Site icon Vistara News

ವಿಸ್ತಾರ Explainer | ದಿಲ್ಲಿ ಕಾರ್ಪೊರೇಷನ್ ಗೆಲ್ಲೋರು ಯಾರು? ಬಿಜೆಪಿ-ಆಪ್ ಮಧ್ಯೆ ಸ್ಪರ್ಧೆ, ಕಾಂಗ್ರೆಸ್ ಸ್ಥಿತಿ ಏನು?

MCD Election

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್- ಎಂಸಿಡಿಗೆ(Municipal Corporation of Delhi) ಡಿ.4, ಭಾನುವಾರ ಮತದಾನ ನಡೆಯುತ್ತಿದೆ. ಕಾರ್ಪೊರೇಷನ್ ಚುನಾವಣೆಯೇ ಆದರೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಾರ್ಟಿ(BJP) ಮತ್ತು ದಿಲ್ಲಿ ವಿಧಾನಸಭೆಯಲ್ಲಿ ಪ್ರಾಬಲ್ಯವನ್ನು ಹೊಂದಿರುವ ಆಮ್ ಆದ್ಮಿ ಪಾರ್ಟಿ(AAP) ಬಹಳ ತುರುಸಿನಿಂದ ಚುನಾವಣೆಯನ್ನು ಎದುರಿಸುತ್ತಿವೆ. ಇದರ ಮಧ್ಯೆ, ಕಾಂಗ್ರೆಸ್ (Congress) ಕೂಡ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದೆ(ವಿಸ್ತಾರ Explainer).

ದಿಲ್ಲಿಯ 250 ವಾರ್ಡ್‌ಗಳಿಗೆ ಈ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 7ರಂದು ಫಲಿತಾಂಶವು ಪ್ರಕಟವಾಗಲಿದೆ. ಮಾರನೇ ದಿನ ಅಂದರೆ, ಡಿ.8ರಂದು ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣಾ ಫಲಿತಾಂಶವೂ ಪ್ರಕಟಗೊಳ್ಳಲಿದೆ. 250 ವಾರ್ಡ್‌ಗಳ ಪೈಕಿ 42 ಕ್ಷೇತ್ರಗಳು ಎಸ್‌ಸಿಗೆ ಮೀಸಲಾಗಿವೆ. 21 ಸೀಟುಗಳನ್ನು ಎಸ್‌ಸಿ ಮಹಿಳೆಯರಿಗೆ ನೀಡಲಾಗಿದೆ. ಒಟ್ಟಾರೆ 104 ಕ್ಷೇತ್ರಗಳು ಮಹಿಳಾ ಕ್ಷೇತ್ರಗಳಾಗಿವೆ. ಜಗತ್ತಿನ ಬೃಹತ್ ಕಾರ್ಪೊರೇಷನ್ ಸ್ಥಳೀಯ ಸಂಸ್ಥೆಗಳ ಪೈಕಿ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಕೂಡ ಒಂದಾಗಿದೆ. ಕೇಂದ್ರ ಸರ್ಕಾರದ ಸೂಚನೆಯ ಅನುಸಾರ ದಿಲ್ಲಿಯ 272 ಕ್ಷೇತ್ರಗಳನ್ನು 250ಕ್ಕೆ ಇಳಿಕೆ ಮಾಡಲಾಗಿದೆ.

1.46 ಕೋಟಿ ಮತದಾರರು
ಲೆಕ್ಕಾಚಾರದಂತೆ ಎಂಸಿಡಿಯ ಚುನಾವಣೆಯಲ್ಲಿ ಸುಮಾರು 1.46 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಬೇಕು. ಆದರೆ, ಅಂತಿಮವಾಗಿ ಎಷ್ಟು ಮತದಾರರು ತಮ್ಮ ಕರ್ತವ್ಯವನ್ನು ಪಾಲಿಸಿದ್ದಾರೆಂಬುದು ಡಿ.4ರ ಸಂಜೆ ಹೊತ್ತಿಗೆ ಗೊತ್ತಾಗಲಿದೆ. ಒಟ್ಟಾರೆ 2021 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತ್ರಿಕೋನ ಸ್ಪರ್ಧೆ
ದೇಶದ ಗಮನ ಸೆಳೆದಿರುವ ಎಂಸಿಡಿ ಚುನಾವಣೆಯು ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುತ್ತಿದೆ. ಹಾಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ಆಪ್‌ಗೆ ಅತ್ಯಂತ ಕಠಿಣ ಸ್ಪರ್ಧೆಯನ್ನು ಒಡ್ಡುತ್ತಿದ್ದರೆ ಕಾಂಗ್ರೆಸ್ ತನ್ನ ಗೆಲುವಿನ ನಿರೀಕ್ಷೆಯಲ್ಲಿದೆ. 2017ರಲ್ಲಿ ನಡೆದ ಎಂಸಿಡಿ ಎಲೆಕ್ಷನ್‌ನಲ್ಲಿ ಆಪ್ 272 ವಾರ್ಡ್‌ಗಳ ಪೈಕಿ 48 ವಾರ್ಡ್‌ಗಳಲ್ಲಿ ಜಯ ಸಾಧಿಸಲು ಯಶಸ್ವಿಯಾಗಿತ್ತು. 2022ರ ಚುನಾವಣೆಯಲ್ಲಿ ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಇತ್ತ ಆಪ್, ಎಂಸಿಡಿಯನ್ನು ಗೆದ್ದೇ ಗೆಲ್ಲಬೇಕೆಂಬ ಛಲದಲ್ಲಿ ಹೋರಾಟ ನಡೆಸುತ್ತಿದೆ.

ಸಮಸ್ಯೆಗಳಿಗೇನೂ ಕೊರತೆ ಇಲ್ಲ
ದಿಲ್ಲಿ ರಾಷ್ಟ್ರದ ರಾಜಧಾನಿಯಾದರೂ ನಾಗರಿಕ ಸಮಸ್ಯೆಗಳಿಗೇನೂ ಕೊರತೆ ಇಲ್ಲ. ಒಳಚರಂಡಿ, ರಸ್ತೆಗಳು, ಕರೆಂಟ್, ಆರೋಗ್ಯ, ರಸ್ತೆ ಗುಂಡಿ, ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ನಾನಾ ನಾಗರಿಕ ಸಮಸ್ಯೆಗಳಿವೆ. ಈ ಬಗ್ಗೆ ಆಪ್ ಮತ್ತು ಬಿಜೆಪಿ ಮಧ್ಯೆ ಮಾತಿನ ಸಮರ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಚುನಾವಣೆ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ಆರೋಪ ಮತ್ತು ಪ್ರತ್ಯಾರೋಪದಲ್ಲಿ ತೊಡಗಿದ್ದನ್ನು ಕಂಡಿದ್ದೇವೆ. ದಿಲ್ಲಿ ಎದುರಿಸುತ್ತಿರುವ ಮತ್ತೊಂದು ಗಂಭೀರ ಸಮಸ್ಯೆ ಎಂದರೆ- ವಾಯು ಮಾಲಿನ್ಯ. ಈ ವಿಷಯದಲ್ಲಿ ಆಪ್ ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸಿದರೆ, ಕೇಂದ್ರ ಸರ್ಕಾರವು ಆಪ್ ಸರ್ಕಾರದ ವಿರುದ್ಧ ಬೊಟ್ಟು ಮಾಡುತ್ತಿದೆ. ಎಂಸಿಡಿಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಕೂಡ ಆಪ್‌ನ ಹಟಮಾರಿತನದಿಂದಾಗಿ ವಾಯು ಮಾಲಿನ್ಯ ಸಮಸ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದೆ. ಜತೆಗೆ ಇದೊಂದು ಚುನಾವಣಾ ವಿಷಯವೂ ಹೌದು.

ಕಾಂಗ್ರೆಸ್ ಪರಿಸ್ಥಿತಿ ಏನು?
ಆಪ್ ಮತ್ತು ಬಿಜೆಪಿಯ ಅಬ್ಬರದ ಮಧ್ಯೆ ಕಾಂಗ್ರೆಸ್ ಸಪ್ಪೆಯಾಗಿರುವುದು ಸತ್ಯ. ಶೀಲಾ ದೀಕ್ಷಿತ್ ನಾಯಕತ್ವದಲ್ಲಿ ಕಾಂಗ್ರೆಸ್, ದಿಲ್ಲಿಯಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಆಗ ಎಂಸಿಡಿಯಲ್ಲೂ ರಾಜ್ಯಭಾರವಿತ್ತು. ಆದರೆ, ನಂತರ ದಿನಗಳಲ್ಲಿ ಮಂಕಾದ ಕಾಂಗ್ರೆಸ್ ಇನ್ನೂ ಚೇತರಿಸಿಕೊಂಡಿಲ್ಲ. 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದ ತನಕ 3,500 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಇದರ ಪರಿಣಾಮ ಏನಾದರೂ ಎಂಸಿಡಿ ಎಲೆಕ್ಷನ್ ಮೇಲಾಗುತ್ತಾ? ಈ ಬಗ್ಗೆ ಈಗಲೇ ಏನು ಹೇಳಲಾಗದು.

ಕಾಂಗ್ರೆಸ್ ಈ ಎಂಸಿಡಿ ಚುನಾವಣೆಯಲ್ಲಿ ‘ಕಾಂಗ್ರೆಸ್ ವಿಷನ್ ಎಂಸಿಡಿ-ಮೇರಿ ಚಮಕ್ತಿ ದಿಲ್ಲಿ’ ಎಂಬ ವಿಷಯಾಧಾರದ ಮೇಲೆ ಹೋರಾಟ ನಡೆಸುತ್ತಿದೆ. ಪಕ್ಷ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಹೊಸತನವೇನೂ ಇಲ್ಲ. ದೀಕ್ಷಿತ್ ಅವಧಿಯ ಚುನಾವಣಾ ಪ್ರಣಾಳಿಕೆಯನ್ನು ಹೊಸದಾಗಿ ನೀಡಲಾಗಿದೆ! ವಾಯು ಮಾಲಿನ್ಯ ವಿರುದ್ಧ ಹೋರಾಟ, ಆರ್ಥಿಕ ಸ್ವಾವಲಂಬನೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಇನ್ನೂ ಅನೇಕ ವಿಷಯಗಳನ್ನು ಈ ಚುನಾವಣಾ ಪ್ರಣಾಳಿಕೆ ಹೊಂದಿದೆ. ಆದರೆ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತಾರೂಢವಾಗಿರುವ ಬಿಜೆಪಿ ಹಾಗೂ ಆಪ್ ಮುಂದೆ ಕಾಂಗ್ರೆಸ್‌ನ ಆಟ ನಡೆಯುತ್ತಿಲ್ಲ. ಒಂದೊಮ್ಮೆ ನಿರೀಕ್ಷೆಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್‌ನ ಅತಿದೊಡ್ಡ ಸಾಧನೆಯಾಗಲಿದೆ.

ಬದಲಾದ ರಾಜಕೀಯ ಪರಿಸ್ಥಿತಿ
2012 ಚುನಾವಣೆಯು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಹಣಾಹಣಿಯನ್ನು ಕಂಡರೆ, 2017ರ ಹೊತ್ತಿಗೆ ಸಂಪೂರ್ಣವಾಗಿ ಬದಲಾಗಿತ್ತು. ಆಮ್ ಆದ್ಮಿ ಪಾರ್ಟಿ, ತನ್ನ ವರ್ಚಸ್ಸು ಬೀರಲಾರಂಭಿಸಿತ್ತು. ಹಾಗಾಗಿ, ಆಗ ಕಾಂಗ್ರೆಸ್-ಬಿಜೆಪಿ-ಆಪ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. 2022ರ ಹೊತ್ತಿಗೆ ಕಾಂಗ್ರೆಸ್ ಸಂಪೂರ್ಣವಾಗಿ ಬದಿಗೆ ಸರಿದಿದೆ. ಈಗ ಮತ್ತೆ ಬಿಜೆಪಿ-ಆಪ್ ಮಧ್ಯೆ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಹಾಗಂತ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ತಳ್ಳಿ ಹಾಕುವಂತಿಲ್ಲ. ದಿಲ್ಲಿಯಲ್ಲಿ ಈಗಲೂ ಕಾಂಗ್ರೆಸ್‌ಗೆ ಅದರದ್ದೇ ಆದ ಮತದಾರ ವರ್ಗವಿದೆ. ಹಾಗೆ ನೋಡಿದರೆ, ಆಪ್‌ಗೆ ಬದಲಾಗಿರುವ ಮತದಾರರು ಮೂಲಭೂತವಾಗಿ ಅವರು ಕಾಂಗ್ರೆಸ್ ವೋಟರ್ಸ್. ಕಾಂಗ್ರೆಸ್ ಏನಾದರೂ ಯಾವುದೇ ಅಬ್ಬರವಿಲ್ಲದೇ ತಂತ್ರಗಾರಿಕೆಯಿಂದ ಚುನಾವಣಾ ಪ್ರಚಾರ ಮಾಡಿದ್ದರೆ, ಅಚ್ಚರಿ ಫಲಿತಾಂಶಕ್ಕೂ ಕಾರಣವಾಗಬಹುದು. ಆದರೆ, ಮೇಲ್ನೋಟಕ್ಕಂತೂ ಬಿಜೆಪಿ ಮತ್ತು ಆಪ್ ಮಧ್ಯೆ ಭರ್ಜರಿ ಸ್ಪರ್ಧೆ ಇದೆ. ಬಹುಶಃ ಡಿಸೆಂಬರ್ 7ಕ್ಕೆ ಚುನಾವಣಾ ಆಖಾಡದಲ್ಲಿ ಯಾರು ಗೆಲುವಿನ ನಗೆ ಬೀರಿದರು ಎಂಬುದು ಗೊತ್ತಾಗುತ್ತದೆ.

ಬಿಜೆಪಿಗೆ ಮೇಲ್ವರ್ಗದ ಮತಗಳು!
ರಾಜಕೀಯ ಪಕ್ಷಗಳ ಮಧ್ಯೆ ಮತದಾರರ ಆಯ್ಕೆ ವಿಷಯ ಬಂದಾಗ ಖಂಡಿತವಾಗಿಯೂ ಅವರ ವಿಭಜನೆಯಾಗಿದ್ದಾರೆ. ಮೇಲ್ವರ್ಗ ಮತ್ತು ಮೇಲ್ಜಾತಿಯ ಮತದಾರರು ಬಿಜೆಪಿಯ ಪರವಾಗಿ ನಿಂತಿರುವುದು ಸ್ಪಷ್ಟ. ಮೇಲ್ಜಾತಿ ಹಿನ್ನೆಲೆಯಿಂದ ಬಂದವರು ಮತ್ತು ತುಲನಾತ್ಮಕವಾಗಿ ಉತ್ತಮ ಸ್ಥಳಗಳ ನಿವಾಸಿಗಳು ಬಿಜೆಪಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಬಿಜೆಪಿ ಕೂಡ ಹಿಂದೂ ಮೇಲ್ವರ್ಗ ಜಾತಿಯ ಮತಗಳನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿತ್ತು ಎಂಬುದೇನೂ ಗುಟ್ಟಾಗಿ ಉಳಿದಿಲ್ಲ. ಹಾಗಂತ ಮೇಲ್ವರ್ಗದ ಎಲ್ಲ ಮತದಾರರು ಬಿಜೆಪಿಯನ್ನೇ ತಮ್ಮ ಆದ್ಯತೆಯ ಪಕ್ಷವಾಗಿ ಆಯ್ಕೆ ಮಾಡಿಕೊಂಡಿದ್ದಾರೆಂದೇನೂ ಇಲ್ಲ ಎನ್ನುತ್ತಾರೆ ತಜ್ಞರು. ಕೆಲವರು ಪ್ರಕಾರ, ಈ ವರ್ಗದ ಅರ್ಧದಷ್ಟು ಮತಗಳು ಆಪ್ ಸೇರಿದಂತೆ ಇತರ ಪಕ್ಷಗಳ ಪರವಾಗಿಯೂ ಇವೆ. ಮುಸ್ಲಿಮ್ ಸಮುದಾಯ ಬಹುತೇಕ ಆಪ್ ಬೆನ್ನಿಗೆ ನಿಂತಿದೆ. ಇದರಲ್ಲಿ ಒಂದಿಷ್ಟು ಮತಗಳು ಕಾಂಗ್ರೆಸ್ ಪರವಾಗಿ ಚಲಾವಣೆಯಾಗಬಹುದು.

ಆಪ್ ಯಾರನ್ನು ನೆಚ್ಚಿಕೊಂಡಿದೆ?
ಈಗಾಗಲೇ ಹೇಳಿದಂತೆ ಮೇಲ್ವರ್ಗದ ಅರ್ಧದಷ್ಟು ಮತದಾರರು ಬಿಜೆಪಿಯನ್ನು ಬಿಟ್ಟು ಬೇರೆ ಪಕ್ಷಗಳನ್ನು ತಮ್ಮ ಆದ್ಯತೆಯಾಗಿಸಿಕೊಂಡಿದ್ದಾರೆ. ಈ ಆದ್ಯತೆಯಲ್ಲಿ ಆಪ್‌ಗೆ ಮೊದಲನೆ ಸ್ಥಾನವಿದೆ. ಜತೆಗೆ, ಆಪ್ ಪಕ್ಷವು ಕಡಿಮೆ ಆದಾಯವಿರುವ ಮತದಾರರನ್ನು ಸಾಲಿಡ್ ಆಗಿ ಸೆಳೆಯುವ ಪ್ರಯತ್ನವನ್ನು ಮಾಡಿದೆ. ಅಂದರೆ, ಬಡವರು ಮತ್ತು ಕೆಳವರ್ಗದ ಮತದಾರರನ್ನು ನೆಚ್ಚಿಕೊಂಡಿದೆ. ಈ ಹಿಂದಿನ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಈ ವರ್ಗದ ಮತದಾರರು ಸಂಪೂರ್ಣವಾಗಿ ಆಪ್‌ ಕಡೆ ವಾಲಿದ್ದರಿಂದಲೇ ಅದ್ಭುತ ಜಯ ಸಾಧಿಸಲು ಸಾಧ್ಯವಾಗಿತ್ತು. ಈಗ ಎಂಸಿಡಿಯಲ್ಲೂ ಅದೇ ಮ್ಯಾಜಿಕ್ ಅನ್ನು ಆಪ್ ನಿರೀಕ್ಷಿಸುತ್ತಿದೆ. ಒಂದೆಡೆ, ಬಿಜೆಪಿ ಮಧ್ಯಮ ಮತ್ತು ಶ್ರೀಮಂತ ವರ್ಗದವರನ್ನು ಹೆಚ್ಚಾಗಿ ನೆಚ್ಚಿಕೊಂಡರೆ, ಆಪ್ ಬಡವರು ಮತ್ತು ಕೆಳವರ್ಗದ ಮತದಾರರ ಮೇಲೆ ಬೆಟ್ ಕಟ್ಟುತ್ತಿದೆ.

ಮಹಿಳಾ ಮತದಾರರು ನಿರ್ಣಾಯಕ!
ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕರಾಗಲಿದ್ದಾರೆ. ಕೆಲವು ಸಮೀಕ್ಷೆಗಳ ಪ್ರಕಾರ, ಮಹಿಳೆಯರ ಒಲವು ಆಪ್ ಪರವಾಗಿಯೇ ಇದೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಮಹಿಳೆಯರಿಗೆ ಅನುಕೂಲವಾಗುವ ಕೆಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದು ಇದಕ್ಕೆ ಕಾರಣವಿರಬಹುದು. ಮಹಿಳಾ ಮತದಾರರಿಗೆ ಆಪ್ ಬಳಿಕ ಬಿಜೆಪಿ ನಂತರದ ಆಯ್ಕೆಯಾಗಿದೆ. ಆದರೆ, ಅರ್ಧಕ್ಕಿಂತ ಹೆಚ್ಚಿನ ಮಹಿಳಾ ಮತದಾರರು ಆಪ್ ಬೆನ್ನಿಗೆ ನಿಂತಿರುವುದು ಸ್ಪಷ್ಟವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಇದು ಸಾಬೀತಾಗಿದೆ.

ಎಂಸಿಡಿಗೆ ಏಕೆ ಇಷ್ಟು ಮಹತ್ವ?
ಹಾಗೆ ನೋಡದಿರೆ, ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯು ಇತರೆ ಯಾವುದೇ ಮಹಾನಗರ ಸ್ಥಳೀಯ ಚುನಾವಣೆಯಷ್ಟೇ ಮಹತ್ವವನ್ನು ಪಡೆದುಕೊಳ್ಳಬೇಕಿತ್ತು. ಆದರೆ, ಎಂಸಿಡಿ ಎಲೆಕ್ಷನ್ ಕೂಡ ಯಾವುದೋ ಒಂದು ರಾಜ್ಯದ ವಿಧಾನಸಭೆ ಎಲೆಕ್ಷನ್ ಎನ್ನುವಷ್ಟರ ಮಟ್ಟಿಗೆ ಹೈಪ್ ಕ್ರಿಯೇಟ್ ಆಗಲು ಕಾರಣವಿದೆ. ಕೇಂದ್ರದಲ್ಲಿರುವ ಬಿಜೆಪಿ ತನ್ನ ದಂಡಯಾತ್ರೆಯನ್ನು ನಿರಾಂತಕವಾಗಿ ಮಾಡಿಕೊಂಡು ಬಂದಿದೆ. ಆದರೆ, ಅದಕ್ಕೆ ದಿಲ್ಲಿ ವಿಧಾನಸಭೆಯನ್ನು ಗೆದ್ದುಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ, ಎಂಸಿಡಿಯಲ್ಲಾದರೂ ತನ್ನ ಅಸ್ತಿತ್ವವನ್ನು ಕಾಯ್ದಕೊಳ್ಳುವ ಲೆಕ್ಕಾಚಾರ ಬಿಜೆಪಿಯದ್ದು. ಇದೇ ವೇಳೆ, ವಿಧಾನಸಭೆಯಲ್ಲಿ ಭರ್ಜರಿ ಜಯ ಸಾಧಿಸುತ್ತಾ ಬಂದಿರುವ ಆಪ್‌ಗೆ ಎಂಸಿಡಿಯನ್ನು ತನ್ನ ಕೈವಶ ಮಾಡಿಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ. ಹಾಗಾಗಿ, ಉಭಯ ಪಕ್ಷಗಳು ಎಂಸಿಡಿ ಎಲೆಕ್ಷನ್‌ಗೆ ಎಲ್ಲಿಲ್ಲದ ಮಹತ್ವ ನೀಡಿವೆ.

ಒಂದಾದ ದಿಲ್ಲಿ ಕಾರ್ಪೊರೇಷನ್
ದಿಲ್ಲಿ ಮಹಾನಗರದ ಆಡಳಿತದ ಅನುಕೂಲಕ್ಕಾಗಿಈ ಹಿಂದೆ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಅನ್ನು North Delhi Municipal Corporation(ಎನ್‌ಡಿಎಂಸಿ), South Delhi Municipal Corporation(ಎಸ್‌ಡಿಎಂಸಿ) ಮತ್ತು East Delhi Municipal Corporation(ಇಡಿಎಂಸಿ) ಗಳಾಗಿ ವಿಂಗಡಿಸಲಾಗಿತ್ತು. 2017ರ ಚುನಾವಣೆಯಲ್ಲಿ ಮತದಾರರು ಈ ಮೂರು ಕಾರ್ಪೊರೇಷನ್‌ಗಳಿಗೆ ಕಾರ್ಪೊರೇಟರ್‌ಗಳನ್ನು ಆಯ್ಕೆ ಮಾಡಿದ್ದರು.
ಆದರೆ, 2022ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ತಿದ್ದುಪಡಿಗೆ ಒಪ್ಪಿಗೆ ನೀಡಿತು. ಆ ಬಳಿಕ ಎಂಡಿಎಂಸಿ, ಎಸ್‌ಡಿಎಂಸಿ ಮತ್ತು ಇಡಿಎಂಸಿಗಳನ್ನು ಒಂದುಗೂಡಿಸಿ ಮುನ್ಸಿಪಲ್ ಕಾರ್ಪೊರೇಷನ್ ಆಫ್ ದಿಲ್ಲಿ(ಎಂಸಿಡಿ)ಯನ್ನು ಸೃಷ್ಟಿಸಲಾಯಿತು. ಈಗ ಮತದಾರರು ಈ ಒಂದೇ ಸಂಸ್ಥೆಗೆ ತಮ್ಮ ಕಾರ್ಪೊರೇಟರ್‌ಗಳನ್ನು ಆಯ್ಕೆ ಮಾಡಲು ಮತದಾನ ಮಾಡುತ್ತಿದ್ದಾರೆ.

ಇದನ್ನೂ ಓದಿ | MCD Elections | ಬಿಜೆಪಿಯವರು ಅತಿ ಶ್ರೀಮಂತರಾದ್ರೆ, ಆಪ್‌ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹೆಚ್ಚು!

Exit mobile version