Site icon Vistara News

ವಿಸ್ತಾರ Explainer: ಎಐಎಡಿಎಂಕೆ ಬಿರುಕು, ಅಣ್ಣಾ ದ್ರಾವಿಡ ಕಳಗಂನಲ್ಲಿ ಅಣ್ಣಂದಿರ ಕಾಳಗವೇಕೆ?

aiadmk tussle

ತಮಿಳುನಾಡಿನ ರಾಜಕೀಯದಲ್ಲಿ ಹೊಸ ಕೋಲಾಹಲ ಎಂದರೆ ʻಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂʼ (ಎಐಎಡಿಎಂಕೆ) ನ ಇಬ್ಬರು ನಾಯಕರ ನಡುವಿನ ಕಾಳಗ. ಎಡಪ್ಪಾಡಿ ಕೆ.ಪಳನಿಸ್ವಾಮಿ (ಇಪಿಎಸ್)‌ ಮತ್ತು ಒ. ಪನ್ನೀರ್‌ಸೆಲ್ವಂ ನಡುವೆ ಪಕ್ಷದ ನಾಯಕತ್ವಕ್ಕೆ ಸಂಬಂಧಿಸಿದ ನಡೆದಿರುವ ಕಾಳಗವಿದು. ಶಶಿಕಲಾ ಅವರ ಅಧಿಪತ್ಯವನ್ನು ನಿವಾರಿಸಿಕೊಳ್ಳಲು ಒಂದು ಕಾಲದಲ್ಲಿ ಒಂದಾಗಿದ್ದ ಈ ಇಬ್ಬರೂ ನಾಯಕರು ಈಗ ಪಕ್ಷದ ನಾಯಕತ್ವದ ವಿಷಯಕ್ಕೆ ಬಂದಾಗ ಕಿತ್ತಾಡಿಕೊಂಡಿದ್ದಾರೆ.

ಹೆಚ್ಚಿನ ಶಾಸಕರ ಬೆಂಬಲ ಹೊಂದಿರುವ ಪಳನಿಸ್ವಾಮಿ ಸದ್ಯ ಮೇಲುಗೈ ಆಗಿದ್ದಾರೆ. ಜುಲೈ 11ರಂದು ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಹಂಗಾಮಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಪಳನಿಸ್ವಾಮಿಯವರನ್ನು ನೇಮಕ ಮಾಡಲಾಗಿದೆ. ಇದನ್ನು ತಡೆಯಲು ಮುಂದಾಗಿದ್ದ ಪನ್ನೀರ್‌ಸೆಲ್ವಂ ಸಭೆಗೆ ತಡೆಯಾಜ್ಞೆ ಕೋರಿ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್‌, ʼನಾವು ಯಾವುದೇ ರಾಜಕೀಯ ಪಕ್ಷದ ಒಳಜಗಳದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲʼ ಎಂದಿದೆ. ಇಬ್ಬರೂ ಪರಸ್ಪರರನ್ನು ಉಚ್ಚಾಟಿಸಿದ್ದಾರೆ.

ಏನು ಇವರಿಬ್ಬರ ನಡುವಿನ ಜಗಳ? ಇವರೇಕೆ ಒಂದಾದವರು, ಯಾಕೆ ಬೇರೆಯಾದರು? ಇಲ್ಲಿದೆ ವಿವರ.

ಶಾಶ್ವತ ಪ್ರಧಾನ ಕಾರ್ಯದರ್ಶಿ!

1989ರಿಂದ 2016ರವರೆಗೂ ಜಯಲಲಿತಾ ಅವರೇ ಎಐಎಡಿಎಂಕೆ ಪಕ್ಷದ ಮಹಾನಾಯಕಿ ಆಗಿದ್ದರು. ಮುಖ್ಯಮಂತ್ರಿ ಆಗಿದ್ದಾಗಲೂ ಪಕ್ಷದ ಮಹಾಕಾರ್ಯದರ್ಶಿ ಹುದ್ದೆ ಅವರ ಬಳಿಯೇ ಇತ್ತು. ಆಗ ವಿ. ಶಶಿಕಲಾ ಅವರು ಜಯಾ ನಿಕಟವರ್ತಿಯಾಗಿದ್ದರು. ಪಕ್ಷದ ಆಗುಹೋಗುಗಳ ಹಿಡಿತ ಶಶಿಕಲಾ ಕೈಯಲ್ಲಿ ಇತ್ತು. 2016ರ ಡಿಸೆಂಬರ್‌ನಲ್ಲಿ ಜಯಲಲಿತಾ ಮರಣ ಹೊಂದಿದರು. ಆಗ ಪಕ್ಷದ ಅಧಿಪತ್ಯಕ್ಕೆ ಸಂಬಂಧಿಸಿ ಕೆಲವು ಸಣ್ಣ ಅಲೆಗಳು ಎದ್ದವು. ಆದರೆ ಅವುಗಳನ್ನು ತಣ್ಣಗಾಗಿಸಿ ಶಶಿಕಲಾ ಅವರೇ ಚುಕ್ಕಾಣಿ ಹಿಡಿದರು. ಈ ಅವಧಿಯಲ್ಲಿ ಅಲ್ಪಕಾಲದ ಮಟ್ಟಿಗೆ ಶಶಿಕಲಾ ಪಕ್ಷದ ಮಧ್ಯಂತರ ಜನರಲ್‌ ಸೆಕ್ರೆಟರಿ ಹುದ್ದೆಗೆ ಏರಿದರು.

ಅನುಕಂಪದ ಅಲೆಯಲ್ಲಿ ಪಕ್ಷವನ್ನು ಹಾಗೇ ಮುನ್ನಡೆಸಿ ಮುಖ್ಯಮಂತ್ರಿ ಹುದ್ದೆಗೂ ಶಶಿಕಲಾ ಏರಿಬಿಡುತ್ತಿದ್ದರೇನೋ. ಆದರೆ ಇದೇ ಸಂದರ್ಭದಲ್ಲಿ ಅಕ್ರಮ ಆಸ್ತಿ ಪ್ರಕರಣ ಬಿಗಡಾಯಿಸಿತು. ಶಶಿಕಲಾ ಅವರಿಗೆ ಕಾನೂನಿನ ಉರುಳು ಬಿತ್ತು. ಅವರು ಪರಪ್ಪನ ಅಗ್ರಹಾರದ ಪಾಲಾದರು. ಈ ಸಂದರ್ಭದಲ್ಲಿ ಪಳನಿಸ್ವಾಮಿ ಕೂಡ ಪಕ್ಷದ ನಾಯಕತ್ವದಲ್ಲಿ ಗಣನೀಯ ಧ್ವನಿಯಾಗಿ ಮೂಡಿಬಂದರು. ಎರಡು ಬಣಗಳಾದವು. ಜಯಲಲಿತಾ ಅವರು ಅಸ್ವಸ್ಥರಾಗಿದ್ದಾಗ ತಾತ್ಕಾಲಿಕವಾಗಿ ಪನ್ನೀರ್‌ಸೆಲ್ವಂ ಸ್ಟಾಂಡ್‌ಬೈ ಮುಖ್ಯಮಂತ್ರಿ ಆಗಿದ್ದರು. ಈಗಲೂ ತಮ್ಮ ಆಪ್ತರಾದ ಪನ್ನೀರ್‌ಸೆಲ್ವಂ ಅವರನ್ನು ಕೂರಿಸಿ ಶಶಿಕಲಾ ಜೈಲಿಗೆ ಹೋದರು.

ಈ ಸಂದರ್ಭದಲ್ಲಿ ದಿ. ಜಯಲಲಿತಾ ಅವರೇ ಸದಾಕಾಲ ಪಕ್ಷದ ಅಧಿನಾಯಕಿಯಾಗಿರುತ್ತಾರೆ ಎಂಬುದನ್ನು ಸೂಚಿಸುವಂತೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅವರಿಗೇ ಶಾಶ್ವತವಾಗಿ ಮೀಸಲಾಗಿಡಲಾಯಿತು. ಪಳನಿಸ್ವಾಮಿ ಸಂಯೋಜಕರಾಗಿ ಮತ್ತು ಪನ್ನೀರಸೆಲ್ವಂ ಸಹ ಸಂಯೋಜಕರಾಗಿ ಪಕ್ಷವನ್ನು ಮುನ್ನಡೆಸಿದರು.

ಶಶಿಕಲಾಗೆ ಗೇಟ್‌ಪಾಸ್‌ ನೀಡಲು ಒಂದಾದರು

ಶಶಿಕಲಾ ಜೈಲಿಗೆ ಹೋದ ಬಳಿಕ ಪಕ್ಷದಲ್ಲಿ ಅಧಿಪತ್ಯ ಸ್ಥಾಪಿಸಲು ಮುಂದಾದ ಪನ್ನೀರ್‌ಸೆಲ್ವಂ, ಶಶಿಕಲಾ ಅವರ ವಿರುದ್ಧ ದಂಗೆಯೆದ್ದರು. ಇದರಿಂದ ಸಿಟ್ಟಿಗೆದ್ದ ಶಶಿಕಲಾ, ಪನ್ನೀರ್‌ಸೆಲ್ವಂ ಅವರನ್ನು ಇಳಿಸಿ ತಮ್ಮ ಇನ್ನೊಬ್ಬ ಆಪ್ತ ಪಳನಿಸ್ವಾಮಿಯನ್ನು ಮುಖ್ಯಮಂತ್ರಿ ಹುದ್ದೆಗೆ ಏರಿಸಿದರು. ಇದು ಪನ್ನೀರ್‌ಸೆಲ್ವಂ ಅವರ ಜನಪ್ರಿಯತೆಯ ಇಳಿಕೆಗೂ, ಪಳನಿಸ್ವಾಮಿ ಅವರ ಏರಿಕೆಗೂ ಕಾರಣವಾಯ್ತು. ಆದರೆ ಈ ಸಂದರ್ಭದಲ್ಲಿ ಸಮಯ ಸಾಧಿಸಿ ಇಬ್ಬರೂ ಮುಖಂಡರು ಒಂದಾದರು. ಶಶಿಕಲಾ ಅವರನ್ನು ಪಕ್ಷದ ಮಧ್ಯಂತರ ಜನರಲ್‌ ಸೆಕ್ರೆಟರಿ ಸ್ಥಾನದಿಂದ ಕಿತ್ತೊಗೆದರು. ಪಳನಿಸ್ವಾಮಿ ಸಿಎಂ ಆದರೆ, ಪನ್ನೀರ್‌ಸೆಲ್ವಂ ಡಿಸಿಎಂ ಆದರು. ನಿಧಾನವಾಗಿ ಪಳನಿಸ್ವಾಮಿ ಬಹುತೇಕ ಎಲ್ಲಾ ಶಾಸಕರನ್ನು ತಮ್ಮ ಕಡೆಗೆ ಮಾಡಿಕೊಂಡರು. ಬಹಳ ಚುರುಕಾಗಿದ್ದ ಪಳನಿಸ್ವಾಮಿ, ಬಹುಬೇಗ ಪಕ್ಷವನ್ನು ಕರಗತ ಮಾಡಿಕೊಂಡರು.

ಇದನ್ನೂ ಓದಿ: ಎಐಎಡಿಎಂಕೆ ದ್ವಿನಾಯಕತ್ವ ವಿವಾದ; ಪಳನಿಸ್ವಾಮಿ ಪ್ರಧಾನ ಕಾರ್ಯದರ್ಶಿ, ಬೆಂಬಲಿಗರಿಂದ ಬೀದಿ ಗಲಾಟೆ

2021ರ ಚುನಾವಣೆ ಫಲಿತ

2021ರಲ್ಲಿ ತಮಿಳುನಾಡು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜನತೆ ಎಐಎಡಿಎಂಕೆಯನ್ನು ಕೆಳಗಿಳಿಸಿ, ಡಿಎಂಕೆಯನ್ನು ಆರಿಸಿದರು. ಎಐಎಡಿಎಂಕೆಯ ಸ್ಥಾನಬಲ 136ರಿಂದ 75ಕ್ಕೆ ಇಳಿಯಿತು. ಇದರ ಬಳಿಕ ಪಕ್ಷದಲ್ಲಿ ದ್ವಿ ನಾಯಕತ್ವದ ಬಗ್ಗೆ ಅಸಮಾಧಾನ ಆರಂಭವಾಯಿತು. ಏಕ ನಾಯಕತ್ವ ಇದ್ದರೆ ಪಕ್ಷವನ್ನು ಮುನ್ನಡೆಸಲು ಸುಲಭ, ಪಕ್ಷವನ್ನು ಒಬ್ಬ ನಾಯಕನೇ ಮುನ್ನಡೆಸಬೇಕು ಎಂಬ ವಾದವನ್ನು ಪಳನಿಸ್ವಾಮಿ ಬಣದ ಶಾಸಕರು ಪ್ರತಿಪಾದಿಸತೊಡಗಿದರು. ಈ ಕೂಗು ಹೆಚ್ಚಾಗುತ್ತಿದ್ದಂತೆ ಪಳನಿಸ್ವಾಮಿ ಕೂಡ ಏಕನಾಯಕತ್ವವನ್ನು ಸಮರ್ಥಿಸಿದರು. ಇದಕ್ಕೆ ಹಿರಿಯ ನಾಯಕರ ಬೆಂಬಲವೂ ದೊರೆತಿತ್ತು. ಹೆಚ್ಚಿನ ಶಾಸಕರೂ ಪಳನಿಸ್ವಾಮಿ ಕಡೆಗಿದ್ದರು. ಈ ಕುರಿತು ಜೂನ್‌ ತಿಂಗಳಲ್ಲಿ ಒಂದು ಸಭೆ ಕರೆಯಲಾಯಿತು. ಆದರೆ ಈ ಸಭೆಯಲ್ಲಿ ಏನೂ ತೀರ್ಮಾನವಾಗಿರಲಿಲ್ಲ. ಜುಲೈ 11ರಂದು ಮತ್ತೊಂದು ಸಭೆ ನಿಗದಿಯಾಗಿತ್ತು. ಈ ಸಭೆಗೆ ತಡೆಯಾಜ್ಞೆ ಕೋರಿ ಒಪಿಎಸ್‌ ಕೋರ್ಟಿಗೆ ಹೋದರು. ಕೋರ್ಟ್‌ ಒಲಿಯಲಿಲ್ಲ. ಇತ್ತ ಸಾಮಾನ್ಯ ಸಭೆಯು ಇಪಿಎಸ್‌ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದೆ.

ಹೀಗೆ ಜಯಲಲಿತಾ ಅವರಿಗೆ ಮೀಸಲಾಗಿದ್ದ ಪ್ರಧಾನ ಕಾರ್ಯದರ್ಶಿ ಸ್ಥಾನ ಇಪಿಎಸ್‌ ಪಾಲಾಗಿದೆ. ಅತ್ತ ಒಪಿಎಸ್‌ ಒಂಟಿಯಾಗಿದ್ದಾರೆ.

ಒಪಿಎಸ್‌ ಕತೆ ಮುಂದೇನು?

ಒಂಟಿಯಾಗಿರುವ ಒಪಿಎಸ್‌ ಬಳಿ ಎರಡು ಹಾದಿಗಳಿವೆ. ಒಂದು, ತಮ್ಮ ಹಿಂದಿನ ನಾಯಕಿ ಶಶಿಕಲಾ ಮತ್ತು ಅವರ ಸೋದರ ಸಂಬಂಧಿ ದಿನಕರನ್‌ ಅವರ ಬಳಿಗೆ ತೆರಳುವುದು. ಹೀಗಾದರೆ ಇಪಿಎಸ್‌ ಅವರ ಶತ್ರು ಪ್ರಬಲವಾಗುತ್ತಾನೆ. ಎರಡನೇ ದಾರಿ ಬಿಜೆಪಿ ಜತೆಗೆ ಸೇರುವುದು. ಆಗಲೂ ತಮಿಳುನಾಡಿನಲ್ಲಿ ಬಿಜೆಪಿ ಹಾದಿ ಸುಗಮವಾಗುತ್ತದೆ. ಎಐಎಡಿಎಂಕೆ ಸ್ವಲ್ಪ ದುರ್ಬಲವಾಗಬಹುದು. ಏಕಾಂಗಿಯಾಗಿ ಸ್ಪರ್ಧಿಸುವ ಕೆಲಸವನ್ನಂತೂ ಒಪಿಎಸ್‌ ಮಾಡಲಾರರು.

ಜಾತಿ ಲೆಕ್ಕಾಚಾರ

ಜಾತಿ ಲೆಕ್ಕಾಚಾರ ತೆಗೆದು ನೋಡಿದರೆ ಇಬ್ಬರೂ ತಮಿಳುನಾಡಿನ ಎರಡು ಪ್ರಬಲ ಜಾತಿಗಳಿಗೆ ಸೇರಿದ್ದಾರೆ. ಇಪಿಎಸ್‌ ಗೌಂಡರ್‌ ಜಾತಿಗೂ, ಒಪಿಎಸ್‌ ತೇವರ್‌ ಜಾತಿಗೂ ಸೇರಿದವರು. ಗೌಂಡರ್‌ ಜಾತಿಯವರ ಪ್ರಮಾಣ ಪಶ್ಚಿಮ ಭಾಗದಲ್ಲಿ ಹಾಗೂ ದೇವರ್‌ ಜಾತಿಯ ಪ್ರಮಾಣ ದಕ್ಷಿಣ ಭಾಗದಲ್ಲಿ ಹೆಚ್ಚು ಇದೆ. ಕಳೆದ ಚುನಾವಣೆಯಲ್ಲಿ ಎಐಎಡಿಎಂಕೆ ಪಶ್ಚಿಮ ಭಾಗದಲ್ಲಿ 33 ಸೀಟುಗಳನ್ನು ಹಾಗೂ ದಕ್ಷಿಣ ಭಾಗದಲ್ಲಿ 16 ಸೀಟುಗಳನ್ನು ಗೆದ್ದುಕೊಂಡಿದೆ. ಜಯಲಲಿತಾ ಈ ಎರಡೂ ಸಮುದಾಯಗಳಿಂದ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದರು. ಪ್ರಸ್ತುತ ಒಡಕಿನ ಪರಿಣಾಮ ಏನಾಗುತ್ತದೆ ಎಂಬುದನ್ನು ಮುಂದಿನ ಚುನಾವಣೆಯಲ್ಲಿ ನೋಡಬೇಕಿದೆ.

ಇದನ್ನೂ ಓದಿ: AIADMK Tussle: ತಮಿಳುನಾಡು ವಿಪಕ್ಷ ಗೊಂದಲ; ಎಐಎಡಿಎಂಕೆಯಿಂದ ಪನ್ನೀರಸೆಲ್ವಂ ಉಚ್ಚಾಟನೆ

Exit mobile version