ದಕ್ಷಿಣ ಭಾರತದಲ್ಲಿ ಸದ್ಯ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿರುವ ರಾಜ್ಯ ಎಂದರೆ ಕರ್ನಾಟಕ ಒಂದೇ. ಉತ್ತರದ ರಾಜ್ಯಗಳನ್ನು ಒಂದೊಂದಾಗಿ ಗೆದ್ದುಕೊಂಡಿರುವ ಬಿಜೆಪಿಗೆ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಇನ್ನೂ ಒಡೆಯಲಾಗದ ಬಂಡೆಗಲ್ಲುಗಳಾಗಿವೆ. ಹೀಗಾಗಿ ಅದು ತನ್ನ ಹೆಚ್ಚಿನ ಪ್ರಯತ್ನವನ್ನು ಈ ಪ್ರದೇಶದಲ್ಲಿ ಹಾಕುತ್ತಿದೆ. ತೆಲಂಗಾಣದಲ್ಲಿ ಇಂದು ಆರಂಭವಾಗುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಬೃಹತ್ ಸಭೆಯನ್ನೂ ಈ ದೃಷ್ಟಿಯಿಂದಲೇ ನೋಡಬಹುದು.
ದಕ್ಷಿಣ ಭಾರತ ಸೇರಿದಂತೆ ರಾಷ್ಟ್ರವ್ಯಾಪಿ ಬಿಜೆಪಿಯನ್ನು ಇನ್ನಷ್ಟು ವಿಸ್ತರಿಸುವುದು, ದೃಢಗೊಳಿಸುವುದೇ ಈ ಸಭೆಯ ಅಜೆಂಡಾ ಎಂದು ಬೇರೆ ಹೇಳಬೇಕಿಲ್ಲ. ಆದರೆ ಈ ಕಾರ್ಯಕಾರಿಣಿ ಇನ್ನೊಂದು ಉದ್ದೇಶವನ್ನೂ ಇದೇ ಕಾಲಕ್ಕೆ ಪೂರೈಸುತ್ತಿದೆ. ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಸ್ಥಾನ ವಹಿಸುವ ಮಹತ್ವಾಕಾಂಕ್ಷೆ ತೋರಿಸುತ್ತಿರುವ ತೆಲಂಗಾಣದ ಸಿಎಂ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಖಂಡ ಕೆ. ಚಂದ್ರಶೇಖರ ರಾವ್ ಅವರ ನೆಲದಲ್ಲೇ ಅವರಿಗೆ ಸವಾಲು ಎಸೆಯುತ್ತಿದೆ ಬಿಜೆಪಿ.
ಬೃಹತ್ ಕಾರ್ಯಕಾರಿಣಿ
ಶನಿವಾರ ಆರಂಭವಾಗುವ ಕಾರ್ಯಕಾರಿಣಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, 19 ರಾಜ್ಯಗಳ ಮುಖ್ಯಮಂತ್ರಿಗಳು, ಇನ್ನಿತರ ಮುಖಂಡರು ಭಾಗವಹಿಸುತ್ತಿದ್ದಾರೆ. ಇಡೀ ಹೈದರಾಬಾದ್ ಬಿಜೆಪಿ ಧ್ವಜಗಳಿಂದ, ಕೇಸರಿ ಬಾವುಟಗಳಿಂದ ರಾರಾಜಿಸುತ್ತಿದೆ. ಕೇಂದ್ರ ಸರಕಾರದ ಸಾಧನೆಗಳನ್ನು ಬಿಂಬಿಸುವ ಭಿತ್ತಿ ಫಲಕಗಳು ಪ್ರತಿ ಮೂಲೆಯಲ್ಲೂ ನಿಂತಿವೆ. ಬಿಜೆಪಿ ಮುಖಂಡರ ದೊಡ್ಡ ದೊಡ್ಡ ಕಟೌಟುಗಳು ನಿಂತಿವೆ. ಜುಲೈ 3ರಂದು ಬೃಹತ್ ಸಾರ್ವಜನಿಕ ಸಭೆ ಪರೇಡ್ ಗ್ರೌಂಡ್‌ನಲ್ಲಿ ನಡೆಯಲಿದ್ದು, ನರೇಂದ್ರ ಮೋದಿ ಅದರಲ್ಲಿ ಭಾಗವಹಿಸಲಿದ್ದಾರೆ.
18 ವರ್ಷಗಳ ಬಳಿಕ ಹೈದರಾಬಾದ್‌ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಅನೇಕ ದೊಡ್ಡ ಬಿಜೆಪಿ ಮುಖಂಡರು ರಾಜ್ಯದ 119 ವಿಧಾನಸಭೆ ಕ್ಷೇತ್ರಗಳಿಗೆ ಭೇಟಿ ನೀಡಿ ಪಕ್ಷ ವಿಸ್ತರಣೆಗೆ ಚಾಲನೆ ನೀಡಲಿದ್ದಾರೆ. ಟಿಆರ್‌ಎಸ್‌ನ ಅನೇಕ ಮುಖಂಡರು ಇದೇ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ. ಕಾಂಗ್ರೆಸ್ ಮಾಜಿ ಮುಖಂಡ, ಮಾಜಿ ಸಂಸದ ಕೆ.ವಿಶ್ವೇಶ್ವರ ರೆಡ್ಡಿ ಕೂಡ ಬಿಜೆಪಿ ಸೇರುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಗುರಿ
ಮುಂದಿನ ವರ್ಷ, ಅಂದರೆ 2023ರಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ಆಗಮಿಸುತ್ತಿದೆ. ಸದ್ಯ ಇಲ್ಲಿರುವುದು ತೆಲಂಗಾಣ ರಾಷ್ಟ್ರ ಸಮಿತಿ ಆಡಳಿತ. 2018ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದ ಒಟ್ಟು 119 ಸೀಟುಗಳಲ್ಲಿ 88ನ್ನು ಗೆದ್ದು ಟಿಆರ್‌ಎಸ್ ಅಧಿಕಾರಕ್ಕೆ ಬೇಕಾದ ಬಹುಮತ ಸಾಧಿಸಿತ್ತು. 19 ಸೀಟುಗಳನ್ನು ಕಾಂಗ್ರೆಸ್ ಹಾಗೂ 7ನ್ನು ಎಐಎಂಐಎಂ ಗೆದ್ದುಕೊಂಡಿದ್ದವು. ಟಿಡಿಪಿ 2 ಹಾಗೂ ಬಿಜೆಪಿ 1 ಸ್ಥಾನಗಳಿಗೆ ತೃಪ್ತವಾಗಬೇಕಾಗಿ ಬಂದಿತ್ತು. ಈ ಸಲದ ಚುನಾವಣೆಯಲ್ಲಿ ದೊಡ್ಡ ಮೊತ್ತದ ಸೀಟುಗಳ ಗಳಿಕೆ ಮಾಡುವ ಗುರಿಯನ್ನು ಬಿಜೆಪಿ ಹೊಂದಿದೆ. ಇದಕ್ಕೆ ಪೂರಕವಾದ ಆಶಾವಾದವನ್ನು ನೀಡಿದ್ದು ಕಳೆದ ವರ್ಷ ನಡೆದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆ.
ಹೈದರಾಬಾದ್ ನಗರಸಭೆ ಚುನಾವಣೆ
2020ರಲ್ಲಿ ನಡೆದ ಹೈದರಾಬಾದ್ ಮಹಾನಗರಪಾಲಿಕೆ ಚುನಾವಣೆ ಫಲಿತಾಂಶ ಬಿಜೆಪಿ ಪಾಲಿಗೆ ಅಚ್ಚರಿ, ಟಿಆರ್‌ಎಸ್‌ಗೆ ಆಘಾತ ತಂದಿಟ್ಟಿತ್ತು. ಹೈದರಾಬಾದ್‌ನಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ನಗರಸಭೆಯ 150 ವಾರ್ಡ್‌ಗಳಲ್ಲಿ 48ರಲ್ಲಿ ಬಿಜೆಪಿ ಗೆದ್ದು ಬಂದಿತ್ತು. 55 ಸ್ಥಾನಗಳನ್ನು ಗೆದ್ದು ಟಿಆರ್‌ಎಸ್ಸೇ ಮೇಲುಗೈ ಸಾಧಿಸಿದ್ದರೂ, ಬಿಜೆಪಿ ಬೆಳವಣಿಗೆ ಅದಕ್ಕೆ ನುಂಗಲಾಗದ ತುತ್ತಾಗಿತ್ತು. ಎಐಎಂಐಎಂ ಕೂಡ 44 ಸ್ಥಾನಗಳನ್ನು ಬಾಚಿಕೊಂಡಿತ್ತು. ಒಂದೆಡೆ ಟಿಆರ್‌ಎಸ್‌ನ ಸಾಂಪ್ರದಾಯಿಕ ಮತಗಳಿಗೆ ಎಐಎಂಐಎಂ ಕನ್ನ ಹಾಕುತ್ತಿರುವಂತೆಯೇ, ಇದರ ಲಾಭವನ್ನು ಬಿಜೆಪಿ ಪಡೆಯುತ್ತಿದೆ. ಬಿಜೆಪಿ ಮತಗಳು ಒಂದೆಡೆ ಕ್ರೋಡೀಕರಣಗೊಳ್ಳುತ್ತಿವೆ. ಟಿಆರ್‌ಎಸ್- ಎಐಎಂಐಎಂ ಮತಗಳು ಒಡೆದುಹೋಗುತ್ತಿವೆ. ಇದು ಮುಂದಿನ ಚುನಾವಣೆಯಲ್ಲಿ ಟಿಆರ್‌ಎಸ್ ಎದುರಿಸಬೇಕಾದ ದೊಡ್ಡ ಸಮಸ್ಯೆಯಾಗಿದೆ. “”ಈ ಫಲಿತಾಂಶ 2023ರ ಚುನಾವಣೆ ಫಲಿತಾಂಶದ ಮುನ್ನೋಟʼʼ ಎಂದು ಬಿಜೆಪಿ ಅಧ್ಯಕ್ಷ ನಡ್ಡಾ ಅಂದು ಹೇಳಿದ್ದರು. ಬಿಜೆಪಿಯ ಹೋಂವರ್ಕ್ ಅಂದಿನಿಂದಲೇ ಆರಂಭವಾಗಿದೆ.
ಚಂದ್ರಶೇಖರ ರಾವ್ ಮಹತ್ವಾಕಾಂಕ್ಷೆ
ಇತ್ತೀಚೆಗೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರು ರಾಷ್ಟ್ರೀಯ ವೇದಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ʼತೆಲಂಗಾಣ ರಾಷ್ಟ್ರ ಸಮಿತಿʼ (ಟಿಆರ್‌ಎಸ್)ಯನ್ನು ʼಭಾರತೀಯ ರಾಷ್ಟ್ರ ಸಮಿತಿʼ (ಬಿಆರ್‌ಎಸ್) ಆಗಿ ರಿಲಾಂಚ್ ಮಾಡುವುದಾಗಿ ಹೇಳಿದ್ದಾರೆ. ಮಗನಿಗೆ ರಾಜ್ಯದ ಸಿಎಂ ಪಟ್ಟ ವಹಿಸಿಕೊಡುವ ಸೂಚನೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ದಿಲ್ಲಿಯ ಅರವಿಂದ ಕೇಜ್ರಿವಾಲ್, ಮಹಾರಾಷ್ಟ್ರದ ಶರದ್ ಪವಾರ್, ಉತ್ತರ ಪ್ರದೇಶದ ಅಖಿಲೇಶ್ ಯಾದವ್, ಕೇರಳದ ಪಿಣರಾಯಿ ವಿಜಯನ್, ತಮಿಳುನಾಡಿನ ಸ್ಟಾಲಿನ್ ಮುಂತಾದವರನ್ನು ಒಂದು ವೇದಿಕೆಗೆ ತರುವ ಓಡಾಟದಲ್ಲಿದ್ದಾರೆ. ಇದರ ಮೂಲಕ 2024ರ ಮಹಾಚುನಾವಣೆಯಲ್ಲಿ ಎನ್‌ಡಿಎಯನ್ನು ಎದುರಿಸಿ ನಿಲ್ಲುವ ತೃತೀಯ ಒಕ್ಕೂಟವೊಂದನ್ನು ರಚಿಸುವುದು ಅವರ ಗುರಿ.
ವಿಚಿತ್ರ ಎಂದರೆ, ಕೆಸಿಆರ್ ಯುದ್ಧರಂಗವನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸುವ ಕನಸು ಕಾಣುತ್ತಿದ್ದರೆ, ಬಿಜೆಪಿ ಕದನಕಣವನ್ನು ಅವರ ಮನೆಯಂಗಳಕ್ಕೇ ತಂದು ನಿಲ್ಲಿಸಿದೆ! ಇದರಿಂದ ಒಂದು ಕಲ್ಲಿನಿಂದ ಎರಡು ಹಕ್ಕಿ ಹೊಡೆದಂತಾಗಿದೆ. ಒಂದು, ತೆಲಂಗಾಣದಲ್ಲಿ ಪಕ್ಷದ ವಿಸ್ತರಣೆ ಮತ್ತು ಎರಡನೆಯದು, ಕೆಸಿಆರ್ ಅವರ ರಾಷ್ಟ್ರೀಯ ಓಡಾಟವನ್ನು ಮೊಟಕು ಮಾಡುವುದು.
ಕೆಸಿಆರ್ ತಿರುಗೇಟು
ಬಿಜೆಪಿ ತೆಲಂಗಾಣದ ಕಡೆ ಬಾಣಗಳನ್ನು ಗುರಿಯಿಟ್ಟಿದೆ ಎಂಬುದು ಕೆಸಿಆರ್ ಅವರಿಗೂ ಗೊತ್ತು. ಹೀಗಾಗಿ ಅವರೀಗ ಮನೆಯಂಗಳದ ಯುದ್ಧವನ್ನು ಎದುರಿಸಿಕೊಳ್ಳಲು ಬೇಕಾದ ತಯಾರಿ ಮಾಡಿಕೊಳ್ಳುತಿದ್ದಾರೆ. ತಮ್ಮ ಶಕ್ತಿಪ್ರದರ್ಶನವನ್ನೂ ಮಾಡುತ್ತಿದ್ದಾರೆ.
ಇದಕ್ಕೆ ಉದಾಹರಣೆ ಬಿಜೆಪಿ ಕಾರ್ಯಕಾರಿಣಿ ದಿನವೇ ಅವರು ಏರ್ಪಡಿಸಿರುವ ರ್ಯಾಲಿ. ಪ್ರತಿಪಕ್ಷಗಳ ಕಡೆಯಿಂದ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಆಗಿರುವ ಯಶವತ್ ಸಿನ್ಹಾ ಅವರನ್ನು ಕರೆಸಿ, ಅವರಿಗೆ ಬೆಂಬಲ ಸೂಚಿಸುವ ರ್ಯಾಲಿಯನ್ನು ಕೆಸಿಆರ್ ಪಕ್ಷದ ವತಿಯಿಂದ ಏರ್ಪಡಿಸಿದ್ದಾರೆ. ಪ್ರಧಾನಿ ಮೋದಿ ಆಗಮಿಸುವ ವಿಮಾನ ನಿಲ್ದಾಣದಲ್ಲೇ, ಅವರ ಆಗಮನಕ್ಕೆ ಕೆಲವೇ ಗಂಟೆಗಳ ಮುನ್ನವೇ ಈ ರ್ಯಾಲಿ ನಡೆಯಲಿದೆ. ನಗರದ ಎಲ್ಲೆಡೆ ಮೋದಿ, ಶಾ ಕಟೌಟ್‌ಗಳು ಇರುವಂತೆಯೇ, ಕೆಸಿಆರ್, ಯಶವಂತ್ ಸಿನ್ಹಾ ಕಟೌಟ್‌ಗಳೂ ನಿಂತಿವೆ. ಇದು ಮೂರನೇ ಬಾರಿಗೆ ಪ್ರಧಾನಿ ಮೋದಿ ಅವರನ್ನು ಏರ್‌ಪೋರ್ಟ್‌ನಲ್ಲಿ ಸ್ವಾಗತಿಸುವುದರಿಂದ ಸಿಎಂ ರಾವ್ ತಪ್ಪಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬಿಜೆಪಿಯ 2 ದಿನಗಳ ಕಾರ್ಯಕಾರಿಣಿಯಲ್ಲಿ ಮೇಳೈಸಲಿದೆ ತೆಲಂಗಾಣ ಸಂಸ್ಕೃತಿ-ಪರಂಪರೆ
ತೆಲಂಗಾಣದಲ್ಲಿ ಬಿಜೆಪಿ ಹೆಜ್ಜೆ ಗುರುತುಗಳು
ಕಳೆದ ವರ್ಷ ಅಕ್ಟೋಬರ್‌ನಲ್ಲಿ ತೆಲಂಗಾಣದ ಕರೀಂನಗರ ಜಿಲ್ಲೆಯ ಹುಜೂರಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಇದನ್ನು ಟಿಆರ್‌ಎಸ್ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು. ಆದರೆ ಫಲಿತಾಂಶ ಪ್ರಕಟವಾದಾಗ ಟಿಆರ್‌ಎಸ್‌ಗೆ ಆಘಾತ. ಬಿಜೆಪಿ ಅಭ್ಯರ್ಥಿ
ಈಟಾಲ ರಾಜೇಂದರ್ ಅವರು ಟಿಆರ್‌ಎಸ್ ಅಭ್ಯರ್ಥಿಯನ್ನು ಗಣನೀಯ ಅಂತರದಿಂದ ಸೋಲಿಸಿದ್ದರು. 2018ರ ರಾಜ್ಯ ಚುನಾವಣೆಯಲ್ಲಿ ಇಲ್ಲಿ ಟಿಆರ್‌ಎಸ್ 59.34% ಮತ್ತು ಬಿಜೆಪಿ 0.93% ಮತಗಳನ್ನು ಪಡೆದಿತ್ತು. ಮೂರು ವರ್ಷಗಳಲ್ಲಿ ಬಿಜೆಪಿ 52% ಮತಕ್ಕೆ ಏರಿದೆ. ಈಟಾಲ ರಾಜೇಂದರ್ ಅವರು ಟಿಆರ್‌ಎಸ್ ಸರ್ಕಾರದಲ್ಲಿ ಹಿರಿಯ ಸಚಿವರಾಗಿದ್ದರು. ಜೂನ್ 2021ರಲ್ಲಿ ಅವರು ಬಿಜೆಪಿ ಸೇರಿದ್ದರು.
ತೆಲಂಗಾಣದಲ್ಲಿರುವುದು 17 ಲೋಕಸಭಾ ಸ್ಥಾನಗಳು. 2014ರ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಸ್ಪರ್ಧಿಸಿದ ಎಂಟು ಸ್ಥಾನಗಳಲ್ಲಿ ಒಂದನ್ನು ಗೆದ್ದಿತ್ತು. ಟಿಆರ್‌ಎಸ್ 12, ಕಾಂಗ್ರೆಸ್ ಎರಡು, ಟಿಡಿಪಿ ಒಂದು, ಎಐಎಂಐಎಂ ಒಂದನ್ನು ಗೆದ್ದಿದ್ದವು. 2019ರಲ್ಲಿ ತೆಲಂಗಾಣ ಚುನಾವಣಾ ಕಣದಿಂದ ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ನಿರ್ಗಮಿಸಿದವು. ಬಿಜೆಪಿ ನಾಲ್ಕು ಲೋಕಸಭೆ ಕ್ಷೇತ್ರ ಗೆದ್ದಿತ್ತು. ಟಿಆರ್‌ಎಸ್ ಒಂಬತ್ತಕ್ಕೆ ಇಳಿದಿತ್ತು. ಕಾಂಗ್ರೆಸ್ ಮೂರಕ್ಕೆ ಏರಿತ್ತು. ಬಿಜೆಪಿ ಮತ ಪ್ರಮಾಣವನ್ನು ಐದು ವರ್ಷಗಳಲ್ಲಿ 10.5%ದಿಂದ 19.5%ಕ್ಕೆ ಏರಿಸಿಕೊಂಡಿದೆ. ಟಿಆರ್‌ಎಸ್‌ನ ಮುಖಂಡರು ಒಬ್ಬೊಬ್ಬರಾಗಿ ಬಿಜೆಪಿ ಸೇರುತ್ತಿದ್ದಾರೆ.
ಇವೆಲ್ಲವೂ ಕೆಸಿಆರ್ ಅವರನ್ನು ಅಸ್ಥಿರಗೊಳಿಸಿದೆ. 2023ರ ಚುನಾವಣೆ ಅವರ ರಾಜಕೀಯ ಜೀವನದ ನಿರ್ಣಾಯಕ ಫೈಟ್ ಎನಿಸಲಿದೆ.
ಇದನ್ನೂ ಓದಿ: ಪ್ರಧಾನಿ ಸ್ವಾಗತಕ್ಕೆ ತೆಲಂಗಾಣ ಸಿಎಂ ಕೆಸಿಆರ್ ಹೋಗೋದಿಲ್ಲ; 6 ತಿಂಗಳಲ್ಲಿ 3ನೇ ಬಾರಿ ಶಿಷ್ಟಾಚಾರ ಉಲ್ಲಂಘನೆ