Site icon Vistara News

ವಿಸ್ತಾರ Explainer: Uniform Civil Code: ಏಕರೂಪ ನಾಗರಿಕ ಸಂಹಿತೆ ಚರ್ಚೆಯ ಕಿಡಿ ಹಾರಿಸಿದ್ದೇ ಆ ಕೇಸ್!‌

shah bano case

ಹೊಸದಿಲ್ಲಿ: ಇಂದು ದೇಶದಲ್ಲಿ ಮತ್ತೆ ಚರ್ಚೆಗೆ ಮುನ್ನೆಲೆಗೆ ಬಂದಿರುವ ಏಕರೂಪ ನಾಗರಿಕ ಸಂಹಿತೆಯ (Uniform Civil Code – ಯುಸಿಸಿ) ವಿಚಾರ, 1985ರಲ್ಲಿಯೂ ಒಮ್ಮೆ ಮುನ್ನೆಲೆಗೆ ಬಂದಿತ್ತು. ಆಗ ಅದಕ್ಕೆ ಕಾರಣವಾಗಿದ್ದದ್ದು ಒಂದು ತಲಾಕ್‌ ಪ್ರಕರಣ. ಅದೇ ಶಾಬಾನೊ (shah bano case) ಪ್ರಕರಣ.

ಶಾಬಾನೊ ಎಂಬ ಮಧ್ಯಪ್ರದೇಶದ ಮುಸ್ಲಿಂ ಮಹಿಳೆ 1932ರಲ್ಲಿ ಮೊಹಮದ್‌ ಅಹ್ಮದ್‌ ಖಾನ್‌ ಎಂಬ ವಕೀಲನನ್ನು ಮದುವೆಯಾಗಿದ್ದಳು. ಸದಾ ಕಿರುಕುಳ ಕೊಡುತ್ತಿದ್ದ ಆಕೆಯ ಗಂಡ, ಕೊನೆಗೂ 43 ವರ್ಷ ಕಷ್ಟಪಟ್ಟು ಸಂಸಾರ ನಡೆಸಿದ ಆಕೆಯನ್ನು 1975ರಲ್ಲಿ ಮನೆಯಿಂದ ಹೊರಹಾಕಿದ. 1978ರ ಏಪ್ರಿಲ್‌ನಲ್ಲಿ, ತನಗೆ ಗಂಡನಿಂದ ರೂ. 500 ಮಾಸಾಶನ ಕೊಡಿಸಿ ಎಂದು ಆಕೆ ಇಂದೋರ್‌ ಕೋರ್ಟ್‌ನ ಮೊರೆ ಹೋದಳು. ಆಗ ಗಂಡ ಖಾನ್‌ನ ವಾರ್ಷಿಕ ಆದಾಯ 60,000 ರೂ.

1978ರ ನವೆಂಬರ್‌ನಲ್ಲಿ ಖಾನ್‌ ಆಕೆಗೆ ತಲಾಕ್‌ ನೀಡಿದ. 1979ರ ಆಗಸ್ಟ್‌ನಲ್ಲಿ ಮ್ಯಾಜಿಸ್ಟ್ರೇಟರು ಆಕೆಗೆ ಮಾಸಾಶನವಾಗಿ ಜುಜುಬಿ 20 ರೂ. ನೀಡಲು ತೀರ್ಪು ನೀಡಿದರು. ಆಕೆ ಮೇಲ್ಮನವಿ ಹೋದಳು. ಮಧ್ಯಪ್ರದೇಶ ಹೈಕೋರ್ಟ್‌ ಮಾಸಾಶನದ ಮೊತ್ತವನ್ನು 179.20 ರೂ.ಗಳಿಗೆ ಏರಿಸಿತು. ಖಾನ್‌ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋದ.

ಪಂಚಸದಸ್ಯ ನ್ಯಾಯಪೀಠದ ಟಿಪ್ಪಣಿ

ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವೈ.ವಿ ಚಂದ್ರಚೂಡ್‌ ನೇತೃತ್ವದ ಪಂಚಸದಸ್ಯ ನ್ಯಾಯಪೀಠ 1985ರಲ್ಲಿ ಎತ್ತಿ ಹಿಡಿಯಿತು. ಜತೆಗೆ ಹೆಚ್ಚುವರಿಯಾಗಿ 10,000 ರೂ.ಗಳನ್ನು ನೀಡಲೂ ಆದೇಶಿಸಿತು. ತೀರ್ಪಿನ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆಯ ಜಾರಿಯ ಬಗ್ಗೆ ನ್ಯಾಯಪೀಠ ನೀಡಿದ ಟಿಪ್ಪಣಿ, ದೇಶದಲ್ಲಿ ಇದರ ಬಗ್ಗೆ ಚರ್ಚೆಯ ಅಲೆಗಳನ್ನು ಎಬ್ಬಿಸಿತು.

ʼʼನಮ್ಮ ಸಂವಿಧಾನದ 44ನೇ ವಿಧಿ ಸತ್ತಂತೆ ಆಗಿದೆ ಎಂಬುದು ವಿಷಾದಕರ. ಈ ದೇಶಕ್ಕೆ ಒಂದು ಏಕರೂಪ ನಾಗರಿಕ ಸಂಹಿತೆ ತರುವ ಬಗ್ಗೆ ಯಾವುದೇ ಅಧಿಕೃತ ಚಟುವಟಿಕೆ ಇದುವರೆಗೂ ನಡೆದಿರುವುದಕ್ಕೆ ಸಾಕ್ಷಿಯಿಲ್ಲ. ತಮ್ಮ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆ ತರಬೇಕಿರುವುದರಿಂದ, ಈ ವಿಷಯದಲ್ಲಿ ಮುಸ್ಲಿಂ ಸಮುದಾಯ ಮುಂದುವರಿಯಬೇಕಿದೆ ಎಂದು ಬಹಳ ಮಂದಿ ನಂಬಿರುವಂತೆ ಕಾಣಿಸುತ್ತಿದೆ. ಕಾನೂನುಗಳಿಗೆ ವಿಭಿನ್ನ ಪ್ರತಿಕ್ರಿಯೆ, ಗೊಂದಲಗಳು, ಸಿದ್ಧಾಂತಗಳ ತಿಕ್ಕಾಟಗಳನ್ನು ನಿವಾರಿಸುವಲ್ಲಿ ರಾಷ್ಟ್ರೀಯ ಏಕತೆಯನ್ನು ಸಾಧಿಸಲು ಏಕರೂಪ ನಾಗರಿಕ ಸಂಹಿತೆ ನೆರವಾಗಬಹುದುʼʼ ಎಂದು ಕೋರ್ಟ್‌ ಹೇಳಿತು.

rajiv gandhi

ʼʼಯಾವುದೇ ಸಮುದಾಯ ಈ ವಿಷಯದಲ್ಲಿ ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧವಾಗುತ್ತಿರುವಂತಿಲ್ಲ. ಈ ದೇಶದ ಪ್ರಜೆಗಳ ಹಿತರಕ್ಷಣೆಗಾಗಿ ಸ್ವತಃ ಸರ್ಕಾರವೇ ಆ ಕೆಲಸಕ್ಕೆ ಬದ್ಧವಾಗಬೇಕಿದೆ. ಹಾಗೆ ಮಾಡಲು ಅದಕ್ಕೆ ಶಾಸನಾತ್ಮಕವಾದ ಅಧಿಕಾರವೂ ಇದೆ. ಇದಕ್ಕೆ ಶಾಸನಾತ್ಮಕ ಸ್ಪರ್ಧಾತ್ಮಕತೆ ಈ ವಿಷಯದಲ್ಲಿ ಎಷ್ಟು ಮುಖ್ಯವೋ, ರಾಜಕೀಯ ಧೈರ್ಯವೂ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಡಬೇಕಾಗುತ್ತದೆ. ವಿಭಿನ್ನ ನಂಬಿಕೆಗಳ ಸಮುದಾಯಗಳನ್ನು ವ್ಯಕ್ತಿಗಳನ್ನು ಈ ವಿಚಾರದಲ್ಲಿ ಒಟ್ಟಿಗೆ ತರುವಲ್ಲಿ ಇರುವ ಸಂಕಷ್ಟಗಳು ನಮಗೆ ಗೊತ್ತಿವೆ. ಆದರೆ ಸಂವಿಧಾನ ಅರ್ಥ ಉಳಿಸಿಕೊಳ್ಳಬೇಕಾದರೆ ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಇಡುವುದು ಅತ್ಯಗತ್ಯʼʼ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.

ಶಾಬಾನೊ ಪ್ರಕರಣದಲ್ಲಿ ಭಂಡತನ ಪ್ರದರ್ಶಿಸಿದ ಗಂಡನ ಜತೆಗೆ ನಿಂತ ಆಲ್‌ ಇಂಡಿಯಾ ಮುಸ್ಲಿಂ ಪರ್ಸನಲ್‌ ಲಾ ಮಂಡಳಿಯನ್ನು ಕೋರ್ಟ್‌ ತೀವ್ರವಾಗಿ ಟೀಕಿಸಿತು. ಪಾಕಿಸ್ತಾನ ವಿವಾಹ ಮತ್ತು ಕುಟುಂಬ ಕಾಯಿದೆಗಳ ಕಮಿಷನ್‌ ನೀಡಿದ್ದ ಒಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದ ಅಂಶವನ್ನು ಪ್ರಸ್ತಾವಿಸಿತು. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಮಧ್ಯವಯಸ್ಸಿನ ಮುಸ್ಲಿಂ ಮಹಿಳೆಯರು ಯಾವುದೇ ಕಾರಣ ಹಾಗೂ ನೆರವೂ ಇಲ್ಲದೆ ಪುರುಷರಿಂದ ವಿಚ್ಛೇದನಕ್ಕೊಳಪಡುತ್ತಿದ್ದಾರೆ, ಈ ಸಮಸ್ಯೆಯಿಂದ ದೇಶ ತ್ರಸ್ತವಾಗಿದೆ ಎಂದು ವರದಿ ಹೇಳಿತ್ತು.

ʼʼಸದ್ಯದ ಭವಿಷ್ಯದಲ್ಲಿ ಮುಸ್ಲಿಂ ದೇಶಗಳು ಎದುರಿಸಬೇಕಾಗಿ ಬರುವ ಪ್ರಶ್ನೆಯೆಂದರೆ ಇಸ್ಲಾಂನ ಕಾನೂನು ಸುಧಾರಣೆ ಹೊಂದಲಿದೆಯೇ ಎಂಬುದು. ಇದಕ್ಕೆ ತುಂಬಾ ಬೌದ್ಧಿಕ ಪ್ರಯತ್ನ ಬೇಕು ಹಾಗೂ ಧನಾತ್ಮಕ ಉತ್ತರ ಬೇಕುʼʼ ಎಂದು ಆ ವರದಿ ಹೇಳಿತ್ತು.

ಇಸ್ಲಾಂ ಕಾಯಿದೆಗಳಲ್ಲಿ ಸುಧಾರಣೆಯ ಪ್ರಶ್ನೆ, ಭಾರತ ಗಣರಾಜ್ಯವಾಗಿ 73 ವರ್ಷಗಳಾದರೂ ಪ್ರಶ್ನೆಯಾಗಿಯೇ ಉಳಿದಿದೆ. ಈ ನಡುವೆ ಹಿಂದೂ ವೈಯಕ್ತಿಕ ಕಾನೂನುಗಳು ಪರಿಷ್ಕೃತಗೊಂಡೇ 67 ವರ್ಷಗಳಾಗಿವೆ.

ರಾಜೀವ್‌ ಗಾಂಧಿ ಸರ್ಕಾರ ತಂದ ಕಾನೂನು

rajiv gandhi

ಈ ನಡುವೆ ಕೇಂದ್ರದಲ್ಲಿದ್ದ ರಾಜೀವ್‌ ಗಾಂಧಿ ನಿರ್ಧಾರ ಮತ್ತೊಂದು ಕೆಟ್ಟ ನಿರ್ಧಾರ ತೆಗೆದುಕೊಂಡಿತು. ಶಾಬಾನೊ ಪ್ರಕರಣದಲ್ಲಿ ನೊಂದ ಮಹಿಳೆಯ ಪರ ನಿಲ್ಲುವ ಬದಲು ಅದು ಕಾರಣವಿಲ್ಲದೆ ತಲಾಕ್‌ ನೀಡುವ ಗಂಡಂದಿರ ಪರ ನಿಂತಿತು. ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ- 1986ಯನ್ನು ಜಾರಿಗೆ ತಂದಿತು. ಇದು ಶಾಬಾನೊ ಪ್ರಕರಣದಲ್ಲಿ ಕೋರ್ಟ್‌ ನೀಡಿದ ತೀರ್ಪನ್ನು ಮಣ್ಣುಗೂಡಿಸುವ ಪ್ರಯತ್ನವಾಗಿತ್ತು. ಮುಸ್ಲಿಂ ಗಂಡಸರು ವಿಚ್ಛೇದಿತ ಪತ್ನಿಗೆ ಮಾಸಾಶನ ಕೊಡುವ ಹೊಣೆಯಿಂದ ಈ ಕಾನೂನಿನ ಮೂಲಕ ನುಣುಚಿಕೊಳ್ಳಬಹುದಾಗಿತ್ತು.

ಸುಪ್ರೀಂ ಕೋರ್ಟ್‌ ಈ ಕಾಯಿದೆಯನ್ನೇನೂ ತಳ್ಳಿಹಾಕಲಿಲ್ಲ. ಆದರೆ ಇಂಥ ಪ್ರಕರಣಗಳಲ್ಲಿ ಸಮಾನ ನ್ಯಾಯವನ್ನು ನೀಡುವ ತೀರ್ಪುಗಳನ್ನು ಕೊಡುವುದನ್ನು ಮುಂದುವರಿಸಿತು. ಡೇನಿಯಲ್‌ ಲತಿಫಿ (2001), ಇಕ್ಬಾಲ್‌ ಬಾನೊ (2007), ಶಬಾನಾ ಬಾನೊ (2009) ಪ್ರಕರಣಗಳಲ್ಲಿ ಹೀಗಾಯಿತು. ಕ್ರಿಮಿನಲ್‌ ಪ್ರೊಸೀಜರ್‌ ಕೋಡ್‌ನ ಸೆಕ್ಷನ್‌ 125ರ ಪ್ರಕಾರ ಯಾವುದೇ ಮುಸ್ಲಿಂ ಮಹಿಳೆ ವಿಚ್ಛೇದಿತಗೊಂಡರೆ ಆಕೆಯನ್ನು ಗಂಡನಿಂದ ಮಾಸಾಶನ ಪಡೆಯುವ ಹಕ್ಕಿನಿಂದ ವಂಚಿತಳಾಗಿಸುವಂತಿಲ್ಲ ಎಂದು ಸಾರಿತು.

ಶಾಸಕಾಂಗವೇ ಮಾಡಬೇಕು

ಈ ನಡುವೆ 1994ರಲ್ಲಿ ಮಹರ್ಷಿ ಅವಧೇಶ ಎಂಬವರು 1986ರ ಕಾನೂನನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಯುಸಿಸಿ ಜಾರಿಗೆ ತರಲು ಒತ್ತಾಯಿಸಿದರು. ಆದರೆ ಈ ರಿಟ್‌ ಅನ್ನು ಸುಪ್ರೀಂ ಕೋರ್ಟ್‌ ತೆಗೆದುಕೊಳ್ಳಲಿಲ್ಲ. ʼʼಇದು ಶಾಸಕಾಂಗಕ್ಕೆ ಬಿಟ್ಟ ವಿಚಾರʼʼ ಎಂದಿತು.

1995ರಲ್ಲಿನ ಸರಳಾ ಮುದ್ಗಲ್‌ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್‌ ಇನ್ನಷ್ಟು ಸ್ಪಷ್ಟವಾಗಿ ಯುಸಿಸಿ ಜಾರಿಯ ಅಗತ್ಯವನ್ನು ಪ್ರತಿಪಾದಿಸಿತು. ʼʼದೇಶದಲ್ಲಿನ 80% ನಾಗರಿಕರು ಒಂದೇ ವೈಯಕ್ತಿಕ ಕಾನೂನಿನ ಆಡಳಿತಕ್ಕೆ ಒಳಪಟ್ಟಿರುವಾಗ, ಇನ್ನೂ ಯುಸಿಸಿ ಜಾರಿಗೆ ಮೀನ ಮೇಷ ಎಣಿಸುತ್ತಿರುವುದಕ್ಕೆ ಯಾವುದೇ ಸಮರ್ಥನೆ ಇಲ್ಲʼʼ ಎಂದು ಕೋರ್ಟ್‌ ಹೇಳಿತು. 2003ರ ಜಾನ್‌ ವಲ್ಲಮೊತ್ತಮ್‌ ಪ್ರಕರಣದಲ್ಲೂ ಈ ಮಾತನ್ನು ಪುನರುಚ್ಚರಿಸಿತು.

ಈ ವರ್ಷ ಮಾರ್ಚ್‌ 29ರಂದು, ಯುಸಿಸಿ ಜಾರಿಗೆ ಸಂಬಂಧಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿತು. 1994ರಲ್ಲಿ ಹೇಳಿದ ಮಾತನ್ನು ಮತ್ತೆ ಹೇಳಿತು- ʼʼಯುಸಿಸಿ ಜಾರಿಗೆ ಸಂಬಂಧಿಸಿ ಈ ಕೋರ್ಟ್‌ಗೆ ಆಗಮಿಸುವುದು ತಪ್ಪು ಮಾರ್ಗ. ಅದು ಸಂಸತ್ತಿನ ಕಾರ್ಯಕ್ಷೇತ್ರಕ್ಕೆ ಸೇರಿದುದು.ʼʼ ಎಂದಿತು.

ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿ ಪರ ಮೋದಿ ಪ್ರತಿಪಾದನೆ

Exit mobile version