ಮಾಜಿ ಸಂಸದ. ಆಪ್ತರು ಇವನನ್ನು ʼಬಾಹುಬಲಿʼ ಎಂದು ಕರೆಯುತ್ತಾರೆ. ಆದರೆ ಜೈನಪುರಾಣದ ಬಾಹುಬಲಿಗೆ ಈತನ ಸ್ವಭಾವ ತದ್ವಿರುದ್ಧ. ಆನಂದ್ ಮೋಹನ್ ಸಿಂಗ್ (Anand Mohan Singh) ಎಂಬ ಹೆಸರಿನ ಇವನು ಹಿಂಸೆಯ ಪ್ರತಿನಿಧಿ. ಕೊಲೆ ಅಪರಾಧಿ. ಸದ್ಯ ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಸುದ್ದಿಯಲ್ಲಿದ್ದಾನೆ. ಬಿಡುಗಡೆ ಮಾಡಿದ್ದು ಬಿಹಾರದ ನಿತೀಶ್ ಕುಮಾರ್ (Nitish Kumar) ಸರ್ಕಾರ.
ಇವನನ್ನು ಬಿಡುಗಡೆ ಮಾಡುವ ಮೂಲಕ ʻಕರ್ತವ್ಯದಲ್ಲಿದ್ದ ಸರ್ಕಾರಿ ನೌಕರನ ಹತ್ಯೆʼ ಎಂಬ ಎಂಬ ಕೊಲೆ ಕೇಸನ್ನು ಬಿಹಾರ ಗೃಹ ಇಲಾಖೆ ಅಳಿಸಿ ಹಾಕಿತು. ದರೋಡೆಕೋರ ಕಂ ರಾಜಕಾರಣಿ ಕಂ ಕೊಲೆಗಾರನಾಗಿರುವ ಆನಂದ್ ಮೋಹನ್ ಸಿಂಗ್ ಸಾಕಷ್ಟು ಪ್ರತಿರೋಧದ ಕೂಗುಗಳ ನಡುವೆಯೇ ಗುರುವಾರ ಸಹರ್ಸಾ ಜೈಲಿನಿಂದ ಹೊರನಡೆದ. ಬಿಹಾರ ಸರ್ಕಾರ ಜೈಲು ನಿಯಮಗಳನ್ನು ತಿದ್ದುಪಡಿ ಮಾಡಿ ಈತನನ್ನು ಬಿಡುಗಡೆ ಮಾಡಿದ ಟೀಕೆ ಎದುರಿಸುತ್ತಿದೆ. ಪಾಟ್ನಾದಲ್ಲಿ ನಡೆದ ಆನಂದ್ ಮೋಹನ್ ಸಿಂಗ್‌ನ ಪುತ್ರನ ಮದುವೆ ನಿಶ್ಚಿತಾರ್ಥ ಸಮಾರಂಭದಲ್ಲಿಯೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗವಹಿಸಿದ್ದರು.
ಆನಂದ್ ಮೋಹನ್ ಸಿಂಗ್ ಯಾರು?
ಬಿಹಾರದಲ್ಲಿ ತೋಳ್ಬಲವಿರುವವನನ್ನು ʼಬಾಹುಬಲಿʼ ಎನ್ನಲಾಗುತ್ತದೆ. ಈತ ಸ್ವಾತಂತ್ರ್ಯ ಹೋರಾಟಗಾರನ ಮಗ. ಆನಂದ್ ಮೋಹನ್ ಸಿಂಗ್ ಉತ್ತರ ಬಿಹಾರದ ಕೋಸಿ ಪ್ರದೇಶದಿಂದ ಬಂದವನು. ಈತ 1990ರಲ್ಲಿ ಹಂಶಿಹಿಯಿಂದ ಜನತಾದಳದಿಂದ ನಿಂತು ಬಿಹಾರ ವಿಧಾನಸಭೆಗೆ ಆಯ್ಕೆಯಾದ. ಅದು ಆತ ತನ್ನ ಅಪರಾಧ ಜೀವನಕ್ಕೆ ರಾಜಕೀಯ ಜೀವನದ ಪರೆದ ತೊಡಿಸಿದ ವರ್ಷ. ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಕುರಿತು ಮಂಡಲ್ ಆಯೋಗದ ವರದಿಯ ಅನುಷ್ಠಾನವನ್ನು ಆ ವರ್ಷ ವಿ.ಪಿ ಸಿಂಗ್ ಸರ್ಕಾರ ಪ್ರತಿಪಾದಿಸಿ, ಚುನಾವನೆಯಲ್ಲಿ ಪತನಗೊಂಡಿತ್ತು.
ಚಂದ್ರಶೇಖರ್ ಅವರು ಸಮಾಜವಾದಿ ಜನತಾ ಪಕ್ಷವನ್ನು ಒಡೆದು ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚಿಸಿದರು. ಆನಂದ್ ಮೋಹನ್ ಸಿಂಗ್, ಜನತಾ ದಳವನ್ನು ತೊರೆದು ಚಂದ್ರಶೇಖರ್ ಬಣ ಸೇರಿಕೊಂಡ. ರಜಪೂತರು ಮತ್ತು ಬ್ರಾಹ್ಮಣರ ನಾಯಕರಾದರು. ಒಬಿಸಿ ಮೀಸಲಾತಿಯನ್ನು ಬೆಂಬಲಿಸುವವರನ್ನು ಗುರಿಯಾಗಿಸಿಕೊಂಡು ಪುಂಡರ ದಾಳಿಗಳನ್ನು ಈತ ಸಂಘಟಿಸಿದ.
ಚಂದ್ರಶೇಖರ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ 1991ರ ಲೋಕಸಭಾ ಚುನಾವಣೆಗಳು ನಡೆದವು. ಬಿಹಾರದಲ್ಲಿ ಆನಂದ್ ಮೋಹನ್ ಯಾದವರ ಭದ್ರಕೋಟೆ ಎಂದು ಹೇಳಲಾದ ಮಾಧೇಪುರದಲ್ಲಿ ಚುನಾವಣಾ ಕಣಕ್ಕೆ ಇಳಿದ. ಚುನಾವಣೆ ಕಣದಲ್ಲಿ ಆನಂದ್ ಮೋಹನ್ ಮತ್ತು ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಬೆಂಬಲಿಗರ ನಡುವೆ ಹಿಂಸಾತ್ಮಕ ಘರ್ಷಣೆ ನಡೆಯಿತು. ಯಾದವರು ಮತ್ತು ಹಿಂದುಳಿದ ವರ್ಗಗಳ ನಾಯಕರಾಗಿ ಲಾಲು ಪ್ರಸಾದ್ ಯಾದವ್ ಹೊರಹೊಮ್ಮಿದಾಗ, ಲಾಲು ವಿರೋಧಿ ನಿಲುವಿಗೆ ಹೆಸರುವಾಸಿಯಾದ ಆನಂದ್ ಮೋಹನ್ ಸಿಂಗ್ ಬಿಹಾರ ಪೀಪಲ್ಸ್ ಪಾರ್ಟಿಯನ್ನು ಸ್ಥಾಪಿಸಿದ. 1994ರಲ್ಲಿ ಪತ್ನಿ ಲವ್ಲಿ ಆನಂದ್ ವೈಶಾಲಿಯಿಂದ ಉಪಚುನಾವಣೆಯಲ್ಲಿ ಗೆದ್ದರು.
ಐಎಎಸ್ ಅಧಿಕಾರಿಯ ಹತ್ಯೆ
ಜಿ. ಕೃಷ್ಣಯ್ಯ ಅವರು ಬಿಹಾರ ಕೇಡರ್‌ನ 1985ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆಯ ಅಧಿಕಾರಿ (IAS) ಆಗಿದ್ದವರು. ತೆಲಂಗಾಣದ ಮಹಬೂಬ್‌ನಗರದಿಂದ ಬಂದವರು. ಅವರು 1994ರಲ್ಲಿ ಗೋಪಾಲ್‌ಗಂಜ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅದೇ ವರ್ಷ ಡಿಸೆಂಬರ್ 5ರಂದು ಅವರು ಗೋಪಾಲ್‌ಗಂಜ್‌ಗೆ ಹಿಂದಿರುಗುತ್ತಿದ್ದಾಗ ಅವರ ಕಾರಿಗೆ ಆನಂದ್ ಮೋಹನ್ ನಡೆಸುತ್ತಿದ್ದ ಮೆರವಣಿಗೆ ಎದುರಾಯಿತು. ಆನಂದ್ ಬೆಂಬಲಿಗರು ಕೃಷ್ಣಯ್ಯ ಅವರನ್ನು ಕಾರಿನಿಂದ ಹೊರಗೆಳೆದು ಥಳಿಸಿ ಕೊಂದರು. ದರೋಡೆಕೋರ, ಭೂಮಿಹಾರ್ ಸಮುದಾಯದ ನಾಯಕ ಛೋಟಾನ್ ಶುಕ್ಲಾ ಅವರ ಹತ್ಯೆ ವಿರೋಧಿಸಿ ಮೆರವಣಿಗೆ ನಡೆಯುತ್ತಿತ್ತು.
ಇದನ್ನೂ ಓದಿ: ವಿಸ್ತಾರ Explainer: Mann ki baat @100 ಪ್ರಧಾನಿ ಮನ್ ಕಿ ಬಾತ್‌ಗೆ ನೂರು, ಕರ್ನಾಟಕದ ಸಾಧನೆಗಳ ಮಾತೇ ಜೋರು!
ಆನಂದ್ ಬಂಧನವಾಯಿತು. 2007ರಲ್ಲಿ ಆನಂದ್ ಮೋಹನ್‌ಗೆ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿತು. ಆದರೆ ಪಾಟ್ನಾ ಹೈಕೋರ್ಟ್ ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತು. ಸುಪ್ರೀಂ ಕೋರ್ಟ್‌ನಲ್ಲಿ ಆನಂದ್ ತೀರ್ಪನ್ನು ಪ್ರಶ್ನಿಸಿದ. ಆದರೆ ಯಾವುದೇ ಪರಿಹಾರ ಸಿಗಲಿಲ್ಲ. 2007ರಿಂದ ಈತ ಜೈಲಿನಲ್ಲಿದ್ದ. ತನ್ನ ಪುತ್ರ ಮತ್ತು ಶಾಸಕ ಚೇತನ್ ಆನಂದ್ ಅವರ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಈತ ಪೆರೋಲ್ ಪಡೆದ.
ತಿರುಚಿದ ಜೈಲು ನಿಯಮಾವಳಿ
ಏಪ್ರಿಲ್ 24ರಂದು ಬಿಹಾರ ಕಾನೂನು ಇಲಾಖೆಯು ಆನಂದ್ ಮೋಹನ್ ಮತ್ತು ಇತರ 26 ಕೈದಿಗಳ ಬಿಡುಗಡೆಗೆ ಅಧಿಸೂಚನೆಯನ್ನು ಹೊರಡಿಸಿತು. ಏಪ್ರಿಲ್ 20ರಂದು ನಡೆದ ಬಿಹಾರ ರಾಜ್ಯ ಶಿಕ್ಷೆ ಪರಿಹಾರ ಮಂಡಳಿ ಸಭೆಯನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಜೀವಾವಧಿ ಶಿಕ್ಷೆಯಡಿ 14 ವರ್ಷಗಳ ಶಿಕ್ಷೆ ಅಥವಾ 20 ವರ್ಷಗಳ ಶಿಕ್ಷೆಯನ್ನು ಅನುಭವಿಸಿದ ಕೈದಿಗಳ ಬಿಡುಗಡೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.
ಆದರೆ ಇಲ್ಲಿ ಬಿಹಾರ ಗೃಹ ಇಲಾಖೆಯು 2012ರ ಜೈಲು ಕೈಪಿಡಿಯ ಕೆಲವು ನಿಯಮಗಳನ್ನು ತಿರುಚಿದೆ. “ಕರ್ತವ್ಯದಲ್ಲಿರುವ ಸರ್ಕಾರಿ ನೌಕರನ ಹತ್ಯೆ” ಎಂಬ ಪದಗುಚ್ಛವನ್ನು ಅಳಿಸಿದೆ. ಅಂದರೆ ಕೃಷ್ಣಯ್ಯನವರ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮೋಹನ್ ಇನ್ನು ಸ್ವತಂತ್ರ.
ರಜಪೂತ ಮತಗಳಿಗೆ ಗಾಳ?
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳೆದ ವರ್ಷ ಎನ್‌ಡಿಎಯನ್ನು ತ್ಯಜಿಸಿ ಮಹಾಘಟಬಂಧನ್ ಮಿತ್ರಪಕ್ಷವಾದ ರಾಷ್ಟ್ರೀಯ ಜನತಾ ದಳದೊಂದಿಗೆ ಮತ್ತೆ ಒಂದಾಗಿದ್ದರು. ಆನಂದ್ ಮೋಹನ್‌ನನ್ನು ಬಿಡುಗಡೆ ಮಾಡುವ ಅವರ ಸರ್ಕಾರದ ನಿರ್ಧಾರವು ರಜಪೂತ ಮತಗಳನ್ನು ಗೆಲ್ಲುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಬಹುಕಾಲದ ಪ್ರತಿಸ್ಪರ್ಧಿ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ರಾಜಿ ಮಾಡಿಕೊಂಡು ಈತ ಆರ್‌ಜೆಡಿಗೆ ಸೇರುತ್ತಾನೆ ಎಂದು ಊಹಿಸಲಾಗಿದೆ. ರಘುವಂಶ ಪ್ರಸಾದ್ ಸಿಂಗ್ ಮತ್ತು ನರೇಂದ್ರ ಸಿಂಗ್ ಅವರ ಸಾವಿನ ನಂತರ ಆರ್‌ಜೆಡಿಗೆ ಸರಿಯಾದ ರಜಪೂತ ಮುಖವಿಲ್ಲ. ಈತನ ಪುತ್ರ ಚೇತನ್ ಆನಂದ್, ಲಾಲು ಪ್ರಸಾದ್ ಪಕ್ಷದಲ್ಲಿಯೇ ಶಾಸಕರಾಗಿದ್ದಾರೆ.
ಆನಂದ್ ಮೋಹನ್ ಬಿಡುಗಡೆಯಿಂದ ಮಹಾಘಟಬಂಧನ್‌ಗೆ ಎಷ್ಟು ಲಾಭ ಎಂಬುದು 2024ರ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: ವಿಸ್ತಾರ Explainer: ಕೇಶವಾನಂದ ಭಾರತೀ ಪ್ರಕರಣಕ್ಕೆ 50 ವರ್ಷ; ಇದು ಸಂವಿಧಾನದ ಮೂಲ ಸ್ವರೂಪ ಉಳಿಸಿದ ತೀರ್ಪು