Site icon Vistara News

ವಿಸ್ತಾರ Explainer: ಪಶ್ಚಿಮ ಬಂಗಾಳದ ಚುನಾವಣೆ ಕಣ ರಕ್ತರಂಜಿತ, ಯಾಕೀ ಕದನ?

west bengal violence

ಪಶ್ಚಿಮ ಬಂಗಾಲದ ರಾಜಕೀಯದ ವೈರ ಬೀದಿಗಳಿಗೂ ಕಾಲಿಟ್ಟಿದ್ದು, ಇಲ್ಲಿ ನಡೆಯುತ್ತಿರುವ ಪಂಚಾಯತ್‌ ಚುನಾವಣೆ ರಕ್ತರಂಜಿತವಾಗಿದೆ. ರಾಜಕೀಯ ಪಕ್ಷಗಳ ಬಣಗಳು ಪರಸ್ಪರ ಹಿಂಸಾತ್ಮಕವಾಗಿ ಬಡಿದಾಡಿಕೊಳ್ಳುತ್ತಿದ್ದು, (West Bengal poll violence) ಈಗಾಗಲೇ ಒಂಬತ್ತು ಹೆಣಗಳು ಉರುಳಿವೆ.

ಮಂಗಳವಾರ ಭಂಗಾರ್‌ ಎಂಬಲ್ಲಿ ಭಾರತೀಯ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್) ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಬೀದಿಬೀದಿಯಲ್ಲಿ ಘರ್ಷಣೆ ನಡೆಸಿದರು. ಬಾಂಬ್‌ಗಳನ್ನು ಎಸೆಯಲಾಯಿತು. ಪೊಲೀಸರ ಮೇಲೆ ಕಲ್ಲು ತೂರಲಾಯಿತು. ಕೋಲ್ಕತ್ತಾ ಹೈಕೋರ್ಟ್ ಇಲ್ಲಿ ನಡೆಯುವ ಚುನಾವಣೆಗೆ ಕೇಂದ್ರ ಮೀಸಲು ಪಡೆಗಳನ್ನು ನಿಯೋಜಿಸಲು ಮೊನ್ನೆ ಮಂಗಳವಾರ ಆದೇಶಿಸಿತು. ಅದಕ್ಕೂ ಮುನ್ನ ನಡೆದ ಹಿಂಸೆಯನ್ನು ಗಮನಿಸಿ ಈ ಆದೇಶ ಕೊಡಲಾಗಿತ್ತು.

ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗಳನ್ನು ದಿನಾಂಕ ಜೂನ್ 9ರಂದು ಘೋಷಣೆಯಾಯಿತು. ಅಲ್ಲಿಂದೀಚೆಗೆ ಹಿಂಸಾತ್ಮಕ ಚಕಮಕಿಗಳು ನಡೆಯುತ್ತಲೇ ಬಂದಿವೆ. ಇಂದು (ಜುಲೈ 8) ಇಲ್ಲಿ ಚುನಾವಣೆ ನಡೆಯುತ್ತಿದೆ. 60,000 ಅಭ್ಯರ್ಥಿಗಳು ಇಲ್ಲಿ ಆಕಾಂಕ್ಷಿಗಳಾಗಿದ್ದಾರೆ. ಆದರೆ ಇವರಿಗೆ ನಾಮಪತ್ರ ಸಲ್ಲಿಸಲು ನೀಡಿದ್ದ ಕಾಲಾವಕಾಶ ಕೇವಲ ಐದು ದಿನ. ಇದನ್ನು ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆ ಆರಂಭವಾಯಿತು. ಅಲ್ಲಿಂದ ಘರ್ಷಣೆಗೆ ನಾಂದಿಯಾಯಿತು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಹಿಂಸೆಗೆ ಸಾಕ್ಷಿಯಾದವು.

ನಿನ್ನೆ ರಾತ್ರಿಯಿಂದ ಇಂದಿನವರೆಗೆ ಇಲ್ಲಿ 9 ಮಂದಿ ಚುನಾವಣೆ ಹಿಂಸೆಯಲ್ಲಿ ಸತ್ತಿದ್ದಾರೆ. ಇದರಲ್ಲಿ 5 ಮಂದಿ ಟಿಎಂಸಿ, ತಲಾ ಒಬ್ಬ ಬಿಜೆಪಿ, ಸಿಪಿಎಂ, ಕಾಂಗ್ರೆಸ್‌ ಕಾರ್ಯಕರ್ತ ಎಂದು ಗೊತ್ತಾಗಿದೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಇಂದು ಹಲವು ಮತದಾನ ಕೇಂದ್ರಗಳಲ್ಲಿ ಬ್ಯಾಲೆಟ್‌ ಬಾಕ್ಸ್‌ಗಳನ್ನು ಧ್ವಂಸಗೊಳಿಸಲಾಗಿದೆ.

ಯಾವ ಎಲೆಕ್ಷನ್?‌

ಪಶ್ಚಿಮ ಬಂಗಾಲದ ಪಂಚಾಯತ್ ರಾಜ್‌ಗೆ ಈ ಚುನಾವಣೆ ನಡೆಯುತ್ತಿದೆ. ಗ್ರಾಮ ಪಂಚಾಯತ್, ಮಂಡಲ ಪರಿಷತ್, ಜಿಲ್ಲಾ ಪರಿಷತ್ ಹೀಗೆ ಮೂರು ಮೂರು ಹಂತಗಳಿವೆ ಇಲ್ಲಿ. ರಾಜ್ಯದಲ್ಲಿ 3,317 ಗ್ರಾಮ ಪಂಚಾಯತ್‌ಗಳಿದ್ದು, ಒಟ್ಟು 63,283 ಪಂಚಾಯತ್ ಸ್ಥಾನಗಳು ಇವೆ. ಗ್ರಾಮ ಪಂಚಾಯಿತಿ ಚುನಾವಣಾ ಕೇಂದ್ರಗಳ ಸಂಖ್ಯೆ 58,594.

ಹಿಂಸಾಚಾರ ಏಕೆ?

ರಾಜ್ಯದ ದಕ್ಷಿಣ 24 ಪರಗಣ, ಉತ್ತರ 24 ಪರಗಣ, ಭಂಗಾರ್‌, ಬುಡ್ಗೆ, ಮುರ್ಷಿದಾಬಾದ್, ಬಿರ್‌ಭುಮ್, ಪೂರ್ವ ಮಿಡ್ನಾಪುರ, ಪೂರ್ವ ಬುರ್ದ್ವಾನ್, ಕೂಚ್‌ಬೆಹಾರ್‌ಗಳಲ್ಲಿ ಹಿಂಸಾಚಾರಗಳು ನಡೆದಿವೆ. ಇಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ನಾಮಪತ್ರ ಸಲ್ಲಿಸದಂತೆ ತಡೆಯುತ್ತಿವೆ ಎಂದು ಬಿಜೆಪಿ, ಎಡಪಕ್ಷಗಳು ಮತ್ತು ಕಾಂಗ್ರೆಸ್ ಆರೋಪಿಸಿವೆ. ಕೆಲವು ದಿನಗಳ ಹಿಂದೆ, ದಕ್ಷಿಣ 24 ಪರಗಣದ ಭಾಂಗಾರ್‌ನಲ್ಲಿರುವ ಬ್ಲಾಕ್ ಡೆವಲಪ್‌ಮೆಂಟ್ ಆಫೀಸ್‌ಗೆ ಗುಂಪೊಂದು ನುಗ್ಗಿ ಪ್ರತಿಪಕ್ಷಗಳ ಅಭ್ಯರ್ಥಿಗಳಿಗೆ ನಾಮಪತ್ರ ವಿತರಿಸಿದ ನೌಕರನ ಮೇಲೆ ಹಲ್ಲೆ ನಡೆಸಿತ್ತು. ಮುರ್ಷಿದಾಬಾದ್ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ನ ಸ್ಥಳೀಯ ಮುಖಂಡನೊಬ್ಬ ಮಾರಕಾಸ್ತ್ರಗಳೊಂದಿಗೆ ಸಿಕ್ಕಿಬಿದ್ದಿದ್ದಾನೆ. ಟಿಎಂಸಿ, ಹಿಂಸೆಯಲ್ಲಿ ತನ್ನದೇನೂ ಪಾತ್ರವಿಲ್ಲ ಎನ್ನುತ್ತಿದೆ.

2018ರಲ್ಲಿ ನಡೆದ ಚುನಾವಣೆಯಲ್ಲಿ ಟಿಎಂಸಿ 95%ಕ್ಕಿಂತ ಹೆಚ್ಚು ಗ್ರಾಮ ಪಂಚಾಯತ್‌ಗಳನ್ನು ಗೆದ್ದುಕೊಂಡಿತ್ತು. ಅದರಲ್ಲಿ 34% ಸ್ಥಾನಗಳು ಅವಿರೋಧವಾಗಿದ್ದವು. ಇದು ಬಂಗಾಳ ಪಂಚಾಯತ್ ಚುನಾವಣೆಯ ಇತಿಹಾಸದಲ್ಲೇ ದಾಖಲೆ. ಆಗಲೂ ನಮಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ದೊಡ್ಡ ಪ್ರಮಾಣದ ಹಿಂಸಾಚಾರ ಮತ್ತು ಚುನಾವಣಾ ರಿಗ್ಗಿಂಗ್ ಆರೋಪವನ್ನು ಟಿಎಂಸಿ ಎದುರಿಸಿತ್ತು. ಪೊಲೀಸರ ಪಾತ್ರದ ಬಗ್ಗೆಯೂ ಶಂಕೆ ವ್ಯಕ್ತವಾಗಿತ್ತು.

ಇದನ್ನೂ ಓದಿ: Panchayat Polls: ಪಶ್ಚಿಮ ಬಂಗಾಳದಲ್ಲಿ ಬೀಳುತ್ತಿವೆ ಹೆಣಗಳು; ಸ್ವತಂತ್ರ ಅಭ್ಯರ್ಥಿ ಮಗಳ ಹಣೆಗೆ ಗುಂಡೇಟು!

2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷದ ಇನ್ನಷ್ಟು ಆಕ್ರಮಣಕಾರಿಯಾಗಿತ್ತು. ಆದರೆ ಬಿಜೆಪಿ 18 ಸಂಸದೀಯ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಇದುವರೆಗಿನ ಅತ್ಯುತ್ತಮ ಸಾಧನೆ ಮಾಡಿತು. ಇದರೊಂದಿಗೆ ಬಿಜೆಪಿ- ತೃಣಮೂಲ ಕಾರ್ಯಕರ್ತರ ನಡುವೆ ಘರ್ಷಣೆಗಳು ಹೆಚ್ಚಿದವು. 2021ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮತ್ತೆ ಬಿಜೆಪಿ ಕಾರ್ಯಕರ್ತರ ಮೇಲೆ ಹಿಂಸಾಚಾರ ನಡೆಸಿದ ಆರೋಪಗಳನ್ನು ಎದುರಿಸಿತು. ಈ ಬಗ್ಗೆ ಹೆಚ್ಚಿನ ತನಿಖೆಗೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕೋಲ್ಕತ್ತಾ ಹೈಕೋರ್ಟ್‌ ನಿರ್ದೇಶನ ನೀಡಿತು.

ಪಂಚಾಯತ್ ಚುನಾವಣೆಯೇ ನಿರ್ಣಾಯಕ

2024ರ ಲೋಕಸಭೆ ಚುನಾವಣೆಯತ್ತ ಈಗ ಎಲ್ಲ ಪಕ್ಷಗಳು ಕಣ್ಣಿಟ್ಟಿವೆ. ಇದಕ್ಕೆ ಮುಂಚಿತವಾಗಿ ಬಂದಿರುವ ಪಂಚಾಯತ್ ಚುನಾವಣೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳಿಗೆ ಅಗ್ನಿಪರೀಕ್ಷೆ. 2021ರ ಅಸೆಂಬ್ಲಿ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದ ಬಿಜೆಪಿಯ ಅಬ್ಬರದ ಪ್ರಚಾರದ ಹೊರತಾಗಿಯೂ ಟಿಎಂಸಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ. ಆದರೆ ಆಡಳಿತ ಪಕ್ಷದ ವಿರುದ್ಧ ಭಾರಿ ಭ್ರಷ್ಟಾಚಾರದ ಆರೋಪಗಳಿವೆ.

ಎಸ್‌ಎಸ್‌ಸಿ ಹಗರಣ, ಕಲ್ಲಿದ್ದಲು ಕಳ್ಳಸಾಗಣೆ, ಜಾನುವಾರು ಕಳ್ಳಸಾಗಣೆ ಪ್ರಕರಣಗಳಲ್ಲಿ ಟಿಎಂಸಿ ನಾಯಕರನ್ನು ಬಂಧಿಸಲಾಗಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಕೂಡ ಮುನ್ಸಿಪಲ್ ನೇಮಕಾತಿ ಹಗರಣದ ತನಿಖೆಯನ್ನು ಆರಂಭಿಸಿದೆ. ಕಲ್ಲಿದ್ದಲು ಕಳ್ಳತನ ಪ್ರಕರಣ ಮತ್ತು ಎಸ್‌ಎಸ್‌ಸಿ ಹಗರಣದಲ್ಲಿ ಮುಖ್ಯಮಂತ್ರಿ ಮಮತಾ ಅವರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಸಿಬಿಐನಿಂದ ವಿಚಾರಣೆ ಎದುರಿಸುತ್ತಿದ್ದಾರೆ. ರಾಜಕೀಯವಾಗಿ ಪ್ರಭಾವಿಯಾಗಿರುವ ರಾಜಬನ್ಶಿ ಸಮುದಾಯದ 17 ವರ್ಷದ ಬಾಲಕಿಯೊಬ್ಬಳು ಏಪ್ರಿಲ್‌ನಲ್ಲಿ ಸಾಮೂಹಿಕ ಅತ್ಯಾಚಾರ ಹಾಗೂ ಸಾವಿಗೆ ಒಳಗಾಗಿರುವುದು ಟಿಎಂಸಿಯ ವಿರುದ್ಧ ಇನ್ನಷ್ಟು ರೊಚ್ಚನ್ನು ಕೆರಳಿಸಿದೆ.

ಇವೆಲ್ಲದರ ಹಿನ್ನೆಲೆಯಲ್ಲಿ, ರಾಜಕೀಯ ಬದಲಾವಣೆಯ ಗಾಳಿ ಯಾವ ಕಡೆಗೆ ಬೀಸುತ್ತಿದೆ ಎಂಬುದನ್ನು ಸದ್ಯದ ಪಂಚಾಯತ್‌ ಚುನಾವಣೆ ಸೂಚಿಸಲಿದೆ. ಇದಕ್ಕಾಗಿಯೇ ಜನಮನದ ಮೇಲೆ ಹಿಡಿತ ಸಾಧಿಸಲು ಎಲ್ಲ ಪಕ್ಷಗಳು ಸೆಣಸಾಡುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಹಿಂಸೆ ಹೊಸತಲ್ಲ. ಈ ಬಾರಿ 9 ಹೆಣಗಳು ಬೀಳುವುದರೊಂದಿಗೆ ಅದು ಇನ್ನಷ್ಟು ಗಂಭಿರವಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೂ ಮುನ್ನ ಹಿಂಸಾಚಾರ; ನಾಲ್ವರು ಟಿಎಂಸಿ ಕಾರ್ಯಕರ್ತರ ಹತ್ಯೆ

Exit mobile version