Site icon Vistara News

ವಿಸ್ತಾರ Explainer | ಸ್ಮೃತಿ ಇರಾನಿ ಮಗಳು ಝೋಯಿಶ್‌ ಹಾಗೂ ಗೋವಾ ರೆಸ್ಟೋರೆಂಟ್‌: ಏನಿದು ವಿವಾದ?

smrithi irani

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಿಟ್ಟಿಗೆದ್ದಿದ್ದಾರೆ. ತಮ್ಮ ಮಗಳ ಹೆಸರನ್ನು ಅನಗತ್ಯವಾಗಿ ಎಳೆದು ತಂದು ವಿವಾದ ಎಬ್ಬಿಸಿರುವ ಕಾಂಗ್ರೆಸಿಗರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿ, ಹಾಗೇ ನೋಟೀಸ್‌ ಕೂಡ ಕಳಿಸಿದ್ದಾರೆ. ಸ್ಮೃತಿ ಇರಾನಿ ತಪ್ಪಿತಸ್ಥೆ, ಅವರಿಂದ ಪ್ರಧಾನಿ ರಾಜೀನಾಮೆ ಪಡೆಯಬೇಕು ಎಂದು ಕಾಂಗ್ರೆಸಿಗರು ಆಗ್ರಹಿಸಿದ್ದಾರೆ.

ಹಾಗಾದರೆ ವಿವಾದವೇನು? ಕಾಂಗ್ರೆಸಿಗರು ಆರೋಪಿಸಿದ್ದೇನು? ಸ್ಮೃತಿ ಇರಾನಿ ಅವರ ಪ್ರತ್ಯುತ್ತರವೇನು? ನಿಜವೇನು? ನೋಡೋಣ.

ವಿವಾದ ಗೋವಾದಲ್ಲಿರುವ ಒಂದು ರೆಸ್ಟೋರೆಂಟ್‌ಗೆ ಸಂಬಂಧಿಸಿದ್ದು. ಸ್ಮೃತಿ ಇರಾನಿ ಅವರ ಮಗಳು ಝೋಯಿಶ್‌ ಇರಾನಿ ಅವರು ಗೋವಾದಲ್ಲಿ ಒಂದು ರೆಸ್ಟೋರೆಂಟ್‌ ಹೊಂದಿದ್ದು, ಅದರ ಮಾಲೀಕತ್ವದ ಪರವಾನಗಿಯಲ್ಲಿ ಗೋಲ್‌ಮಾಲ್‌ ನಡೆದಿದೆ ಎಂಬುದು ಆಪಾದನೆ.

ಕಾಂಗ್ರೆಸ್‌ ಮಾಡಿದ ಆರೋಪ ಏನು?

ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಮತ್ತು ಜೈರಾಮ್‌ ರಮೇಶ್ ಅವರು ಇತ್ತೀಚೆಗೆ ಒಂದು ಪತ್ರಿಕಾಗೋಷ್ಠಿ ನಡೆಸಿ, ಇರಾನಿ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದರು. ಸ್ಮೃತಿ ಇರಾನಿ ಅವರ ಮಗಳು ಗೋವಾದಲ್ಲಿ ನಡೆಸುತ್ತಿರುವ ರೆಸ್ಟೋರೆಂಟ್‌ ನಕಲಿ ಲೈಸೆನ್ಸ್‌ ಹೊಂದಿದೆ. ಇದು ಗಂಭೀರವಾದ ಅಪರಾಧವಾಗಿದ್ದು, ಈ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸಚಿವೆ ಸ್ಮೃತಿ ಇರಾನಿಯ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ತಮ್ಮ ಮಾತಿಗೆ ಪೂರಕವಾಗಿ ಅವರು ಒಂದು ಶೋಕಾಸ್‌ ನೋಟೀಸ್‌ನ ಪ್ರತಿಯನ್ನು ಪ್ರದರ್ಶಿಸಿದರು. ಇದು ಗೋವಾದ ಎಕ್ಸೈಸ್‌ ಕಮಿಷನರ್‌ ನಾರಾಯಣ ಎಂ. ಗಾಡ್‌ ಎಂಬವರು ಜುಲೈ 21ರಂದು ರೆಸ್ಟೋರೆಂಟ್‌ಗೆ ನೀಡಿದ್ದ ಶೋಕಾಸ್‌ ನೋಟೀಸ್.‌ ಐರೆಸ್‌ ರೋಡ್ರಿಗಸ್‌ ಎಂಬ ವಕೀಲರು ಕೊಟ್ಟ ದೂರಿನ ಮೇರೆಗೆ ನೀಡಲಾದ ಶೋಕಾಸ್‌ ನೋಟೀಸ್‌ ಅದಾಗಿತ್ತು.

ರೆಸ್ಟೋರೆಂಟ್‌ನ ಹೆಸರು ಸಿಲ್ಲಿ ಸೌಲ್ಸ್‌ ಕೆಫೆ ಮತ್ತು ಬಾರ್‌ (Silly Souls Cafe and Bar). ಇದರ ಲಿಕ್ಕರ್‌ ಪರವಾನಗಿ ಕಳೆದ ತಿಂಗಳು ನವೀಕರಿಸಲಾಗಿತ್ತು. ಆದರೆ ಈ ಪರವಾನಗಿ ಆಂಟನಿ ಡಿಗಾಮ ಎಂಬವರ ಹೆಸರಿನಲ್ಲಿದ್ದು, ಅವರು 2021ರ ಮೇ 17ರಂದೇ ಮೃತಪಟ್ಟಿದ್ದಾರೆ. ಈಗ ಮೃತ ವ್ಯಕ್ತಿಯ ಹೆಸರಿನಲ್ಲಿ ಅಕ್ರಮವಾಗಿ ಲೈಸೆನ್ಸ್‌ ಪಡೆಯಲಾಗಿದೆ ಎಂಬುದು ದೂರು. ಮೃತ ವ್ಯಕ್ತಿ ಮುಂಬಯಿಯ ನಿವಾಸಿಯಾಗಿದ್ದು, ಅವರ ಹೆಸರಿನಲ್ಲಿ ಬೇರೆಯವರು ಲೈಸೆನ್ಸ್‌ ಪಡೆದುಕೊಂಡಿದ್ದಾರೆ. ಈ ವಿವರಗಳನ್ನು ದೂರುದಾರರು ಆರ್‌ಟಿಐ ಅರ್ಜಿ ಬಳಸಿ ಪಡೆದಿದ್ದಾರೆ. ಈ ದೂರನ್ನ ಅನುಸರಿಸಿ ನೋಟೀಸ್‌ ನೀಡಲಾಗಿದ್ದು, ಈ ವಿಚಾರ ಜುಲೈ 29ರಂದು ಇತ್ಯರ್ಥವಾಗಬೇಕಿದೆ. ಸ್ಥಳೀಯ ಅಸಗಾಂವ್‌ ಪಂಚಾಯತ್‌ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಕೈಜೋಡಿಸಿ ಈ ಅಕ್ರಮ ನಡೆಸಲಾಗಿದೆ. ಮಾತ್ರವಲ್ಲ, ರಾಜ್ಯದೊಳಗೆ (ಗೋವಾ) ಕಾರ್ಯಾಚರಿಸಲೂ ಈ ರೆಸ್ಟೋರೆಂಟ್‌ ಮಾಲೀಕರಿಗೆ ಅನುಮತಿಯಿಲ್ಲ. ವಿದೇಶಿ ಲಿಕ್ಕರ್‌ ಹಾಗೂ ಭಾರತೀಯವಾಗಿ ತಯಾರಿಸಲಾದ ವಿದೇಶಿ ಲಿಕ್ಕರ್‌ ಮಾರುವ ಪರವಾನಗಿ ಪಡೆಯಲು ಲೈಸೆನ್ಸ್‌ ನಿಯಮಾವಳಿಗಳನ್ನು ಸಡಿಲಗೊಳಿಸಲಾಗಿದೆ ಎಂದೂ ಕಾಂಗ್ರೆಸ್‌ ಆರೋಪಿಸಿದೆ.

ಆದರೆ ಈ ಅಕ್ರಮ ಲೈಸೆನ್ಸ್‌ನ ಉರುಳು ಸ್ಮೃತಿ ಇರಾನಿ ಅವರ ಮಗಳಿಗೆ ಸುತ್ತಿಕೊಂಡದ್ದು ಹೇಗೆ?

ರೆಸ್ಟೋರೆಂಟ್‌ನ ಲಿಕ್ಕರ್‌ ಲೈಸೆನ್ಸ್‌ ಸ್ಮೃತಿ ಇರಾನಿ ಅವರ ಮಗಳ ಹೆಸರಿನಲ್ಲಿ ಇಲ್ಲದೇ ಹೋದರೂ ಅದನ್ನು ನಡೆಸುತ್ತಿರುವವರು ಅವರೇ ಎಂಬುದು ಕಾಂಗ್ರೆಸ್‌ನ ಆರೋಪ. ಇದಕ್ಕೆ ಸಾಕ್ಷಿಯಾಗಿ, 2022ರ ಏಪ್ರಿಲ್‌ 14ರಂದು ಸ್ಮೃತಿ ಇರಾನಿ ಅವರೇ ಮಾಡಿದ ಒಂದು ಟ್ವೀಟ್‌ ಅನ್ನು ಕೂಡ ಕಾಂಗ್ರೆಸ್‌ ಎದುರು ಹಿಡಿದಿದೆ. ಕುನಾಲ್‌ ವಿಜಯ್‌ಕರ್‌ ಎಂಬ ಫುಡ್‌ ರೈಟರ್‌ ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿ, ಅಲ್ಲಿನ ಫುಡ್‌ ರುಚಿಕರವಾಗಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ರಿವ್ಯೂ ಬರೆದಿದ್ದರು. ಈ ಸಂದರ್ಭದಲ್ಲಿ ರೆಸ್ಟುರಾದಲ್ಲಿ ಝೋಯಿಶ್‌ ಇರಾನಿ ಅವರನ್ನು ಮಾತನಾಡಿಸಿ, ಅದರ ವಿಡಿಯೋ ಕೂಡ ಹಾಕಿದ್ದರು. ಇದನ್ನು ಶೇರ್‌ ಮಾಡಿದ್ದ ಸ್ಮೃತಿ ಇರಾನಿ ಅವರು, ಮಗಳು ಹಾಗೂ ತಮ್ಮ ಅಪ್ಪುಗೆಯ ಚಿತ್ರವನ್ನು ಹಂಚಿಕೊಂಡು ʻSo proud’ ಎಂದು ಬರೆದುಕೊಂಡಿದ್ದರು. ರೆಸ್ಟೋರೆಂಟ್‌ನ ಇನ್‌ಸ್ಟಾಗ್ರಾಂ ಪುಟವನ್ನು ಕೂಡ ಟ್ಯಾಗ್‌ ಮಾಡಿದ್ದರು.

ಈ ದೂರು, ಶೋಕಾಸ್‌ ನೋಟೀಸ್‌, ಕುನಾಲ್‌ ವಿಜಯಕರ್‌ ಅವರ ರಿವ್ಯೂ ಹಾಗೂ ಸ್ಮೃತಿ ಅವರ ಹಳೆಯ ಟ್ವೀಟ್‌ಗಳ ಆಧಾರದಲ್ಲಿ ಕಾಂಗ್ರೆಸ್‌ ಪಕ್ಷ ಈಗ ಸ್ಮೃತಿ ಇರಾನಿ ಮೇಲೆ ದಾಳಿ ನಡೆಸುತ್ತಿದೆ. ʻʻರೆಸ್ಟೋರೆಂಟ್‌ನ ಮಾಲೀಕರು ಸ್ಮೃತಿ ಇರಾನಿ ಮಗಳು ಎಂಬುದು ಸಾಬೀತಾಗಿದೆ. ಆದರೆ ಲೈಸೆನ್ಸ್‌ ಪಡೆಯಲು ಅಕ್ರಮ ಎಸಗಲಾಗಿದೆʼʼ ಎಂಬುದು ದೂರಿನ ತಿರುಳು. ಈ ಸಂದರ್ಭದಲ್ಲಿ ಪವನ್‌ ಖೇರಾ ಅವರು ಸ್ಮೃತಿ ಇರಾನಿ ಹಾಗೂ ಅವರ ಪುತ್ರಿಯ ಬಗ್ಗೆ ಸಾಕಷ್ಟು ವ್ಯಂಗ್ಯವಾಗಿ ಟೀಕೆಗಳನ್ನು ಮಾಡಿದ್ದು, ʻಮೋದಿ ಅವರ ಮೆಚ್ಚಿನ ಸಚಿವೆʼ ಎಂದು ಕೂಡ ಸ್ಮೃತಿ ಬಗ್ಗೆ ಬರೆದಿದ್ದಾರೆ. ಸ್ಮೃತಿ ಅವರ ಮಗಳನ್ನು ʻಬಾರ್‌ವಾಲಿʼ ಎಂದು ಕೂಡ ಕರೆದಿದ್ದಾರೆ. ಇದನ್ನು ಸಾಕಷ್ಟು ಕಾಂಗ್ರೆಸಿಗರು ಹಂಚಿಕೊಂಡು, ಸ್ಮೃತಿಯ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಯಾಕೆ ಸ್ಮೃತಿ ಇರಾನಿ ಮೇಲೆ ದಾಳಿ?

ಸ್ಮೃತಿ ಇರಾನಿ ಕೂಡ ಕಾಂಗ್ರೆಸ್‌ನ ಪತ್ರಿಕಾಗೋಷ್ಠಿಗೆ ಉತ್ತರವಾಗಿ ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಆರೋಪಗಳಿಗೆ ಉತ್ತರ ನೀಡಿದ್ದಾರೆ.

ʻʻಕಾಂಗ್ರೆಸ್‌ ಮಾಡುತ್ತಿರುವ ಆರೋಪಗಳು ನನ್ನ ವರ್ಚಸ್ಸನ್ನು ಕೆಡಿಸುವ ದುರುದ್ದೇಶದಿಂದ ಕೂಡಿವೆ. ನನ್ನ ಚಾರಿತ್ರ್ಯ ಹಾಗೂ ರಾಜಕೀಯ ಜೀವನವನ್ನು ಮುಗಿಸಲು ಹೊರಟಿದ್ದಾರೆ. ಕಾಂಗ್ರೆಸ್‌ ನಾಯಕತ್ವ, ಅದರಲ್ಲೂ ಗಾಂಧಿ ಕುಟುಂಬದ ನಿರ್ದೇಶನದಂತೆ ಇದನ್ನು ಎಸಗಲಾಗುತ್ತಿದೆ. ಯಾಕೆಂದರೆ ಭಾರತೀಯರ ಬೊಕ್ಕಸದಿಂದ 5000 ಕೋಟಿ ರೂ. ಲೂಟಿ ಮಾಡಿದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರ ಕೃತ್ಯವನ್ನು ಮಾಧ್ಯಮಗೋಷ್ಠಿ ನಡೆಸಿ ಖಂಡಿಸಿದ್ದೇನೆ.ʼʼ

ʻʻನನ್ನ ಮಗಳ ಚಾರಿತ್ರ್ಯವನ್ನು ಹನನ ಮಾಡಲು ಶೋಕಾಸ್‌ ನೋಟೀಸ್‌ ಅನ್ನು ಬಳಸಿಕೊಳ್ಳಲಾಗುತ್ತಿದೆ. ಈ ನೋಟೀಸ್‌ನಲ್ಲಿ ನನ್ನ ಮಗಳ ಹೆಸರು ಎಲ್ಲಿದೆ? ನನ್ನ ಮಗಳಿಗೆ 18 ವರ್ಷ. ಆಕೆ ಕಾಲೇಜು ವಿದ್ಯಾರ್ಥಿ. ನನ್ನ ಮಗಳ ಹೆಸರನ್ನು ಕೆಡಿಸುವ ಸಂಚು ಕಾಂಗ್ರೆಸ್‌ ಹೆಡ್‌ಕ್ರಾರ್ಟರ್ಸ್‌ನಿಂದ ಹೊರಟಿದೆ. ಆಕೆ ಮಾಡಿದ ಒಂದೇ ತಪ್ಪೆಂದರೆ ಅವಳ ತಾಯಿ 2014 ಮತ್ತು 2019ರ ಲೋಕಸಭೆ ಚುನಾವಣೆಗಳಲ್ಲಿ ರಾಹುಲ್‌ ಗಾಂಧಿ ಎದುರು ಸ್ಪರ್ಧಿಸಿದ್ದುʼʼ ಎಂದು ಸ್ಮೃತಿ ಕಿಡಿ ಕಾರಿದ್ದಾರೆ.

ಆಧಾರವಿಲ್ಲದ ಆರೋಪಗಳನ್ನು ಮಾಡಿದ್ದಕ್ಕಾಗಿ ಜೈರಾಮ್‌ ರಮೇಶ್‌ ಹಾಗೂ ಪವನ್‌ ಖೇರಾಗೆ ಸ್ಮೃತಿ ಇರಾನಿ ಲಾಯರ್‌ ನೋಟೀಸ್‌ ಕಳಿಸಿದ್ದು, ಬೇಷರತ್‌ ಕ್ಷಮಾಪಣೆ ಕೇಳುವಂತೆ ಆಗ್ರಹಿಸಿದ್ದಾರೆ.

ನಿಜಕ್ಕೂ ಅಕ್ರಮಕ್ಕೂ ಸ್ಮೃತಿಗೂ ಸಂಬಂಧವಿಲ್ಲವೇ?

ಶೋಕಾಸ್‌ ನೋಟೀಸ್‌ನ ಎರಡನೇ ಪುಟ

ದಾಖಲೆಗಳು ಹಾಗೂ ವಾಸ್ತವ ಪರಿಸ್ಥಿತಿಗಳನ್ನು ಪರಿಶೀಲಿಸಿದಾಗ, ಲಿಕ್ಕರ್‌ ಲೈಸೆನ್ಸ್‌ಗೂ ಸ್ಮೃತಿ ಇರಾನಿ ಮಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ರುಜುವಾತಾಗುತ್ತದೆ. ಅದು ಹೇಗೆ? ಲಿಕ್ಕರ್‌ ಲೈಸೆನ್ಸ್‌ ಪಡೆದಿರುವುದು ಆಂಟನಿ ಡಿಗಾಮ ಎಂಬುವರ ಹೆಸರಿನಲ್ಲಿ. ಪಡೆದಿರುವುದು ಅವರ ಮಗ. ಇದನ್ನು ಪಡೆಯುವಾಗ, ʼʼಪ್ರಸ್ತುತ ಲೈಸೆನ್ಸ್‌ ಅನ್ನು 2022- 23ಕ್ಕೆ ನವೀಕರಿಸಿ ಕೊಡಬೇಕು. ಆರು ತಿಂಗಳಲ್ಲಿ ಅದನ್ನು ಟ್ರಾನ್ಸ್‌ಫರ್‌ ಮಾಡಿಸಿಕೊಳ್ಳುತ್ತೇನೆʼʼ ಎಂದು ಡಿಗಾಮ ಅವರ ಮಗ ಅಬಕಾರಿ ಇಲಾಖೆಗೆ ವಾಗ್ದಾನ ನೀಡಿದ್ದಾರೆ. ಈ ಟ್ರಾನ್ಸ್‌ಫರ್‌ ಪ್ರಕ್ರಿಯೆ ಕಡತದ ಹಂತದಲ್ಲಿದೆ. ಅಂದರೆ ಈ ಲೈಸೆನ್ಸ್‌ ಕೂಡ ಕಾನೂನುಬದ್ಧ. ಶೋಕಾಸ್‌ ನೋಟೀಸ್‌ನ ಎರಡನೇ ಪುಟದಲ್ಲಿ ಇದರ ಉಲ್ಲೇಖವಿದೆ. ಆದರೆ ಕಾಂಗ್ರೆಸ್‌ನವರು ಮೊದಲ ಪುಟವನ್ನು ಮಾತ್ರ ಮೀಡಿಯಾದ ಎದುರು ಪ್ರದರ್ಶಿಸಿದ್ದಾರೆ.

ಹಾಗಾದರೆ ಸ್ಮೃತಿ ಅವರ ಕುಟುಂಬಕ್ಕೂ ಈ ರೆಸ್ಟೋರೆಂಟ್‌ಗೂ ಸಂಬಂಧವಿದೆಯೇ? ಇದೆ. ಸ್ಮೃತಿ ಅವರ ಪತಿ ಝುಬಿನ್‌ ಇರಾನಿ ಅವರು ಉದ್ಯಮಿ. ಅವರೂ ಈ ರೆಸ್ಟೋರೆಂಟ್‌ನ ಮಾಲೀಕರು ಮಾತ್ರವಲ್ಲ, ಆಂಟನಿ ಡಿಗಾಮ ಅವರೊಂದಿಗೆ ಪಾಲುದಾರರು. ರೆಸ್ಟೋರೆಂಟ್‌ನ ಜಾಗ, ಪರವಾನಗಿ ಎಲ್ಲವೂ ಕಾನೂನುಬದ್ಧವಾಗಿವೆ.

ಇನ್ನ ಝೋಯಿಶ್‌ ಇರಾನಿ ಅಲ್ಲಿ ಕಾಣಿಸಿಕೊಂಡದ್ದು ಯಾಕೆ? ಅವರು ಇನ್ನೂ ವಿದ್ಯಾರ್ಥಿ ಹಾಗೂ ಗೋವಾದ ನಾಲ್ಕು ರೆಸ್ಟುರಾಗಳಲ್ಲಿ ಇಂಟರ್ನಿಯಾಗಿ ಅನುಭವ ಗಳಿಸುತ್ತಿದ್ದಾರೆ. ಅವುಗಳಲ್ಲಿ ಸಿಲ್ಲಿ ಸೌಲ್ಸ್‌ ಕೂಡ ಒಂದು.

ಪ್ರಕರಣದಲ್ಲಿ ಕಂಡುಬಂದಿರುವ ಒಂದೇ ಒಂದು ಅಂಶ ಎಂದರೆ ಕಾಂಗ್ರೆಸ್‌ನ ಅವಸರ ಹಾಗೂ ಸ್ಮೃತಿ ಅವರ ಮಗಳ ಮೇಲೆ ನಡೆಸಿರುವ ಮಾನಹಾನಿಕರ ವಾಗ್ದಾಳಿ. ಶೋಕಾಸ್‌ ನೋಟೀಸ್‌ನಲ್ಲಾಗಲೀ ಆರ್‌ಟಿಐನಿಂದ ಪಡೆದಿರುವ ದಾಖಲೆಗಳಲ್ಲಾಗಲೀ ಸ್ಮೃತಿ ಇರಾನಿ ಕುಟುಂಬದವರ ಹೆಸರಿಲ್ಲ. ಪ್ರಕರಣಕ್ಕೂ ಸಿಲ್ಲಿ ಸೌಲ್ಸ್‌ ರೆಸ್ಟೋರೆಂಟ್‌ ಜಾಗಕ್ಕೂ ಸಂಬಂಧವಿಲ್ಲ.

ದೂರುದಾರನೇ ಕಳ್ಳ!

ಪ್ರಕರಣದಲ್ಲಿ ಇನ್ನೂ ಒಂದು ಟ್ವಿಸ್ಟ್‌ ಇದೆ. ಅದೇನೆಂದರೆ, ಆರ್‌ಟಿಐ ಮೂಲಕ ದಾಖಲೆ ಪಡೆದ ಐರೆಸ್‌ ರೋಡ್ರಿಗಸ್‌ ಸ್ವತಃ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ವ್ಯಕ್ತಿ. ಈತನಿಗೆ ಜಾಮೀನು ನಿರಾಕರಿಸಲಾಗಿತ್ತು. ಇದಲ್ಲದೇ ಪೋರ್ಚುಗಲ್‌ನ ಪೌರತ್ವವನ್ನೂ ಹೊಂದಿರುವ ಈತನಿಗೆ ಉಭಯ ಪೌರತ್ವದ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್‌ಶೀಟ್‌ ಹಾಕಲಾಗಿದೆ.

Exit mobile version