ಮಹಾರಾಷ್ಟ್ರದಲ್ಲಿ ಸಚಿವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳೆಯ ಈಗ 37ಕ್ಕೂ ಅಧಿಕ ಶಾಸಕರ ಬೆಂಬಲ ಘೋಷಿಸಿಕೊಂಡಿದೆ. ಇದು ನಿಜವಾದರೆ ನೈಜ ಶಿವಸೇನೆ ತಮ್ಮದೇ ಎಂದು ಶಿಂಧೆ ಹಕ್ಕುಸ್ವಾಮ್ಯ ಸಾಧಿಸಬಹುದು. ಶಿವಸೇನೆ ಎರಡಾಗಿ ಒಡೆಯುವುದಂತೂ ಖಚಿತವಾಗಿದೆ.
ಆದರೆ ಶಿವಸೇನೆಯ ಚುನಾವಣಾ ಚಿಹ್ನೆಯಾಗಿರುವ “ಬಿಲ್ಲು ಬಾಣʼ ಯಾರನ್ನು ಸೇರಲಿದೆ? ಇದು ಕುತೂಹಲಕಾರಿ ಪ್ರಶ್ನೆಯಾಗಿ ಎದುರು ನಿಲ್ಲಲಿದೆ.
ಶಿಂಧೆ ಈಗಾಗಲೇ ಶಿವಸೇನೆ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರನ್ನು ಬದಲಿಸಿದ್ದೇನೆಂದು ಹೇಳೀದ್ದಾರೆ. 35 ಸೇನಾ ಶಾಸಕರು ಸಹಿ ಮಾಡಿದ ಪತ್ರವನ್ನೂ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್‌ಗೆ ನೀಡಿದ್ದಾರೆ. ಬಂಡಾಯದಿಂದ ದಿಗ್ಭ್ರಮೆಗೊಂಡಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ರಾತ್ರಿ ತಮ್ಮ ಅಧಿಕೃತ ನಿವಾಸ ಖಾಲಿ ಮಾಡಿದ್ದಾರೆ. ಭಿನ್ನಮತೀಯರಿಗೆ ಭಾವನಾತ್ಮಕ ಮನವಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗಿನ “ಅಸ್ವಾಭಾವಿಕ” ಮೈತ್ರಿಯಿಂದ ಪಕ್ಷವು ಹೊರನಡೆಯಬೇಕು ಎಂದು ಶಿಂಧೆ ಹಠ ಹಿಡಿದಿದ್ದಾರೆ. ಈ ಬೇಡಿಕೆಗೆ ಠಾಕ್ರೆ ಅನುಕೂಲಕರವಾಗಿ ಪ್ರತಿಕ್ರಿಯಿಸಿಲ್ಲ.
ಏಕನಾಥ್ ಶಿಂಧೆ ಪಾಳಯ ಈಗ ಶಿವಸೇನೆಯ ‘ಬಿಲ್ಲು ಬಾಣ’ ಚಿಹ್ನೆಯ ಮೇಲೆ ಹಕ್ಕು ಸಾಧಿಸಲು ತಯಾರಿ ನಡೆಸುತ್ತಿದೆ ಎಂದು ಹೇಳಲಾಗಿದೆ. ಪಕ್ಷದ ಚಿಹ್ನೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
1968ರ ಚಿಹ್ನೆಗಳ ಆದೇಶ
ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ- 1968ರಲ್ಲಿ ಪಕ್ಷಗಳನ್ನು ಗುರುತಿಸುವ ಮತ್ತು ಚಿಹ್ನೆಗಳನ್ನು ಹಂಚುವ ಚುನಾವಣಾ ಆಯೋಗದ ಅಧಿಕಾರದ ಕುರಿತು ಹೇಳುತ್ತದೆ. ಒಂದು ಚಿಹ್ನೆಗಾಗಿ ಕಾದಾಡುತ್ತಿರುವ ಬಣಗಳು ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಕ್ಕೆ ಸೇರಿದ್ದರೆ, ಆದೇಶದ ಪ್ಯಾರಾಗ್ರಾಫ್ 15ರ ಪ್ರಕಾರ EC ಎರಡರಲ್ಲಿ ಯಾವುದೋ ಒಂದು ಬಣದ ಪರವಾಗಿ ನಿರ್ಧರಿಸಬಹುದು; ಅಥವಾ ಎರಡೂ ಬಣಗಳಿಗೂ ಚಿಹ್ನೆಯನ್ನು ನಿರಾಕರಿಸಬಹುದು.
“ಪ್ರತಿಯೊಂದು ಬಣವೂ ತಾನೇ ನೈಜ ಪಕ್ಷವೆಂದು ಹೇಳಿಕೊಳ್ಳುತ್ತದೆ. ಹೀಗಾಗಿ ಪ್ರಕರಣದ ಬಗ್ಗೆ ಲಭ್ಯವಿರುವ ಎಲ್ಲಾ ಸಂಗತಿಗಳು ಮತ್ತು ಸಂದರ್ಭಗಳನ್ನು ಗಣನೆಗೆ ತೆಗೆದುಕೊಂಡು, ಬಣದ ಪ್ರತಿನಿಧಿಗಳ ವಾದ ಆಲಿಸಿದ ನಂತರ ಆಯೋಗ ನಿರ್ಧಾರ ತೆಗೆದುಕೊಳ್ಳಬಹುದುವು ಮಾಡಬಹುದು. ಎರಡು ವಿಭಾಗಗಳಲ್ಲಿ ಯಾವುದೇ ವಿಭಾಗದ ಪರ ನಿರ್ಧರಿಸಬಹುದು ಅಥವಾ ಯಾವುದೇ ವಿಭಾಗಕ್ಕೆ ಮಾನ್ಯತೆ ನೀಡದಿರಲೂ ಅಧಿಕಾರವಿದೆ.ʼʼ
ಮೊದಲ ಬಾರಿಗೆ ಕಾಂಗ್ರೆಸ್ ಒಡೆದಾಗ
1968ರ ಆದೇಶದ ಅಡಿಯಲ್ಲಿ ನಿರ್ಧರಿಸಲಾದ ಮೊದಲ ಪ್ರಕರಣ 1969ರಲ್ಲಿ ನಡೆಯಿತು. ಆ ವರ್ಷ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ವಿಭಜನೆಯಾಯಿತು. ಸಿಂಡಿಕೇಟ್ ಎಂದು ಕರೆಯಲ್ಪಡುವ ಇಂದಿರಾ ಗಾಂಧಿ ವಿರೋಧಿ ಬಣವು ನೀಲಂ ಸಂಜೀವ ರೆಡ್ಡಿ ಅವರ ಉಮೇದುವಾರಿಕೆಯನ್ನು ಪ್ರಸ್ತಾಪಿಸಿದರೆ, ಪಕ್ಷದ ಅಧ್ಯಕ್ಷ ನಿಜಲಿಂಗಪ್ಪ ಹೊರಡಿಸಿದ ವಿಪ್ ಅನ್ನು ಧಿಕ್ಕರಿಸಿ ಪ್ರಧಾನಿ ಇಂದಿರಾ ಗಾಂಧಿಯವರು ಉಪಾಧ್ಯಕ್ಷ ವಿವಿ ಗಿರಿ ಅವರನ್ನು ಸ್ವತಂತ್ರವಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದರು.
ಗಿರಿ ಗೆದ್ದರು ಮತ್ತು ಇಂದಿರಾ ಗಾಂಧಿಯನ್ನು ಪಕ್ಷದಿಂದ ಹೊರಹಾಕಲಾಯಿತು. ಕಾಂಗ್ರೆಸ್ ಅನ್ನು ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ (ಒ) ಮತ್ತು ಇಂದಿರಾ ನೇತೃತ್ವದ ಕಾಂಗ್ರೆಸ್ (ಜೆ) ಆಗಿ ವಿಭಜಿಸಲಾಯಿತು. ನಿಜಲಿಂಗಪ್ಪ ಕಾಂಗ್ರೆಸ್ ಪಕ್ಷದ ಆಗಿನ ಚಿಹ್ನೆಯಾದ ನೊಗವನ್ನು ಹೊತ್ತ ಒಂದು ಜೋಡಿ ಎತ್ತುಗಳನ್ನು ಉಳಿಸಿಕೊಂಡಿತು. ಇಂದಿರಾಗೆ ಕರುವಿನೊಂದಿಗೆ ಹಸುವಿನ ಚಿಹ್ನೆಯನ್ನು ನೀಡಲಾಯಿತು.
ಆಯೋಗ ಹೇಗೆ ನಿರ್ಧರಿಸುತ್ತದೆ?
ವಿವಾದದ ಸಂದರ್ಭದಲ್ಲಿ ಚುನಾವಣಾ ಆಯೋಗವು ಪ್ರಾಥಮಿಕವಾಗಿ ಪಕ್ಷದ ಸಂಘಟನೆ ಮತ್ತು ಅದರ ಶಾಸಕಾಂಗ ವಿಭಾಗದಲ್ಲಿ ಪ್ರತಿ ಬಣವೂ ಹೊಂದಿರುವ ಬೆಂಬಲವನ್ನು ಅಳೆಯುತ್ತದೆ. ಪಕ್ಷದೊಳಗಿನ ಉನ್ನತ ಸಮಿತಿಗಳು, ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳನ್ನು ಗುರುತಿಸುತ್ತದೆ. ಅದರ ಎಷ್ಟು ಸದಸ್ಯರು ಅಥವಾ ಪದಾಧಿಕಾರಿಗಳು ಯಾವ ಬಣವನ್ನು ಬೆಂಬಲಿಸುತ್ತಾರೆ ಎಂಬುದನ್ನು ತಿಳಿಯುತ್ತದೆ. ಪ್ರತಿ ಬಣದಲ್ಲೂ ಶಾಸಕರ ಸಂಖ್ಯೆಯನ್ನು ಎಣಿಕೆ ಮಾಡುತ್ತದೆ.
ಹೆಚ್ಚಿನ ಸಂದರ್ಭಗಳಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಲೆಕ್ಕಾಚಾರದಿಂದ ನಿರ್ಧಾರವಾಗುತ್ತದೆ. ಪಕ್ಷದ ಸಂಸದರು ಮತ್ತು ಶಾಸಕರ ಬಹುಮತವನ್ನು ಅವಲಂಬಿಸುತ್ತದೆ.
1987ರಲ್ಲಿ ಎಂಜಿ ರಾಮಚಂದ್ರನ್ ಅವರ ಮರಣದ ನಂತರ ಎಐಎಡಿಎಂಕೆ ವಿಭಜನೆಯಾದಾಗ ಮಾತ್ರ ಚುನಾವಣಾ ಆಯೋಗಕ್ಕೇ ಸವಾಲು ಎದುರಾಯಿತು. ಎಂಜಿಆರ್ ಅವರ ಪತ್ನಿ ಜಾನಕಿ ಅವರು ಪಕ್ಷದ ಬಹುಪಾಲು ಶಾಸಕರು ಮತ್ತು ಸಂಸದರ ಬೆಂಬಲವನ್ನು ಹೊಂದಿದ್ದರು. ಆದರೆ ಅವರ ಆಪ್ತರಾಗಿದ್ದ ಜೆ. ಜಯಲಲಿತಾ ಅವರಿಗೆ ಪಕ್ಷದ ಸದಸ್ಯರು ಮತ್ತು ಕಾರ್ಯಕರ್ತರ ಅಗಾಧ ಬೆಂಬಲವಿತ್ತು. ಕಾದಾಡುತ್ತಿದ್ದ ಬಣಗಳು ರಾಜಿ ಮಾಡಿಕೊಂಡಾಗ EC ನಿರ್ಧಾರ ತೆಗೆದುಕೊಳ್ಳುವುದು ತಪ್ಪಿತು.
ನಿರ್ಧರಿಸಲು ಸಾಧ್ಯವಾಗದಿದ್ದಲ್ಲಿ…
ಚುನಾವಣಾ ಆಯೋಗ ಯಾವುದೇ ಒಂದು ಬಣವನ್ನು ಒರಿಜಿನಲ್ ಎಂದು ಗುರುತಿಸಿದ ನಂತರ ಇನ್ನೊಂದು ಬಣಕ್ಕೆ ವಿಭಿನ್ನ ಚಿಹ್ನೆಯೊಂದಿಗೆ ಹೊಸ ರಾಜಕೀಯ ಪಕ್ಷವಾಗಿ ನೋಂದಾಯಿಸಲು ಅವಕಾಶ ನೀಡುತ್ತದೆ. ಒಂದು ವೇಳೆ ಯಾವುದು ಪ್ರಮುಖ ಬಣ ಎಂದು ನಿರ್ಧರಿಸಲು ಸಾಧ್ಯವಾಗದಿದ್ದಲ್ಲಿ, ಅದು ಪಕ್ಷದ ಚಿಹ್ನೆಯನ್ನು ಫ್ರೀಜ್ ಮಾಡಬಹುದು. ಬೇರೆ ಹೆಸರು ಮತ್ತು ಚಿಹ್ನೆಗಳೊಂದಿಗೆ ನೋಂದಾಯಿಸಲು ಏರಡೂ ಬಣಗಳಿಗೆ ಸೂಚಿಸಬಹುದು.
ವಿಜೇತರನ್ನು ನಿರ್ಧರಿಸುವ ಪ್ರಕ್ರಿಯೆಯು ತುಂಬ ಸಮಯ ತೆಗೆದುಕೊಳ್ಳುತ್ತಿದ್ದರೆ ಆಗಲೂ ಚುನಾವಣಾ ಆಯೋಗವು ಪಕ್ಷದ ಚಿಹ್ನೆಯನ್ನು ಫ್ರೀಜ್ ಮಾಡಬಹುದು. ಮತ್ತು ಚುನಾವಣೆಗಳು ಹತ್ತಿರದಲ್ಲಿದ್ದರೆ ಆಗಲೂ ತಾತ್ಕಾಲಿಕ ಚಿಹ್ನೆ ಆಯ್ಕೆ ಮಾಡಲು ಬಣಗಳನ್ನು ಕೇಳಬಹುದು.
ಈ ಎರಡೂ ಸಂದರ್ಭಗಳಲ್ಲಿ, ಬಣಗಳು ಭವಿಷ್ಯದಲ್ಲಿ ಒಂದಾಗಲು ಮತ್ತು ಮೂಲ ಚಿಹ್ನೆಯನ್ನು ಮರಳಿ ಪಡೆಯಲು ನಿರ್ಧರಿಸಿದರೆ, ಆಗ ವಿಲೀನವನ್ನು ಮೌಲ್ಯಮಾಪನ ಮಾಡಿ ಏಕೀಕೃತ ಪಕ್ಷಕ್ಕೆ ಚಿಹ್ನೆಯನ್ನು ಮರಳಿ ಕೊಡಬಹುದು.
ಇದನ್ನೂ ಓದಿ: ಕಾರ್ಪೊರೇಟರ್‌ಗಳಿಂದಲೂ ಏಕನಾಥ್ ಶಿಂಧೆಗೆ ಬೆಂಬಲ, ಶಿವಸೇನೆ ಮೇಲೆ ಹಿಡಿತ ಕಳೆದುಕೊಳ್ಳುತ್ತಿರುವ ಉದ್ಧವ್
ಪಕ್ಷದ ಚಿಹ್ನೆಯ ಕುರಿತು ಇತ್ತೀಚಿನ ವಿವಾದಗಳು
ಲೋಕ ಜನಶಕ್ತಿ ಪಕ್ಷ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚುನಾವಣಾ ಆಯೋಗವು ಚಿರಾಗ್ ಪಾಸ್ವಾನ್ ಮತ್ತು ಪಶುಪತಿ ಕುಮಾರ್ ಪರಾಸ್ ಬಣಗಳ ನಡುವಿನ ವಿವಾದವನ್ನು ಇತ್ಯರ್ಥಗೊಳಿಸುವವರೆಗೆ ಲೋಕ ಜನಶಕ್ತಿ ಪಕ್ಷದ ಹೆಸರು ಅಥವಾ ಅದರ ಚಿಹ್ನೆ ‘ಬಂಗಲೆ’ಯನ್ನು ಬಳಸದಂತೆ ನಿರ್ಬಂಧಿಸಿತು.
ಬಿಹಾರದ ಕುಶೇಶ್ವರ್ ಮತ್ತು ತಾರಾಪುರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದ ಸಂದರ್ಭದಲ್ಲಿ ಚಿರಾಗ್ ಪಾಸ್ವಾನ್ ಬಣಕ್ಕೆ ʼಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್)’ ಹೆಸರಿನಲ್ಲಿ ‘ಹೆಲಿಕಾಪ್ಟರ್’ ಚಿಹ್ನೆಯೊಂದಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತು. ಪಾರಸ್ ಬಣಕ್ಕೆ ʼರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ’ ಹೆಸರು ಮತ್ತು ‘ಹೊಲಿಗೆ ಯಂತ್ರ’ ಚಿಹ್ನೆಯನ್ನು ನೀಡಿತು.
ಎಐಎಡಿಎಂಕೆ: ಓ ಪನ್ನೀರ್‌ಸೆಲ್ವಂ ಮತ್ತು ವಿಕೆ ಶಶಿಕಲಾ ನೇತೃತ್ವದ ಎರಡು ಬಣಗಳು ಎಐಎಡಿಎಂಕೆಯ ʼಎರಡು ಎಲೆ’ ಚಿಹ್ನೆಯ ಮೇಲೆ ಹಕ್ಕು ಸಾಧಿಸಿದ್ದವು. EC ಮಾರ್ಚ್ 2017ರಲ್ಲಿ ಅದನ್ನು ಸ್ಥಗಿತಗೊಳಿಸಿತು. ನಂತರ, ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ಪಾಳಯ ಜೈಲಿನಲ್ಲಿದ್ದ ಶಶಿಕಲಾ ವಿರುದ್ಧ ಬಂಡಾಯವೆದ್ದಿತು. ನವೆಂಬರ್ 2017ರಲ್ಲಿ ಪಳನಿಸ್ವಾಮಿ ಹಾಗೂ ಪನ್ನೀರ್‌ಸೆಲ್ವಂ ಬಣಗಳು ಒಂದಾದವು. ಆಗ ಎರಡೆಲೆ ಚಿಹ್ನೆಯನ್ನು ಅವರಿಗೆ ನೀಡಲಾಯಿತು.
ಸಮಾಜವಾದಿ ಪಕ್ಷ: 2017ರಲ್ಲಿ ಅಖಿಲೇಶ್ ಯಾದವ್ ತಂದೆ ಮುಲಾಯಂ ಸಿಂಗ್ ಯಾದವ್ ಅವರಿಂದ ಹಿಡಿತ ಸಾಧಿಸಿದಾಗ ಎಸ್‌ಪಿ ಪಕ್ಷವು ವಿಭಜನೆಗೆ ಸಾಕ್ಷಿಯಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಖಿಲೇಶ್ ಆಯ್ಕೆಯಾದ ನಂತರ ಯಾದವ ಕುಲ ಎರಡು ಹೋಳಾಯಿತು.
ಚುನಾವಣಾ ಆಯೋಗವನ್ನು ಸಂಪರ್ಕಿಸಿದ ಮುಲಾಯಂ ಅವರು, ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುತ್ತೇನೆ ಮತ್ತು ಚುನಾವಣಾ ಚಿಹ್ನೆ ತಮ್ಮ ಬಣದಲ್ಲಿ ಉಳಿಯಬೇಕು ಎಂದರು. ಇದಕ್ಕೆ ಅಖಿಲೇಶ್ ಪಾಳಯದಿಂದ ತೀವ್ರ ಪೈಪೋಟಿ ಏರ್ಪಟ್ಟಿತು. ಬಹುಮತ ಸಿಎಂ ಬಳಿಯೇ ಇದೆ ಎಂದು ಹೇಳಿಕೊಂಡಿತು. ಆಯೋಗ ಎರಡೂ ಕಡೆಯವರ ವಾದಗಳನ್ನು ಆಲಿಸಿತು. ಜನವರಿ 16ರಂದು ಅಖಿಲೇಶ್ ಯಾದವ್ ನೇತೃತ್ವದ ಬಣಕ್ಕೆ ಸೈಕಲ್ ಚಿಹ್ನೆಯನ್ನು ಆಯೋಗ ನೀಡಿತು.
ಇದನ್ನೂ ಓದಿ: ಈ ಸಲ ಶಿವ ಸೇನೆ ಹೋಳಾಗುವುದು ಖಚಿತ? ಹಿಂದೆಯೂ ಮೂರು ಬಾರಿ ಪ್ರಯತ್ನ