ಮನುಷ್ಯನ ತಲೆ ಕತ್ತರಿಸುವುದು, ಅದರ ವಿಡಿಯೋ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹರಡಿ ಎಲ್ಲೆಡೆ ಭಯ ಬಿತ್ತುವುದು- ಇದು ಇಸ್ಲಾಮಿಕ್ ಸ್ಟೇಟ್ (ISIS) ಉಗ್ರರ ಕಾರ್ಯವಿಧಾನ (Modus operandi). ಸಿರಿಯಾ, ಅಫ್ಘಾನಿಸ್ತಾನ ಮುಂತಾದ ಭಯೋತ್ಪಾದನೆ ಪೀಡಿತ ದೇಶಗಳಲ್ಲಿ ಮಾತ್ರ ಇದು ನಡೆಯುತ್ತಿದೆ ಎಂದುಕೊಂಡರೆ, ಈಗ ಭಾರತಕ್ಕೂ ಕಾಲಿಟ್ಟಿದೆ. ಈ ಮತಾಂಧ ಹುಚ್ಚು ಸನ್ನಿಯ ಸೃಷ್ಟಿ ಹೇಗಾಯ್ತು, ಹೇಗಿದು ಇಸ್ಲಾಮಿಕ್ ಉಗ್ರರಲ್ಲಿ ಜನಪ್ರಿಯವಾಯ್ತು, ಈಗ ಭಾರತಕ್ಕೂ ಬಂದಿರುವುದೇಕೆ? ಈ ವಿವರಗಳು ಇಲ್ಲಿವೆ.
ಉದಯಪುರದ ಬೀಭತ್ಸ ಕೃತ್ಯ
ರಾಜಸ್ಥಾನದ ಉದಯಪುರದಲ್ಲಿ ನಡೆದಿರುವುದು ನಿಜಕ್ಕೂ ಬೀಭತ್ಸ ಕೃತ್ಯ. ಇಲ್ಲಿ ಕೊಲೆಯಾದ ಕನ್ಹಯ್ಯಲಾಲ್ ಎಂಬ ಟೈಲರ್, ತನ್ನ ಸೋಶಿಯಲ್ ಮೀಡಿಯಾದಲ್ಲಿ ಪ್ರವಾದಿ ಕುರಿತು ಹೇಳಿಕೆ ನೀಡಿದ್ದ ನೂಪುರ್ ಶರ್ಮಾಳನ್ನು ಬೆಂಬಲಿಸಿ ಪೋಸ್ಟ್ ಹಾಕಿಕೊಂಡಿದ್ದ. ಅದೂ ಅವನು ಹಾಕಿಕೊಂಡದ್ದಲ್ಲ, ಅವನ ಮಗ ಕನ್ಹಯ್ಯಲಾಲ್‌ನ ಅರಿವಿಲ್ಲದೇ ಪೋಸ್ಟ್ ಮಾಡಿದ್ದು ಎನ್ನಲಾಗುತ್ತಿದೆ. ರಿಯಾಜ್ ಅಟ್ಟಾರಿ ಹಾಗೂ ಗೌಸ್ ಮೊಹಮ್ಮದ್ ಎಂಬ ಇಬ್ಬರು ಮತಾಂಧರು ಈತನ ಅಂಗಡಿಗೆ ನುಗ್ಗಿ ಟೇಲರ್‌ನನ್ನು ಚೂರಿಯಿಂದ ಇರಿದು, ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ದಾರೆ. ನಂತರ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ಪೋಸ್ಟ್ ಮಾಡಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇದೇ ರೀತಿ ಮಾಡುವ ಬೆದರಿಕೆ ಒಡ್ಡಿದ್ದರು.
ಕೂಡಲೇ ಇಬ್ಬರನ್ನೂ ಬಂಧಿಸಿ ಪ್ರಕರಣದ ತನಿಖೆಗೆ ಆರಂಭಿಸಿರುವ ತನಿಖಾ ದಳ, ಇಬ್ಬರೂ ಪಾತಕಿಗಳಿಗೂ ಹಾಗೂ ಕರಾಚಿ ಮೂಲದ ದಾವತ್ ಇ ಇಸ್ಲಾಮಿ ಎಂಬ ಸುನ್ನಿ ಇಸ್ಲಾಮಿಸ್ಟ್ ಸಂಘಟನೆಗೂ ಇರುವ ಸಂಬಂಧವನ್ನು ಹೊರಗೆಡಹಿದೆ. ಇದಕ್ಕೂ ಪಾಕಿಸ್ತಾನದ ಬರೆಲ್ವಿ ಪ್ಯಾನ್ ಇಸ್ಲಾಮಿಕ್ ತೆಹ್ರೀಕ್ ಇ ಲಬ್ಬೈಕ್ ಸಂಘಟನೆಗೂ ಸಂಬಂಧವಿದೆ. ಇದಕ್ಕೂ ಸಿರಿಯಾ ಮುಂತಾದ ಕಡೆ ಕಾರ್ಯಾಚರಿಸುತ್ತಿರುವ ಐಸಿಸ್ ತೀವ್ರವಾದಿ ಉಗ್ರಗಾಮಿ ಸಂಘಟನೆಗೂ ಸಂಪರ್ಕವಿದೆ.
ಪೊಲೀಸರಿಗೆ ಈಗ ತಲೆನೋವಾಗಿರುವ ವಿಚಾರ ಎಂದರೆ ಭಾರತದ ಸುತ್ತಮುತ್ತಲಿನ ದೇಶಗಳಲ್ಲಿ ಸುನ್ನಿ ಇಸ್ಲಾಮಿಸ್ಟ್ ಸಂಘಟನೆಗಳ ಹೆಸರಿನಲ್ಲಿ ಮುಸ್ಲಿಂ ಮತಾಂಧರು ಒಟ್ಟುಗೂಡುತ್ತಿರುವುದು. ಇದನ್ನು ಐಸಿಸ್ ಪ್ರಾಯೋಜಿಸುತ್ತಿದೆ. ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಮ್ಯಾನ್ಮಾರ್, ಅಫ್ಘಾನಿಸ್ತಾನ್‌ಗಳು ಈ ಮುಸ್ಲಿಂ ಬ್ರದರ್‌ಹುಡ್ ಸಂಘಟನೆಗಳನ್ನು ತಡೆಯಲು ವಿಫಲವಾಗಿವೆ. ಇವು ಡಾರ್ಕ್ ವೆಬ್ ಮೂಲಕ, ಸೋಶಿಯಲ್ ಮೀಡಿಯಾ ಮೂಲಕ ಎಲ್ಲ ಕಡೆಯೂ ತಲುಪುತ್ತಿವೆ.
ಐಸಿಸ್ ಪ್ರೇರಣೆ
ಕುತ್ತಿಗೆ ಕತ್ತರಿಸಿ ರುಂಡ ಮುಂಡ ಬೇರೆ ಮಾಡುವ, ಅದನ್ನು ವಿಡಿಯ ಮಾಡಿ ಹಂಚುವ ಬರ್ಬರತೆ ಇವರಿಗೆ ಬಂದದ್ದಾದರೂ ಹೇಗೆ? ಇದಕ್ಕೆ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಕೃತ್ಯಗಳೇ ಪ್ರೇರಣೆ ಅನ್ನಬೇಕು. ಈ ಕ್ರೌರ್ಯ ಮೊದಲು ಕಂಡುಬಂದದ್ದು 2002ರಲ್ಲಿ ನಡೆದ ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಕರ್ತ ಡೇನಿಯಲ್ ಪರ್ಲ್ ಹತ್ಯೆಯಲ್ಲಿ. ತನಿಖಾ ಪತ್ರಿಕೋದ್ಯಮ ನಡೆಸಲು ಪಾಕಿಸ್ತಾನಕ್ಕೆ ಬಂದಿದ್ದ ಈತನನ್ನು ಅಲ್ ಕೈದಾ ಸಂಘಟನೆಯ ಉಗ್ರರು ಅಪಹರಿಸಿ ತಲೆ ಕತ್ತರಿಸಿ ಹತ್ಯೆ ಮಾಡಿದ್ದರು. ನಂತರ ಇದರ ವಿಡಿಯೋವನ್ನು ಹಂಚಿದ್ದರು. ಅಮೆರಿಕದ ಗ್ವಂಟನಾಮೊ ಬೇ ಜೈಲಿನಲ್ಲಿರುವ ಮುಸ್ಲಿಂ ಉಗ್ರರನ್ನು ಬಿಡುಗಡೆ ಮಾಡಬೇಕು, ಇಲ್ಲವಾದರೆ ಇಂಥ ಹತ್ಯೆಗಳನ್ನು ಮುಂದುವರಿಸುವುದಾಗಿ ಉಗ್ರರು ಇದರಲ್ಲಿ ಬೆದರಿಕೆ ಹಾಕಿದ್ದರು.
ಮೊದ ಮೊದಲು ಈ ವಿಡಿಯೋಗಳು ಕಚ್ಚಾ ರೀತಿಯಲ್ಲಿದ್ದವು. ನಂತರ ಇವುಗಳಲ್ಲಿ ಗ್ರಾಫಿಕ್ಸ್, ಆನಿಮೇಶನ್ ಇತ್ಯಾದಿಗಳನ್ನು ಸೇರಿಸಿ, ಆಧುನಿಕ ರೀತಿಯಲ್ಲಿ ಎಡಿಟ್ ಮಾಡಿ ಕಳಿಸುವ ಕಲೆಯನ್ನು ಉಗ್ರರು ಕಲಿತರು. ಅಲ್ ಕೈದಾದವರು ಆರಂಭಿಸಿದ ಈ ಬೀಭತ್ಸತೆಯನ್ನು ಮುಂದೆ ಸಿರಿಯಾದ ಐಸಿಸ್, ಅಫ್ಘಾನಿಸ್ತಾನದ ತಾಲಿಬಾನ್, ತೆಹ್ರೀಕ್ ಇ ತಾಲಿಬಾನ್, ಚೆಚೆನ್ಯಾ ಉಗ್ರರು ಮುಂತಾದವರೆಲ್ಲಾ ರೂಢಿಸಿಕೊಂಡರು. ಇದರಲ್ಲಿ ಅತ್ಯಂತ ಹೆಚ್ಚು ಬರ್ಬರತೆಯನ್ನು ರೂಢಿಸಿಕೊಂಡವರು ಐಎಸ್‌ಐಎಸ್‌ನವರು.
ಐಸಿಸ್ ಎಂಬುದು ಸುನ್ನಿ ಇಸ್ಲಾಮಿಸ್ಟ್ ಸಂಘಟನೆ. ಇದು ಸಿರಿಯಾ ಹಾಗೂ ಇರಾಕ್‌ಗಳಲ್ಲಿ ಕಾರ್ಯಾಚರಿಸುತ್ತದೆ. ಈ ಶಿರಚ್ಛೇದ ಕ್ರೌರ್ಯವನ್ನು ಒಂದು ʼಕಲೆʼಯ ಹಂತಕ್ಕೆ ಒಯ್ದವನು ಐಸಿಸ್‌ನ ʼಜಿಹಾದಿ ಜಾನ್ʼ ಎಂದೇ ಕರೆಯಲಾಗುತ್ತಿದ್ದ ಮೊಹಮ್ಮದ್ ಎಂವಾಜಿ. ಐಸಿಸ್ ಉಗ್ರರು ಕೊಂದುಹಾಕಿದ ಮಂದಿಯಲ್ಲಿ ಕೇವಲ ಶೇ.1ರಷ್ಟು ಮಂದಿಯ ಶಿರಚ್ಛೇದದ ವಿಡಿಯೋ ಮಾತ್ರ ಮಾಡಿ ಬಿಡುಗಡೆ ಮಾಡಿದ್ದಾರೆ. ಅಂದರೆ ಇವರ ಕೃತ್ಯದ ವ್ಯಾಪ್ತಿ ಎಂಥ ಗಾತ್ರದ್ದು ಎಂದು ಊಹಿಸಬಹುದು. ಹೆಚ್ಚಾಗಿ ಪಾಕಿಸ್ತಾನ, ಅರಬ್ ದೇಶಗಳಿಗೆ ಆಗಮಿಸುತ್ತಿದ್ದ ಪ್ರವಾಸಿಗರನ್ನು ಇವರು ಅಪಹರಣ ಮಾಡುತ್ತಿದ್ದರು. ಕೆಲವೊಮ್ಮೆ ಅಮೆರಿಕ, ಫ್ರಾನ್ಸ್, ಬ್ರಿಟನ್ ಮುಂತಾದ ದೇಶಗಳ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗಿಗಳಾಗಿದ್ದವರನ್ನು, ರಾಯಭಾರಿ ಸಿಬ್ಬಂದಿಯನ್ನು ಅಪಹರಿಸಲಾಗುತ್ತಿತ್ತು. ತಲೆ ಕತ್ತರಿಸಲಾಗುತ್ತಿದ್ದ ಬಲಿಪಶುಗಳಿಗೆ ಇವರು ಕಿತ್ತಳೆ ಬಣ್ಣದ ದಿರಸನ್ನು ಹೊದೆಸುತ್ತಿದ್ದರು. ಇದು ಗ್ವಂಟನಾಮೊ ಬೇ ಜೈಲಿನ ಯೂನಿಫಾರ್ಮ್ ಅನ್ನು ಅಣಕ ಮಾಡಲು ಇವರು ರೂಢಿಸಿಕೊಂಡ ರೀತಿ.
ಪೋರ್ನ್‌ನಂತೆಯೇ ಆಕರ್ಷಕ!
ನಿಮಗೆ ಗೊತ್ತಿರಲಾರದು, ತಲೆ ಕತ್ತರಿಸುವ ನೈಜ ವಿಡಿಯೋಗಳನ್ನು ನೋಡಿ ಪೋರ್ನ್ ನೋಡಿದಂತೆ ಉದ್ರಿಕ್ತರಾಗುವ ವ್ಯಕ್ತಿಗಳಿದ್ದಾರೆ! ಇದೊಂದು ಬಗೆಯ ಮಾನಸಿನ ವಿಕ್ಷಿಪ್ತತೆ. ಇಂಥವರಿಗಾಗಿಯೇ ʼಸ್ನಫ್ ವಿಡಿಯೋʼ (ಶಿರಚ್ಛೇದದ ದೃಶ್ಯಗಳು) ಅಪ್‌ಲೋಡ್ ಮಾಡುವ ವೆಬ್‌ಸೈಟ್‌ಗಳಿವೆ. ಈ ವೆಬ್‌ಸೈಟ್‌ಗಳಿಗೆ ಶಿರಚ್ಛೇದದ ದೃಶ್ಯಗಳನ್ನು ಐಸಿಸ್ ಉಗ್ರರು ಪೂರೈಸುತ್ತಾರೆ.
ಶಿರಚ್ಛೇದದ ಉದ್ದೇಶವೇನು?
ಉಗ್ರರು ಇದನ್ನು ಹಲವಾರು ಉದ್ದೇಶಗಳಿಗಾಗಿ ನಡೆಸುತ್ತಾರೆ:
1.. ಇಸ್ಲಾಮೇತರ ಸಮಾಜದಲ್ಲಿ ಭೀತಿ ಹರಡುವುದು, ಇಸ್ಲಾಮಿಕ್ ಸಾಮ್ರಾಜ್ಯದ ಸೃಷ್ಟಿಯಾಗುತ್ತಿದೆ ಎಂಬ ಭ್ರಮೆ ಹರಡುವುದು.
೨. ಅಮೆರಿಕ, ಬ್ರಿಟನ್ ಮುಂತಾದ ದೇಶಗಳು ಮುಸ್ಲಿಮರ ಮೇಲೆ ನಡೆಸಿದ ದೌರ್ಜನ್ಯಕ್ಕೆ ತಾವು ಸೇಡು ತೀರಿಸಿಕೊಳ್ಳುತ್ತಿದ್ದೇವೆ ಎಂದು ಬಿಂಬಿಸುವುದು, ಹಾಗೇ ತೃಪ್ತಿ ಹೊಂದುವುದು.
೩. ಭಾರತ ಮುಂತಾದ ದೇಶಗಳಲ್ಲಿ ಈ ಶಿರಚ್ಛೇದದ ದೃಶ್ಯಗಳಿಂದ ಪ್ರೇರಿತರಾಗಿ, ಐಸಿಸ್ ಸೇರುವ ಮತಾಂಧ ಯುವಕರಿದ್ದಾರೆ. ಇಸ್ಲಾಮಿಕ್ ಸಾಮ್ರಾಜ್ಯವನ್ನು ಸೃಷ್ಟಿಸುತ್ತಿರುವ ಶಕ್ತಿಗಳ ಜತೆ ತಾವು ಕೈ ಜೋಡಿಸುತ್ತಿದ್ದೇವೆ ಎಂಬ ಭ್ರಮೆ ಇವರಿಗೆ. ಇಂಥವರಿಗೆ ಐಸಿಸ್ ಸೇರಿಕೊಳ್ಳಲು ಇದು ಪ್ರೇರಣೆಯಾಗುತ್ತಿದೆ.
೪. ಉಗ್ರ ಕೃತ್ಯಗಳಿಗೆ ಇದು ಸಾಕ್ಷ್ಯ. ಪಾಕಿಸ್ತಾನದ ಐಎಸ್‌ಐನಂಥ ಶ್ರೀಮಂತ ಸಂಸ್ಥೆಗಳಿಂದ ಹಣ ಪಡೆಯಲು ಇದನ್ನು ಬಳಸಿಕೊಳ್ಳುತ್ತಾರೆ.
೫. ಶಿಕ್ಷೆಯ ರೂಪದಲ್ಲೂ ಇದನ್ನು ಬಳಸುತ್ತಾರೆ. ಉಗ್ರರನ್ನು ಮಟ್ಟಹಾಕಿದ ಪೊಲೀಸರು, ಸರ್ಕಾರಿ ಅಧಿಕಾರಿಗಳು, ಸಂಘಟನೆಗೆ ದ್ರೋಹ ಬಗೆದವರನ್ನೂ ಈ ರೀತಿ ಶಿಕ್ಷಿಸುತ್ತಾರೆ.
ಭಾರತದಲ್ಲಿ ಕೊಂಬೆಗಳು
ಉದಯಪುರದಲ್ಲಿ ಶಿರಚ್ಛೇದದ ಭೀಕರ ಕೃತ್ಯದ ಬಳಿಕ, ಭಾರತದಲ್ಲಿ ಐಸಿಸ್ ಮತಾಂಧತೆಯ ನೆರಳು ಎಷ್ಟು ವ್ಯಾಪಕವಾಗಿ ಹರಡಿದೆ ಎಂಬುದು ಅರಿವಿಗೆ ಬರುತ್ತಿದೆ.
ಕಳೆದ ವರ್ಷ ಅಮೆರಿಕದ ಭದ್ರತಾ ಇಲಾಖೆ ಒಂದು ವರದಿ ನೀಡಿತ್ತು. ಭಾರತದ 66 ಮಂದಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯಲ್ಲಿ ಇರುವುದು ಇದುವರೆಗೆ ಪತ್ತೆಯಾಗಿದೆ ಎಂದು ಅದು ಹೇಳಿತ್ತು. ಇದು ಪತ್ತೆಯಾದ ಸಂಖ್ಯೆ, ಪತ್ತೆಯಾಗದ ಹಲವು ಮಂದಿ ಇರಬಹುದು. ಭಾರತದ ಎನ್‌ಐಎ ಇದುವರೆಗೂ ಕೇರಳ, ಪಶ್ಚಿಮ ಬಂಗಾಳಗಳಲ್ಲಿ 160 ಮಂದಿಯನ್ನು ಬಂಧಿಸಿದ್ದು, ಇದರಲ್ಲಿ 10 ಮಂದಿ ಅಲ್ ಕೈದಾ ಸಂಘಟನೆಯವರು ಎಂಬುದು ಗೊತ್ತಾಗಿದೆ. ದಕ್ಷಿಣದ ರಾಜ್ಯಗಳಲ್ಲಿ, ವಿಶೇಷವಾಗಿ ಕೇರಳದಲ್ಲಿ ಆನ್‌ಲೈನ್ ಮತೀಯವಾದ ಚಟುವಟಿಕೆ ತೀವ್ರವಾಗಿದೆ- ಎಂದು ವರದಿ ಹೇಳಿದೆ.
ಮಂಗಳೂರಿನ ಉಳ್ಳಾಲದಲ್ಲೂ ಐಸಿಸ್ ಜಾಡು
ಇದೇ ವರ್ಷ ಜನವರಿಯಲ್ಲಿ ಉಳ್ಳಾಲದ ಮಾಜಿ ಶಾಸಕರ ಮನೆಗೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು, ಅವರ ಮೊಮ್ಮಗ ಹಾಗೂ ಮೊಮ್ಮಗನ ಪತ್ನಿಯನ್ನು ಬಂಧಿಸಿದ್ದರು. ಭಾರತದಾದ್ಯಂತ ಐಸಿಸ್‌ಗೆ ಯುವ ಉಗ್ರರ ನೇಮಕಾತಿ ನಡೆಸುವ ಕಾರ್ಯಾಚರಣೆಗೆ ಸಂಬಂಧಿಸಿ ಇವರ ತನಿಖೆ ನಡೆಯುತ್ತಿದೆ. ಇದೇ ಮಾರ್ಚ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ ಹಿಂದ್ ಪ್ರಾವಿನ್ಸ್ ಎಂಬ ಉಗ್ರ ಸಂಘಟನೆಯು ಒಂದು ವಿಡಿಯೋ ಬಿಡುಗಡೆ ಮಾಡಿತ್ತು. ಅದರಲ್ಲಿ ಮುಸುಕು ಹಾಕಿದ ಹತ್ತಾರು ಬಂದೂಕುಧಾರಿಗಳಿದ್ದು, ಇವರು ಭಾರತದಿಂದ ರಿಕ್ರ್ಯೂಟ್ ಆದವರೆಂದು ಹೇಳಿತ್ತು.
ಉದಯಪುರದ ಭೀಕರ ಕೃತ್ಯದಿಂದ ಗೊತ್ತಾಗಿರುವುದೇನು? ತೆರೆಮರೆಯಲ್ಲಿ ನಡೆಯುತ್ತಿದ್ದ ಇಸ್ಲಾಮಿಕ್ ಉಗ್ರರ ಚಟುವಟಿಕೆ ಈಗ ತೆರೆಯ ಮುಂದೆ ಬಂದಂತಾಗಿದೆ. ಈಗಲಾದರೂ ತನಿಖಾ ಸಂಸ್ಥೆಗಳು ಹೆಚ್ಚು ಚುರುಕಾಗಿ ಕಾರ್ಯಾಚರಿಸಿ ಇವರನ್ನು ಮಟ್ಟ ಹಾಕದಿದ್ದರೆ ಉಳಿಗಾಲವಿಲ್ಲ.