Site icon Vistara News

ವಿಸ್ತಾರ ಸಂಪಾದಕೀಯ: ಅಡ್ವಾಣಿಗೆ ಭಾರತ ರತ್ನ, ಇತಿಹಾಸ ನೆನಪಿಸಿಕೊಳ್ಳುವ ಗೌರವ

LK Advani

BJP veteran L K Advani stable, discharged from AIIMS hospital

ದೇಶದ ಶ್ರೇಷ್ಠ ಮುತ್ಸದ್ದಿಗಳಲ್ಲಿ ಒಬ್ಬರಾದ, ಬಿಜೆಪಿಯ ಜ್ಯೇಷ್ಠ ನಾಯಕ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ (LK Advani) ಅವರಿಗೆ ಭಾರತ ರತ್ನ (Bharat Ratna) ಘೋಷಿಸಲಾಗಿದೆ. ದೇಶದ ಅತ್ಯುನ್ನತ ನಾಗರಿಕ ಗೌರವಕ್ಕೆ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿಪಕ್ಷ ನಾಯಕರೂ ಕೂಡ ಎಲ್‌ ಕೆ ಅಡ್ವಾಣಿಯವರಿಗೆ ಭಾರತ ರತ್ನ ಘೋಷಿಸಿರುವುದನ್ನು ಸ್ವಾಗತಿಸಿದ್ದಾರೆ. ಅಡ್ವಾಣಿಯವರೂ ಭಾವುಕರಾಗಿ ಸಂತಸ ವ್ಯಕ್ತಪಡಿಸಿದ್ದು, ಕೃತಜ್ಞತೆಯ ಪತ್ರ ಬರೆದು ತಮ್ಮ ಆತ್ಮೀಯ ಗೆಳೆಯ, ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಹಾಗೂ ತಮ್ಮ ಹಿರಿಯರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಸೇರಿದಂತೆ ಹಲವರನ್ನು ಸ್ಮರಿಸಿದ್ದಾರೆ. ಕಳೆದ ವಾರ ಬಿಹಾರದ ನಾಯಕ ಕರ್ಪೂರಿ ಠಾಕೂರ್‌ ಅವರಿಗೂ ಭಾರತ ರತ್ನವನ್ನು ಘೋಷಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಯಾರಿಗೂ ಈ ಅತ್ಯುನ್ನತ ಪ್ರಶಸ್ತಿಯನ್ನು ನೀಡಿರಲಿಲ್ಲ. 2019ರಲ್ಲಿ ಪ್ರಣಬ್‌ ಮುಖರ್ಜಿ ಅವರಿಗೆ ನೀಡಿದ್ದೇ ಕೊನೆ. ನಂತರ ಈ ವರ್ಷವೇ ನೀಡಲಾಗುತ್ತಿದೆ. ನಾಲ್ಕು ವರ್ಷಗಳ ಬರ ನೀಗಿದೆ. ದೇಶದ ಅತ್ಯುನ್ನತ ನಾಗರಿಕ ಗೌರವಕ್ಕೆ ಇವರಿಬ್ಬರ ಹೆಸರು ಶ್ರೇಷ್ಠ ಆಯ್ಕೆಗಳಾಗಿವೆ.

ಕರ್ಪೂರಿ ಠಾಕೂರ್‌ ಅವರಿಗೆ ಭಾರತ ರತ್ನ ಪುರಸ್ಕಾರ ನೀಡುವ ಮೂಲಕ ಮೋದಿ ಸರ್ಕಾರ ಉತ್ತಮ ಮಾದರಿಯೊಂದನ್ನು ಸೃಷ್ಟಿಸಿದ್ದಲ್ಲದೆ, ಒಂದು ಸಂದೇಶವನ್ನೂ ರವಾನಿಸಿತ್ತು. ಕರ್ಪೂರಿ ಠಾಕೂರ್‌ ಹಿಂದುಳಿದ ವರ್ಗದ ದೊಡ್ಡ ನಾಯಕರಾಗಿದ್ದವರು. ದಲಿತರು, ಹಿಂದುಳಿದ ಸಮುದಾಯ ಹಾಗೂ ಬುಡಕಟ್ಟು ಜನಾಂಗದ ನಾಯಕರು ಭಾರತ ರತ್ನದಂಥ ಪುರಸ್ಕಾರಗಳನ್ನು ಪಡೆದಾಗ, ಅದು ದುರ್ಬಲರಲ್ಲಿ ತಾವೂ ಈ ದೇಶ ಕಟ್ಟಿದವರು ಎಂಬ ಸ್ವಾಭಿಮಾನದ ಭಾವವನ್ನು ಮೂಡಿಸುತ್ತದೆ. ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವ ಮೂಲಕ, ಇತ್ತೀಚೆಗೆ ತಾನೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಮೂಲಕ ಜಗತ್ತಿಗೆ ನೀಡಿದ ಸಂದೇಶವನ್ನು ಕೇಂದ್ರ ಇನ್ನಷ್ಟು ಸ್ಪಷ್ಟವಾಗಿ ಸಾರಿದೆ.

“ನನ್ನ ಜೀವನದುದ್ದಕ್ಕೂ ಸೇವೆ ಸಲ್ಲಿಸಲು ನಾನು ಶ್ರಮಿಸಿದ ಆದರ್ಶಗಳು ಮತ್ತು ತತ್ವಗಳಿಗೆ ಇದು ಸಲ್ಲುತ್ತಿದೆ. ನನ್ನ 14ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದಾಗಿನಿಂದ ನನ್ನ ಪ್ರೀತಿಯ ದೇಶಕ್ಕೆ ನನ್ನ ಜೀವನ ಸಮರ್ಪಿತವಾಗಿದೆ. ನನಗೆ ನಿಯೋಜಿಸಲಾದ ಯಾವುದೇ ಕಾರ್ಯವನ್ನು ನಿಸ್ವಾರ್ಥದಿಂದ ಮಾಡಿದ್ದೇನೆ. ನನ್ನ ಸೇವೆಯಲ್ಲಿ ಯಾವುದರಲ್ಲೂ ಪ್ರತಿಫಲವನ್ನು ಹುಡುಕಲಿಲ್ಲ. ಇದಂ ನ ಮಮ ಎಂಬ ಧ್ಯೇಯವಾಕ್ಯದಿಂದ ದುಡಿದಿದ್ದೇನೆ. ಈ ಜೀವನ ನನ್ನದಲ್ಲ. ನನ್ನ ಜೀವನ ನನ್ನ ರಾಷ್ಟ್ರಕ್ಕಾಗಿ ಮಾತ್ರ ಎಂಬುದು ನನ್ನ ನಂಬಿಕೆಯಾಗಿದೆ” ಎಂದು ಅಡ್ವಾಣಿ ಹೇಳಿದ್ದಾರೆ. ಇದು ಅವರ ವಿನೀತ ಭಾವವನ್ನು ತೋರಿಸುತ್ತದೆ.

ಅಡ್ವಾಣಿಯವರು ಹಲವು ಕಾರಣಗಳಿಗಾಗಿ ಭಾರತದ ರಾಜಕೀಯ ಇತಿಹಾಸದಲ್ಲಿ ಸದಾ ಸ್ಮರಣೀಯರಾದವರು. ಇಂದು ಕೇಂದ್ರದಲ್ಲಿ ಯಶಸ್ವಿ ಎರಡು ಅವಧಿಗಳ ಆಡಳಿತವನ್ನು ಪೂರೈಸಿರುವ ಬಿಜೆಪಿಯ ಮೂಲ ರೂಪವಾದ ಜನಸಂಘದ ಕಾಲದಿಂದಲೇ ಅವರು ರಾಜಕೀಯಕ್ಕೆ ಸೇರಿದವರು. ಅವರ ರಾಜಕೀಯದ ಮೂಲ ಮಂತ್ರ ರಾಷ್ಟ್ರೀಯತೆ ಹಾಗೂ ದೇಶಪ್ರೇಮವಾಗಿತ್ತು. ಒಂದು ಕಾಲದಲ್ಲಿ ಬಿಜೆಪಿ ಸಂಸತ್ತಿನಲ್ಲಿ ಎರಡೇ ಸ್ಥಾನಗಳನ್ನು ಹೊಂದಿದ್ದ ಕಾಲವಿತ್ತು. ಅಂದಿನಿಂದ ಬಿಜೆಪಿಯ ಬೆಳವಣಿಗೆಯ ಮಹಾಯಾತ್ರೆಯನ್ನು ಅಡ್ವಾಣಿ ತಮ್ಮ ಬೆನ್ನ ಮೇಲೆ ಹೊತ್ತು ಸಾಗಿಸಿದವರು. ಅಡ್ವಾಣಿ ಹಾಗೂ ವಾಜಪೇಯಿ ಜೊತೆಯಾಗಿ ಬಿಜೆಪಿಯನ್ನು ಜೋಡೆತ್ತುಗಳಂತೆ ದೇಶಾದ್ಯಂತ ಕಟ್ಟಿ ನಿಲ್ಲಿಸಿದರು. ಇಂದು ಮುನ್ನೂರಕ್ಕೂ ಅಧಿಕ ಸಂಸದರು ಲೋಕಸಭೆಗೆ ಆರಿಸಿ ಬರಲು ಫಲವತ್ತಾದ ನೆಲವನ್ನು ತಮ್ಮ ದುಡಿಮೆಯಿಂದ ಸೃಷ್ಟಿಸಿದವರು ಈ ಇಬ್ಬರು. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ, ಬಿಜೆಪಿಯು ಅಧಿಕಾರಕ್ಕೆ ಬರಲು ಉರುವಲಿನಂತೆ ಕೆಲಸ ಮಾಡಿತು. ಆದರೆ ಇದನ್ನು ದೇಶವ್ಯಾಪಿ ಆಂದೋಲನವಾಗಿಸಲು ಕಾರ್ಣಕರ್ತರಾದವರು ಅಡ್ವಾಣಿ. ಅವರು ಹಲವು ರಥಯಾತ್ರೆಗಳನ್ನು ಮಾಡದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.

ಇದನ್ನೂ ಓದಿ: LK Advani: ನನ್ನ ತತ್ವಗಳಿಗೆ ಸಂದ ಗೌರವ; ಭಾರತರತ್ನ ಬಳಿಕ ಅಡ್ವಾಣಿ ಭಾವುಕ ನುಡಿ

ಅಡ್ವಾಣಿ ದೇಶದ ಶ್ರೇಷ್ಠ ಮುತ್ಸದ್ದಿ ಕೂಡ ಹೌದು. ಅವರು ಅತ್ಯುತ್ತಮ ಸಂಸದೀಯ ಪಟು ಕೂಡ ಆಗಿದ್ದರು. ಸಂಸತ್ತಿನಲ್ಲೂ ಹೊರಗೂ ಒಬ್ಬ ಜವಾಬ್ದಾರಿಯುತ ಜನನಾಯಕ ಹೇಗಿರಬೇಕು ಎಂಬುದನ್ನು ತಮ್ಮ ನಡತೆಯ ಮೂಲಕ ತೋರಿಸಿದರು. ಹವಾಲಾ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದಾಗ, ನೈತಿಕ ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದರಲ್ಲದೆ, ತನಿಖೆಗೆ ಸಿದ್ಧರಿರುವುದಾಗಿ ಘೋಷಿಸಿದರು. ಇಂಥ ಅಪರಂಜಿ ವ್ಯಕ್ತಿತ್ವಗಳು ಭಾರತದ ರಾಜಕೀಯದಲ್ಲಿ ತುಂಬ ಕಡಿಮೆ. ಅಡ್ವಾಣಿ ಅವರು ಬಿಜೆಪಿಯ ಅಧ್ಯಕ್ಷರಾಗಿ ಸುದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. 10 ಬಾರಿ ಸಂಸದರಾಗಿದ್ದ ಅಡ್ವಾಣಿ ಅವರು ಗೃಹ ಸಚಿವರಾಗಿ, 2002ರಿಂದ 2004ರವರೆಗೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಂಪುಟದಲ್ಲಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಸ್ವತಃ ಪ್ರಧಾನಿಯಾಗುವ ಅರ್ಹತೆ ಹೊಂದಿದ್ದರೂ ಅದನ್ನು ವಾಜಪೇಯಿ ಅವರಿಗಾಗಿ ಬಿಟ್ಟುಕೊಟ್ಟರು. ವಾಜಪೇಯಿ ಸರ್ಕಾರದಲ್ಲಿದ್ದುಕೊಂಡು ಹಲವಾರು ನೀತಿ ನಿರೂಪಣೆಗಳಲ್ಲಿ ತಮ್ಮತನವನ್ನು ತೋರಿಸಿದರು. ಪಾಕಿಸ್ತಾನಕ್ಕೂ ಹೋಗಿ ಬಂದರು. ಅಲ್ಲಿನ ಸರ್ಕಾರದೊಂದಿಗೂ ಸ್ನೇಹಹಸ್ತ ಬೆಸೆಯುವ ಪ್ರಯತ್ನಗಳನ್ನು ಮಾಡಿದರು. ಅವರು ʼಹಿಂದೂ ಹೃದಯ ಸಾಮ್ರಾಟ್‌ʼ ಎನಿಸಿಕೊಂಡಿದ್ದರೂ ʼಅನ್ಯಮತದ್ವೇಷಿʼ ಆಗಿರಲಿಲ್ಲ. ಆದರೆ ಈ ದೇಶದ ಬಹುಸಂಖ್ಯಾತ ಹಿಂದೂಗಳಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದುದು ಸಿಗಲೇಬೇಕು ಎಂಬ ವಿಚಾರದಲ್ಲಿ ಅವರಿಗೆ ದೃಢತೆಯಿತ್ತು. ಆದ್ದರಿಂದಲೇ ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ವೇಳೆ ಅವರು ಭಾವುಕರಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version