ʼʼಸ್ಥಳೀಯರಲ್ಲದವರೂ ಜಮ್ಮು- ಕಾಶ್ಮೀರದಲ್ಲಿ ಈಗ ಮತ ಹಾಕಬಹುದುʼʼ ಎಂದು ಜಮ್ಮು- ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿ ಹೃದೇಶ್ ಕುಮಾರ್ ನೀಡಿದ ಹೇಳಿಕೆ ಈಗ ಕಣಿವೆಯಾದ್ಯಂತ ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳು ರೊಚ್ಚಿಗೇಳುವಂತೆ ಮಾಡಿದೆ.
ಹೃದೇಶ್ ಕುಮಾರ್ ಹೇಳಿದ್ದೇನು? ʼʼಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುತ್ತಿರುವ ಹಾಗೂ ಉದ್ಯೋಗ ಮಾಡುತ್ತಿರುವ ಯಾವುದೇ ಭಾರತೀಯ ಪ್ರಜೆ, ಸ್ಥಳೀಯರಲ್ಲದವರು ಸಹ, ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಬಹುದು ಹಾಗೂ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಮಾಡಬಹುದು. ಜಮ್ಮು- ಕಾಶ್ಮೀರದ ಶಾಂತಿ ನೆಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಶಸ್ತ್ರ ಪಡೆಗಳ ಯೋಧರು ಸಹ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.ʼʼ
ಸಹಜವಾಗಿಯೇ ಈ ಹೇಳಿಕೆ ಎಲ್ಲರ ಕುತೂಹಲ ಕೆರಳಿಸಿದೆ. ಬಿಜೆಪಿ ಹೊರತುಪಡಿಸಿ ಇತರ ರಾಜಕೀಯ ಪಕ್ಷಗಳು ಕೆರಳಿವೆ. ಇದು ಸ್ಥಳೀಯ ಮತದಾರರ ಹಾಗೂ ರಾಜಕೀಯ ಪಕ್ಷಗಳ ನೆಲೆಗಳನ್ನು ಧ್ವಂಸ ಮಾಡುವ ಬಿಜೆಪಿಯ ಸಂಚು ಎಂದು ಆರೋಪಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಸಂಬಂಧವೇ ಇಲ್ಲದ ಸುಮಾರು 20-25 ಲಕ್ಷ ಮಂದಿಯನ್ನು ಇಲ್ಲಿನ ಮತದಾರರ ಯಾದಿಯಲ್ಲಿ ಸೇರಿಸುವ ಸಂಚು ನಡೆಯುತ್ತಿದೆ ಎಂದೂ ಆರೋಪಿಸಿದ್ದಾರೆ.
ಯಾರು ಸೇರಬಹುದು?
ಹಾಗಿದ್ದರೆ ಈಗ ಕರ್ನಾಟಕದವರೂ ಹೋಗಿ ಜಮ್ಮು- ಕಾಶ್ಮೀರದ ಚುನಾವಣೆಯಲ್ಲಿ ಮತ ಹಾಕಿ ಬರಬಹುದಾ? ಈ ಹೇಳಿಕೆಯನ್ನು ನೋಡಿದರೆ ಹಾಗೇ ಅರ್ಥವಾಗುತ್ತದೆ. ಆದರೆ ಅದು ಹಾಗಲ್ಲ. ವಾಸ್ತವ ಏನೆಂದರೆ, ಯಾವುದೇ ರಾಜ್ಯದ ಮೂಲದವರಾದರೂ ಎಲ್ಲಿ ಬೇಕಿದ್ದರೂ ಮತ ಹಾಕಬಹುದು. ಆದರೆ ಮೊದಲು ತನ್ನ ಹೆಸರು ಎಲ್ಲಿನ ಮತದಾರರ ಪಟ್ಟಿಯಲ್ಲಿ ಇತ್ತೋ ಅಲ್ಲಿಂದ ಅದನ್ನು ತೆಗೆಸಿ, ತಾನು ಮತ ಹಾಕಬೇಕೆಂದಿರುವ ಕ್ಷೇತ್ರದ ಪಟ್ಟಿಯಲ್ಲಿ ಅದನ್ನು ಸೇರಿಸಿರಬೇಕು. ತಾನು ಇಲ್ಲಿ ನೆಲೆಸಿದ್ದೇನೆ ಎಂಬುದಕ್ಕೆ ಸೂಕ್ತ ದಾಖಲೆಗಳನ್ನೂ ಒದಗಿಸಬೇಕು. ಚುನಾವಣಾ ಆಯೋಗದ ಅಧಿಕಾರಿಗಳು ನಿಮ್ಮ ಹೆಸರನ್ನು ಯಾದಿಯಲ್ಲಿ ಸೇರಿಸುವ ಮುನ್ನ ನಿಮ್ಮ ದಾಖಲೆಗಳನ್ನು ಪರೀಕ್ಷಿಸುತ್ತಾರೆ. ನೀವು ಕಾಶ್ಮೀರದಲ್ಲಿ ವಾಸಿಸುತ್ತಿದ್ದೀರಿ (ordinarily residing) ಎಂಬುದಕ್ಕೆ ದಾಖಲೆಗಳನ್ನು ತೋರಿಸಬೇಕು. ಇದನ್ನು ಅಧಿಕಾರಿಗಳು ಪರಿಶೀಲಿಸಿ ತೃಪ್ತರಾದರೆ ಮಾತ್ರ ನಿಮ್ಮ ಹೆಸರು ಮತದಾರರ ಯಾದಿಯಲ್ಲಿ ಸೇರುತ್ತದೆ.
ಹಾಗಿದ್ದರೆ 20-25 ಲಕ್ಷ ಹೊಸಬರನ್ನು ಸೇರಿಸಲಾಗುತ್ತಿದೆಯಾ?
ಇದೂ ನಿಜವಲ್ಲ. ಮತದಾರರ ಯಾದಿ ಸಿದ್ಧಪಡಿಸುವುದು ಒಂದು ನಿರಂತರ ಪ್ರಕ್ರಿಯೆ. ಆದರೆ ಚುನಾವಣೆಯ ಹಿಂದಿನ ವರ್ಷಗಳಲ್ಲಿ ವೇಗ ಪಡೆದುಕೊಳ್ಳುತ್ತದೆ. ಕಾಶ್ಮೀರದ ಮತದಾರರ ಯಾದಿಯಲ್ಲಿ ತಮ್ಮ ಹೆಸರು ಸೇರಿಸಲು ಈಗ ನಾಲ್ಕು ದಿನ ನಿಗದಿಪಡಿಸಲಾಗಿದೆ- ಜ.1, ಏ.1, ಜು.1 ಹಾಗೂ ಅ.1. ಈ ಹಿಂದೆ ಮೂರು ವರ್ಷಳ ಹಿಂದೆ, ಅಂದರೆ 2019ರಲ್ಲಿ ಈ ಪ್ರಕ್ರಿಯೆ ನಡೆದಿತ್ತು. 2019- 2022ರ ನಡುವಿನ ಅವಧಿಯಲ್ಲಿ ಸುಮಾರು 20-25 ಲಕ್ಷ ಯುವಕರು ಮತ ಹಾಕುವ ವಯಸ್ಸಿಗೆ ಬಂದಿದ್ದಾರೆ. 2022ರ ಅಕ್ಟೋಬರ್ 1ರಂದು 18 ವರ್ಷ ತುಂಬುವವರು ತಮ್ಮ ಹೆಸರನ್ನು ನೋಂದಾಯಿಸಬಹುದು. ಕೆಲವೇ ಕೆಲವು ಮಂದಿ ಮಾತ್ರ ಹೊರಗಿನಿಂದ ಉದ್ಯೋಗ ಮತ್ತಿತರ ಕಾರಣಗಳಿಗೆ ಬಂದು ನೆಲೆಸಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer | FIFA ban: ಪ್ರಫುಲ್ ಪಟೇಲ್ ಕಳ್ಳಾಟಕ್ಕೆ ಫಿಫಾದ ಕಾಲ್ಚೆಂಡಾದ ಭಾರತೀಯ ಫುಟ್ಬಾಲ್
ಬಿಜೆಪಿ ಹೊರಗಿನಿಂದ ಮತದಾರರನ್ನು ಕರೆಸುತ್ತಿದೆಯೇ?
ʼʼಬಿಜೆಪಿಗೆ ಕಾಶ್ಮೀರಿಗರ ಹೃದಯ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಹೊರಗಿನಿಂದ ಮತದಾರರನ್ನು ಕರೆತರುತ್ತಿದೆʼʼ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಹಾಗೆ ಮಾಡಲು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಹಾಗೆ ಮಾಡಬೇಕಿದ್ದರೆ ಆತನ ಹೆಸರು ಇದುವರೆಗೂ ಬೇರೆಡೆಯ ಮತದಾರರ ಪಟ್ಟಿಯಲ್ಲಿ ಇರಬಾರದು; ಅಥವಾ ಬೇರೆಡೆ ಇದ್ದರೆ ಅದನ್ನು ತೆಗೆಸಿದ ದಾಖಲೆ ಒದಗಿಸಬೇಕು. ಮತ್ತು ಕಾಶ್ಮೀರದಲ್ಲಿ ವಾಸಿಸುತ್ತಿರುವ ದಾಖಲೆಗಳನ್ನು ನೀಡಬೇಕು. ಆತ ವಿದ್ಯಾರ್ಥಿ, ಕಾರ್ಮಿಕ, ಉದ್ಯೋಗಿ ಹೀಗೆ ಯಾರೂ ಆಗಿರಬಹುದು. ಮನೆ ಬಾಡಿಗೆ ಅಥವಾ ಲೀಸ್‌ನ ಕರಾರುಪತ್ರ, ಎಲ್‌ಪಿಜಿ ಸಂಪರ್ಕದ ದಾಖಲೆ, ಕಾಲೇಜು ಅಡ್ಮಿಷನ್ ದಾಖಲೆ ಇತ್ಯಾದಿ ದಾಖಲೆಗಳನ್ನು ನೀಡಬಹುದು. ಆತ/ಆಕೆ ಹುಟ್ಟಿನಿಂದಲೇ ಅಲ್ಲಿನ ಪ್ರಜೆ, ಕಾಯಂ ನಿವಾಸಿ ಆಗಿರಬೇಕಿಲ್ಲ.
ಹಾಗಿದ್ದರೆ ಈ ಮೊದಲು ಇಂಥ ಸಾಧ್ಯತೆ ಇರಲಿಲ್ಲವೇ?
1947ರಿಂದ 2019ರವರೆಗೂ ಕಾಶ್ಮೀರದಲ್ಲಿ ಮತ ಹಾಕಬಹುದಾದ ಹಕ್ಕು ಎಲ್ಲ ಭಾರತೀಯ ಪ್ರಜೆಗಳಿಗೂ ಇರಲಿಲ್ಲ. ಇದು ದೊರೆತುದು 2019ರ ಆಗಸ್ಟ್ 5ರಂದು, ಜಮ್ಮು- ಕಾಶ್ಮೀರದಲ್ಲಿದ್ದ ಆರ್ಟಿಕಲ್ 370 ತೆಗೆದುಹಾಕಿ, ರಾಜ್ಯ ಪುನರ್‌ವಿಂಗಡಣೆ ಮಾಡಿದ ಬಳಿಕ. ಅಲ್ಲಿಯವರೆಗೂ ಕಾಶ್ಮೀರ ಹೊರತುಪಡಿಸಿ ಇತರ ಕಡೆಗಳ ಭಾರತೀಯರು ಕಾಶ್ಮೀರದಲ್ಲಿ ಶಾಶ್ವತ ಅಥವಾ ಕಾಯಂ ನಿವಾಸಿಯಾಗದೆ ಮತ ಹಾಕುವಂತಿರಲಿಲ್ಲ. ಈಗ ಕಾಯಂ ನಿವಾಸಿಯಲ್ಲದವರೂ, ವಾಸವಿರುವ ದಾಖಲೆಗಳನ್ನು ಹೊಂದಿದ್ದರೆ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದರೆ ಕಾಶ್ಮೀರದಲ್ಲಿ ಮತ ಹಾಕಬಹುದು. ಬೇರೆ ಕಡೆಯ ಭಾರತೀಯ ಪ್ರಜೆಗಳೂ ಕಾಶ್ಮೀರದಲ್ಲಿ ಜಾಗ ಖರೀದಿ, ಸ್ಥಿರಾಸ್ತಿ ಖರೀದಿ ಮಾಡಬಹುದು ಎಂಬ ಅನುಮತಿ ದೊರೆತ ಬಳಿಕ ಆದ ಬದಲಾವಣೆ ಇದು.
ದೇಶದ ಇತರ ಕಡೆಗಳಲ್ಲಿ ಇರುವ ಪ್ರಕ್ರಿಯೆಯೇ ಇದಾಗಿದೆ. ಆರ್ಟಿಕಲ್ 370 ಇರುವವರೆಗೂ ಕಾಶ್ಮೀರದಲ್ಲಿ ಇದು ಸಾಧ್ಯವಿರಲಿಲ್ಲ. ಈಗ ಸಾಧ್ಯವಾಗಿದೆ.
ಇದನ್ನೂ ಓದಿ: ವಿಸ್ತಾರ Explainer | ಬ್ಯಾಂಕ್‌ಗಳು ಎಫ್‌ಡಿ ದರಗಳನ್ನು ದಿಢೀರ್ ಏರಿಸುತ್ತಿರುವುದೇಕೆ?!
ಹೊಸ ಮತದಾರರ ಯಾದಿಯ ಕರಡು ಸೆ.15, 2022ರಂದು ಪ್ರಕಟವಾಗಲಿದೆ. ಪುನರ್‌ವಿಂಗಡಣೆಯ ಬಳಿಕ ಇಲ್ಲಿ ಹೊಸದಾಗಿ 600 ಪೋಲಿಂಗ್ ಬೂತ್‌ಗಳು ಬರುತ್ತಿದ್ದು, ಒಟ್ಟು ಬೂತ್‌ಗಳ ಸಂಖ್ಯೆ 11,370ಕ್ಕೆ ಏರಿದೆ.
ಪ್ರತಿಪಕ್ಷಗಳ ಆತಂಕವೇನು?
ʼʼಇದು ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆʼʼ ಎಂದಿದ್ದಾರೆ ಪೀಪಲ್ಡ್ ಡೆಮಾಕ್ರಟಿಕ್ ಪಾರ್ಟಿ ನಾಯಕಿ ಮೆಹಬೂಬಾ ಮುಫ್ತಿ. ʼʼಚುನಾವಣೆ ಗೆಲ್ಲಲು ಬಿಜೆಪಿ ಹೊರಗಿನಿಂದ ಮತದಾರರನ್ನು ಕರೆಸುತ್ತಿದೆʼʼ ಎಂದು ಆರೋಪಿಸಿದ್ದಾರೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ. ಈ ಬೆಳವಣಿಗೆಯನ್ನು ಚರ್ಚಿಸಲು ಎಲ್ಲ ಪ್ರತಿಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಬಹುಶಃ ಸಾರ್ವಜನಿಕ ಪ್ರತಿಭಟನೆಯನ್ನೂ ಆಯೋಜಿಸಬಹುದು.
ಪ್ರತಿಪಕ್ಷಗಳ ಆತಂಕದಲ್ಲಿ ಸ್ವಲ್ಪ ನಿಜಾಂಶವೂ ಇದೆ. ಕಳೆದ ಎರಡು ವರ್ಷಗಳಿಂದ ಕಾಶ್ಮೀರದಲ್ಲಿ ಸ್ಥಳೀಯ ನಿವಾಸಿಗಳಲ್ಲದವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಸೆಕ್ಷನ್ 370ರ ರದ್ದತಿ ಹಾಗೂ ಭಯೋತ್ಪಾದಕರನ್ನು ಮಟ್ಟ ಹಾಕಿರುವ ಬಿಗಿ ಭದ್ರತೆ. ಕಾಶ್ಮೀರ ಮತ್ತೆ ಪ್ರವಾಸಿಗರ ತಾಣವಾಗುತ್ತಿದೆ. ವ್ಯಾಪಾರ ವಹಿವಾಟು ಹೆಚ್ಚುತ್ತಿರುವಂತೆ ಉದ್ಯಮಿಗಳೂ ಆಗಮಿಸುತ್ತಿದ್ದಾರೆ. ಬಿಹಾರ- ಉತ್ತರಪ್ರದೇಶದ ಕಾರ್ಮಿಕರು ಇಲ್ಲಿನ ಸೇಬಿನ ತೋಟಗಳಲ್ಲಿ ದುಡಿಯುತ್ತಿದ್ದಾರೆ. ಇದೇ ಕಾರಣದಿಂದ ಇತ್ತೀಚೆಗೆ ಹೊರಗಿನವರನ್ನು ಗುರಿಯಾಗಿಸಿ ಭಯೋತ್ಪಾದಕರ ದಾಳಿಯೂ ಹೆಚ್ಚುತ್ತಿದೆ. ಇದಲ್ಲದೇ ಕೆಲವು ಕಾಶ್ಮೀರಿ ಪಂಡಿತರು ಕೂಡ ಕಣಿವೆಗೆ ಮರಳಿದ್ದಾರೆ. ಇದರಿಂದ ಮುಸ್ಲಿಮರಲ್ಲದ ಮತದಾರರ ಸಂಖ್ಯೆ ಹೆಚ್ಚುತ್ತಿದ್ದು, ಇವರು ಬಿಜೆಪಿಯ ವೋಟ್ ಬೇಸ್ ಆಗಬಹುದು ಎಂಬ ಆತಂಕ ಪ್ರತಿಪಕ್ಷಗಳಲ್ಲಿ ಮೂಡಿದೆ.
ಇದನ್ನೂ ಓದಿ: ವಿಸ್ತಾರ Explainer | ರಕ್ಕಮ್ಮ ಜಾಕ್ವೆಲಿನ್ ವಂಚಕ ಸುಕೇಶ್ ಕೈಯಲ್ಲಿ ರೊಕ್ಕಮ್ಮ ಆಗಿದ್ದು ಹೇಗೆ?