ಜಗತ್ತಿನ ಅತ್ಯಂತ ಪ್ರಭಾವಿ ಗುಂಪು ಎನಿಸಿಕೊಂಡಿರುವ ಜಿ 20 ಅಧ್ಯಕ್ಷತೆಯನ್ನು ವಹಿಸಿಕೊಂಡು, ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಭಾರತವು ಮುಂದಡಿ ಇಟ್ಟಿದೆ. ಈ ಗುಂಪಿನ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವ ಸದಸ್ಯ ರಾಷ್ಟ್ರವು, ಆ ವರ್ಷ ಪೂರ್ತಿ ಜಿ 20 ಕಾರ್ಯಸೂಚಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಡಿ.13ರಿಂದ ಮೂರು ದಿನಗಳ ಕಾಲ ಸದಸ್ಯ ರಾಷ್ಟ್ರಗಳ ಮೊದಲ ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ನಿಯೋಗಿಗಳ (ಎಫ್ಸಿಬಿಡಿ) ಸಭೆ ನಡೆಯುತ್ತಿದೆ. ಇದರೊಂದಿಗೆ ಭಾರತ ಅಧ್ಯಕ್ಷತೆಯ ಕಾರುಬಾರು ಶುರುವಾಯಿತು. ಜಿ 20 ಶೃಂಗ ಸಭೆಯು 2023ರ ಸೆಪ್ಟೆಂಬರ್‌ನಲ್ಲಿ ನಡೆಯಲಿದ್ದು, ಅಲ್ಲಿಯವರೆಗೆ ದೇಶಾದ್ಯಂತ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ(ವಿಸ್ತಾರ Explainer).
ಜಿ 20 ಅಧ್ಯಕ್ಷತೆಯ ಜವಾಬ್ದಾರಿ ಜಗತ್ತಿನ ಎದುರು ಭಾರತದ ವೈವಿಧ್ಯತೆ, ಸಂಸ್ಕೃತಿ, ಶಕ್ತಿ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸಲು ಎದುರಾಗಿರುವ ಬಹುದೊಡ್ಡ ಅವಕಾಶವಾಗಿದೆ. ಈ ಅವಕಾಶವನ್ನು ಭಾರತವು ಸದುಪಯೋಗಪಡಿಸಿಕೊಳ್ಳಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜಕೀಯ ಪಕ್ಷಗಳ ಸಹಕಾರ ಕೋರಿ, ವಿಶ್ವದೆದುರು ನಮ್ಮ ಹಿರಿಮೆಯನ್ನು ತೋರ್ಪಡಿಸುವ ಬಗ್ಗೆ ಮಾತನಾಡಿದ್ದಾರೆ. ಅದೇ ದಾರಿಯಲ್ಲಿ ಈಗ ಕಾರ್ಯಕ್ರಮಗಳು ನಡೆಯತ್ತಿವೆ. ಜಿ 20 ಅಧ್ಯಕ್ಷತೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಭಾರತವು ಏಕ ಭೂಮಿ, ಏಕ ಕುಟುಂಬ ಮತ್ತು ಏಕ ಭವಿಷ್ಯ ಎಂಬ ಥೀಮ್‌ನೊಂದಿಗೆ ಮುನ್ನಡೆಯುತ್ತಿದೆ.
ಜಿ 20 ಯಾಕೆ ಮಹತ್ವದ್ದು?
ಜಿ 20 ಎಂಬುದು ಜಗತ್ತಿನ ಅತಿ ದೊಡ್ಡ ಆರ್ಥಿಕತೆಗಳ ವೇದಿಕೆಯಾಗಿದೆ. ಜಾಗತಿಕ ಸಮಸ್ಯೆಗಳನ್ನು ಎದುರಿಸಲು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿಯಮಿತವಾಗಿ ಒಂದೆಡೆ ಸಭೆ ಸೇರಿ ಸದಸ್ಯ ರಾಷ್ಟ್ರಗಳು ಚರ್ಚೆ ನಡೆಸುತ್ತವೆ. ಹಾಗೆಯೇ, ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ವೃದ್ಧಿ, ಸಮನ್ವಯತೆಯನ್ನು ಸಾಧಿಸಲು ಇದೊಂದು ಮಹತ್ವದ ವೇದಿಕೆಯಾಗಿದೆ. ಪ್ರಪಂಚದ ಪ್ರಮುಖ ರಾಷ್ಟ್ರಗಳು ಈ ವೇದಿಕೆಯ ಭಾಗವಾಗಿರುವುದರಿಂದ ಇದೊಂದು ಪ್ರಭಾವಿ ಗುಂಪು ಆಗಿದೆ. ಹಾಗಾಗಿ, ಜಿ 20 ಕೂಟಕ್ಕೆ ಹೆಚ್ಚಿನ ಮಹತ್ವವಿದೆ.
ಜಿ 20 ಅಧ್ಯಕ್ಷತೆಯು ಏನೆಲ್ಲ ಒಳಗೊಂಡಿರುತ್ತದೆ?
ಜಿ 20 ಗ್ರೂಪ್‌ಗೆ ಯಾವುದೇ ಶಾಶ್ವತವಾದ ಸಚಿವಾಲಯ ಇಲ್ಲ. ಈ ಸಮೂಹದ ಕಾರ್ಯಸೂಚಿಯನ್ನು ಜಾರಿ ಮಾಡುವುದಕ್ಕಾಗಿ ಪ್ರತಿ ವರ್ಷ ಒಂದೊದು ರಾಷ್ಟ್ರವು ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತದೆ. ಈ ವರ್ಷ ಭಾರತವು ವಹಿಸಿಕೊಂಡಿದ್ದು, ಈ ಹಿಂದಿನ ವರ್ಷ ಇಂಡೋನೇಷ್ಯಾ ವಹಿಸಿಕೊಂಡಿತ್ತು. ಜಿ 20 ಕಾರ್ಯಸೂಚಿಯನ್ನು ಎರಡು ತಂಡಗಳು ಜಾರಿ ಮಾಡುತ್ತವೆ. ಸದಸ್ಯ ರಾಷ್ಟ್ರಗಳ ವಿತ್ತ ಸಚಿವರು ಮತ್ತು ಸದಸ್ಯ ರಾಷ್ಟ್ರಗಳ ನಾಯಕರ ರಾಯಭಾರಿಗಳ ಮೂಲಕ ಒಪ್ಪಿಕೊಳ್ಳಲಾದ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಭಾರತದ ಬಳಿಕ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಜಿ 20 ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿವೆ.
ಅಧ್ಯಕ್ಷತೆಯ ರಾಷ್ಟ್ರಗಳು ಏನು ಮಾಡುತ್ತವೆ?
ಅಧ್ಯಕ್ಷತೆಯ ಜವಾಬ್ದಾರಿ ವಹಿಸಿಕೊಂಡ ಸದಸ್ಯ ರಾಷ್ಟ್ರವು ಆ ಒಂದು ವರ್ಷ ಪೂರ್ತಿ ಜಿ 20 ರಾಷ್ಟ್ರಗಳ ಕಾರ್ಯಸೂಚಿ ಅನುಷ್ಠಾನದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತವೆ. ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಅಧ್ಯಕ್ಷತೆ ವಹಿಸಿಕೊಂಡ ರಾಷ್ಟ್ರ ನಡೆಸಿಕೊಡುತ್ತದೆ. ಭಾರತದ ಮಟ್ಟಿಗೆ ಹೇಳುವುದಾದರೆ, ದೇಶದ ವಿವಿಧ 50 ನಗರಗಳಲ್ಲಿ ಸುಮಾರು 200 ಸಭೆಗಳನ್ನು ನಡೆಸಲಿದೆ. 2023ರ ಸೆಪ್ಟೆಂಬರ್‌ನಲ್ಲಿ ಅಂತಿಮ ಜಿ20 ಶೃಂಗ ನಡೆಯಲಿದೆ. ಅದರೊಂದಿಗೆ ಅಧ್ಯಕ್ಷತೆಯ ರಾಷ್ಟ್ರದ ಜವಾಬ್ದಾರಿಯು ಮುಕ್ತಾಯಗೊಳ್ಳುತ್ತದೆ. ಇಷ್ಟೂ ಕಾರ್ಯಕ್ರಮಗಳಲ್ಲಿ ಸದಸ್ಯ ರಾಷ್ಟ್ರಗಳ ನಾನಾ ಸಚಿವರು, ಅಧಿಕಾರಿಗಳು, ಸಮಾಜದ ಗಣ್ಯ ವ್ಯಕ್ತಿಗಳು, ತಜ್ಞರು ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಅಂತಿಮವಾಗಿ ನಡೆಯುವ ಶೃಂಗಸಭೆಯಲ್ಲಿ ಜಿ 20 ಸದಸ್ಯ ರಾಷ್ಟ್ರಗಳ ಸುಮಾರು 30 ನಾಯಕರು ಪಾಲ್ಗೊಳ್ಳುತ್ತಾರೆ. ಇದರಲ್ಲಿ ಆಹ್ವಾನಿತ ರಾಷ್ಟ್ರಗಳ ನಾಯಕರೂ ಇರುತ್ತಾರೆ.
ರಾಜಕೀಯವಾಗಿ ಏನು ಲಾಭ?
ಈಗ ನರೇಂದ್ರ ಮೋದಿ ಅವರು ಭಾರತದ ಜನಪ್ರಿಯ ನಾಯಕರು. ಜಿ 20 ಅಧ್ಯಕ್ಷತೆಯು ತಮ್ಮ ನಾಯಕತ್ವದಲ್ಲೇ ದೊರೆಯಿತು ಎಂದು ಬಿಂಬಿಸಿಕೊಳ್ಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ 2024ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹಾಗಾಗಿ, ಸೆಪ್ಟೆಂಬರ್ 2023ರಲ್ಲಿ ನಡೆಯಲಿರುವ ಜಿ 20 ಶೃಂಗವು ಮೋದಿ ಪ್ರತಿನಿಧಿಸುವ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಲಾಭ ಮಾಡಿಕೊಡಬಹುದು ಎಂಬ ಲೆಕ್ಕಾಚಾರವೂ ಇದೆ.
ಈಗಾಗಲೇ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಜತೆಗೆ ಅತ್ಯುತ್ತಮ ಸಂಬಂಧ ಹೊಂದಿದ್ದಾರೆ. ಜಿ 20 ಜವಾಬ್ದಾರಿಯಿಂದಾಗಿ ಉಳಿದ ಸದಸ್ಯ ರಾಷ್ಟ್ರಗಳೊಂದಿಗೆ ಭಾರತದ ನಾಯಕತ್ವದ ಸಂಬಂಧ ಮತ್ತು ದ್ವಿಪಕ್ಷೀಯ ಸಂಬಂಧಗಳು ಉನ್ನತಮಟ್ಟಕ್ಕೆ ತಲಪಬಹುದು. ಆದರೂ, ಪ್ರಸ್ತುತ ಸಂಕೀರ್ಣವಾದ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯು ಬಹು ಬಿಕ್ಕಟ್ಟುಗಳಿಗೆ ಅಂತಾರಾಷ್ಟ್ರೀಯ ಪ್ರತಿಕ್ರಿಯೆಯನ್ನು ರೂಪಿಸಲು ಭಾರತ ಮತ್ತು ಮೋದಿಗೆ ಸವಾಲಾಗಿ ಪರಿಣಮಿಸುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಜಿ 20ಯಂಥ ಜಗತ್ತಿನ ಪ್ರಭಾವಿ ಕೂಟವನ್ನು ಯಶಸ್ವಿಯಾಗಿ ಮುನ್ನಡೆಸುವುದು ಭಾರತದ ಗರಿಮೆಯನ್ನು ಹೆಚ್ಚಿಸಲಿದೆ.
ಭಾರತಕ್ಕೇನು ಉಪಯೋಗ?
| ಜಿ20 ಅಧ್ಯಕ್ಷತೆಯಿಂದ ಒಂದು ವರ್ಷದ ಮಟ್ಟಿಗೆ ಜಗತ್ತಿನ ಪ್ರಭಾವಿ ಗುಂಪಿನ ನಾಯಕತ್ವವು ದೊರೆಯಲಿದೆ.
| ಪ್ರಪಂಚದ ಎದುರು ಭವ್ಯ ಭಾರತದ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸಲು ದೊಡ್ಡ ಅವಕಾಶ ಸಿಗಲಿದೆ.
| ಪ್ರಧಾನಿ ನೇರಂದ್ರ ಮೋದಿ ಅವರು ಜಾಗತಿಕ ನಾಯಕತ್ವಕ್ಕೆ ಮತ್ತಷ್ಟು ಮೆರುಗು ದೊರೆಯಲಿದೆ.
| ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಹೆಚ್ಚಿಸಲು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿದೆ.
| ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ಹರ್ಷ ವಿ ಶೃಂಗ್ಲಾ ಅವರನ್ನು ಭಾರತದ ಜಿ 20 ಅಧ್ಯಕ್ಷತೆಯ ಮುಖ್ಯ ಸಮನ್ವಯಕಾರರಾಗಿ ನೇಮಕ ಮಾಡಲಾಗಿದೆ.
| ಭಾರತದ ನಾಯಕತ್ವದಲ್ಲಿ ಜಿ 20 ಕಾರ್ಯಸೂಚನೆಯನ್ನು ಜಾರಿ ಮಾಡಲಾಗುತ್ತದೆ.
| ಒಂದು ವರ್ಷದ ಮಟ್ಟಿಗೆ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಭಾರತವು ಪ್ರಮುಖ ಪಾತ್ರ ವಹಿಸಲಿದೆ.
|ಪ್ರಪಂಚದ ಎದುರು ಭಾರತದ ಪ್ರಾಚೀನ ಮತ್ತು ಆಧುನಿಕ ಹೆಗ್ಗಳಿಕೆಯನ್ನು ಪ್ರಚುರಪಡಿಸುವ ಅವಕಾಶ ದೊರೆಯಲಿದೆ.
ಏನಿದು ಜಿ 20?
ಜಿ 20 ಅಥವಾ ಗ್ರೂಪ್ ಆಫ್ ಟ್ವೆಂಟಿ ಎನ್ನುವುದು ವಿಶ್ವದ ಪ್ರಮುಖ ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಅಂತಾರಾಷ್ಟ್ರೀಯ ಒಕ್ಕೂಟ. ಇದರಲ್ಲಿ ಭಾರತ, ಆಸ್ಟ್ರೇಲಿಯಾ, ಅರ್ಜೆಂಟೀನಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೊನೇಷ್ಯಾ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟವಿದೆ. ಅಂದರೆ 19 ದೇಶಗಳು ಮತ್ತು ಐರೋಪ್ಯ ಒಕ್ಕೂಟವಿದೆ. ಭಾರತ ಇದರಲ್ಲಿ 1999ರಿಂದಲೇ ಸದಸ್ಯತ್ವ ಪಡೆದಿದೆ. ಜಿ 20 ಒಕ್ಕೂಟವು ಜಾಗತಿಕ ಜಿಡಿಪಿಯ 85% ಪಾಲನ್ನು ಪ್ರತಿನಿಧಿಸುತ್ತದೆ. ಅಂತಾರಾಷ್ಟ್ರೀಯ ಆರ್ಥಿಕ ಸಹಕಾರವನ್ನು ಇದು ಒಳಗೊಂಡಿದೆ. ಜಗತ್ತಿನ ಮೂರನೇ ಎರಡರಷ್ಟು ಜನಸಂಖ್ಯೆಯ ಪ್ರಾತಿನಿಧ್ಯವನ್ನು ಹೊಂದಿದೆ. ಭೂಮಿಯ 60% ಪಾಲನ್ನು ಈ ರಾಷ್ಟ್ರಗಳು ಹೊಂದಿವೆ. ಉದ್ಯಮದಲ್ಲಿ ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಹೊಂದಿದೆ.
23 ವರ್ಷಗಳ ಹಿಂದೆ ಸ್ಥಾಪನೆ
ಈ ಜಿ 20 ವೇದಿಕೆಯನ್ನು 1999ರಲ್ಲಿ ಸ್ಥಾಪಿಸಲಾಗಿತ್ತು. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪರಿಹಾರೋಪಾಯಗಳ ಬಗ್ಗೆ ಜಾಗತಿಕ ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಬಗ್ಗೆ ಚರ್ಚಿಸಲು ವೇದಿಕೆಯ ಅನಿವಾರ್ಯತೆ ಉಂಟಾಗಿತ್ತು. ಒಕ್ಕೂಟದಲ್ಲಿನ ದೇಶಗಳ ಪ್ರಧಾನಿ, ವಿದೇಶಾಂಗ ಸಚಿವ, ಹಣಕಾಸು ಸಚಿವ ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಶೃಂಗದಲ್ಲಿ ಭಾಗವಹಿಸುತ್ತಾರೆ. ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಶೃಂಗ ಸಮಾವೇಶ ನೆರವೇರುತ್ತದೆ. 2009ರ ಸಮಾವೇಶದಲ್ಲಿ ಆರ್ಥಿಕ ಮತ್ತು ಹಣಕಾಸು ಸಹಕಾರಕ್ಕೆ ಆದ್ಯತೆ ನೀಡಲಾಗಿತ್ತು. ಅಮೆರಿಕ, ಜಪಾನ್, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಮೊದಲಾದ ದೇಶಗಳು ಅಧ್ಯಕ್ಷತೆ ವಹಿಸಿವೆ.
ಎರಡನೇ ಜಾಗತಿಕ ಯುದ್ಧದ ಬಳಿಕ, ಆರ್ಥಿಕ ಮತ್ತು ಇತರ ವಿಚಾರಗಳಲ್ಲಿ ಅಂತಾರಾಷ್ಟ್ರೀಯ ಸಹಕಾರಕ್ಕೆ ರಾಷ್ಟ್ರಗಳು ಒಕ್ಕೂಟಗಳನ್ನು ರಚಿಸಿದವು. ಈ ಸರಣಿಯಲ್ಲಿ ಜಿ 20 ಕೂಡ ಒಂದಾಗಿದೆ. 90ರ ದಶಕದಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದ ಬಳಿಕ ಈ ಒಕ್ಕೂಟ ರಚನೆಯಾಯಿತು. ಮುಖ್ಯವಾಗಿ ಏಷ್ಯಾದ ರಾಷ್ಟ್ರಗಳು ಇದಕ್ಕಾಗಿ ಸೇರಿದವು. ಭಾರತವು ಬಾಂಗ್ಲಾದೇಶ, ಈಜಿಪ್ತ್, ಮಾರಿಷಸ್, ನೆದರ್ಲೆಂಡ್ಸ್, ಒಮಾನ್, ಸಿಂಗಾಪುರ, ಯುಎಇಯನ್ನು 2023ರ ಜಿ 20ರ ಶೃಂಗಕ್ಕೆ ಅತಿಥಿ ರಾಷ್ಟ್ರಗಳಾಗಿ ಆಹ್ವಾನಿಸಿದೆ. ಜಾಗತಿಕ ಮಟ್ಟದಲ್ಲಿ ಜಿ 20 ತನ್ನ ಪ್ರಭಾವಳಿಯನ್ನು ವಿಸ್ತರಿಸಿದ್ದರೂ, ಇದರ ಕಾರ್ಯಸೂಚಿಗಳ ಅನುಷ್ಠಾನದಲ್ಲಿ ಕುಂದು ಕೊರತೆಗಳಿವೆ ಎನ್ನುತ್ತಾರೆ ತಜ್ಞರು.
ಭಾರತದ ಎದುರಿನ ಸವಾಲುಗಳೇನು?
| ಜಿ 20 ಒಕ್ಕೂಟದ ಆದ್ಯತೆಗಳು ಹಲವು
ಸಮಗ್ರತೆ, ಸಮಾನತೆ, ಸುಸ್ಥಿರ ಬೆಳವಣಿಗೆ, ಮಹಿಳಾ ಸಬಲೀಕರಣ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ತಂತ್ರಜ್ಞಾನ ಆಧರಿತ ಅಭಿವೃದ್ಧಿ, ಹವಾಮಾನ ಬದಲಾವಣೆ, ಜಾಗತಿಕ ಆಹಾರ ಭದ್ರತೆ, ಇಂಧನ ಭದ್ರತೆ ಮತ್ತಿತರ ವಿಷಯಗಳು ಇದರಲ್ಲಿವೆ.
| ರಷ್ಯಾ-ಉಕ್ರೇನ್ ಸಂಘರ್ಷ
ರಷ್ಯಾ-ಉಕ್ರೇನ್ ಸಂಘರ್ಷ ಕಳೆದ ಫೆಬ್ರವರಿಯಲ್ಲಿ ಆರಂಭವಾದ ಬಳಿಕ ಅದರ ದುಷ್ಪರಿಣಾಮ ಇಡೀ ಜಗತ್ತನ್ನು ಆವರಿಸಿದೆ. ಹೀಗಾಗಿ ಈ ಬಿಕ್ಕಟ್ಟನ್ನು ಉಪಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಜಿ 20 ಶೃಂಗದ ನಾಯಕನಾಗಿ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ. ಭಾರತದ ನಿಲುವನ್ನು ಜಗತ್ತು ಎದುರು ನೋಡುತ್ತಿದೆ.
| ವಿಶ್ವಾಸಾರ್ಹತೆ ವೃದ್ಧಿ
ಕಳೆದ ಕೆಲ ತಿಂಗಳುಗಳಿಂದ ಜಿ 20 ಒಕ್ಕೂಟದ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ. ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಭಿನ್ನಮತವನ್ನು ಉಪಶಮನಗೊಳಿಸಬೇಕಾದ ಜವಾಬ್ದಾರಿ ಭಾರತದ ಹೆಗಲ ಮೇಲೇರಲಿದೆ. ಈ ನಿಟ್ಟಿನಲ್ಲಿ ನವೀನ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ.
| ಆಂತರಿಕ ಆಡಳಿತ ಸುಧಾರಣೆ
ಒಕ್ಕೂಟದ ಎಲ್ಲ ಸದಸ್ಯರೊಡನೆ ಐಕ್ಯತೆ, ಆಂತರಿಕ ಆಡಳಿತ ಸುಧಾರಣೆ, ಸಮಗ್ರತೆಗೆ ಭಾರತ ರಚನಾತ್ಮಕವಾಗಿ ಕಾರ್ಯಪ್ರವೃತ್ತವಾಗಬೇಕಾಗಿದೆ.
| ಹವಾಮಾನ ಸಂರಕ್ಷಣೆ
ಅಭಿವೃದ್ಧಿ ಹೊಂದಿದ ದೇಶಗಳು ಸ್ವಚ್ಛ ಇಂಧನ ಮತ್ತು ನವೀಕರಿಸಬಹುದಾದ ಇಂಧನಗಳ ಕುರಿತ ತಂತ್ರಜ್ಞಾನವನ್ನು ಅಭಿವೃದ್ಧಿಶೀಲ ಮತ್ತು ಬಡ ದೇಶಗಳಿಗೆ ವರ್ಗಾಯಿಸಬೇಕು. ಭಾರತ ಸೌರಶಕ್ತಿಯ ಬಳಕೆಯಲ್ಲಿ ತನ್ನ ಸಾಧನೆಯನ್ನು ಪ್ರಸ್ತುತಪಡಿಸಬೇಕಾಗಿದೆ.
| ಜಾಗತಿಕ ಆರ್ಥಿಕ ಬಿಕ್ಕಟ್ಟು
ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಅಸ್ಥಿರತೆ ಜಗತ್ತನ್ನು ಕಾಡುತ್ತಿದೆ. ಈ ಸನ್ನಿವೇಶವನ್ನು ಎದುರಿಸುವ ನಿಟ್ಟಿನಲ್ಲಿ ಭಾರತವು ಜಿ20 ಒಕ್ಕೂಟದ ನಾಯಕನಾಗಿ, ಐಎಂಎಫ್, ಡಬ್ಲ್ಯುಟಿಒ ಮತ್ತು ಒಇಸಿಡಿ ಜತೆಗೆ ಕಾರ್ಯನಿರ್ವಹಿಸಬೇಕಾಗುತ್ತದೆ.
| ಆಹಾರ ಭದ್ರತೆಯ ಸವಾಲು
ರಷ್ಯಾ-ಉಕ್ರೇನ್ ಸಂಘರ್ಷದ ಬಳಿಕ ಆಹಾರ ಭದ್ರತೆಯ ಸವಾಲು ಎದುರಾಗಿದೆ. ರಷ್ಯಾ ಮತ್ತು ಉಕ್ರೇನ್‌ನಿಂದ ರಫ್ತಾಗುತ್ತಿದ್ದ ಆಹಾರ ಧಾನ್ಯಗಳಿಗೆ ಅಭಾವ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬೇಕದ ಕಾರ್ಯತಂತ್ರಗಳನ್ನು ಭಾರತ ಅಂತಿಮಪಡಿಸಬೇಕಾಗಿದೆ.
ಬೆಂಗಳೂರಿನಲ್ಲಿ ಮೊದಲ ಸಭೆ
ಬೆಂಗಳೂರಿನಲ್ಲಿ ಡಿಸೆಂಬರ್ 13ರಿಂದ 15ರವರೆಗೆ, ಮೊದಲ ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ನಿಯೋಗಿಗಳ (ಎಫ್ಸಿಬಿಡಿ) ಸಭೆ ನಡೆಯುತ್ತಿದೆ. ಜಿ 20 ಫೈನಾನ್ಸ್ ಟ್ರ್ಯಾಕ್ನ ಕಾರ್ಯಸೂಚಿ ಮೇಲಿನ ಚರ್ಚೆಗಳನ್ನು ಆರಂಭಿಸುವ ಸಲುವಾಗಿ ಈ ಸಭೆ ಹಮ್ಮಿಕೊಳ್ಳಲಾಗಿದೆ. ಹಣಕಾಸು ಸಚಿವಾಲಯ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಂಟಿಯಾಗಿ ಆಯೋಜಿಸಿವೆ. ಜಿ 20 ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳ ನೇತೃತ್ವದ ಜಿ 20 ಫೈನಾನ್ಸ್ ಟ್ರ್ಯಾಕ್ ಬಂಡವಾಳ ಮತ್ತು ಆರ್ಥಿಕ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ. ಇದು ಜಾಗತಿಕ ಆರ್ಥಿಕ ಚರ್ಚೆ ಮತ್ತು ನೀತಿ ಸಮನ್ವಯಕ್ಕೆ ಪರಿಣಾಮಕಾರಿ ವೇದಿಕೆಯನ್ನು ಒದಗಿಸುತ್ತದೆ. 2023ರ ಫೆಬ್ರವರಿ 23ರಿಂದ 25ರವರೆಗೆ ಬೆಂಗಳೂರಿನಲ್ಲಿ, ಹಣಕಾಸು ಸಚಿವರ ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳ ಮೊದಲ ಸಭೆ ನಡೆಯಲಿದೆ.
ಮೂರು ದಿನಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ಜಿ 20 ಸದಸ್ಯ ರಾಷ್ಟ್ರಗಳು ಮತ್ತು ಭಾರತದಿಂದ ಆಹ್ವಾನಿಸಲಾದ ಇತರ ಹಲವು ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಜಾಗತಿಕ ಆರ್ಥಿಕತೆ, ಜಾಗತಿಕ ಆರ್ಥಿಕ ದೃಷ್ಟಿಕೋನ, ಅಂತಾರಾಷ್ಟ್ರೀಯ ಹಣಕಾಸು ರಚನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು, ಸುಸ್ಥಿರ ಹಣಕಾಸು, ಜಾಗತಿಕ ಆರೋಗ್ಯ, ಅಂತಾರಾಷ್ಟ್ರೀಯ ತೆರಿಗೆ ಮತ್ತು ಹಣಕಾಸು ವಲಯದ ಸಮಸ್ಯೆಗಳನ್ನು ಒಳಗೊಂಡ ಜಾಗತಿಕ ಆರ್ಥಿಕತೆಯ ಪ್ರಸ್ತುತ ಪ್ರಮುಖ ವಿಷಯಗಳನ್ನು ಜಿ 20 ಫೈನಾನ್ಸ್ ಟ್ರ್ಯಾಕ್ ಚರ್ಚಿಸಲಿದೆ.
ಕಾರ್ಯಸೂಚಿಗಳೇನು?
- 21ನೇ ಶತಮಾನದ ಜಾಗತಿಕ ಸವಾಲುಗಳನ್ನು ಎದುರಿಸಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳನ್ನು ಪುನರುಜ್ಜೀವಗೊಳಿಸುವುದು.
- ಭವಿಷ್ಯದ ದಿನಗಳಲ್ಲಿ ಹಣಕಾಸು ಒದಗಿಸುವುದು, ಜಾಗತಿಕ ಸಾಲದ ದೌರ್ಬಲ್ಯಗಳ ನಿರ್ವಹಣೆ, ಹಣಕಾಸು ಅಳವಡಿಕೆ ಮತ್ತು ಉತ್ಪಾದಕತಾ ಲಾಭಗಳ ಮುನ್ನಡೆ, ಹವಾಮಾನ ಕ್ರಮ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಹಣಕಾಸು ಒದಗಿಸುವುದು.
- ಬೆಂಬಲವಿಲ್ಲದ ಕ್ರಿಪ್ಟೋಗಳಿಗೆ ಜಾಗತಿಕವಾಗಿ ಸಂಘಟಿತ ವಿಧಾನ ಮತ್ತು ಅಂತರಾಷ್ಟ್ರೀಯ ತೆರಿಗೆ ಕಾರ್ಯಸೂಚಿಯನ್ನು ತಯಾರಿಸುವುದು.
ಇದನ್ನೂ ಓದಿ | Mann ki baat | ಭಾರತಕ್ಕೆ ಜಿ20 ಅಧ್ಯಕ್ಷತೆ ಅತಿ ದೊಡ್ಡ ಅವಕಾಶ, ಇದನ್ನು ಬಳಸಿಕೊಳ್ಳಬೇಕು: ಪ್ರಧಾನಿ ಮೋದಿ