Site icon Vistara News

ವಿಸ್ತಾರ Explainer | ಜಾರ್ಖಂಡ್‌ನ ಜಾಮತಾಡಾ- ಇದು ಸೈಬರ್ ಕ್ರೈಮ್ ಕ್ಯಾಪಿಟಲ್! ಇಲ್ಲಿಯ ಜನರ ಕಸುಬೇ ಆನ್‌ಲೈನ್ ವಂಚನೆ!

Jamtara @ ವಿಸ್ತಾರ Explainer

| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು

ಸೈಬರ್ ಖದೀಮರ ಕೈಚಳಕ, ಭಾರಿ ಮೊತ್ತದ ಹಣ ಗುಳುಂ, ಪಿನ್ ನಂಬರ್ ಕೊಟ್ಟು ಹಣ ಕಳೆದುಕೊಂಡ ಐಎಎಸ್ ಅಧಿಕಾರಿ, ಒಟಿಪಿ ಕೊಟ್ಟು ಯಾಮಾರಿದ ಜಡ್ಜ್……ಈ ರೀತಿಯ ಸುದ್ದಿಗಳನ್ನು ನೀವು ವೆಬ್‌ಗಳಲ್ಲಿ ಓದಿರುತ್ತೀರಿ, ಇಲ್ಲವೇ ಟಿವಿಗಳಲ್ಲಿ ನೋಡಿರುತ್ತೀರಿ. ಹಾಗಾದರೆ, ಈ ಸೈಬರ್ ಖದೀಮರು ಎಲ್ಲಿದ್ದಾರೆ, ಅವರು ಯಾಕೆ ಪೊಲೀಸರಿಗೆ ಸಿಗುವುದಿಲ್ಲ ಎಂಬಿತ್ಯಾದಿ ಪ್ರಶ್ನೆಗಳು ಸಹಜ.

ಎಲ್ಲರೂ ಅಂದುಕೊಂಡಿರುವ ಹಾಗೆ ಬೆಂಗಳೂರು, ಮುಂಬೈಗಳಂಥ ಮೆಟ್ರೊ ನಗರಗಳಲ್ಲಿದ್ದುಕೊಂಡೇ ಜನರು ಸೈಬರ್ ಕ್ರೈಮ್‌ ಮಾಡುತ್ತಾರೆ. ಆದರೆ, ಇದು ನಿಜವಲ್ಲ. ಜಾರ್ಖಂಡ್‌ನ ಜಾಮತಾಡಾ (Jamtara) ಎಂಬ ಅತಿ ಹಿಂದುಳಿದ ಜಿಲ್ಲೆ, ಭಾರತದಲ್ಲಿ ನಡೆಯುವ ಬಹುತೇಕ ಸೈಬರ್ ವಂಚನೆಯ ಕೇಂದ್ರ ಬಿಂದುವಾಗಿದೆ! ಈ ನಗರವನ್ನು Epicenter of Cybercrime ಎಂದೂ ಹೇಳಬಹುದು. ಹಣದ ಆಮಿಷ ಒಡ್ಡಿಯೋ, ಇನ್ನಿತರ ಗಿಫ್ಟ್‌ಗಳ ಆಸೆ ತೋರಿಸಿ ಬರುವ ಬಹುತೇಕ ಕರೆಗಳು ಈ ಜಾಮತಾಡಾ ಜಿಲ್ಲೆಯಿಂದಲೇ ಉತ್ಪಾದನೆಯಾಗಿರುತ್ತವೆ(ವಿಸ್ತಾರ Explainer).

ಜಾಮತಾಡಾ ಜಾರ್ಖಂಡ್‌ನಲ್ಲಿರುವ ಒಂದು ಜಿಲ್ಲೆ. ಈ ಜಿಲ್ಲಾ ಕೇಂದ್ರದ ಹೆಸರೂ ಜಾಮತಾಡಾ. ಇದನ್ನು ಫಿಶಿಂಗ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದೂ ಕರೆಯುತ್ತಾರೆ. ದೇಶಾದ್ಯಂತ ವರದಿಯಾಗುವ ಬಹುತೇಕ ಫಿಶಿಂಗ್ ಪ್ರಕರಣಗಳಿಗೆ ಈ ಪ್ರದೇಶವೇ ಮೂಲವಾಗಿದೆ. ಸೈಬರ್ ಕ್ರೈಮ್ ಮೂಲ ಹುಡುಕಿಕೊಂಡು ಬಹುತೇಕ ರಾಜ್ಯದ ಪೊಲೀಸರು ಈ ಜಾಮತಾಡಾಕ್ಕೆ ಆಗಾಗ ಬರುತ್ತಾರೆ. ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಜಾಮತಾಡಾ ಕೂಡ ಒಂದಾಗಿದೆ. ದೇಶದಲ್ಲಿ ನಡೆಯುವ ಒಟ್ಟು ಫಿಶಿಂಗ್ ಮತ್ತು ಸೈಬರ್‌ ಕ್ರೈಮ್‌ಗಳಲ್ಲಿ ಈ ಪ್ರದೇಶದ ಕಾಣಿಕೆ ಹೆಚ್ಚಿದೆ.

ಈಶ್ವರಚಂದ್ರ ವಿದ್ಯಾಸಾಗರರ ಕರ್ಮಭೂಮಿ
ಇತಿಹಾಸವನ್ನು ಓದಿದವರಿಗೆ ಈಶ್ವರ ಚಂದ್ರ ವಿದ್ಯಾಸಾಗರ ಅವರ ಬಗ್ಗೆ ತಿಳಿದಿರುತ್ತರೆ. ಅವರೊಬ್ಬ 19ನೇ ಶತಮಾನದ ಮಹಾನ್ ಸಮಾಜ ಸುಧಾರಕ. ಜಾಮತಾಡಾ ಜಿಲ್ಲೆಯ ಬುಡಕಟ್ಟು ಹೆಣ್ಣು ಮಕ್ಕಳ ಶಾಲಾ ಕಲಿಕೆಗಾಗಿ ಅವರು ಸುಮಾರು 18 ವರ್ಷಗಳ ಕಾಲ ಈ ಜಿಲ್ಲೆಯ ಕರ್ಮತಾಂಡ್ ಪಟ್ಟಣದಲ್ಲಿ ಕೆಲಸ ಮಾಡಿದ್ದರು. 1853ರಿಂದಲೇ ವಿದ್ಯಾಸಗಾರರು ಈ ಜಾಮತಾಡಾದಲ್ಲಿ ನೆಲೆಸಿದ್ದರು. ಸಣ್ಣ ಗುಡಿಸಲೇ ಅವರ ವಾಸಸ್ಥಾನವಾಗಿತ್ತು. ನಂದಂಕಾನನ್ ಎಂಬ ಕುಟೀರದಲ್ಲಿ ಆಶ್ರಮ ಸ್ಥಾಪಿಸಿ, ವನವಾಸಿಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದರು. ಅವರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ನೀಡುವುದರ ಜತೆಗೆ, ಮಹಿಳಾ ಶಿಕ್ಷಣಕ್ಕಾಗಿ ಹೋರಾಟ ಕೂಡ ಮಾಡಿದರು. ಇದರ ಭಾಗವಾಗಿಯೇ ಬಾಲಕಿಯರ ಶಾಲೆಗಳನ್ನು ಆರಂಭಿಸಿದರು. ಬಾಲ್ಯ ವಿವಾಹ ನಿಷೇಧ, ವಿಧವಾ ಪುನರ್ವಿವಾಹಕ್ಕಾಗಿ ಹೋರಾಟಗಳನ್ನೇ ಮಾಡಿದರು. ತಮ್ಮ ಜೀವನದ ಕೊನೆಯ ದಿನಗಳನ್ನು ಇಲ್ಲಿಯೇ ಕಳೆದರು. ಭವ್ಯ ಇತಿಹಾಸದ ಹೊರತಾಗಿಯೂ ಇಂದಿನ ದಿನಗಳಲ್ಲಿ ಜಾಮತಾಡಾವನ್ನು ಫಿಶಿಂಗ್ ಕಾರಣಕ್ಕಾಗಿಯೇ ಜನರು ಗುರುತಿಸುವಂತಾಗಿದೆ.

ಬಿಪಿಎಲ್ ಕಾರ್ಡುದಾರರು ಇಲ್ಲಿ ಶ್ರೀಮಂತರು!
ಜಾಮತಾಡಾ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡು ಹೊಂದಿದವರು ಹೇಗೆ ಶ್ರೀಮಂತರಾಗುತ್ತಿದ್ದಾರೆ ಎಂಬುದಕ್ಕೆ ಈ ನಿರ್ದಿಷ್ಟ ಪ್ರಕರಣವನ್ನು ಓದಬೇಕು. ಜಿಲ್ಲೆಯ ಸೋನಬಾದ್ ಹಳ್ಳಿಯ ಆನಂದ್ ರಕ್ಷಿತ್ ಓದಿದ್ದು ಬರೀ ಎಂಟನೇ ಕ್ಲಾಸ್. ಈತನ ತಂದೆ ಹಿರೆನ್ ರಕ್ಷಿತ್. ಸೈಕಲ್ ಮೇಲೆ ಸ್ಕ್ರ್ಯಾಪ್ ಸಂಗ್ರಹಿಸಿ, ಅದನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. 7 ಸದಸ್ಯರು ಇರುವ ಕುಟುಂಬವು ಒಂದು ಸಣ್ಣ ಗುಡಿಸಲಿನಲ್ಲಿ ವಾಸವಾಗಿತ್ತು. ಇವರ ಊಟಕ್ಕೆ ಸರ್ಕಾರ ಒದಗಿಸುವ ಪ್ರತಿ ತಿಂಗಳ ಪಡಿತರವೇ ಆಧಾರವಾಗಿತ್ತು. ಇದು ನಾಲ್ಕೈದು ವರ್ಷಗಳ ಹಿಂದಿನ ಮಾತು.

ಆದರೆ, ನಾಲ್ಕೈದು ವರ್ಷಗಳ ಬಳಿಕ ಕೆಲವೇ ತಿಂಗಳಲ್ಲಿ ಈ ಕುಟುಂಬದ ಚಹರೆ ಬದಲಾಗಿ ಹೋಯಿತು. ಆರ್ಥಿಕ ಪರಸ್ಥಿತಿಯೂ ಸುಧಾರಿಸಿತು, ಹೊಸ ಮನೆಯನ್ನು ಕಟ್ಟಿದರು. 2021ರ ಆಗಸ್ಟ್‌ನಲ್ಲಿ ಈ ಮನೆ ಮೇಲೆ ದಾಳಿ ಮಾಡಿದಾಗ, ಈ ಕುಟುಂಬದ ದಿಢೀರ್ ಶ್ರೀಮಂತಿಕೆಯ ಹಿಂದಿನ ರಹಸ್ಯ ಬದಲಾಯಿತು. ದಾಳಿ ವೇಳೆ ವೇಳೆ, 21 ಲಕ್ಷ ರೂ. ನಗದಿನೊಂದಿಗೆ ಕಾರು, ಸ್ಕೂಟಿ, ಬೈಕ್, 7 ಲಕ್ಷ ರೂ. ಠೇವಣಿ ಪತ್ರಗಳು, 65 ಲಕ್ಷ ರೂ. ಅಧಿಕ ಮೌಲ್ಯ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ದಾಖಲೆ ಪತ್ರಗಳು, 12 ಪಾಸ್‌ಬುಕ್‌ಗಳು ದೊರೆತವು. ಮನೆಯ ಮೌಲ್ಯ 50 ಲಕ್ಷ ರೂ. ಎಂದು ನಿರ್ಧರಿಸಲಾಯಿತು. ಇದಕ್ಕೆಲ್ಲ ಹಣದ ಮೂಲ ಆನಂದ್ ನಡೆಸುತ್ತಿದ್ದ ಸೈಬರ್ ವಂಚನೆಯಾಗಿತ್ತು. ಪೊಲೀಸ್ ದಾಳಿ ವೇಳೆ ಆನಂದ್ ತಲೆ ಮರೆಸಿಕೊಂಡಿದ್ದ. ಆದರೆ, ಬಳಿಕ ಆತನನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಯಿತು. 20 ಲಕ್ಷ ರೂ. ಭದ್ರತೆಯ ಜಾಮೀನಿನಿ ಮೇಲೆ ಶೀಘ್ರವೇ ಜೈಲಿನಿಂದ ಹೊರಗೆ ಕೂಡ ಬಂದ ಆನಂದ್ ರಕ್ಷಿತ್. ಜಾಮತಾಡಾ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಈ ರೀತಿಯ ಆನಂದ್ ರಕ್ಷಿತ್‌ಗಳು ಸಿಗುತ್ತಾರೆ.

ಕರ್ಮತಾಂಡ್‌ನ ಕರ್ಮಕಾಂಡ
ಜಾಮತಾಡಾ ಜಿಲ್ಲೆಯ ಕರ್ಮತಾಂಡ್ ಪ್ರದೇಶವು ಸೈಬರ್ ಕ್ರೈಮ್‌ಗಳ ಕೇಂದ್ರ ಸ್ಥಾನವೂ ಹೌದು. ಈ ಪಟ್ಟಣದಲ್ಲಿ ಒಂದೂವರೆ ಲಕ್ಷ ಜನರಿದ್ದಾರೆ. ಇಲ್ಲಿನ ಜನರು ಸೈಬರ್ ಕ್ರೈಮ್‌ಗಳಿಗೆ ತೆರೆದುಕೊಳ್ಳುವ ಮುನ್ನ, ಮಾದಕ ವ್ಯಸನ ಪ್ರಕರಣಗಳು, ಸರಗಳ್ಳತನ, ರೈಲುಗಳಲ್ಲಿ ದರೋಡೆ ಸೇರಿದಂತೆ ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ರೈಲುಗಳಲ್ಲಿ ಪ್ರಯಾಣಿಕರ ಭಾರೀ ಮೌಲ್ಯದ ವಸ್ತುಗಳನ್ನು ಕದಿಯುವ ದೊಡ್ಡ ಗ್ಯಾಂಗ್‌ಗಳು ಸಕ್ರಿಯವಾಗಿದ್ದವು. ಯಾವಾಗ ಸ್ಮಾರ್ಟ್‌ಫೋನ್‌ಗಳು ಪ್ರಚಲಿತಕ್ಕೆ ಬಂದವೋ, ಇಲ್ಲಿನ ಯುವಕರು ಆನ್ ಲೈನ್ ವಂಚನೆಯ ತಂತ್ರಗಳನ್ನು ಕಲಿತು, ಅನಾಯಸವಾಗಿ ಹಣವನ್ನು ಸಂಪಾದಿಸುವ ದಾರಿಗಳನ್ನು ಹುಡುಕಿಕೊಂಡರು. ಇದು ಕೇವಲ ಕರ್ಮತಾಂಡ್ ಪ್ರದೇಶದ ಕತೆಯಲ್ಲ ಜಾಮತಾಡಾ ಜಿಲ್ಲೆಯ ಬಹಳಷ್ಟು ಪಟ್ಟಣಗಳು, ಹಳ್ಳಿಗಳಲ್ಲಿ ಇದೇ ರೀತಿಯಲ್ಲಿವೆ.

ಹೇಗೆ ಕಲಿತರು ಇವರೆಲ್ಲ?
ಕೆಲವು ಜನರು ಪ್ರಮುಖ ಮೆಟ್ರೋ ನಗರಗಳಿಗೆ ಸ್ಥಳಾಂತರಗೊಂಡರು ಮತ್ತು ಚಿಪ್ ರಿಪ್ಲೇಸ್ಮೆಂಟ್, ಸೈಬರ್ ಕೆಫೆಗಳು, ಸಾಫ್ಟ್‌ವೇರ್ ಚಿಪ್‌ಗಳ ಬದಲಿ ಇತ್ಯಾದಿ ಕೆಲಸ ಮೂಲಕ ತಂತ್ರಗಳನ್ನು ತಮ್ಮದಾಗಿಸಿಕೊಂಡರು. ಇನ್ನು ಕೆಲವರು ಕಾಲ್ ಸೆಂಟರ್‌ಗಳನ್ನು ಸ್ಥಾಪಿಸುವ ಮೂಲಕ ಜನರನ್ನು ವಂಚಿಸುವ ದಾರಿಗಳನ್ನು ಕಂಡುಕೊಂಡರು. ಕ್ರಮೇಣ ಆನ್‌ಲೈನ್ ವಂಚಕರ ಹಲವಾರು ಗುಂಪುಗಳು ಸೃಷ್ಟಿಯಾದವು. ಈ ಗುಂಪುಗಳು ಜಾಮತಾಡಾ ಜಿಲ್ಲೆಯ ಸುಮಾರು 100 ಹಳ್ಳಿಗಳಲ್ಲಿ ಹರಡಿಕೊಂಡಿವೆ. ಜಾಮತಾಡಾ ಮಾತ್ರವಲ್ಲದೇ ದಿಯೋಘರ್, ಗಿರಿದಿಹ್, ಧನ್‌ಬಾದ್‌ ಮತ್ತು ಗೊಡ್ಡಾ ಜಿಲ್ಲೆಗಳಲ್ಲಿ ಸೈಬರ್ ವಂಚನೆಯನ್ನೇ ಧಂದೆಯಾಗಿ ಮಾಡಿಕೊಂಡಿರುವುದನ್ನು ಕಾಣಬಹುದು. ಈ ಪ್ರದೇಶಗಳಲ್ಲಿನ ಹತ್ತಾರು ಸೈಬರ್ ಅಪರಾಧಿಗಳು ದೆಹಲಿ, ಅಹಮದಾಬಾದ್, ಕೋಲ್ಕೊತಾ, ಜೈಪುರ, ಮುಂಬೈ ಮತ್ತು ಪಾಟ್ನಾದಂತಹ ಅನೇಕ ಮೆಟ್ರೊ ನಗರಗಳಲ್ಲಿ ಕಾಲ್ ಸೆಂಟರ್‌ಗಳನ್ನು ತೆರೆದಿದ್ದಾರೆ.

ದಿ ಫಸ್ಟ್ ಕೇಸ್- ಸೀತಾರಾಮ್ ಮಂಡಲ್
ಆನ್‌ಲೈನ್‌ ವಂಚನೆಯ ಗಮನ ಸೆಳೆದ ಮೊದಲ ಪ್ರಕರಣ ಎಂದರೆ ಸೀತಾರಾಮ್ ಮಂಡಲ್‌ನದ್ದು. ಜಾಮತಾಡಾದ ಸಿಂಧರ್‌ಜೋರಿ ಹಳ್ಳಿಯ ನಿವಾಸಿ ಸೀತಾರಾಮ್ ಮಂಡಲ್ 15 ವರ್ಷಗಳ ಹಿಂದೆ ಮುಂಬೈಗೆ ತೆರಳಿ, ಮೊಬೈಲ್ ರಿಚಾರ್ಜ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ, ಆತ ಮೊಬೈಲ್ ಫೋನುಗಳ ಮೂಲಕ ಜನರನ್ನು ವಂಚಿಸುವ ಹಲವಾರು ತಂತ್ರಗಳನ್ನು ಕಂಡುಕೊಂಡ. ಬಳಿಕ ತನ್ನೂರಿಗೆ ಹಿಂದಿರುಗಿ, ಆನ್‌ಲೈನ್ ವಂಚನೆಯನ್ನು ಶುರು ಮಾಡಿದ. ಈತನ ತಂಡಕ್ಕೆ ಅನೇಕ ಯುವಕರು ಸೇರ್ಪಡೆಯಾದರು. ಸೀತಾರಾಮ್ ಮಂಡಲ್ ರೀತಿಯ ವ್ಯಕ್ತಿಗಳು ಜಾಮತಾಡಾದ ಪ್ರತಿ ಹಳ್ಳಿಯಲ್ಲಿ ಈಗ ಸಿಗುತ್ತಾರೆ.

ಪೊಲೀಸ್ ಠಾಣೆ ಆರಂಭ
ಜಾಮತಾಡಾದಲ್ಲಿ ನಡೆಯುತ್ತಿರುವ ಸೈಬರ್ ಕ್ರೈಮ್‌ಗಳನ್ನು ಮಟ್ಟ ಹಾಕುವುದಕ್ಕಾಗಿ ಸರ್ಕಾರವು 2018ರಲ್ಲಿ ಸೈಬರ್ ಪೊಲೀಸ್ ಠಾಣೆ ತೆರೆಯಿತು. ಅಲ್ಲಿಂದ ಇಲ್ಲಿಯತನಕ 250ಕ್ಕೂ ಹೆಚ್ಚು ಸೈಬರ್ ಅಪರಾಧಿಗಳನ್ನು ಬಂಧಿಸಲಾಗಿದೆ. ಹಾಗಿದ್ದೂ, ಜಾಮತಾಡಾ ಮೂಲಕ ನಡೆಯುವ ಆನ್‌ಲೈನ್ ವಂಚನೆಗಳಿಗೆ ಈವರೆಗೂ ತಡೆ ಬಿದ್ದಿಲ್ಲ. ಯಾಕೆಂದರೆ, ಈ ಅಪರಾಧಿಗಳು ಜಾಮೀನಿನ ಮೇಲೆ ಬಿಡುಗಡೆ ಆದ ಬಳಿಕ ಮತ್ತೆ ಅದೇ ಕೆಲಸವನ್ನು ಮುಂದುವರಿಸುತ್ತಾರೆ. ಜೆತೆಗೆ, ಈ ವಂಚನೆ ಚಟುವಟಿಕೆಗೆ ಹೊಸಬರು ಕೂಡ ಸೇರಿಕೊಳ್ಳುತ್ತಲೇ ಇರುತ್ತಾರೆ.

ಜಾಮತಾಡಾದಲ್ಲೇಕೆ ಸೈಬರ್ ಕ್ರೈಮ್ಸ್?
ಸೈಬರ್ ತಜ್ಞರ ಪ್ರಕಾರ ಫಿಶಿಂಗ್‌ನಂಥ ಸ್ಕ್ಯಾಮ್‌ಗಳು ಸಣ್ಣ ಪಟ್ಟಣಗಳಿಂದಲೇ ಹುಟ್ಟಿಕೊಳ್ಳುತ್ತವೆ. ಯಾಕೆಂದರೆ, ಪೊಲೀಸರು ಸೈಬರ್ ಕ್ರೈಮ್‌ ವಿಷಯದಲ್ಲಿ ಸಣ್ಣ ಪಟ್ಟಣ, ನಗರಗಳತ್ತ ಅಷ್ಟು ಲಕ್ಷ್ಯ ವಹಿಸುವುದಿಲ್ಲ. ಜತೆಗೆ, ಈ ಪ್ರದೇಶಗಳಲ್ಲಿ ಸೈಬರ್ ಕ್ರೈಮ್ ತಜ್ಞ ಪೊಲೀಸರೂ ಇರುವುದಿಲ್ಲ. ಆದರೆ, ಮೆಟ್ರೋ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯ ಸೈಬರ್ ಕ್ರೈಮ್‌ಗಳನ್ನು ಪತ್ತೆ ಹೆಚ್ಚಲು ಹೆಚ್ಚು ಸಾಮರ್ಥ್ಯವನ್ನು ಪಡೆದುಕೊಂಡಿರುತ್ತದೆ. ಸಾಕಷ್ಟು ರೇಡ್‌ಗಳನ್ನು ಮಾಡಿ, ಆರೋಪಿಗಳನ್ನು ಪತ್ತೆ ಹಚ್ಚುತ್ತದೆ. ಆದರೆ, ಇದೇ ರೀತಿ ಸೌಕರ್ಯವನ್ನು ಸಣ್ಣ ಪಟ್ಟಣ ಮತ್ತು ನಗರಗಳಲ್ಲಿ ನಿರೀಕ್ಷಿಸಲಾಗದು. ಈ ಸಂಗತಿಯ ಲಾಭವನ್ನು ಪಡೆದುಕೊಂಡಿರುವ ಜಾರ್ಖಂಡ್‌ನ ಜಾಮತಾಡಾ ಜಿಲ್ಲೆ ಹಾಗೂ ನಗರವು ಭಾರತದ ಫಿಶಿಂಗ್ ಕ್ಯಾಪಿಟಲ್ ಎಂಬ ಕುಖ್ಯಾತಿಯನ್ನು ಪಡೆದುಕೊಂಡಿದೆ. ಇಲ್ಲಿನ ಬಹುತೇಕ ಹಳ್ಳಿ, ಚಿಕ್ಕ ಪಟ್ಟಣಗಳಲ್ಲಿ ಸೈಬರ್ ಕ್ರೈಮ್‌ಗಳಲ್ಲಿ ನಿರತವಾಗಿರುವ ಜನರಿದ್ದಾರೆ. ದೇಶದಲ್ಲಿ ನಡೆಯುವ ಫಿಶಿಂಗ್, ಒಟಿಪಿ ಸ್ಕ್ಯಾಮ್‌ಗಳ ಪೈಕಿ ಹೆಚ್ಚಿನವುಗಳ ಮೂಲ ಜಾಮತಾಡಾವೇ ಆಗಿದೆ.

ಆಮಿಷಕ್ಕೆ ಬಲಿ ಬೀಳುವ ಜನ
ಜನ ಎಷ್ಟೇ ಸುಶಿಕ್ಷತರಾದರೂ ಆಮಿಷದಲ್ಲಿ ಕ್ಷಣವಾದರೂ ಯಾಮಾರುತ್ತಾರೆ. ಈ ಮಾನವ ನಡವಳಿಕೆಯೇ ಜಾಮತಾಡಾ ಫಿಶಿಂಗ್ ಪಂಟರ್‌ಗಳಿಗೆ ನೆರವಾಗಿರುವುದು. ಅವರು ಫೋನ್ ಕಾಲ್ ಮಾಡಿ, ಆಮಿಷವೊಡ್ಡಿ ನಿಮ್ಮ ವೈಯಕ್ತಿಕ ಎಲ್ಲ ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಂಡು, ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ. ಬ್ಯಾಂಕಿನ ಖಾತೆಯಿಂದ ಹಣ ಸರಸರನೇ ಹೊರ ಹೋದಾಗಲೇ ಜನರಿಗೆ ತಾವು ಮೋಸ ಹೋಗಿರುವುದು ತಿಳಿಯುತ್ತದೆ.

ಲೇಡಿ ಕಾಲರ್!
ಅತ್ತ ಕಡೆಯಿಂದ ಮಹಿಳೆಯೊಬ್ಬಳು ಮಾತನಾಡಲಾರಂಭಿಸಿದರೆ ಇತ್ತ ಕಡೆಯ ಗಂಡಸು ಫಿದಾ ಆಗಿ ಬಿಡುತ್ತಾನೆ. ಇದೇ ಸಂಗತಿ ಜಾಮತಾಡಾ ಖದೀಮರಿಗೆ ಹೆಚ್ಚು ವರವಾಗಿದೆ. ಫಿಶಿಂಗ್ ಮಾಡುವ ಜನರು, ಹೆಣ್ಣು ಮಕ್ಕಳಿಂದ ಕರೆ ಮಾಡಿಸಿ, ತಮಗೆ ಬೇಕಿರುವ ಎಲ್ಲ ಮಾಹಿತಿಯನ್ನು ಬಹಳ ನಯ ನಾಜೂಕಿನಿಂದ ಪಡೆದುಕೊಳ್ಳುತ್ತಾರೆ. ಬಹಳ ಜನರಿಗೆ ಹೆಂಗಸಿನ ದನಿಯಲ್ಲಿ ಮಾತನಾಡುವ ಕರೆಗಳು ಇನ್ನೆಲ್ಲೋ ಕುಳಿತ ಗಂಡಸೇ ಮಾಡುತ್ತಿರುತ್ತಾನೆ ಎಂಬ ಸಂಗತಿ ಗೊತ್ತೇ ಇರುವುದಿಲ್ಲ.

ಬೆತ್ತಲೆ ವಿಡಿಯೋ
ಹಣ ಸುಲಿಗೆಗೆ ಕಂಡುಕೊಂಡಿರುವ ಮತ್ತೊಂದು ವಂಚನೆ ಮತ್ತು ಅಪರಾಧದ ದಾರಿ ಇದು. ಜಾಮತಾಡಾದ ಕೆಲವರು ಈ ಕ್ರೈಮ್‌ನಲ್ಲಿ ಎಕ್ಸ್‌ಪರ್ಟ್ ಆಗಿದ್ದಾರೆ. ವಂಚಕ ತನ್ನ ಟಾರ್ಗೆಟ್ ವ್ಯಕ್ತಿಗೆ, ಫೋನ್ ಹಿಂಬದಿಯ ಕ್ಯಾಮೆರಾ ಮೂಲಕ ನಗ್ನ ವಿಡಿಯೋವನ್ನು ವಿಡಿಯೋ ಕಾಲ್ ಮೂಲಕ ತೋರಿಸುತ್ತಾನೆ. ಟಾರ್ಗೆಟ್ ವ್ಯಕ್ತಿ ಈ ನಗ್ನ ವಿಡಿಯೋ ನೋಡುವಾಗ, ಸ್ಕ್ರೀನ್ ಅನ್ನು ರೆಕಾರ್ಡ್ ಮಾಡಿಕೊಳ್ಳುತ್ತಾನೆ. ಆ ಬಳಿಕ ಅದನ್ನು ವಿಡಿಯೋ ತುಣುಕು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸುತ್ತಾನೆ. ಇದರಲ್ಲಿ ಟಾರ್ಗೆಟ್ ವ್ಯಕ್ತಿಯ ತಪ್ಪೇನೂ ಇರದಿದ್ದರೂ, ತಾನು ನಗ್ನ ವಿಡಿಯೋ ನೋಡುತ್ತಿದ್ದ ವಿಷಯ ಜನರಿಗೆ ಗೊತ್ತಾದರೆ ಏನು ಅಂದುಕೊಂಡಾರು ಎಂಬ ಭಯದಿಂದ ವಂಚಕನಿಗೆ ಹೇಳಿದಷ್ಟು ಹಣ ನೀಡಲಾರಂಭಿಸುತ್ತಾನೆ.

ಕೆವೈಸಿ ಅಪ್‌ಡೇಟ್
ಜಾಮತಾಡಾದ ವಂಚಕರು ಆಯ್ದುಕೊಂಡಿರುವ ಮತ್ತೊಂದು ದಾರಿ ಇದು. ಹಾಗೆಯೇ ಭಾರತದಲ್ಲಿ ನಡೆಯುವ ಅತ್ಯಂತ ಸಾಮಾನ್ಯ ಸೈಬರ್ ಕ್ರೈಮ್ ಇದು. ಗೊತ್ತಿದ್ದೂ ಹಲವರು ಈ ಕೆವೈಸಿ ಬಲೆಗೆ ಬಿದ್ದು, ಹಣವನ್ನು ಕಳೆದುಕೊಳ್ಳುತ್ತಾರೆ. ಟಾರ್ಗೆಟ್ ವ್ಯಕ್ತಿಯ ಸಿಮ್ ಕಾರ್ಡ್ ಅಥವಾ ಬ್ಯಾಂಕ್ ಕಾರ್ಡ್‌ಗಳ ಕೆವೈಸಿ(Know Your Customer) ಪರಿಶೀಲನೆಗೆಂದು ಕಾಲ್ ಮಾಡುತ್ತಾನೆ. ಆಗ ಟಾರ್ಗೆಟ್, ಸ್ಕ್ಯಾಮರ್ ಕಾಲರ್ ಕೇಳುವ ಎಲ್ಲ ಮಾಹಿತಿಯನ್ನು ನೀಡುತ್ತಾರೆ. ಅಲ್ಲದೇ, ವಂಚನೆಗೆ ನೆರವಾಗುವ ಆ್ಯಪ್ ಡೌನ್ಲೋಡ್ ಮಾಡಲು ಹೇಳುತ್ತಾರೆ. ಇದರಿಂದಾಗಿ ಅವರಿಗೆ ಬೇಕಾಗುವ ಎಲ್ಲ ಮಾಹಿತಿಯು ಸಿಕ್ಕುಬಿಡುತ್ತದೆ. ಇದಾದ ಮರುಗಳಿಗೆಯಲ್ಲೇ ಟಾರ್ಗೆಟ್ ವ್ಯಕ್ತಿಯ ಖಾತೆಯಲ್ಲಿನ ಹಣವೆಲ್ಲ ಡ್ರಾ ಆಗಿರುತ್ತದೆ!

ಫೇಕ್ ಪ್ರೊಫೈಲ್ಸ್
ವಂಚಕರು ಅತ್ಯುನ್ನತ ಅಧಿಕಾರಿಗಳು ಅಂದರೆ, ಐಎಎಸ್, ಐಪಿಎಸ್‌ ಅಧಿಕಾರಿಗಳ ರೀತಿಯಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಬಳಿಕ, ನಿರ್ದಿಷ್ಟ ವ್ಯಕ್ತಿಗಳಿಗೆ ರಿಕ್ವೆಸ್ಟ್ ಕಳುಹಿಸಿ, 5 ಸಾವಿರದಿಂದ 10 ಸಾವಿರ ರೂ.ವರೆಗೂ ಹಣ ಪಡೆದುಕೊಳ್ಳುತ್ತಾರೆ. ಪ್ರೊಫೈಲ್‌ಗಳನ್ನು ಗಮನಿಸುವ ಜನರು ನಿಜ ಇರಬೇಕೆಂದು ಭಾವಿಸಿ ಹಣ ಕಳುಹಿಸಿ, ಕೈ ಸುಟ್ಟುಕೊಳ್ಳುತ್ತಾರೆ.

ವಂಚಕರಿಗೆ ಫೋನ್ ನಂಬರ್ಸ್ ಹೇಗೆ ಸಿಗುತ್ತವೆ?
ಮುಖ್ಯವಾಗಿ ಕಾಡುವ ಪ್ರಶ್ನೆ ಎಂದರೆ, ಈ ಜಾಮತಾಡಾ ಸೈಬರ್ ವಂಚಕರಿಗೆ ಫೋನ್ ನಂಬರ್ಸ್ ಹೇಗೆ ಸಿಗುತ್ತವೆ? ಕಾಲ್ ಸೆಂಟರ್‌ಗಳೇ ಇದಕ್ಕೆ ಮೂಲ. ಕೆಲವರು ದುಡ್ಡಿನ ಆಸೆಗೆ ಕಾಲ್ ಸೆಂಟರ್‌ಗಳಿಂದ ಡೇಟಾವನ್ನು ಸೈಬರ್ ವಂಚಕರಿಗೆ ಮಾರಾಟ ಮಾಡುತ್ತಾರೆ. ಇನ್ನು, ಡಿಜಿಟಲ್ ಪೇಮೆಂಟ್ ಗೇಟ್‌ವೇ, ಒಟಿಪಿ ವ್ಯವಸ್ಥೆಯಲ್ಲಿ ಲೋಪಗಳನ್ನು ವಂಚರು ಬಳಸಿಕೊಂಡು ಫೋನ್ ನಂಬರ್ಸ್ ಪಡೆದುಕೊಳ್ಳುತ್ತಾರೆ. ಒಂದೊಮ್ಮೆ, ಕಾಲ್ ಮಾಡಿದ ವ್ಯಕ್ತಿ ನಿಮ್ಮ ಹೆಸರು, ವಿಳಾಸವನ್ನು ಸರಿಯಾಗಿ ಹೇಳುತ್ತಿದ್ದಾನೆ ಎಂದರೆ ಆ ವ್ಯಕ್ತಿಯ ಬಳಿಯ, ಮಾರಾಟಕ್ಕೀಡಾದ ನಿಮ್ಮ ಮಾಹಿತಿ ಇರುತ್ತದೆ ಎಂದರ್ಥ. ಯಾಕೆಂದರೆ, ಯಾವುದೇ ಬ್ಯಾಂಕುಗಳು ಫೋನ್ ಮಾಡಿ, ಕೆವೈಸಿಯಾಗಲೀ, ಒಟಿಪಿಯಾಗಲಿ ಕೇಳುವುದಿಲ್ಲ. ಶಾಪಿಂಗ್ ವೆಬ್‌ಸೈಟ್ಸ್, ಟೆಲಿಫೋನ್ ಕಂಪನಿ ಇತ್ಯಾದಿಗಳ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡುವವರೇ ಈ ಮಾಹಿತಿಗಳನ್ನು ಮಾರಾಟ ಮಾಡಿರುತ್ತಾರೆ. ಇತ್ತೀಚೆಗೆ, ಈ ಜಾಮತಾಡಾ ವಂಚಕರ ಇನ್ಶೂರೆನ್ಸ್ ಮಾಹಿತಿಯನ್ನು ಕೂಡ ಖರೀದಿಸುತ್ತಿದ್ದಾರೆಂದು ತಿಳಿದು ಬಂದಿದೆ.

ಜಾಮತಾಡಾ ಕೇಂದ್ರಿತ ವೆಬ್‌ಸೀರೀಸ್
ಭಾರತದ ಫಿಶಿಂಗ್ ಕ್ಯಾಪಿಟಲ್ ಎನಿಸಿಕೊಂಡಿರುವ ಜಾಮತಾಡಾ ನಟೋರಿಯಸ್ ಕ್ರಿಮಿನಲ್ ಹಿನ್ನೆಲೆಯನ್ನು ಅನೇಕ ಸಿನಿಮಾ ಮತ್ತು ವೆಬ್‌ಸೀರೀಸ್‌ಗಳಲ್ಲಿ ಬಳಸಿಕೊಳ್ಳಲಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಜಾಮತಾಡಾ ವೆಬ್‌ಸೀರೀಸ್ ಸಂಚನಲ ಸೃಷ್ಟಿಸಿದೆ. ಈವರೆಗೆ ಎರಡು ಸೀಸನ್ ಪ್ರಸಾರವಾಗಿದ್ದು, ಜಾಮತಾಡ ಸೈಬರ್ ಕ್ರೈಮ್‌ ಅನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಇಡೀ ವ್ಯವಸ್ಥೆಯು ಇದರಲ್ಲಿ ಭಾಗಿಯಾಗಿರುವುದನ್ನು ಸೂಚ್ಯವಾಗಿ ಹೇಳಲಾಗಿದೆ.

ಸೋಷಿಯಲ್ ಮೀಡಿಯಾ ಬಳಸುವಾಗ ಇರಲಿ ಎಚ್ಚರ
ಸಾಮಾಜಿಕ ಜಾಲತಾಣಗಳ (Social Media) ಬಳಕೆ ಇಂದಿನ ಅಗತ್ಯ ಹಾಗೂ ಅನಿವಾರ್ಯತೆ. ಕಚೇರಿ ಕೆಲಸಕ್ಕಾಗಲಿ, ಸ್ನೇಹಿತರು ಅಥವಾ ಬಂಧುಗಳ ಜತೆಗಿನ ಮಾತುಕತೆಗಾಗಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲೇಬೇಕಾಗಿದೆ. ಆದರೆ, ಸೋಷಿಯಲ್‌ ಮೀಡಿಯಾ ಬಳಕೆಯನ್ನು ಎಚ್ಚರ ತಪ್ಪಿ ಮಾಡಿದರೆ ಅದು ಅಪಾಯಕಾರಿ ಎನಿಸಬಹುದು. ನಿಮ್ಮ ವೈಯಕ್ತಿಕ ಮಾಹಿತಿಗಳು ದುರುಪಯೋಗವಾಗುವ ಜತೆಗೆ ನಿಮ್ಮ ಕಂಪ್ಯೂಟರ್‌ ಹಾಗೂ ಬ್ಯಾಂಕ್‌ ಖಾತೆಗಳಿಗೆ ಸೈಬರ್‌ ಕಳ್ಳರು ಕನ್ನ ಹಾಕಬಹುದು. ಹೀಗಾಗಿ ಸೋಶಿಯಲ್‌ ಮೀಡಿಯಾ ಬಳಕೆ ವೇಳೆ ಕೆಲವೊಂದು ಎಚ್ಚರಿಕೆಗಳನ್ನು ವಹಿಸಿಕೊಳ್ಳಬೇಕಾಗುತ್ತದೆ.

1. ನೀವು ಮಾಡುವ ಯಾವುದೇ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಶಾಶ್ವತವಾಗಿ ಇರುತ್ತದೆ. ಅದು ಸಾವಿರಾರು ಮಂದಿಯ ಕಣ್ಣಿಗೆ ಬೀಳುತ್ತದೆ. ಹೀಗಾಗಿ ಯಾವುದೇ ಪೋಸ್ಟ್‌ಗಳನ್ನು ಮಾಡುವಾಗ ಎರಡೆರಡು ಬಾರಿ ಯೋಚಿಸಿ. ಪ್ರಮಾದಗಳು ಘಟಿಸದಂತೆ ಮುನ್ನೆಚ್ಚರಿಕೆ ವಹಿಸಿ.

2. ಸಾಮಾಜಿಕ ಜಾಲತಾಣಗಳಲ್ಲ ವ್ಯವಹಾರ ಮಾಡುವಾಗ ವೈಯಕ್ತಿಕ ಮಾಹಿತಿಗಳನ್ನು ಕೊಡಬೇಕಾಗುತ್ತದೆ. ಕೆಲವೊಂದು ಮಾಹಿತಿಗಳು ಅನಿವಾರ್ಯವಾದರೂ ಇನ್ನು ಕೆಲವು ಮಾಹಿತಿಗಳನ್ನು ನೀಡುವ ಅಗತ್ಯ ಇರುವುದಿಲ್ಲ. ಹೆಚ್ಚು ಮಾಹಿತಿಗಳನ್ನು ಪ್ರಕಟಿಸಿದರೆ ಹ್ಯಾಕರ್‌ಗಳಿಗೆ ಸುಲಭವಾಗಿ ನಿಮ್ಮ ಖಾತೆಗಳಿಗೆ ಕನ್ನ ಹಾಕಲು ಸಾಧ್ಯವಾಗುತ್ತದೆ.

3. ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ ಹಾಗೂ ಟ್ಯಾಬ್‌ಗಳಲ್ಲಿ ಸುರಕ್ಷಿತವಾದ Anti virus ಅಳವಡಿಸಿಕೊಳ್ಳಿ. ಅದೇ ರೀತಿ ಆಪರೇಷನ್‌ ಸಿಸ್ಟಮ್‌ (OS) ಅಪ್‌ಡೇಟ್‌ ವರ್ಷನ್‌ ಇರುವಂತೆ ನೋಡಿಕೊಳ್ಳಿ.

4. ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವಾಗ ಜಾಗರೂಕರಾಗಿರಬೇಕು. ನಿಮಗೆ ಪರಿಚಯ ಇದ್ದರೆ ಮಾತ್ರ ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಿ.ಅಪರಿಚಿತ ವ್ಯಕ್ತಿಯನ್ನು Friend ಮಾಡಿಕೊಂಡು ಅನಾಹುತಕ್ಕೆ ದಾರಿ ಮಾಡಿಕೊಡಬಾರದು. ಅಪರಿಚಿತರಲ್ಲಿ ಹಲವರು ಸೈಬರ್‌ ಕಳ್ಳರೂ ಇರಬಹುದು. ಸುಂದರ ಹುಡುಗಿಯರ ಚಿತ್ರವನ್ನು ಹಾಕಿಕೊಂಡು ಯಾಮಾರಿಸುವ ಪ್ರಕರಣಗಳು ಆಧುನಿಕ ಜಗತ್ತಿನಲ್ಲಿ ನಡೆಯುತ್ತಲೇ ಇವೆ.

5. ನಿಮ್ಮ ಸೋಶಿಯಲ್‌ ಮೀಡಿಯಾ ನೆಟ್‌ವರ್ಕ್‌ನಲ್ಲಿ ಯಾರಾದರೂ ಕಿರಿಕಿರಿ ಉಂಟು ಮಾಡುತ್ತಿದ್ದರೆ ಅವರನ್ನು ಮುಲಾಜಿಲ್ಲದೆ Unfriend ಮಾಡಿ. ಅವರ ವಿರುದ್ಧ ರಿಪೋರ್ಟ್‌ ಮಾಡಿ.

6. ಸುಲಭವಾಗಿ ಬೇರೆಯವರು ಗ್ರಹಿಸಲಾಗದಂಥ password ಬಳಸಿ. ಅಂಕಿಗಳು ಹಾಗೂ ಸಂಖ್ಯೆಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಬೇರೆಬೇರೆ ಅಕೌಂಟ್‌ಗಳಿಗೆ ಬೇರೆಬೇರೆ ಪಾಸ್‌ವರ್ಡ್‌ ಇರಬೇಕು.

ಇದನ್ನೂ ಓದಿ | Cyber Attack | ಮಿಸ್ಡ್ ಕಾಲ್ ಕೊಟ್ಟು 50 ಲಕ್ಷ ರೂ. ಎಗರಿಸಿದ ಸೈಬರ್ ಖದೀಮರು!

Exit mobile version