ವಿಶಿಷ್ಟ ಭೌಗೋಳಿಕ ಲಕ್ಷಣಗಳನ್ನು ಹೊಂದಿರುವ ಉತ್ತರ ಭಾರತವು, ಜತೆಗೆ ಹಲವು ನೈಸರ್ಗಿಕ ವೈರುದ್ಯಗಳನ್ನೂ ಹೊಂದಿದೆ. ಮಳೆಗಾಲದಲ್ಲಿ ವಿಪರೀತ ಮಳೆ; ಬೇಸಿಗೆ ಕಾಲದಲ್ಲಿ ಇಳೆ ಪೂರ್ತಿ ಕೆಂಡ; ಚಳಿಗಾಲದಲ್ಲಿ ವಿಪರೀತ ಥಂಡಿ! ಪರಿಣಾಮ, ಪ್ರಸಕ್ತ ಸಾಲಿನಲ್ಲಿ ದಾಖಲೆಯ ಚಳಿಗೆ ಉತ್ತರ ಭಾರತೀಯರು ಸಾಕ್ಷಿಯಾಗುತ್ತಿದ್ದಾರೆ. ಕಳೆದ 23 ವರ್ಷದಲ್ಲಿ ಇದು ಮೂರನೇ ಅತಿ ಕೆಟ್ಟ ಚಳಿಗಾಲ ಎನ್ನಲಾಗುತ್ತಿದೆ. ಕಾಶ್ಮೀರದಲ್ಲಿ ತಾಪಮಾನವೂ ಆಲ್ಮೋಸ್ಟ್ ಮೈನಸ್ 6 ಡಿಗ್ರಿ ಸೆಲ್ಷಿಯಸ್‌ಗೆ ಇಳಿದಿದೆ. ಇತ್ತ ಅಮೃತಸರದಲ್ಲಿ ಮಂಜು ವಿಪರೀತವಾದರೆ, ಮಿತಿಮೀರಿದ ಚಳಿಯನ್ನು ಚುರುದಲ್ಲಿ ಅನುಭವಿಸಬಹುದು. ಪರಿಸ್ಥಿತಿ ಇಷ್ಟಕ್ಕೆ ನಿಲ್ಲುವುದಿಲ್ಲ ಮುಂದಿನ ದಿನಗಳು ಇನ್ನಷ್ಟು ಚಳಿಯಿಂದ ಕೂಡಿರಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಸಕ್ತ ಚಳಿಗಾಲದಲ್ಲಿ ಉತ್ತರ ಭಾರತದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಂಜಿನಿಂದಾಗಿ ಸಾಕಷ್ಟು ವ್ಯಾಪಾರ, ವಹಿವಾಟು ನಷ್ಟವಾಗಿದೆ ಮತ್ತು ಸಂಚಾರಕ್ಕೆ ವ್ಯತ್ಯಯವಾಗಿದೆ(ವಿಸ್ತಾರ Explainer).
ತಾಪಮಾನ ಏಕೆ ಕುಸಿಯುತ್ತಿದೆ?
ಮೆಡಿಟರೇನಿಯನ್ ಪ್ರದೇಶದಲ್ಲಿನ ಬದಲಾವಣೆಗಳು(ಉಷ್ಣಉಲಯದ ಮಾರುತ) ಉತ್ತರ ಭಾರತದಲ್ಲಿನ ಚಳಿಯ ಏರಿಳಿತಕ್ಕೆ ಕಾರಣವಾಗುತ್ತದೆ. ಮೆಡಿಟರೇನಿಯನ್ ಪ್ರದೇಶದಿಂದ ಸಾಕಷ್ಟು ತೇವಾಂಶವನ್ನು ಈ ಕಡಿಮೆ ಒತ್ತಡ ಮಾರುತಗಳು ತೆಗೆದುಕೊಂಡು ಬರುತ್ತದೆ. ಈ ಮಾರುತಗಳು ಮೊದಲಿಗೆ ಪೂರ್ವಾಭಿಮುಖವಾಗಿ ಚಲಿಸಿ, ನಂತರ ಉತ್ತರ ಭಾರತದತ್ತ ಹೊರಳಿ, ತೇವಾಂಶ ವಾತಾವರಣಕ್ಕೆ ಕಾರಣವಾಗುತ್ತವೆ. ಒಂದು ವೇಳೆ, ಅದು ಆ್ಯಕ್ಟಿವ್ ಸಿಸ್ಟಮ್ ಆಗಿದ್ದರೆ, ಹಿಮಾಲಯದಲ್ಲಿ ಹಿಮ ಮತ್ತು ತೇವಾಂಶಕ್ಕೆ ಕಾರಣವಾದರೆ, ಉತ್ತರದಲ್ಲಿ ಮಳೆಗೆ ಕಾರಣವಾಗುತ್ತದೆ. ಯಾವಾಗ ಉಷ್ಣವಲಯದ ಮಾರುತಗಳು ಈ ಪ್ರದೇಶವನ್ನು ತಲಪುತ್ತವೆಯೋ ಆಗ ತಾಪಮಾನ ಏರಿಕೆಯಾಗುತ್ತದೆ. ಅಂದರೆ, ಈ ಮಾರುತಗಳು ಬೀಸದಿದ್ದರೆ, ಈ ಪ್ರದೇಶದಲ್ಲಿ ಚಳಿ ಏರಿಕೆಗೆ ಕಾರಣವಾಗುತ್ತದೆ. ಈ ರೀತಿಯ ಬೆಳವಣಿಗೆ ಉತ್ತರ ಭಾರತದ ಮೂರ್ನಾಲ್ಕು ದಿನಗಳಲ್ಲಿ ಆಗುತ್ತಿದೆ. ಈಗ ಒಣ ಮಾರುತಗಳು ಪ್ರಭಾವ ಕಡಿಮೆಯಾಗುತ್ತಿದ್ದಂತೆ ಮತ್ತೆ ಚಳಿ ಏರಿಕೆಯಾಗುತ್ತಿದೆ. ಅಲ್ಲದೇ, ಜನವರಿ 16ರಿಂದ ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಮತ್ತಷ್ಟು ಕುಸಿಯುತ್ತಾ?
ಎಲ್ಲರಿಗೂ ಗೊತ್ತಿರುವ ಹಾಗೆ ಚಳಿಗಾಲದಲ್ಲಿ ದಿಲ್ಲಿಯಲ್ಲಿ ವಿಪರೀತ ಚಳಿ ಇದ್ದೇ ಇರುತ್ತದೆ. ಆದರೆ, ಈ ಬಾರಿ ತಾಪಮಾನವೇನಾದರೂ ಮೈನಸ್ 4 ಡಿಗ್ರಿ ಸೆಲ್ಷಿಯಸ್‌ಗೆ ಇಳಿಯಲಿದೆಯೇ ಎಂಬ ಪ್ರಶ್ನೆ ಕಾಡತೊಡಗಿದೆ. ಆದರೆ, ದಿಲ್ಲಿಯಲ್ಲಿ ಅಷ್ಟರ ಮಟ್ಟಿಗೆ ತಾಪಮಾನ ಕುಸಿಯುವುದಿಲ್ಲ. ನಗರದ ಕೆಲವು ಭಾಗಗಳಲ್ಲಿ ವಿಪರೀತ ಚಳಿ ಇರಲಿದೆ. ಮೈನಸ್ 4 ಡಿಗ್ರಿ ಸೆಲ್ಷಿಯಸ್ ತಾಪಮಾನವು ದಿಲ್ಲಿಗಲ್ಲ, ಬದಲಿಗೆ ಉತ್ತರ ಭಾರತದಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ರಾಜಸ್ಥಾನದಲ್ಲಿ ಕೆಲವು ಭಾಗದಲ್ಲಿ ತಾಪಮಾನ ಸಿಕ್ಕಾಪಟ್ಟೆ ಕುಸಿಯಲಿದೆ ಎನ್ನಲಾಗುತ್ತಿದೆ.
ದಿಲ್ಲಿ ಸೇರಿದಂತೆ ಉತ್ತರ ಭಾರತದಲ್ಲಿ ಈ ವಿಪರೀತ ಚಳಿ ಗಾಳಿ ಎಷ್ಟು ದಿನಗಳವರೆಗೆ ಇರಲಿದೆ ಎಂಬ ಪ್ರಶ್ನೆ ಸಹಜ. ಮುನ್ಸೂಚನೆಗಳ ಪ್ರಕಾರ, ಜನವರಿ 18ರ ಬಳಿಕ ಮತ್ತೆ ಮೆಡಿಟರೇನಿಯನ್ ಮಾರುತಗಳು ಬೀಸುವುದರಿಂದ ಪರಿಸ್ಥಿತಿ ಬದಲಾಗಲಿದೆ. ಮಾರುತಗಳು ವಾಯವ್ಯದಿಂದ ಪೂರ್ವಕ್ಕೆ ಬೀಸಬೇಕು, ಆಗ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ. ಉತ್ತರ ಭಾರತದಲ್ಲಿ ಪ್ರಸಕ್ತ ಸಾಲಿನಲ್ಲಿ ವಾಯವ್ಯದಿಂದ ಬೀಸುವ ಗಾಳಿ ಸಿಕ್ಕಾಪಟ್ಟೆ ಚಳಿಯಿಂದ ಕೂಡಿರುತ್ತದೆ. ಇದೇ ವೇಳೆ, ಪೂರ್ವದ ಗಾಳಿಯು ಹೆಚ್ಚು ಬೆಚ್ಚಗಿನಿಂದ ಕೂಡಿರುತ್ತದೆ. ಆದರೆ, ಜನವರಿ 20ರ ಬಳಿಕ ಮತ್ತೊಮ್ಮೆ ಉತ್ತರ ಭಾರತವು ಚಳಿ ಗಾಳಿಯನ್ನು ಅನುಭವಿಸಬಹುದು.
ಇಷ್ಟೊಂದು ಚಳಿ ಏಕೆ?
ಪ್ರಸಕ್ತ ಸಾಲಿನಲ್ಲಿ ಉತ್ತರ ಭಾರತವು ಜನವರಿಯಲ್ಲಿ ದಾಖಲೆಯ ಚಳಿಗಾಲವನ್ನು ಎದುರಿಸುತ್ತಿದೆ. ಮೆಡಿಟರೇನಿಯನ್ ಪ್ರದೇಶದಿಂದ ಸಕ್ರಿಯ ಗಾಳಿ ಬೀಸದಿದ್ದರೆ ಈ ರೀತಿಯ ವಿಪರೀತ ಚಳಿಯು ದೀರ್ಘ ಕಾಲದವರೆಗೆ ಉಳಿಯುತ್ತದೆ. ಈ ಪಶ್ಚಿಮದ ಮಾರುತಗಳು ಹೆಚ್ಚು ತೇವಾಂಶವನ್ನು ಹೊಂದಿರುವುದರಿಂದ, ಈ ಪ್ರದೇಶಕ್ಕೆ ಅಪ್ಪಳಿಸುತ್ತಿದ್ದಂತೆ ಇಲ್ಲಿನ ಚಳಿಯನ್ನು ಕಡಿಮೆ ಮಾಡುತ್ತವೆ. ಆದರೆ, ಈ ವರ್ಷ ಬಹಳಷ್ಟು ಸಕ್ರಿಯ ಉಷ್ಣವಲಯ ಮಾರುತಗಳು ಈ ಪ್ರದೇಶದತ್ತ ಬೀಸಿಲ್ಲ. ಡಿಸೆಂಬರ್‌ನಿಂದ ಇಲ್ಲಿಯವರೆಗೆ ಸಕ್ರಿಯ ಉಷ್ಣವಲಯದ ಮಾರುತಗಳನ್ನು ಪಡೆದುಕೊಂಡಿಲ್ಲ. ಇವುಗಳ ಅನುಪಸ್ಥಿತಿಯಲ್ಲಿ ವಾಯವ್ಯ ಮಾರುತಗಳು ಬೀಸಿದಾಗ, ತಾಪಮಾನವು ಮತ್ತಷ್ಟು ಕುಸಿದು ಚಳಿ ಹೆಚ್ಚಾಗುತ್ತಿದೆ.
ಏನಿದು ಶೀತ ಗಾಳಿ?
ವಾಡಿಕೆಗಿಂತ ಕಡಿಮೆ ತಾಪಮಾನವನ್ನು ಹೊತ್ತು ತರುವ ಅಲೆಗಳನ್ನು ಶೀತ ಗಾಳಿ ಎನ್ನಬಹುದು. ಉತ್ತರ ಭಾರತದ ಬಿಹಾರ, ಪಶ್ಚಿಮ ಬಂಗಾಲ, ಒಡಿಶಾ ಮತ್ತು ಪೂರ್ವ ಭಾರತದ ಕೆಲವು ಸ್ಥಳಗಳಲ್ಲಿ ಎಂದಿನ ಸಾಮಾನ್ಯ ತಾಪಮಾನವಿದೆ. ಆದರೆ, ರಾಜಸ್ಥಾನ, ಪಂಜಾಬ್, ದಿಲ್ಲಿ, ಹರಿಯಾಣ ಅಥವಾ ಪಶ್ಚಿಮ ಉತ್ತರ ಪ್ರದೇಶದಲ್ಲಿರುವಷ್ಟು ಶೀತವಿಲ್ಲ. ರಾಜಸ್ಥಾನದಲ್ಲಿ ಎಷ್ಟು ಚಳಿ ಇದೆ ಎಂದರೆ, ಈ ರಾಜ್ಯದ ಫತೇಪುರ ಎಂಬಲ್ಲಿ ತಾಪಮಾನ ಮೈನಸ್ 3.5 ಡಿಗ್ರಿ ಸೆಲ್ಷಿಯಸ್‌ಗೆ ಕುಸಿದಿದೆ! ಹಾಗಾಗಿ, ಈ ಬಾರಿ ಉತ್ತರ ಭಾರತವು ದಾಖಲೆಯ ಚಳಿಗೆ ಸಾಕ್ಷಿಯಾಗುತ್ತಿದೆ. ಕಳೆದ ಎರಡು ದಶಕದಲ್ಲಿ ಮೂರನೇ ಅತಿ ಕೆಟ್ಟ ಚಳಿಗಾಲ ಎಂದು ಉತ್ತರ ಭಾರತೀಯರ ಅಂಬೋಣವಾಗಿದೆ.
ಇದನ್ನೂ ಓದಿ | Winter Care | ಚಳಿಗಾಲದಲ್ಲಿ ಆರೋಗ್ಯ ಕಾಪಾಡುವುದು ಕಷ್ಟವೇ? ಹಾಗೇನಿಲ್ಲ!