ಸಾರ್ವಜನಿಕ ಮಹತ್ವದ ಭಾರಿ ಮೊತ್ತದ ಹಣಕಾಸಿನ ವಹಿವಾಟಿನ ಉತ್ತರದಾಯಿತ್ವದ ಬಗ್ಗೆ ದೂರಗಾಮಿ ಪರಿಣಾಮ ಹೊಂದಿದ ತೀರ್ಪನ್ನು ಸುಪ್ರೀಂ ಕೋರ್ಟ್ (Supreme Court) ಇಂದು ಪ್ರಕಟಿಸಿದೆ. ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡಬಹುದಾದ ಚುನಾವಣಾ ಬಾಂಡ್ ಯೋಜನೆಯು (Electoral Bonds) ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಂವಿಧಾನ ನೀಡಿರುವ ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆಯಾಗುವುದರಿಂದ ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪಂಚ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ತೀರ್ಪು ನೀಡಿದೆ. “ಚುನಾವಣಾ ಬಾಂಡ್ ಯೋಜನೆಯು ಸಂವಿಧಾನದ 19(1)(A) ವಿಧಿ ಅಡಿಯಲ್ಲಿ ನೀಡಲಾದ ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಇದರಿಂದ ಕೊಡು-ಕೊಳ್ಳುವ ವ್ಯವಹಾರಕ್ಕೆ (ಕ್ವಿಡ್ ಪ್ರೊ ಕ್ವೊ) ಪುಷ್ಟಿ ನೀಡುತ್ತದೆ. ಹಾಗೆಯೇ, ಕಂಪನಿಗಳ ಕಾಯ್ದೆಗೆ ತಿದ್ದುಪಡಿ ತಂದಿರುವುದು ಅಸಾಂವಿಧಾನಿಕವಾಗಿದೆ. ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಯ ಮೂಲ ತಿಳಿಯುವ ಹಕ್ಕು ದೇಶದ ನಾಗರಿಕರಿಗೆ ಇದೆ” ಎಂದು ನ್ಯಾಯಾಲಯ ಹೇಳಿದೆ.
ಚುನಾವಣಾ ಬಾಂಡ್ ಯೋಜನೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈಗ ಐತಿಹಾಸಿಕ ತೀರ್ಪು ನೀಡಿದ್ದು, ಯೋಜನೆಯ ಸಾಂವಿಧಾನಿಕ ಮಾನ್ಯತೆಯನ್ನು ಅಲ್ಲಗಳೆದಿದೆ. ಚುನಾವಣಾ ಬಾಂಡ್ ಯೋಜನೆಯನ್ನು 2017ರಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಅಧಿವೇಶನದಲ್ಲಿ ಮೊದಲು ಪ್ರಸ್ತಾಪಿಸಿದ್ದರು. ಹಣಕಾಸು ಕಾಯ್ದೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಗಳಿಗೆ ತಿದ್ದುಪಡಿ ತಂದು 2018ರ ಜನವರಿಯಲ್ಲಿ ಚುನಾವಣಾ ಬಾಂಡ್ ಯೋಜನೆ ಜಾರಿಗೊಳಿಸಲಾಯಿತು. ಚುನಾವಣಾ ಬಾಂಡ್ ಯೋಜನೆ ಅಡಿಯಲ್ಲಿ ಭಾರತದ ನಾಗರಿಕ ಅಥವಾ ಭಾರತದಲ್ಲಿ ನೋಂದಣಿಯಾದ ಕಂಪನಿಯು ಯಾವುದೇ ರಾಜಕೀಯ ಪಕ್ಷಕ್ಕೆ ಚುನಾವಣೆ ಬಾಂಡ್‌ಗಳನ್ನು ಖರೀದಿಸುವ ಮೂಲಕ ದೇಣಿಗೆ ನೀಡಬಹುದಾಗಿತ್ತು. ಭಾರತೀಯ ಸ್ಟೇಟ್ ಬ್ಯಾಂಕ್‌ನ (SBI) ಆಯ್ದ ಶಾಖೆಗಳಲ್ಲಿ 1 ಸಾವಿರದಿಂದ ಆರಂಭಿಸಿ 1 ಕೋಟಿ ರೂ.ವರೆಗಿನ ಚುನಾವಣೆ ಬಾಂಡ್ ಖರೀದಿಸಿ ದೇಣಿಗೆ ನೀಡಬಹುದಾಗಿತ್ತು. ಇಲ್ಲಿ ದೇಣಿಗೆ ನೀಡಿದವರ ಕುರಿತು ಯಾವುದೇ ಮಾಹಿತಿ ಬಹಿರಂಗವಾಗುತ್ತಿರಲಿಲ್ಲ. ದೇಣಿಗೆಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು.
2022-23ರ ಸಾಲಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ದುಬಾರಿ ಮೊತ್ತವನ್ನು ದೇಣಿಗೆ ರೂಪದಲ್ಲಿ ಪಡೆದಿದೆ. ಚುನಾವಣಾ ಆಯೋಗಕಕ್ಕೆ ಬಿಜೆಪಿ-ಕಾಂಗ್ರೆಸ್ ಸಲ್ಲಿಸಿರುವ ಮಾಹಿತಿ ಪ್ರಕಾರ, 2022-23ರ ಸಾಲಿನಲ್ಲಿ ಬಿಜೆಪಿ 1300 ಕೋಟಿ ರೂಪಾಯಿ ಹಣವನ್ನು ಚುನಾವಣಾ ಬಾಂಡ್ ಯೋಜನೆಯಲ್ಲಿ ದೇಣಿಗೆಯಾಗಿ ಪಡೆದಿದೆ. ಬಿಜೆಪಿಯ ಒಟ್ಟು ದೇಣಿಗೆ ಮೊತ್ತದಲ್ಲಿ ಶೇಕಡಾ 61ರಷ್ಟು ಚುನಾವಣಾ ಬಾಂಡ್ ಮೂಲಕವೇ ಸಂಗ್ರಹಿಸಿದೆ. ಕಾಂಗ್ರೆಸ್ ಚುನಾವಣಾ ಬಾಂಡ್ ಮೂಲಕ 171 ಕೋಟಿ ರೂಪಾಯಿ ಸಂಗ್ರಹಿಸಿದೆ. ಐದು ಪ್ರಾದೇಶಿಕ ಪಕ್ಷಗಳಾದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್), ತೃಣಮೂಲ ಕಾಂಗ್ರೆಸ್ (ಟಿಎಂಸಿ), ಡಿಎಂಕೆ, ಬಿಜು ಜನತಾ ದಳ (ಬಿಜೆಡಿ) ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷಗಳು 2022- 23ನೇ ಸಾಲಿನಲ್ಲಿ ಒಟ್ಟಾರೆಯಾಗಿ ಚುನಾವಣಾ ಬಾಂಡ್‌ಗಳ ಮೂಲಕ 1,243 ಕೋಟಿ ರು. ದೇಣಿಗೆಯನ್ನು ಸ್ವೀಕರಿಸಿವೆ. ಪ್ರಾದೇಶಿಕ ಪಕ್ಷಗಳಿಗೆ ಅನಾಮಿಕ ಮೂಲಗಳಿಂದ ಹರಿದುಬಂದ ಹಣ 887 ಕೋಟಿ ರೂ. ಈ ಭಾರಿ ಮೊತ್ತದ ಹಣದ ಬಗ್ಗೆ ಸಾರ್ವಜನಿಕರು ಯಾವುದೇ ಪ್ರಶ್ನೆಯನ್ನೇ ಕೇಳುವಂತಿರಲಿಲ್ಲ. ಯಾವುದೇ ಮಾಹಿತಿಯನ್ನು ಕೇಳುವಂತಿರಲಿಲ್ಲ. “ನಮಗೆ ಮತ ಹಾಕಿ, ಆದರೆ ನಮ್ಮ ಹಣದ ಮೂಲ ಕೇಳಬೇಡಿ” ಎಂದು ರಾಜಕೀಯ ಪಕ್ಷಗಳು ಮತದಾರರಿಗೆ ಪರೋಕ್ಷವಾಗಿ ಈ ಮೂಲಕ ಹೇಳಿದಂತಿತ್ತು. ಇದೀಗ ಮತದಾರರು ಈ ಹಣದ ಮೂಲವನ್ನು ಪ್ರಶ್ನಿಸಬಹುದಾಗಿದೆ.
ಹೀಗೆ ಪ್ರಶ್ನೆ ಮಾಡುವ ಶಕ್ತಿಯೇ ದೇಶದ ಪ್ರಜೆಗೆ ದೊಡ್ಡದೊಂದು ಶಕ್ತಿಯನ್ನು ತಂದುಕೊಡುತ್ತದೆ. ಯಾವ ಯಾವ ರಾಜಕೀಯ ಪಕ್ಷಗಳಿಗೆ ಯಾರು ಭಾರಿ ಮೊತ್ತದ ಹಣ ನೀಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಸಾಮಾನ್ಯವಾಗಿ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಗಳಿಗೆ ದೊಡ್ಡ ಕಾರ್ಪೊರೇಟ್‌ಗಳು ಹಾಗೂ ಪ್ರಭಾವಿಗಳು ದೊಡ್ಡ ಮೊತ್ತದ ದೇಣಿಗೆ ನೀಡುತ್ತಾರೆ. ಈ ದೇಣಿಗೆಗೆ ಪ್ರತಿಯಾಗಿ, ತಮಗೆ ಬೇಕಾದ ಕೆಲಸಗಳನ್ನು ಸುಲಭವಾಗಿ ಮಾಡಿಸಿಕೊಳ್ಳುತ್ತಾರೆ ಮಾತ್ರವಲ್ಲ; ಇದು ರಾಜಕಾರಣಿಗಳು ಹಾಗೂ ಕಾರ್ಪೊರೇಟ್‌ಗಳ ನಡುವೆ ಒಂದು ಅನೈತಿಕ ಜಾಲವನ್ನೇ ಹೆಣೆಯುತ್ತದೆ. ಈ ಕೊಡು- ಕೊಳ್ಳುವಿಕೆಯ ಗಣಿತ ಅರ್ಥವಾದ ದಿನ ಪ್ರಜೆಗೆ ತನಗೆ ಯಾರು ಮೋಸ ಮಾಡುತ್ತಿದ್ದಾರೆ ಎಂಬುದು ಕೂಡ ಅರ್ಥವಾಗುತ್ತದೆ.
ಸಾರ್ವಜನಿಕ ಹಣ ಅಥವಾ ತೆರಿಗೆ ಹಣದ ಉತ್ತರದಾಯಿತ್ವವನ್ನು ನಾವು ಪ್ರಶ್ನಿಸುತ್ತೇವೆ. ನಮ್ಮಿಂದ ವಸೂಲಿಯಾದ ತೆರಿಗೆ ಹಣದ ಪೈಸೆ ಪೈಸೆ ಲೆಕ್ಕವನ್ನೂ ನಾವು ಸರ್ಕಾರದಿಂದ ಮಾಹಿತಿ ಹಕ್ಕಿನ ಮೂಲಕ ಪಡೆಯಬಹುದಾಗಿದೆ. ಆದರೆ ಸರ್ಕಾರ ನಡೆಸುವ ಅಥವಾ ವಿಪಕ್ಷದಲ್ಲಿರುವ ದೊಡ್ಡ ರಾಜಕೀಯ ಪಕ್ಷಗಳ ಬಳಿ ಇರುವ ಹಣ ಎಲ್ಲಿಂದ ಬರುತ್ತಿದೆ ಎಂಬುದರ ಬಗ್ಗೆ ಗೌಪ್ಯತೆಯನ್ನು ಇದುವರೆಗೂ ಕಾಪಾಡಿಕೊಳ್ಳಲಾಗಿತ್ತು. ಈ ಮೊದಲು ಪ್ರಭಾವಿಗಳ ಬಳಿ ಇದ್ದ ಕಪ್ಪು ಹಣ ಬಹಳ ಸಲೀಸಾಗಿ ರಾಜಕೀಯ ಪಕ್ಷಗಳ ಬುಟ್ಟಿ ಸೇರಿ ಬಿಳಿ ಹಣವಾಗಿಬಿಡುತ್ತಿತ್ತು. ಇನ್ನು ಹಾಗೆ ಆಗುವಂತಿಲ್ಲ. ಸರ್ಕಾರದ ಅಧಿಕಾರಿಗಳಲ್ಲಿ, ರಾಜಕಾರಣಿಗಳಲ್ಲಿ ಪಾರದರ್ಶಕತೆಯನ್ನು ಅಪೇಕ್ಷಿಸುವವ ರಾಜಕೀಯ ಪಕ್ಷಗಳು ತಮ್ಮಲ್ಲಿಯೂ ಹಣಕಾಸಿನ ಬಗ್ಗೆ ಪಾರದರ್ಶಕತೆ ಇಟ್ಟುಕೊಳ್ಳಬೇಕಲ್ಲವೇ? ಇದು ಹಾಗೆ ಪಾರದರ್ಶಕತೆಯನ್ನು ರೂಢಿಸುವ ಒಂದು ಮಹತ್ವದ ತೀರ್ಪಾಗಿದೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಯುಎಇ ದೇವಾಲಯ, ಹಿಂದೂ ಅಸ್ಮಿತೆಯ ಭವ್ಯ ಪ್ರದರ್ಶನ