Site icon Vistara News

ವಿಸ್ತಾರ Explainer | ಮೋದಿ ‘ಮತ ಸೆಳೆಯುವ ಮಾಂತ್ರಿಕ’, ಎಲೆಕ್ಷನ್ ಗೆಲ್ಲುವ ಕಲೆಗಾರ!

PM Narendra Modi and Master of aret election winning

ರೇಂದ್ರ ಮೋದಿ- ಮತಗಳನ್ನು ಸೆಳೆಯುವ ಮಾಂತ್ರಿಕ! ಗುಜರಾತ್ ಎಲೆಕ್ಷನ್ ಚುನಾವಣೆ ಫಲಿತಾಂಶವು ಈ ಸಂಗತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಾಮಾನ್ಯವಾಗಿ ಒಂದು ಅವಧಿಗೆ ಆಡಳಿತ ನಡೆಸುವ ಯಾವುದೇ ನಾಯಕನಿಗೆ, ಮತ್ತೊಂದು ಚುನಾವಣೆ ಹೊತ್ತಿಗೆ ಆಡಳಿತ ವಿರೋಧಿ ಅಲೆ ಕಾಡುತ್ತದೆ. ಆದರೆ, ಪ್ರಧಾನಿಯಾಗಿ ಕಳೆದ ಎಂಟು ವರ್ಷಗಳಿಂದ ಮೋದಿ ಅವರು ಎದುರಿಸಿದ 2 ಲೋಕಸಭೆ ಮತ್ತು ಹಲವು ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಿದ್ದಾರೆ. ಗುಜರಾತ್ ಎಲೆಕ್ಷನ್ ರಿಸಲ್ಟ್ ಮೋದಿ ಮತ ಗಳಿಕೆಯ ಮ್ಯಾಜಿಕ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.(ವಿಸ್ತಾರ Explainer)

ಆಡಳಿತದಲ್ಲಿರುವ ನಾಯಕರು ಮತ್ತೊಂದು ಚುನಾವಣೆ ಎದುರಿಸುವ ಹೊತ್ತಿಗೆ ದುರ್ಬಲರಾಗಿ ಬಿಡುತ್ತಾರೆ. ಇದೇ ಕಾರಣಕ್ಕೆ ಭಾರತದಲ್ಲಿ ಪ್ರತಿ ಮೂರು ಸರ್ಕಾರಗಳ ಪೈಕಿ ಎರಡು ಸರ್ಕಾರಗಳು ಅಧಿಕಾರವನ್ನು ಕಳೆದುಕೊಳ್ಳುತ್ತವೆ. ಆದರೆ, ಈ ಟ್ರೆಂಡ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಅಪವಾದ’ವಾಗಿದ್ದಾರೆ. ಮೋದಿ ಅವರ ವರ್ಚಸ್ಸು ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಲೇ ಹೊರಟಿದೆ ಹೊರತು ಕುಂದುತ್ತಿಲ್ಲ!

ನೋಡಿ, ಗುಜರಾತ್‌ನಲ್ಲಿ ಬಿಜೆಪಿ ಸತತ ಏಳನೇ ಬಾರಿಗೆ ಸರ್ಕಾರವನ್ನು ರಚಿಸುತ್ತಿದೆ. ಈ ಶ್ರೇಯದಲ್ಲಿನ ಬಹುಪಾಲು ಕೊಡುಗೆ ನರೇಂದ್ರ ಮೋದಿ ಅವರಿಗೇ ಸಲ್ಲಿಸಬೇಕು. ಯಾವುದೇ ಒಂದು ಪಕ್ಷವು ಒಂದು ಅವಧಿಗೆ ಸರ್ಕಾರ ರಚಿಸಿದರೆ, ಮತ್ತೊಂದು ಚುನಾವಣೆ ಹೊತ್ತಿಗೆ, ಆಡಳಿತ ವಿರೋಧಿ ಅಲೆಯನ್ನು ಬೆನ್ನಿಗೆ ಅಂಟಿಸಿಕೊಂಡಿರುತ್ತದೆ. ಆದರೆ, ಮೋದಿ ಅವರಿಗೆ ಅಲೆ ವಿರೋಧಿಯಾಗಲೇ ಇಲ್ಲ; ಅದೇನಿದ್ದರೂ ಆಡಳಿತ ಪರ ಅಲೆಯಾಗುತ್ತಿದೆ! ಅಸಲಿಗೆ, ಮೋದಿ ಅವರು ಗುಜರಾತ್‌ನಲ್ಲಿ ಕೈಗೊಂಡ ಚುನಾವಣಾ ಪ್ರಚಾರಗಳ ಸಭೆಯಲ್ಲಿ ಇದೇ ಮಾತನ್ನು ಹೇಳಿದ್ದಾರೆ ಕೂಡ. ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಎಂಬುದೇ ಇಲ್ಲ, ಇಲ್ಲೇನಿದ್ದರೂ ಆಡಳಿತ ಪರ ಅಲೆ ಎಂದು. ಆ ಸಂಗತಿಯನ್ನು ಗುಜರಾತ್ ಎಲೆಕ್ಷನ್ ರಿಸಲ್ಟ್ ಸಾಬೀತುಪಡಿಸಿದೆ.

ಎಲ್ಲವೂ ಮೋದಿಮಯ
ಚುನಾವಣೆ ಸಂದರ್ಭದಲ್ಲಾಗುವ ಸಣ್ಣ ಕದಲಿಕೆಗಳ ಗ್ರಹಿಕೆಯನ್ನು ನರೇಂದ್ರ ಮೋದಿ ಅವರು ಬಹಳ ಬೇಗ ಅರಿತುಕೊಳ್ಳುತ್ತಾರೆ. ಹಾಗೆಯೇ, ಅದರಿಂದಾಗುವ ಎಫೆಕ್ಟ್ ಏನಾಗಬಹುದು ಊಹಿಸಿಕೊಂಡು, ಮದ್ದು ಹುಡುಕುತ್ತಾರೆ. ಗುಜರಾತ್‌ನಲ್ಲಿ ಕೂಡ ಹೀಗೆ ಆಗಿದ್ದು, ಎರಡನೇ ಹಂತದ ಚುನಾವಣೆಯಲ್ಲಿ ಅವರು ಗರಿಷ್ಠ ರ್ಯಾಲಿಗಳನ್ನು ಮಾಡಿ, ಜನರನ್ನು ಬಿಜೆಪಿಯ ಮೇಲೆ ಕೇಂದ್ರೀಕರಿಸುವಂತೆ ಮಾಡಿದರು. ಒಟ್ಟು ಸುಮಾರು 30 ರ್ಯಾಲಿಗಳಲ್ಲಿ ಅವರು ಮತಯಾಚನೆ ಮಾಡಿದ್ದಾರೆ. ಅತಿ ಉದ್ದದ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ್ದಾರೆ. ಪ್ರತಿ ಪ್ರಚಾರ ಸಭೆಯಲ್ಲೂ, ರ್ಯಾಲಿಯಲ್ಲೂ ಅವರು ಗುಜರಾತಿ ಅಸ್ಮಿತೆಯ ಬಗ್ಗೆ ಮಾತನಾಡಿದ್ದಾರೆ. ಆ ಮೂಲಕ ತಮ್ಮ ಮತ್ತು ಬಿಜೆಪಿ ಮೇಲೆ ವಿಶ್ವಾಸ ವೃದ್ಧಿಯಾಗುವಂತೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು ಮತ್ತು ಅದರ ರಿಸಲ್ಟ್ ಈಗ ನಮ್ಮ ಕಣ್ಣ ಮುಂದಿದೆ.

ಪ್ರಧಾನಿಯಾಗಿಯೂ ಅಗತ್ಯಕ್ಕಿಂತ ತುಸು ಹೆಚ್ಚೇ ಮೋದಿ ಅವರು ಚುನಾವಣಾ ಪ್ರಚಾರದಲ್ಲಿರುತ್ತಾರೆ ಎಂಬುದು ನಿಜ. ಆದರೆ, ಅವರ ಕಟ್ಟುನಿಟ್ಟಿನ ಹಿಂದೂ ರಾಷ್ಟ್ರೀಯತೆಯ ಸಿದ್ಧಾಂತವು ಆರ್ಥಿಕ ಅಭಿವೃದ್ಧಿಯ ಭರವಸೆಗಳೊಂದಿಗೆ ಸೇರಿಕೊಂಡು ಮತದಾರರಲ್ಲಿ ದೊಡ್ಡ ಆಕರ್ಷಣೆಯಾಗಿ ಉಳಿದು, ಬೆಳೆಯುತ್ತಿದೆ. 2002ರಲ್ಲಿ ಸಂಭವಿಸಿದ ಹತ್ಯಾಕಾಂಡಗಳು ಗುಜರಾತ್ ಮಾತ್ರವಲ್ಲದೇ ಇಡೀ ದೇಶವನ್ನು ಸಂಚಲನಗೊಳಿಸಿದವು. ಇದಾವುದೂ ಅವರ ಜನಪ್ರಿಯತೆಗೆ ಕುಂದುಂಟು ಮಾಡಲಿಲ್ಲ ಎಂಬುದು ಗುಜರಾತಿನಲ್ಲಿ ಆ ಬಳಿಕ ನಡೆದ ಎಲ್ಲ ಚುನಾವಣೆಗಳು ನಿರೂಪಿಸುತ್ತಾ ಬಂದಿವೆ. ಗುಜರಾತ್ ಮಾಡೆಲ್‌ ಬಗ್ಗೆ ಈಗ ಕೊಂಚ ಟೀಕೆ ಎದ್ದಿರಬಹುದು. ಆದರೆ, ಅವರು ಅಧಿಕಾರದಲ್ಲಿದ್ದಾಗ ಹೂಡಿಕೆ ಮತ್ತು ತಲಾ ಆದಾಯದಲ್ಲಿ ಗುಜರಾತ್ ಭಾರತದ ಇತರ ರಾಜ್ಯಗಳನ್ನು ಮೀರಿಸಿತ್ತು. ಈಗಲೂ ಅದು ದೇಶದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದೆ. ಇದರಲ್ಲಿ ಮೋದಿ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ.

ಸಮಸ್ಯೆಗಳೇನೂ ಇಲ್ಲವೇ?
ಅಭಿವೃದ್ಧಿಯಲ್ಲಿ ಗುಜರಾತ್ ತನ್ನದೇ ಆದ ದಾರಿ ಕಂಡುಕೊಂಡಿದ್ದು ಸತ್ಯ. ಆ ರಾಜ್ಯ ಸಮಸ್ಯೆಗಳಿಂದ ಮುಕ್ತಿಯಾಗಿದೆ ಅಥವಾ ಸ್ವರ್ಗವೇ ಧರೆಗೆ ಇಳಿದಿದೆ ಎಂದೇನೂ ಹೇಳುವಂತಿಲ್ಲ. ಹೆಚ್ಚುತ್ತಿರುವ ನಿರುದ್ಯೋಗ, ಗಗನಮುಖಿಯಾಗಿರುವ ಬೆಲೆಗಳು, ಹೆರಿಗೆ ವೇಳೆ ಶಿಶು-ತಾಯಂದಿರ ಮರಣ ಪ್ರಮಾಣವು ಇತರ ರಾಜ್ಯಗಳಿಗಿಂತ ಗುಜರಾತದಲ್ಲಿ ಹೆಚ್ಚು. ವಿಶೇಷವಾಗಿ ಆರೋಗ್ಯ ವಲಯದಲ್ಲಿ ಗುಜರಾತ್ ಹಿಂದೆ ಇದೆ. ಇದರ ಪರಿಣಾಮವನ್ನು 2017ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಎದುರಿಸಿದ್ದರು. ಒಂದು ಹಂತದಲ್ಲಿ ಆ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದೇ ಹೇಳಲಾಗಿತ್ತು. ಸಮೀಕ್ಷೆಗಳು ಕೂಡ ಅದೇ ಧಾಟಿಯಲ್ಲಿದ್ದವು. ಆದರೆ, ಕಾಂಗ್ರೆಸ್ ಕಡೆಗೆ ಇದ್ದ ಗೆಲುವನ್ನು ತಮ್ಮ ಕಡೆಗೆ ಎಳೆದು ತಂದಿದ್ದು ಮೋದಿಯೇ. ಟಿಕೆಟ್ ನೀಡುವಾಗ ತೋರಿದ ಜಾಣ್ಮೆ 2017ರ ಚುನಾವಣಾ ಫಲಿತಾಂಶವನ್ನೇ ಬದಲಿಸಿತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಮೋದಿ ಮಾಡುವ ಮ್ಯಾಜಿಕ್
ಬಹುಶಃ ಭಾರತದಲ್ಲಿ ನೆಹರು ಮತ್ತು ಇಂದಿರಾ ಗಾಂಧಿ ಅವರ ಬಳಿಕ ಇಡೀ ಸಮುದಾಯವನ್ನು ಸಮ್ಮೋಹನಗೊಳಿಸುವ ತಾಕತ್ತಿರುವ ನಾಯಕ ಮೋದಿ ಅವರು ಮಾತ್ರ. ಚುನಾವಣೆ ನಡೆಯುವ ವೇಳೆ ನರೇಂದ್ರ ಮೋದಿ ಅವರು ತೋರುವ ಭಾವನಾತ್ಮಕ ಸಂದೇಶಗಳು ಮತದಾರರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಈ ಸಂಗತಿಯನ್ನು ಬಹಳಷ್ಟು ರಾಜಕೀಯ ಪಕ್ಷಗಳು ಅರಿಯಲು ಹೋಗಿಲ್ಲ. ಭಾರತೀಯ ಸಂದರ್ಭಕ್ಕೆ ಭಾವನಾತ್ಮಕ ಸಂಗತಿಗಳು ಚುನಾವಣಾ ವಿಷಯ ವಸ್ತುಗಳೇ! ಈ ಅಂಶವನ್ನು ಮೋದಿ ಅವರು ಅರಿತುಕೊಂಡಷ್ಟೇ ಸಮಕಾಲಿನ ರಾಜಕಾರಣದಲ್ಲಿ ಬೇರೆ ಯಾರೂ ಅರ್ಥ ಮಾಡಿಕೊಂಡಿಲ್ಲ. ಹಾಗಾಗಿ, ಚುನಾವಣೆ ವೇಳೆ ಅವರು ನಡೆದುಕೊಳ್ಳುವ ರೀತಿ, ಮಾತನಾಡುವ ವಿಷಯ ವಸ್ತುಗಳು, ಹೋಗುವ ಸ್ಥಳಗಳು ಎಲ್ಲವೂ ಸೂಚ್ಯವಾಗಿ ಮತದಾರನ್ನು ನೇರವಾಗಿ ತಲುಪುತ್ತವೆ. ಇದಕ್ಕೊಂದು ಉದಾಹರಣೆ, 2019ರ ಲೋಕಸಭೆಯ ಚುನಾವಣೆ ಮುಗಿಯುವ ವೇಳೆಗೆ ಮೋದಿ ಅವರು ಕೇದಾರನಾಥಕ್ಕೆ ಹೋಗಿ, ಗುಹೆಯೊಂದರಲ್ಲಿ ಧ್ಯಾನ ಮಾಡಿದ ಘಟನೆ ಮೇಲ್ನೋಟಕ್ಕೆ ಭಕ್ತಿಯ ನಡೆ ಎನಿಸಬಹುದು. ಆದರೆ, ಆಸ್ಥಿಕರಲ್ಲಿ ರೋಮಾಂಚನ ಸೃಷ್ಟಿಸಿರುತ್ತದೆ. ಈ ರೀತಿಯ ‘ಸಂಕೇತ’ಗಳನ್ನು ಮೋದಿ ಅವರು ಬಹಳ ನಯ-ನಾಜೂಕಿನಿಂದಲೇ ಮತದಾರರಿಗೆ ತಲುಪಿಸುತ್ತಾರೆ.

ಪ್ರಬಲ ಎದುರಾಳಿ ಕೊರತೆ
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುಂಚೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಬಹುತೇಕ ನಾಯಕರಿಗೆ ಪ್ರಬಲ ಪ್ರತಿಪಕ್ಷವಿತ್ತು. 2014ರಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಬಳಿಕ ಈವರೆಗೂ ಚೇತರಿಸಿಕೊಂಡಿಲ್ಲ. ಕೇವಲ ಲೋಕಸಭೆ ಚುನಾವಣೆ ಮಾತ್ರವಲ್ಲದೇ, ಹಲವು ರಾಜ್ಯಗಳಲ್ಲಿ ಅದರ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ. ಕಾಂಗ್ರೆಸ್ ನೇರವಾಗಿ ಅಧಿಕಾರದಲ್ಲಿರುವುದು ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯದಲ್ಲಿ ಮಾತ್ರ. (ಹಿಮಾಚಲ ಪ್ರದೇಶದಲ್ಲಿ ಸರ್ಕಾರ ಇನ್ನೂ ರಚನೆಯಾಗಬೇಕಿದೆ!). ವಿಷಯ ಏನೆಂದರೆ, ಮೋದಿ ಆಡಳಿತಕ್ಕೆ ಸವಾಲು ಒಡ್ಡಬಹುದಾದ, ಅವರ ನೀತಿ ನಿಯಮಗಳನ್ನು ನಿಕಷಕ್ಕೆ ಒಳಡಿಸಬಹುದಾದ ಪ್ರತಿ ನಾಯಕತ್ವದ ಕೊರತೆ, ಮೋದಿ ಅವರ ಯಶಸ್ಸಿನ ಒರತೆಯಾಗಿ ಪರಿಣಮಿಸಿದೆ. ಕಾಂಗ್ರೆಸ್‌ನ ರಾಹುಲ್ ಗಾಂಧಿ ತಮ್ಮನ್ನು ತಾವು ನಾಯಕನೆಂದು ನಿರೂಪಿಸಲು ಒದ್ದಾಡುತ್ತಿದ್ದಾರೆ. ಪ್ರಾದೇಶಿಕವಾಗಿ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಅವರಂಥವರು ಪಾನ್ ಇಂಡಿಯಾ ಇಮೇಜ್ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಪರ್ಯಾಯ ಹುಡುಕಾಟದಲ್ಲಿರುವವರಿಗೆ ಈಗಲೂ ನಿರಾಸೆ ಮತ್ತು ಅದೇ ಕಾರಣಕ್ಕೆ ಮೋದಿ ಯಶಸ್ಸಿನ ಓಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳಿಲ್ಲ.

ಮೋದಿ ಗೆಲುವಿನ ರಹಸ್ಯವೇನು?

ಇದನ್ನೂ ಓದಿ | Narendra Modi | ನರೇಂದ್ರ ಮೋದಿ ಅಪ್ರತಿಮ ದೇಶಭಕ್ತ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಬಣ್ಣನೆ

Exit mobile version