ನವದೆಹಲಿ: 125 ವರ್ಷಗಳಿಂದ ಚಾಲ್ತಿಯಲ್ಲಿದ್ದ 1898ರ ಭಾರತೀಯ ಅಂಚೆ ಕಚೇರಿ ಕಾಯ್ದೆಯ (post office act 1898) ಬದಲಿಗೆ ಮಂಡಿಸಲಾದ 2023ರ ಅಂಚೆ ಕಚೇರಿ ವಿಧೇಯಕಕ್ಕೆ (post office bill 2023) ಮಂಗಳವಾರ ಲೋಕಸಭೆಯು (Lok Sabha) ತನ್ನ ಒಪ್ಪಿಗೆಯನ್ನು ನೀಡಿದೆ. ಡಿಸೆಂಬರ್ 4ರಂದು ರಾಜ್ಯಸಭೆ (Rajya Sabha) ಈ ವಿಧೇಯಕ್ಕೆ ಒಪ್ಪಿಗೆ ನೀಡಿದ್ದು, ಡಿಸೆಂಬರ್ 13ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಪ್ರತಿಪಕ್ಷಗಳ ತೀವ್ರ ವಿರೋಧದ ಮಧ್ಯೆಯೇ ಈ ವಿಧೇಯಕಕ್ಕೆ ಒಪ್ಪಿಗೆಯನ್ನು ಪಡೆಯಲಾಗಿದೆ. ರಾಜ್ಯಸಭೆಯಲ್ಲಿ ಈ ವಿಧೇಯಕವನ್ನು ಆಗಸ್ಟ್ 10ರಂದು ಮಂಡಿಸಲಾಗಿತ್ತು. ಯಾವುದೇ ಅಂಚೆಯನ್ನು ಕೇಂದ್ರ ಸರ್ಕಾರವು (Central Government) ತೆರೆದು ನೋಡುವ ಅಧಿಕಾರವನ್ನು ಈ ಹೊಸ ಕಾಯ್ದೆಯು ನೀಡುತ್ತದೆ. ಹಾಗಾಗಿ, ಪ್ರತಿಪಕ್ಷಗಳು (Opposition Parties) ಈ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು(vistara explainer).
ಲೋಕಸಭೆಯು ಒಪ್ಪಿಗೆ ನೀಡಿರುವ 2023ರ ಅಂಚೆ ಕಚೇರಿ ವಿಧೇಯಕವು ಹಳೆಯ ಕಾಯಿದೆಯ ಸೆಕ್ಷನ್ 4 ಅನ್ನು ತೆಗೆದುಹಾಕಿದೆ, ಇದು ಕೇಂದ್ರಕ್ಕೆ ಅಂಚೆ ಮೂಲಕ ತಿಳಿಸುವ ವಿಶೇಷ ಸವಲತ್ತನ್ನು ಅನುಮತಿಸಿದೆ. 1980ರಲ್ಲಿ ಖಾಸಗಿ ಕೊರಿಯರ್ ಸೇವೆಗಳು ಆರಂಭವಾದ ಹಿನ್ನೆಲೆಯಲ್ಲಿ ಈ ವಿಶೇಷ ಅಧಿಕಾರವು ತನ್ನ ಮಹತ್ವವನ್ನು ಕಳೆದುಕೊಂಡಿತ್ತು. ಹಾಗಾಗಿ, ಹೊಸ ವಿಧೇಯಕದಲ್ಲಿ ಅದನ್ನು ತಿದ್ದುಪಡಿ ಮಾಡಲಾಗಿದೆ.
ವಿಧೇಯಕಕ್ಕೆ ವಿರೋಧ ಏಕೆ?
ಕೇಂದ್ರ ಸರ್ಕಾರ ತಂದಿರುವ 2023ರ ಅಂಚೆ ಕಚೇರಿ ವಿಧೇಯಕಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ವಿಧಯಕವನ್ನು ಗಂಭೀರ ಕಳವಳಕಾರಿ ಎಂದು ಕರೆದಿರುವ ಕಾಂಗ್ರೆಸ್ “ಅರ್ಧಂಬರ್ಧ ಸುಧಾರಣೆ” ಮತ್ತು ಭಾರತೀಯರ ಮೂಲಭೂತ ಹಕ್ಕುಗಳಿಗೆ ಹೆಚ್ಚು ಹಾನಿಯುಂಟು ಮಾಡುವ ಸ್ವರೂಪವನ್ನು ಹೊಂದಿದೆ ಎಂದು ಹೇಳಿದೆ.
ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ಯಾವುದೇ ಅಧಿಕಾರಿಗೆ ರಾಜ್ಯದ ಭದ್ರತೆ, ಅನ್ಯ ರಾಜ್ಯಗಳೊಂದಿಗೆ ಸೌಹಾರ್ದ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆ, ತುರ್ತುಸ್ಥಿತಿ ಅಥವಾ ಸಾರ್ವಜನಿಕ ಸುರಕ್ಷತೆಯ ಕಾರಣ ನೀಡಿ, ಯಾವುದೇ ವಸ್ತುವನ್ನು ತೆರೆಯುವ, ತಡೆ ಹಿಡಿಯುವ ಅಧಿಕಾರವನ್ನು ನೀಡುತ್ತದೆ. ವಿಧೇಯಕ ಸೆಕ್ಷನ್ 9ರಲ್ಲಿ ಈ ಅಂಶವಿದ್ದು, ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಹಾಗೆಯೇ ಸೆಕ್ಷನ್ 10ರ ಪ್ರಕಾರ, ಇದು ಪೋಸ್ಟ್ ಆಫೀಸ್ ಮತ್ತು ಅದರ ಅಧಿಕಾರಿಗಳನ್ನು ಹೊಣೆಗಾರಿಕೆಯಿಂದ ವಿನಾಯಿತಿ ನೀಡುತ್ತದೆ, ಅಧಿಕಾರಿಯು “ಮೋಸದಿಂದ ಅಥವಾ ಉದ್ದೇಶಪೂರ್ವಕವಾಗಿ ಸೇವೆಯ ನಷ್ಟ, ವಿಳಂಬ ಅಥವಾ ತಪ್ಪು ವಿತರಣೆಯನ್ನು ಉಂಟುಮಾಡದಿದ್ದರೆ, ಅಂಥ ಯಾವುದೇ ನಷ್ಟ, ವಿಳಂಬ ಮತ್ತು ತಪ್ಪು ವಿತರಣೆಗೆ ಪೋಸ್ಟ್ ಆಫೀಸ್ ಅಥವಾ ಅಧಿಕಾರಿಯು ಹೊಣೆಗಾರರಾಗಿರುವುದಿಲ್ಲ. ಅಂದರೆ. ಅಂಚೆ ಸೇವೆಯಲ್ಲಿನ ಯಾವುದೇ ಲೋಪಗಳಿಗೆ ಸರ್ಕಾರವು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಈ ಸೆಕ್ಷನ್‌ಗೂ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.
ತರೂರ್ ಅವರ ಪ್ರಕಾರ, ಭಾರತೀಯ ಸಂವಿಧಾನದ 19 (1) (ಎ) ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುವ ಅಧಿಕಾರವನ್ನು ಸರ್ಕಾರವು ಸ್ವತಃ ನೀಡಿದೆ ಮತ್ತು ಖಾಸಗಿತನದ ಹಕ್ಕನ್ನು ಕೂಡ ಈ ವಿಧೇಯಕವು ಉಲ್ಲಂಘಿಸುತ್ತಿದೆ. ಕೆ.ಎಸ್. ಪುಟ್ಟುಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಖಾಸಗಿತನದ ಹಕ್ಕು, ಆರ್ಟಿಕಲ್ 21 ರಲ್ಲಿ ಪ್ರತಿಪಾದಿಸಿರುವ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕುಗಳ ಭಾಗವೇ ಆಗಿದೆ ಎಂದು ಹೇಳಿತ್ತು.
ಸರ್ಕಾರದ ವಾದವೇನು?
170 ವರ್ಷಗಳಷ್ಟು ಹಳೆಯ ಅಂಚೆ ಇಲಾಖೆಯು ಸಾಮಾನ್ಯ ಇಲಾಖೆಯಲ್ಲ. ಇದು ನಮ್ಮ ಇತಿಹಾಸದೊಂದಿಗೆ ಬೆಸೆದಿದೆ. ಇದು ನಮ್ಮ ವೈಭವಪೇತ ಸಂಸ್ಕೃತಿಯೊಂದಿಗೆ ಮಿಳಿತವಾಗಿದೆ. ಪೋಸ್ಟ್‌ಮ್ಯಾನ್ ಪೋಸ್ಟ್ ಮಾತ್ರ ತರುವುದು ಈ ಹಿಂದಿನ ಕೆಲಸವಾಗಿತ್ತು. ಆಗ ಪೋಸ್ಟ್‌ಮ್ಯಾನ್ ಪ್ರತಿ ಕುಟುಂಬದ ಸದಸ್ಯನಾಗಿದ್ದ. ಅದೇ ರೀತಿ ಇಂದು 1.64 ಲಕ್ಷ ಅಂಚೆ ಕಚೇರಿಗಳ ಮೂಲಕ ನಮ್ಮ ಸರ್ಕಾರವು ಪ್ರತಿ ಗ್ರಾಮ, ಪ್ರತಿ ಮನೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸಿದೆ. ನಮ್ಮ ಇಲಾಖೆಯು 90+ ನಾಗರಿಕ-ಕೇಂದ್ರಿತ ಸೇವೆಗಳನ್ನು ಜನರಿಗೆ ಒದಗಿಸುತ್ತಿದೆ ಎಂದು ಸಂವಹನ ರಾಜ್ಯ ಸಚಿವ ದೇವುಸಿನ್ಹ್ ಚೌಹಾಣ್ ಚರ್ಚೆಯಲ್ಲಿ ಹೇಳಿದರು.
ಅಂಚೆ ಅಧಿಕಾರಿಗಳು ತಮ್ಮ ಕರ್ತವ್ಯಗಳಲ್ಲಿ ತೊಡಗಿರುವಾಗ ಅಕ್ರಮವಾಗಿ ಸಾಮಾಗ್ರಿಗಳನ್ನು ತಡೆಹಿಡಿಯುವುದು ಅಥವಾ ದುಷ್ಕೃತ್ಯ, ವಂಚನೆ ಅಥವಾ ಕಳ್ಳತನವನ್ನು ನಡೆಸಿದರೆ ಅಂಥವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡವನ್ನು ಸಹ ನಿರ್ದಿಷ್ಟಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ: Money Guide: ಪಿಪಿಎಫ್, ಅಂಚೆ ಕಚೇರಿ; ಮಧ್ಯಮ ವರ್ಗದವರ ಹೂಡಿಕೆಗೆ ಇವು ಬೆಸ್ಟ್ ಪ್ಲಾನ್‌ಗಳು!