ಕೇಂದ್ರ ಸರ್ಕಾರದ ಆರ್ಥಿಕವಾಗಿ ಹಿಂದುಳಿದ ವರ್ಗ(Economically Weaker Section-EWS)ಕ್ಕೆ ಕೇಂದ್ರ ಸರ್ಕಾರ ಕಲ್ಪಿಸಿದ ಶೇ.10 ಮೀಸಲಾತಿಗೆ (EWS Reservation) ಈಗ ಸುಪ್ರೀಂ ಕೋರ್ಟ್ ಮುದ್ರೆ ಬಿದ್ದಿದೆ. ಕೇಂದ್ರ ಸರ್ಕಾರವು ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದು ಈ ಮೀಸಲಾತಿಯನ್ನು ಜಾರಿಗೊಳಿಸಿತ್ತು. ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಹಲವರು ಪ್ರಶ್ನಿಸಿದ್ದರು. ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾಗುತ್ತದೆ, ಎಸ್‌ಸಿ ಮತ್ತು ಎಸ್‌ಟಿ ಮೀಸಲಿಗೆ ಹೊಡೆತ ಬೀಳಲಿದೆ ಎಂಬೆಲ್ಲ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ಸಾಂವಿಧಾನಿಕ ಪೀಠವನ್ನು ರಚಿಸಿ, ಸತತ ವಿಚಾರಣೆ ನಡೆಸಿ ಈಗ ತೀರ್ಪು ಪ್ರಕಟಿಸಿದೆ(ವಿಸ್ತಾರ Explainer).
ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಬೇಲಾ ಎಂ ತ್ರಿವೇದಿ ಮತ್ತು ಜೆ ಬಿ ಪರ್ದಿವಾಲಾ ಹಾಗೂ ಎಸ್ ರವೀಂದ್ರ ಭಟ್ ಅವರಿದ್ದರು. ಈ ಪೈಕಿ ಜಸ್ಟಿಸ್ ದಿನೇಶ್ ಮಹೇಶ್ವರಿ, ಬೇಲಾ ಮತ್ತು ಪರ್ದಿವಾಲಾ ಅವರು ಶೇ.10 ಇಡಬ್ಲ್ಯೂಎಸ್ ಮೀಸಲಾತಿಯನ್ನು ಎತ್ತಿ ಹಿಡಿದರೆ, ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಹಾಗೂ ಎಸ್ ರವೀಂದ್ರ ಭಟ್ ಅವರು ಭಿನ್ನ ತೀರ್ಪು ನೀಡಿದ್ದರು. ಹಾಗಾಗಿ, 3:2 ತೀರ್ಪಿನ ಮೂಲಕ ಸುಪ್ರೀಂ ಮಾನ್ಯತೆ ನೀಡಿದೆ.
ಏನಿದು ಇಡಬ್ಲ್ಯೂಎಸ್ ಹಿನ್ನೆಲೆ?
ಸಾಮಾಜಿಕ ಅಸಮಾನತೆಯನ್ನು ಹೋಗಾಲಿಡಸಲು ನಮ್ಮ ಸಂವಿಧಾನವೇ ಶೋಷಿತ ಜಾತಿ, ವರ್ಗ, ಸಮುದಾಯಗಳಿಗೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲು ವ್ಯವಸ್ಥೆಯನ್ನು ಕಲ್ಪಿಸಿದೆ. ಈ 75 ವರ್ಷಗಳಲ್ಲಿ ಮೀಸಲಾತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಮೀಸಲಾತಿಯು ಬೇರೆ ಸ್ವರೂಪದ ಅಸಮಾನತೆಯನ್ನು ಸೃಷ್ಟಿಸುತ್ತಿದೆ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟ(ಎನ್‌ಡಿಎ) 2019ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೇಲ್ವರ್ಗದ ಬಡವರಿಗೆ ಶೇ.10 ಮೀಸಲು ಕಲ್ಪಿಸುವ ಘೋಷಣೆಯನ್ನು ಮಾಡಿತು. ಅರ್ಹ ಕುಟುಂಬವು ಹೊಂದಿರುವ ಭೂಮಿ, ತಿಂಗಳ ಆದಾಯ, ಕುಟುಂಬದ ಗಾತ್ರದ ಆಧಾರದ ಮೇಲೆ ಬಡವರೆಂದು ಗುರುತಿಸಿ ಅವರಿಗೆ ಮೀಸಲು ಕಲ್ಪಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಬಿಜೆಪಿ ಸರ್ಕಾರದ ಈ ನಿರ್ಧಾರಕ್ಕೆ ಸಾಕಷ್ಟು ಪರ, ವಿರೋಧ ಚರ್ಚೆಗಳು ನಡೆದವು. ಆದರೆ, ಕೇಂದ್ರ ಸರ್ಕಾರ ಇದಾವುದಕ್ಕೆ ತಲೆ ಕೆಡಿಸಿಕೊಳ್ಳದೇ ವಾಗ್ದಾನದಂತೆ, 2019ರಲ್ಲಿ ಚುನಾವಣೆ ಗೆಲುವು ಸಾಧಿಸಿದ ಬಳಿಕ ಶೇ.10 ಮೀಸಲು ಜಾರಿಗೆ ತಂದಿತು. ನಿರೀಕ್ಷೆಯಂತೆ ಈ ವಿವಾದವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.
ಸಂವಿಧಾನ ತಿದ್ದುಪಡಿ
| ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ಮೀಸಲು ಕಲ್ಪಿಸಲು ಸಂವಿಧಾನ ತಿದ್ದುಪಡಿ ಅಗತ್ಯವಿತ್ತು. ಹಾಗಾಗಿ, 103ನೇ ತಿದ್ದುಪಡಿ ಮಾಡಲಾಯಿತು.
| ಈ ತಿದ್ದುಪಡಿಯ ಮೂಲಕ ಸಂವಿಧಾನದ ಆರ್ಟಿಕಲ್ 15(6), 16(6) ಕೊಂಚ ಬದಾಲವಣೆ ಮಾಡಲಾಯಿತು. ಆ ಮೂಲಕ ಇಡಬ್ಲ್ಯೂಎಸ್ ಮೀಸಲಿಗೆ ಅವಕಾಶ ಕಲ್ಪಿಸಲಾಯಿತು.
| ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಭಾರಿ ಬೆಂಬಲ ದೊರೆಯಿತು.
ಅರ್ಹತೆಗಳೇನು?
| ಶೇ.10 ಇಡಬ್ಲ್ಯೂಎಸ್ ಮೀಸಲು ಪಡೆಯಲು ಕೆಲವು ನಿಬಂಧನೆಗಳನ್ನು ಹೊರಡಿಸಲಾಗಿದೆ.
| ಕುಟುಂಬದ ಆದಾಯವು ವಾರ್ಷಿಕ 8 ಲಕ್ಷಕ್ಕಿಂತ ಕಡಿಮೆ ಇರಬೇಕು.
| ಕುಟುಂಬದ ಭೂಮಿಯು 5 ಎಕರೆ ಗಿಂತಲೂ ಕಡಿಮೆ ಇರಬೇಕು.
| ಮುನ್ಸಿಪಾಲ್ಟಿ ನೋಟಿಫೈ ಮಾಡಿದ ಪ್ರದೇಶದಲ್ಲಿ 1000 ಚದರು ಅಡಿಗಿಂತಲೂ ಹೆಚ್ಚಿನ ಗಾತ್ರದ ರೆಸಿಡೆನ್ಷಿಯಲ್ ಪ್ಲಾಟ್ ಇರಬಾರದು.
| ನೋಟಿಫೈ ಮಾಡದ ಪ್ರದೇಶದಲ್ಲಿ 200 ಯಾರ್ಡ್‌ಗಿಂತಲೂ ಕಡಿಮೆ ಜಾಗವಿರಬೇಕು.
| ಈ ಮೇಲಿನ ಎಲ್ಲ ನಿಬಂಧನೆಗಳನ್ನು ಪೂರೈಸಿದವರು ಮಾತ್ರ ಶೇ.10 ಇಡಬ್ಲ್ಯೂಎಸ್ ಮೀಸಲು ಪಡೆಯಲು ಅರ್ಹರಾಗಿರುತ್ತಾರೆ.
ರಾಜ್ಯಗಳಿಗೆ ಬಿಟ್ಟದ್ದು
ಶೇ.10 ಇಡಬ್ಲ್ಯೂಎಸ್ ಮೀಸಲು ಜಾರಿಯಾದ ಬಳಿಕವೂ ವಿವಾದ ಮುಂದುವರಿಯಿತು. ವಿಶೇಷವಾಗಿ ಬಿಜೆಪಿ ಆಡಳಿತ ರಾಜ್ಯಗಳು ಈ ಮೀಸಲು ಜಾರಿಗೆ ಪೈಪೋಟಿಗೆ ಬಿದ್ದವು. ಈ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ, ಕೇಂದ್ರ ಸರ್ಕಾರ ಕೂಡ ತನ್ನ ನೀತಿಯನ್ನು ಸ್ಪಷ್ಟಪಡಿಸಿತು. ಈ ಹೊಸ ಮೀಸಲಾತಿಯನ್ನು ಎಲ್ಲರೂ ಕಡ್ಡಾಯವಾಗಿ ಜಾರಿ ತರಬೇಕೇಂದೂ ಇಲ್ಲ. ಅದು ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ತನ್ನ ನಿಲುವನ್ನು ತಿಳಿಸಿತು. ಕೇಂದ್ರ ಸರ್ಕಾರ ರೂಪಿಸಿ ಮಾನದಂಡಗಳನ್ನೇ ಬಳಸಿಕೊಂಡ ಬಹುತೇಕ ರಾಜ್ಯಗಳ ಇಡಬ್ಲ್ಯೂಎಸ್ ಮೀಸಲಾತಿಯನ್ನು ಜಾರಿಗೆ ತಂದವು. ಆದರೆ, ಕೇರಳ ಮಾತ್ರ ಮಾನದಂಡಗಳಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡಿತು.
ಏಕೆ ವಿವಾದವಾಗಿತ್ತು?
| ಮೇಲ್ವರ್ಗ-ಜಾತಿಯ ಸಮುದಾಯಗಳಿಗೆ ಮೀಸಲು ಒದಗಿಸಿದ್ದರಿಂದ, ಮೀಸಲಾತಿಯ ಆಶಯಕ್ಕೆ ಧಕ್ಕೆ.
| ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾದ ನೀತಿಯನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
| ಈ ಹಿಂದೆ 1990ರಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲು ಕಲ್ಪಿಸಿದಾಗ, ಮೇಲ್ವರ್ಗದ ಸಮುದಾಯಗಳು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದವು.
| ಈ ಹಿನ್ನೆಲೆಯಲ್ಲಿ ಇಡಬ್ಲ್ಯೂಎಸ್ ಅನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು.
| ಇಡಬ್ಲ್ಯೂಎಸ್ ಮೀಸಲು ಸಂವಿಧಾನ ಮೂಲ ರಚನೆಯನ್ನೇ ಉಲ್ಲಂಘಿಸಲಿದೆ ಎಂದು ಕೆಲವು ಅರ್ಜಿದಾರರು ವಾದಿಸಿದರು.
| ಈ ಮೀಸಲು ಬಡತನಕ್ಕೆ ಪರ್ಯಾಯವಾಗಿ ಆರ್ಥಿಕ ಸಾಧನವಾಗಿ ರೂಪುಗೊಂಡಿಲ್ಲ.
| ಶೇ.10 ಇಡಬ್ಲ್ಯೂಎಸ್ ಮೀಸಲು, ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಶೇ.50 ಮೀಸಲು ಮಿತಿಯನ್ನು ಮೀರುತ್ತದೆ.
| ಎಸ್ ಸಿ ಶೇ.15, ಎಸ್ ಟಿ ಶೇ.7.5 ಮತ್ತು ಶೇ.27 ಹಿಂದುಳಿದ ವರ್ಗಗಳಿಗೆ ಮೀಸಲು ಕಲ್ಪಿಸಲಾಗಿದೆ. ಎಲ್ಲ ಸೇರಿದರೆ ಶೇ.49.5ರಷ್ಟಾಗುತ್ತದೆ. ಹಾಗಾಗಿ, ಶೇ.10 ಇಡಬ್ಲ್ಯೂಎಸ್ ಮೀಸಲು ಕಲ್ಪಿಸಿದರೆ, ಸುಪ್ರೀಂ ಕೋರ್ಟ್ ಇಂದಿರಾ ಸಾವ್ನೆ ಐತಿಹಾಸಿಕ ತೀರ್ಪು ಉಲ್ಲಂಘಿಸದಂತಾಗುತ್ತದೆ ಎಂದು ಕೆಲವರು ವಾದಿಸಿದರು.
| ಮತ್ತೆ ಕೆಲವರು ಅಸ್ತಿತ್ವದಲ್ಲಿರುವ ಯಾವುದೇ ರೀತಿಯ ಮೀಸಲಾತಿಯ ಅಡಿಯಲ್ಲಿ ಒಳಗೊಳ್ಳದ ಜನರಿಗೆ ಮಾತ್ರ ಇಡಬ್ಲ್ಯೂಎಸ್ ಮೀಸಲು ನೀಡಬೇಕೆಂದು ವಾದಿಸಿದರು.
| ನೀಟ್ ಪರೀಕ್ಷೆಯಲ್ಲಿ ಇಡಬ್ಲ್ಯೂಎಸ್ ಮೀಸಲಾತಿಯನ್ನು ತಿರಸ್ಕರಿಸಿ ಮದ್ರಾಸ್ ಹೈಕೋರ್ಟ್ ಕಳೆದ ವರ್ಷ ತೀರ್ಪು ಕೊಟ್ಟಿದ್ದು ಕೂಡ ವಿವಾದಕ್ಕೆ ಹೆಚ್ಚಾಗಲು ಕಾರಣವಾಗಿತ್ತು.
ಸರ್ಕಾರದ ವಾದ ಏನಾಗಿತ್ತು?
| ಶೇ.50 ಮೀಸಲು ಮಿತಿಯನ್ನು ಉಲ್ಲಂಘಿಸುತ್ತಿದೆ ಎಂಬ ಕಾರಣಕ್ಕೆ ಇಡಬ್ಲ್ಯೂಎಸ್ ಶೇ. 10 ಮೀಸಲಾತಿಯನ್ನು ನಿರಾಕರಿಸುವುದು ತಪ್ಪು.
| ವಿಶೇಷ ಸಂದರ್ಭಗಳಲ್ಲಿ ಕೋರ್ಟ್ ವಿಧಿಸಿರುವ ಈ ಮೀಸಲು ಮಿತಿಯನ್ನು ಮೀರಬಹುದಾಗಿದೆ.
| ಬ್ಯಾಕ್‌ವರ್ಡ್ ಎಂಬ ಪದವನ್ನು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಎಂಬರ್ಥದಲ್ಲಿ ವ್ಯಾಖ್ಯಾನಿಸಲಾಗಿದೆ.
| ಈ ಕಾರಣಕ್ಕಾಗಿ ಸರ್ಕಾರಕ್ಕೆ ಹೊಸ ವರ್ಗಕ್ಕೆ ಮೀಸಲು ನೀಡಲು ಹೊಸ ಮೀಸಲಾತಿಯನ್ನು ನೀತಿ ಅಗತ್ಯವಾಗಿತ್ತು.
| ಅಸ್ತಿತ್ವದಲ್ಲಿರುವ ವರ್ಗಗಳಿಗೆ ಈ ಹೊಸ ಮೀಸಲು ಅನ್ಯಾಯ ಮಾಡುತ್ತದೆ ಮತ್ತು ಅವರ ಮೀಸಲಿನಲ್ಲಿ ಪಾಲು ಪಡೆಯುತ್ತದೆ ಎಂಬ ವಾದವನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ತಳ್ಳಿ ಹಾಕಿತು.
| ಮೀಸಲಿಗೆ ಅನುಗುಣವಾಗಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶಗಳನ್ನು ಹೆಚ್ಚಿಸುವ ವಾಗ್ದಾನ ಮಾಡಿತು.
| ಸಂವಿಧಾನದ ಪೀಠಿಕೆಯಲ್ಲಿ ಕಡ್ಡಾಯವಾಗಿರುವ ಬಡ ವರ್ಗಗಳ ಉನ್ನತಿಗಾಗಿ ಕೆಲಸ ಮಾಡುವ ವಿಶೇಷ ಅಧಿಕಾರವನ್ನು ಸರ್ಕಾರ ಹೊಂದಿದೆ.
| ಮೀಸಲಾತಿಗಾಗಿ ಆರ್ಥಿಕ ಮಾನದಂಡವನ್ನು ಬಳಸುವುದು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿತು.
ಮೀಸಲಿನಿಂದ ಏನು ಲಾಭ?
ಶೇ.10 ಇಡಬ್ಲ್ಯೂಎಸ್ ಮೀಸಲಿನಿಂದ ಶೈಕ್ಷಣಿಕವಾಗಿ ಮತ್ತು ಉದ್ಯೋಗದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಲಾಭವಾಗಲಿದೆ. ವಿಶೇಷವಾಗಿ ಮೇಲ್ವರ್ಗದ ಬಡವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಈ ಮೀಸಲು.
ಇದನ್ನೂ ಓದಿ | EWS Quota | ಶೇ.10 ಇಡಬ್ಲ್ಯೂಎಸ್ ಮೀಸಲು ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಐವರ ಪೈಕಿ ಇಬ್ಬರು ಜಡ್ಜ್ ಭಿನ್ನ ತೀರ್ಪು!