Site icon Vistara News

ವಿಸ್ತಾರ TOP 10 NEWS | ಕಾಮನ್ವೆಲ್ತ್‌ ಪದಕ ಬೇಟೆಯಿಂದ ನೀತಿ ಆಯೋಗದ ಭೇಟಿವರೆಗಿನ ಪ್ರಮುಖ ಸುದ್ದಿಗಳಿವು

Vistara TOP 10

ಬೆಂಗಳೂರು: ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಪದಕ ಬೇಟೆಯನ್ನು ಮುಂದುವರಿಸಿದ್ದಾರೆ ಭಾನುವಾರ ಏಳು ಪದಕ ಸೇರಿ ಇಲ್ಲಿಯವರೆಗೆ ಒಟ್ಟು 47 ಪದಕಗಳನ್ನು ಗಳಿಸಿದ್ದಾರೆ. ರಾಜ್ಯದಲ್ಲಿ ಎರಡನೇ ಹಂತದ ಮಳೆ ಹಾನಿ ಆರಂಭವಾಗಿದ್ದು, ಅಪಾರ ಪ್ರಮಾಣದ ಜೀವ ಹಾನಿ, ಬೆಳೆ ಹಾನಿ, ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಚಾಮರಾಜಪೇಟೆ ಮೈದಾನದಲ್ಲಿ ಧ್ವಜ ಹಾರಿಸಿಯೇ ಸಿದ್ಧ ಎಂದು ನಾಗರಿಕರ ಒಕ್ಕೂಟ ಘೋಷಿಸಿದೆ, ಬಿಬಿಎಂಪಿ ಚುನಾವಣೆಗೆ ಪಕ್ಷಗಳು ಸಿದ್ಧತೆ ಆರಂಭಿಸಿವೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. CWG- 2022 | ಹತ್ತನೇ ದಿನದಲ್ಲಿ ಏಳು ಪದಕ ಗೆದ್ದ ಭಾರತದ ಕ್ರೀಡಾಪಟುಗಳು
ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನ ಹತ್ತನೇ ದಿನವಾದ ಭಾನುವಾರ ಮೂರು ಬಂಗಾರ, ಒಂದು ಬೆಳ್ಳಿ ಹಾಗೂ ಮೂರು ಕಂಚಿನ ಪದಕ ಸೇರಿ ಭಾರತಕ್ಕೆ ಒಟ್ಟು ೭ ಪದಕಗಳು ಲಭಿಸಿವೆ. ಇದು ಸಂಜೆಯವರೆಗಿನ (ಭಾರತೀಯ ಕಾಲಮಾನ) ಫಲಿತಾಂಶವಾಗಿದ್ದು, ಭಾರತದ ಇನ್ನಷ್ಟು ಸ್ಪರ್ಧಿಗಳು ಪ್ರಶಸ್ತಿ ಕಣದಲ್ಲಿದ್ದಾರೆ. ಭಾನುವಾರ ಬಾಕ್ಸಿಂಗ್‌ನಲ್ಲಿ ಎರಡು ಬಂಗಾರ (ಮಹಿಳೆಯರ ಹಾಗೂ ಪುರುಷರ ವಿಭಾಗ) ಲಭಿಸಿದೆ. ಪುರುಷರ ಟ್ರಿಪಲ್‌ ಜಂಪ್‌ನಲ್ಲಿ ಒಂದು ಬಂಗಾರ ಹಾಗೂ ಒಂದು ಬೆಳ್ಳಿ ಪದಕ ದೊರಕಿದೆ. ಪುರುಷರ ರೇಸ್‌ ವಾಕ್‌ನಲ್ಲಿ, ಮಹಿಳೆಯರ ಜಾವೆಲಿನ್‌ ಎಸೆತದಲ್ಲಿ ಮತ್ತು ಮಹಿಳೆಯರ ಹಾಕಿ ತಂಡಕ್ಕೆ ಕಂಚಿನ ಪದಕಗಳು ಲಭಿಸಿವೆ. ಇದರೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ೪೭ಕ್ಕೆ ಏರಿದೆ. ಇದರಲ್ಲಿ ೧೬ ಬಂಗಾರ, ೧೨ ಬೆಳ್ಳಿ ಹಾಗೂ ೧೯ ಕಂಚಿನ ಪದಕಗಳಿವೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
CWG- 2022 | ಟ್ರಿಪಲ್‌ ಜಂಪ್‌ನಲ್ಲಿ ಡಬಲ್‌ ಸ್ವೀಪ್‌, ಬಂಗಾರ ಗೆದ್ದ ಎಲ್ದೋಸ್‌, ಬೆಳ್ಳಿ ಗೆದ್ದ ಅಬೂಬಕರ್‌

2. Heavy Rain | ಹಾಸನದಲ್ಲಿ ಮರ ಬಿದ್ದು ಬೈಕ್‌ ಸವಾರ ಸಾವು, ಮಳೆ ಅಬ್ಬರಕ್ಕೆ ಪ್ರತ್ಯೇಕ ಕಡೆ ಐವರು ಬಲಿ
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಗರಸಂಗಿ ಹಳ್ಳದಲ್ಲಿ ಮೂರು ಎಮ್ಮೆಗಳು ಹರಿಯುವ ನೀರಿನಲ್ಲಿ (Heavy Rain) ಕೊಚ್ಚಿಕೊಂಡ ಹೋಗುತ್ತಿದ್ದಾಗ, ಅವುಗಳನ್ನು ಉಳಿಸಲು ಹೋಗಿ ರೈತರೊಬ್ಬರು ಮೃತಪಟ್ಟಿದ್ದಾರೆ. ಪಟ್ಟಣದ ರೈತ ನಂದಪ್ಪ ಸಂಗಪ್ಪ ಸೊನ್ನಾದ (65) ಮೃತಪಟ್ಟಿರುವ ದುರ್ದೈವಿ. ಜಮೀನಿನ ಪಕ್ಕದ ಹಳ್ಳದ ದಂಡೆಯಲ್ಲಿ ಎಮ್ಮೆಗಳನ್ನು ಮೇಯಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕೊಲ್ಹಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದ್ದು, ರೈತನೊಂದಿಗೆ ಎಮ್ಮೆಗಳೂ ನೀರು ಪಾಲಾಗಿವೆ. ರಾಜ್ಯಾದ್ಯಂತ ನಾಲ್ಕು ಪ್ರಕರಣಗಳಲ್ಲಿ ಇಬ್ಬರು ಮಕ್ಕಳು, ವೃದ್ಧೆ ಸೇರಿ ಐವರು ಅಸುನೀಗಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

3. Rain News | ಕೃಷಿ ಜಮೀನಿಗೆ ನುಗ್ಗಿದ ನೀರು; ಕೈಗೆ ಬಂದ ಬೆಳೆ ಬಾಯಿಗೆ ಬಾರದಂತೆ ಮಾಡಿದ ಮಳೆ
ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ(Rain News) ಜಮೀನುಗಳಿಗೆ ನೀರು ನುಗ್ಗಿ ವಿವಿಧೆಡೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ. ಕಟಾವಿಗೆ ಬಂದು ನಿಂತ ತರಕಾರಿ, ಹೂವು ಸೇರಿ ವಿವಿಧ ಬೆಳೆಗಳು ನೀರುಪಾಲಾಗಿರುವುದರಿಂದ ಫಸಲು ನಷ್ಟ ಭೀತಿ ಎದುರಾಗಿದ್ದು, ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ವಿವಿಧೆಡೆ ಸಂಭವಿಸಿದ ಬೆಳೆ ಹಾನಿ ಕುರಿತು ಸಂಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

4. NITI Aayog Meet | ನೀತಿ ಆಯೋಗದ ಸಭೆಯಲ್ಲಿ ಸ್ವಾವಲಂಬನೆ ಚರ್ಚೆ; ರಾಜ್ಯಗಳನ್ನು ಹೊಗಳಿದ ಪ್ರಧಾನಿ
ನೀತಿ ಆಯೋಗದ ಆಡಳಿತ ಮಂಡಳಿ ಏಳನೇ ಸಭೆ ಇಂದು ಫಲಪ್ರದವಾಗಿ ನಡೆಯಿತು. ರಾಜ್ಯಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್​ ಗವರ್ನರ್​​ಗಳು ಪಾಲ್ಗೊಂಡು, ತಮ್ಮ ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲಾದ ವಿಶೇಷ ಯೋಜನೆಗಳು, ವ್ಯವಸ್ಥೆಗಳ ಬಗ್ಗೆ ಪ್ರಸ್ತುತಪಡಿಸಿದರು ಎಂದು ನೀತಿ ಆಯೋಗದ ಸಿಇಒ ಪರಮೇಶ್ವರನ್​ ಅಯ್ಯರ್​ ತಿಳಿಸಿದರು. ಸಭೆಯಲ್ಲಿ ಮುಖ್ಯಮಂತ್ರಿಗಳು ವಿವಿಧ ಬೇಡಿಕೆಗಳನ್ನು ಇಟ್ಟಿದ್ದಾರೆ. ಅದರಲ್ಲಿ ಛತ್ತೀಸ್​ಗಢ್​ ಮುಖ್ಯಮಂತ್ರಿ ಭೂಪೇಶ್ ಬಾಘೇಲ್​ ಮಾತನಾಡಿ, ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿ ರಾಜ್ಯಗಳ ಪಾಲನ್ನು ಹೆಚ್ಚಿಸುವಂತೆ ಮನವಿ ಮಾಡಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

5. ಬಿಬಿಎಂಪಿ ಚುನಾವಣೆ | ಒಂದೇ ದಿನ ಮೂರೂ ಪಕ್ಷಗಳ ರಣಕಹಳೆ: ಚುನಾವಣಾ ಕಣ ಸಿದ್ಧತೆ ಆರಂಭ
ಸರಿಸುಮಾರು ಎರಡು ವರ್ಷದಿಂದ ಸದಸ್ಯರಿಲ್ಲದೆ ಬಣಗುಡುತ್ತಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ನಡೆಯುವುದು ಖಚಿತ ಎನ್ನುವ ಮಾಹಿತಿ ಲಭಿಸುತ್ತಿದ್ದಂತೆಯೇ ಮೂರೂ ಪ್ರಮುಖ ಪಕ್ಷಗಳು ಒಂದೇ ದಿನದಲ್ಲಿ ಕಾರ್ಯಾರಂಭ ಮಾಡಿವೆ. ಜೆಡಿಎಸ್‌ ಚುನಾವಣಾ ಸಮಿತಿ ಹಾಗೂ ಪ್ರಣಾಳಿಕೆ ಸಮಿತಿ ರಚನೆ ಮಾಡಿದ್ದರೆ ಕಾಂಗ್ರೆಸ್‌ ಸಮಾವೇಶ ನಡೆಸಿದೆ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಮನೆಮನೆ ಸಂಪರ್ಕ ಆರಂಭಿಸಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

6. ಚಾಮರಾಜಪೇಟೆ ಮೈದಾನದಲ್ಲಿ ಧ್ವಜ ಹಾರುವುದು ಶತಃಸಿದ್ಧ: ನಾಗರಿಕರ ಒಕ್ಕೂಟ ಘೋಷಣೆ
ಚಾಮರಾಜಪೇಟೆ ಮೈದಾನವು ವಕ್ಫ್‌ ಮಂಡಳಿಗೆ ಸೇರಿದ್ದಲ್ಲ ಅದು ಸರ್ಕಾರದ ಅಸ್ತಿ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಘೋಷಿಸಿದ ಬೆನ್ನಲ್ಲೇ ಆಗಸ್ಟ್‌ 15ರಂದು ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವುದು ಶತಃಸಿದ್ಧ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ಘೋಷಣೆ ಮಾಡಿದೆ. ಬಿಬಿಎಂಪಿ ಆದೇಶದ ಹಿನ್ನೆಲೆಯಲ್ಲಿ ಒಕ್ಕೂಟದ ವತಿಯಿಂದ ಭಾನುವಾರ ಸುದ್ದಿಗೋಷ್ಠಿ ನಡೆಸಲಾಯಿತು. ಸುದ್ದಿಗೋಷ್ಟಿಯಲ್ಲಿ ವಿಶ್ವಸನಾತನ ಪರಿಷತ್, ಚಾಮರಾಜಪೇಟೆ ನಾಗರಿಕರ ಒಕ್ಕೂಟ, ವಂದೇ ಮಾತರಂ ಸಂಘಟನೆ, ಲಹರಿ ವೇಲು ಸೇರಿ ಹಲವರು ಉಪಸ್ಥಿತರಿದ್ದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಭದ್ರತೆ, ಮತ್ತೆ ಕೋರ್ಟಿಗೆ ಹೋಗಲು ವಕ್ಫ್‌ ಬೋರ್ಡ್‌ ಸಿದ್ಧತೆ

7. Isro | ಉಪಗ್ರಹಗಳು ಗುರಿ ಮುಟ್ಟಿಲ್ಲ ಎಂದ ಇಸ್ರೊ, ವಿದ್ಯಾರ್ಥಿನಿಯರಿಗೆ ನಿರಾಸೆ
ಸ್ವಾತಂತ್ರ್ಯ ಬಂದು 75 ವರ್ಷಗಳಾದ ಸಂಭ್ರಮದ ಭಾಗವಾಗಿ ಇಂದು ಇಸ್ರೋ ಅತಿ ಸಣ್ಣ ವಾಣಿಜ್ಯ ರಾಕೆಟ್​ ಎಸ್​ಎಸ್​ಎಲ್​ವಿ ಡಿ 1 ಮೂಲಕ AzaadiSAT ಎಂಬ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಶ್ರೀಹರಿಕೋಟಾದಿಂದ ಮುಂಜಾನೆ 9.18ಕ್ಕೆ ನಭಕ್ಕೆ ಚಿಮ್ಮಿದ್ದ ಈ ರಾಕೆಟ್​ ಮೂರು ಹಂತಗಳನ್ನು ಯಶಸ್ವಿಯಾಗಿ ದಾಟಿ, ನಾಲ್ಕನೇ ಹಂತದಲ್ಲಿ ಡೇಟಾ ಲಾಸ್​​ನಿಂದ ವಿಫಲಗೊಂಡಿದೆ. ಅದರ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO), ‘ಸಣ್ಣ ಉಪಗ್ರಹ ಉಡಾವಣಾ ವಾಹಕದಲ್ಲಿ ಇರಿಸಲಾಗಿದ್ದ ಉಪಗ್ರಹಗಳು ಇನ್ನು ಯಾವುದಕ್ಕೂ ಬಳಕೆಗೆ ಬರುವುದಿಲ್ಲ. ಯಾಕೆಂದರೆ ಎಸ್​ಎಸ್​ಎಲ್​​ವಿ-ಡಿ1 ವಾಹಕ ಅವುಗಳನ್ನು ವೃತ್ತಾಕಾರಾದ ಕಕ್ಷೆಯಲ್ಲಿ ಇಡುವ ಬದಲು, ದೀರ್ಘವೃತ್ತಾಕಾರ(ಅಂಡಾಕಾರ)ದ ಕಕ್ಷೆಯಲ್ಲಿ ಇರಿಸಿದೆ’ ಎಂದು ತಿಳಿಸಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ISRO SSLV Launch | ಎಸ್​ಎಸ್​ಎಲ್​ವಿ ವಾಹಕ ಎಡವಿದ್ದೆಲ್ಲಿ? ಇಲ್ಲಿದೆ ನಿಖರ ಮಾಹಿತಿ

8. Gehlot Controversy | ಮಹಿಳೆಯರ ಹತ್ಯೆ ಹೆಚ್ಚಲು ರೇಪಿಸ್ಟ್​​ಗಳಿಗೆ ಗಲ್ಲು ಕಾನೂನೇ ಕಾರಣ ಎಂದ ಸಿಎಂ ಗೆಹ್ಲೊಟ್‌
ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸುವ ಕಾನೂನು ಬಂದ ಮೇಲೆ ದೇಶದಲ್ಲಿ ಮತ್ತಷ್ಟು ಸಮಸ್ಯೆಯೇ ಆಗಿದೆ. ಮಹಿಳೆಯರನ್ನು ರೇಪ್​ ಮಾಡಿಯಾದ ಮೇಲೆ ಅವರನ್ನು ಕೊಲ್ಲುವ ಪ್ರವೃತ್ತಿ ಹೆಚ್ಚಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ ನಡೆಸಿದ ವೇಳೆ ಅಶೋಕ್​ ಗೆಹ್ಲೋಟ್​​ (Gehlot Controversy) ಈ ಹೇಳಿಕೆ ನೀಡಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

9. Gujarat Elections 2022 | ಗುಜರಾತ್​ ಗೆಲ್ಲಲು ಸಿದ್ಧತೆ; 24 ಗಂಟೆ ಉಚಿತ ವಿದ್ಯುತ್​ ಭರವಸೆ ನೀಡಿದ ಕೇಜ್ರಿವಾಲ್​
ಗುಜರಾತ್​ ವಿಧಾನಸಭೆ ಚುನಾವಣೆ ಡಿಸೆಂಬರ್​​​​ನಲ್ಲಿ ನಡೆಯಲಿದ್ದು, ಆಮ್ ಆದ್ಮಿ ಪಕ್ಷ ಈಗಾಗಲೇ ಅಲ್ಲಿ ಚುನಾವಣಾ ಸಿದ್ಧತೆ ನಡೆಸಿದೆ. 10 ವಿಧಾನಸಭಾ ಕ್ಷೇತ್ರಗಳಿಗೆ ಆಪ್​ನಿಂದ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಹಾಗೇ, ಆಪ್​​ನ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್​ ಅವರು ಈಗ ಚುನಾವಣಾ ಭರವಸೆಗಳನ್ನೂ ಕೊಟ್ಟಿದ್ದಾರೆ. ‘ಬರುವ ವಿಧಾನಸಭೆ ಚುನಾವಣೆಯಲ್ಲಿ ಗುಜರಾತ್​​ನಲ್ಲಿ ಆಮ್​ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ, ಇಲ್ಲಿನ ಮನೆಗಳಿಗೆ ದಿನದ 24 ಗಂಟೆಯೂ ವಿದ್ಯುತ್​ ನೀಡುತ್ತೇವೆ ಮತ್ತು ಕಳೆದ ವರ್ಷಗಳ ಬಿಲ್​​ಗಳನ್ನೆಲ್ಲ ಮನ್ನಾ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಹಾಗೇ ಉದ್ಯೋಗ ಅವಕಾಶ ಸೃಷ್ಟಿಸಿಕೊಡುವುದಾಗಿಯೂ ತಿಳಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

10. Bigg Boss Kannada | ಲಿವಿಂಗ್‌ ಏರಿಯಾದಲ್ಲಿ ಹೈಡ್ರಾಮಾ: ಮೊದಲ ದಿನ ಏಳು ಸ್ಪರ್ಧಿಗಳು ನಾಮಿನೇಟ್‌
ಬಿಗ್‌ ಬಾಸ್‌ ಒಟಿಟಿ ಕನ್ನಡದ ಮೊದಲ ದಿನದ ನಾಮಿನೇಷನ್‌ ಪ್ರಕ್ರಿಯೆ ಶುರುವಾಗಿದೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್‌ ಬಾಸ್‌ (Bigg Boss Kannada) ಈಗ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿದೆ. ಒಟ್ಟು 16 ಅಭ್ಯರ್ಥಿಗಳು ಈ ಶೋನಲ್ಲಿ ಭಾಗವಹಿಸಿದ್ದಾರೆ. ಬಿಗ್‌ ಬಾಸ್‌ ಮಾಹಿತಿಯಂತೆ ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್‌ ಮಾಡಬೇಕಿತ್ತು. ಸ್ಪರ್ಧಿಗಳು ಈಗಾಗಲೇ ತಮ್ಮ ಇಚ್ಛೆ ಪಟ್ಟಂತಹ ಎರಡು ಸ್ಪರ್ಧಿಗಳನ್ನು ನಾಮಿನೇಟ್‌ ಮಾಡಿದ್ದಾರೆ. ಮನೆಯ ಸ್ಪರ್ಧಿಗಳ ಆಯ್ಕೆ ಅನುಸಾರ ಏಳು ಸ್ಪರ್ಧಿಗಳು ಇದೀಗ ನಾಮಿನೇಟ್‌ ಆಗಿದ್ದಾರೆ. ಸೋನು ಗೌಡ, ಸ್ಫೂರ್ತಿ ಗೌಡ, ಆರ್ಯವರ್ಧನ್‌ ಗುರೂಜಿ, ಜಯಶ್ರೀ, ನಂದಿನಿ, ಜಶ್ವಂತ್‌, ಕಿರಣ್‌ ಹಾಗೂ ಅಕ್ಷತಾ ನಾಮಿನೇಟ್‌ ಆದವರು. ಈಗಾಗಲೇ ಲಿವಿಂಗ್‌ ಏರಿಯಾದಲ್ಲಿ ಹೈಡ್ರಾಮಾ ಶುರುವಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Exit mobile version