಳಕೆಯಾಗುತ್ತಿರುವ ಎಐ ನ್ಯೂಸ್ ಆ್ಯಂಕರ್ ಪರಿಪೂರ್ಣ ಎಐ ತಂತ್ರಜ್ಞಾನ ಅಲ್ಲ ಎಂಬ ವಾದಗಳು ಚಾಲ್ತಿಯಲ್ಲಿವೆ. ಅಮೆಜಾನ್ ಬಳಸುವ ಅಲೆಕ್ಸಾ, ಬ್ಯಾಂಕಿಂಗ್ ಚಾಲತಾಣಗಳಲ್ಲಿ ಬಳಕೆಯಾಗುವ ಅಸಿಸ್ಟಂಟ್ ಎಐ ಆಧರಿತ ಚಾಟ್ಬಾಟ್ಗಳನ್ನು ಇನ್ನಷ್ಟು ಪಾಲಿಸ್ ಮಾಡಿದ ನ್ಯೂಸ್ ಆ್ಯಂಕರ್ ರೀತಿಯಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅಂದರೆ, ಸಂಪೂರ್ಣ ಕೃತಕ ಬುದ್ಧಿಮತ್ತೆ ಆಧರಿತ ನ್ಯೂಸ್ ಆ್ಯಂಕರ್ಗಳು ಬಳಕೆಯಾಗಿದ್ದಾದರೆ, ಅಲ್ಲಿ ನಿಮಗೆ ಒಂಚೂರು ಅನುಮಾನಕ್ಕೆ ದಾರಿ ಇರುವುದಿಲ್ಲ ಎಂಬುದು ಒಂದು ವಾದ. ಏನೇ ಇರಲಿ. ಸುದ್ದಿ ಮನೆಗಳು ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಮುಂದಾಗಿರುವುದು ಸಂತಸ. ಹಾಗೆಯೇ, ಉದ್ಯೋಗ ನಷ್ಟ ಭೀತಿ ಕೂಡ ಇದ್ದೇ ಇದೆ.
ಫೇಸ್ಬುಕ್ ಬಳಕೆದಾರ ವಿನಾಯಕ್ ಜಿ ಅವರು ಎಐ ನ್ಯೂಸ್ ಆ್ಯಂಕರ್ಗಳ ಕುರಿತಾದ ಕುತೂಹಲವನ್ನು ತಮ್ಮದೇ ಆದ ರೀತಿಯಲ್ಲಿ ಒಡೆದಿದ್ದಾರೆ. ಅವರ ಪ್ರಕಾರ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಥವಾ ಎಐ ಸುದ್ದಿ ನಿರೂಪಕಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಾನು ಕೂಡ ಅದರಲ್ಲಿ ಅಂಥದ್ದು ಏನಿದೆ ಎಂದು ಅನ್ನುವುದನ್ನು ನೋಡಿದೆ. aistudios ತಾಣಕ್ಕೆ ಭೇಟಿ ನೀಡಿ, ನೀವು ಕೂಡ ಒಂದು ತಿಂಗಳು ಟ್ರಯಲ್ ಮಾಡಬಹುದು. ಯುಟ್ಯೂಬ್ನವರು ಬಳಕೆ ಮಾಡಬಹುದು. ಮಾನವಸಹಿತ ನಿರೂಪಣೆಗೂ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಿರೂಪಣೆಗೂ ಸಾಕಷ್ಟು ವ್ಯತ್ಯಾಸವಿದೆ. ನಾವು ಬರೆದುಕೊಟ್ಟ ಸ್ಕ್ರಿಪ್ಟ್ ಅನ್ನನು ಓದುತ್ತದೆ ಅಥವಾ ನಾವು ವಾಯ್ಸ್ ಓವರ್ ಹಾಕಿದರೆ, ಅದು ಹೇಳುತ್ತದೆ. ಆದರೆ, ಸುದ್ದಿ ಮನೆಯಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನಿರೂಪಕಿ ಹೆಚ್ಚು ದಿನ ಇರಲು ಸಾಧ್ಯವಿಲ್ಲ. ಲೈವ್ ಇದ್ದಾಗ, ಬ್ರೇಕಿಂಗ್ ಬಂದಾಗ, ಡಿಬೇಟ್ ಮಾಡುವಾಗ ಈ ನಿರೂಪಕಿ ಹೇಗೆ ಪ್ರಶ್ನೆ ಕೇಳುತ್ತಾಳೆ. ಹೇಗೆ ಉತ್ತರಿಸುತ್ತಾಳೆ ಎನ್ನುವುದಕ್ಕೆ ಉತ್ತರವಿಲ್ಲ. ಹೌದು. ಈ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಕಂಡುಕೊಳ್ಳಬೇಕಿದೆ.
ತೀರಾ ಅಂಥ ವಿಶೇಷ ಏನಲ್ಲ!
ಸುದ್ದಿ ಮನೆಯಲ್ಲಿ ಬಳಕೆಯಾಗುತ್ತಿರುವ ಎಐ ನ್ಯೂಸ್ ಆ್ಯಂಕರ್ ತಂತ್ರಜ್ಞಾನ ತೀರಾ ಅಂಥ ವಿಶೇಷತೆ ಏನಲ್ಲ ಎನ್ನುವುದು ಕೆಲವರ ವಾದ. ಮತ್ತೊಬ್ಬ ಫೇಸ್ಬುಕ್ ಬಳಕೆದಾರರಾದ ರಾಜಾರಾಮ್ ತಲ್ಲೂರ್ ಅವರ ಪ್ರಕಾರ, ಮಾಧ್ಯಮಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಯಾವಾಗ ಬಂದಂತಾಗುತ್ತದೆ? ಮಾನವ ಸಂಪರ್ಕ ಇಲ್ಲದೇ (ಅರ್ಥಾತ್ ಸುದ್ದಿ ಡೆಸ್ಕ್ ಇಲ್ಲದೆ) ಯಾವ ಸುದ್ದಿ ಆಯ್ಕೆ ಮಾಡಬೇಕು, ಅದರ ವೇಯ್ಟೇಜ್ ಏನು, ಎಷ್ಟು ಕವರೇಜ್ ಎಂದೆಲ್ಲ ನಿರ್ಧರಿಸಿ, ಆ ಬಳಿಕ ಆ ಸುದ್ದಿಯನ್ನು “ಬಾಟ್ ಮುಖ ಆಂಕರ್” ಓದಿದ ದಿನ ಮಾಧ್ಯಮಗಳಿಗೆ ಎಐ ಬಂತು ಅಂತ ಲೆಕ್ಕ. ಕಳೆದ 10-20 ವರ್ಷಗಳಿಂದ ನಿಮ್ಮ ಆಸ್ಪತ್ರೆಯಲ್ಲೋ ಹೊಟೇಲಿನಲ್ಲೋ ಟೋಕನ್ ನಂಬರ್ ಡಿಸ್ಪ್ಲೇ ಮಾಡಿ ಓದಿ ಹೇಳುವ, ಟೆಲಿಫೋನಿನಲ್ಲಿ ಒಂದು ಒತ್ತಿ, ಎರಡು ಒತ್ತಿ ಎಂದು ಉಲಿಯುವ ಐವಿಆರ್ ವ್ಯವಸ್ಥೆಯ ಸ್ವಲ್ಪ ಸುಧಾರಿತ ರೂಪ ಇದು ಅಷ್ಟೇ. ನಿಮ್ಮ ಐಫೋನಿನಲ್ಲಿರುವ ಸಿರಿ, ಮನೆಯಲ್ಲಿರುವ ಅಲೆಕ್ಸಾ ಇತ್ಯಾದಿ ಬಾಟ್ಗಳು ಕೂಡ ಪ್ರಾಥಮಿಕ ಎಐ ಪ್ರಯತ್ನಗಳು. ಅವನ್ನು ಸೀಮಿತ ಎಂದು ಕರೆಯಬಹುದು. ಈ ವಾದದಲ್ಲಿ ಹುರುಳಿಲ್ಲ. ಈಗ ಬಳಕೆಯಾಗುತ್ತಿರುವ ಎಐ ಕೇವಲ ತೋರಿಕೆ ಎಂದಷ್ಟೇ ಹೇಳಬಹುದೇನೋ?
ಈ ಸುದ್ದಿಯನ್ನೂ ಓದಿ: AI News Anchor: ಆ್ಯಂಕರ್ಗಳೇ ಸುಂದರಿ ಎಂದು ಬೀಗಬೇಡಿ; ಒಡಿಶಾದಲ್ಲಿ AI ನ್ಯೂಸ್ ಆ್ಯಂಕರ್ಗಳು ಮಿಂಚುತ್ತಿದ್ದಾರೆ
ಅಪಾಯವಂತೂ ತಪ್ಪಿದ್ದಲ್ಲ
ಸುದ್ದಿಮನೆಗಳಲ್ಲಿ ಈಗ ಬಳೆಯಾಗುತ್ತಿರುವ ಎಐ ನ್ಯೂಸ್ ಆ್ಯಂಕರ್ ಸೀಮಿತವೋ, ವ್ಯಾಪಕತ ತಂತ್ರಜ್ಞಾನ ಫಲವೋ ಎಂಬುದು ಬೇರೆ ಚರ್ಚೆಯ ವಿಷಯ. ಆದರೆ, ಸದ್ಯದ ಮಟ್ಟಿಗೆ ಚರ್ಚಿಸಬೇಕಾದ ಸಂಗದಿ- ಉದ್ಯೋಗ ನಷ್ಟ. ಈಗಷ್ಟೇ ಅಂಬೆಗಾಲಿಡುತ್ತಿರುವ ವಿದ್ಯಮಾನವು ಮುಂದೊಂದು ದಿನ ಸಂಪೂರ್ಣವಾಗಿ ಬಳಕೆಯಾಗಲಾರಂಭಿಸಿದರೆ ಸುದ್ದಿ ಮನೆಯ ಮುಕ್ಕಾಲು ಉದ್ಯೋಗಗಳು ಕಡಿತವಾಗುವುದಿಲ್ಲ ಸಂಶಯವೇ ಇಲ್ಲ. ಎಐ ಸಂಪೂರ್ಣವಾಗಿ ಬಳಕೆಯಾಗಿ ಸುದ್ದಿವಾಚನೆ ಸಾಧ್ಯವಾದರೆ, ನ್ಯೂಸ್ ಎಡಿಟಿಂಗ್, ನಿರ್ಧರಿಸುವುದು, ರಿಪೋರ್ಟಿಂಗ್ ಸೇರಿದಂತೆ ಎಲ್ಲ ಮಾನವ ವರದಿಗಾರರು, ಡೆಸ್ಕ್ ಪತ್ರಕರ್ತರು ಮಾಡಬಹುದಾದ ಎಲ್ಲ ಕೆಲಸವನ್ನು ಮಾಡಬಹುದು. ಆಗ, ಉದ್ಯೋಗ ನಷ್ಟವಾಗದೇ ಇರದು. ನಾವು ಆ ಬಗ್ಗೆ ಯೋಚಿಸುವುದು ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.