Site icon Vistara News

ವಿಸ್ತಾರ TOP 10 NEWS | ʻಅಪ್ಪುʼಗೆ ಕರ್ನಾಟಕ ರತ್ನ ಘೋಷಣೆಯಿಂದ ರೆಪೊ ದರ ಹೆಚ್ಚಳವರೆಗಿನ ಪ್ರಮುಖ ಸುದ್ದಿಗಳಿವು

Vistara TOP 10 05082022

ಬೆಂಗಳೂರು: ಈಗಾಗಲೆ ಬೆಲೆ ಏರಿಕೆ ಬಿಸಿಗೆ ತತ್ತರಿಸಿರುವ ಜನಸಾಮಾನ್ಯರ ಮೇಲೆ ರೆಪೊ ದರ ಹೆಚ್ಚಳದ ತಾಪವೂ ತಟ್ಟಲಿದೆ. ಆರ್‌ಬಿಐ ತನ್ನ ಹಣಕಾಸು ನೀತಿ ಘೋಷಣೆ ಮಾಡುತ್ತ ರೆಪೊ ದರ ಹೆಚ್ಚಳ ಮಾಡಿದೆ. ಗೃಹ, ವಾಹನ ಮುಂತಾದ ಸಾಲ ಪಡೆದಿರುವವರ ಇಎಂಐ ಏರಿಕೆಯಾಗಲಿದೆ. ಆದರೆ ಹಣ ಠೇವಣಿ ಇಟ್ಟವರಿಗೆ ಬಡ್ಡಿ ಏರಿಕೆಯ ಲಾಭ ಸಿಗಲಿದೆ. ಈ ನಡುವೆ ಬೆಲೆ ಏರಿಕೆ, ಜಿಎಸ್‌ಟಿ ಹೆಚ್ಚಳ ಸೇರಿ ಅನೇಕ ವಿಚಾರಗಳನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ ನಡೆಸಿದೆ, ಬಿಬಿಎಂಪಿ ಮೀಸಲಾತಿ ಸರಿಯಿಲ್ಲ ಎಂದು ಕರ್ನಾಟಕ ಕಾಂಗ್ರೆಸ್‌ ವಿಕಾಸಸೌಧಕ್ಕೆ ಮುತ್ತಿಗೆ ಹಾಕಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. RBI ರೆಪೊ ದರದಲ್ಲಿ 0.50% ಏರಿಕೆ ಘೋಷಣೆ, ಸಾಲದ ಬಡ್ಡಿ ದರ ಹೆಚ್ಚಳ
ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI Repo rate hike) ನಿರೀಕ್ಷೆಯಂತೆ ತನ್ನ ರೆಪೊ ದರವನ್ನು ೦.೫೦% ಏರಿಸಿದೆ. ಪರಿಷ್ಕೃತ ರೆಪೊ ದರ 5.40%ಕ್ಕೆ ಏರಿಕೆಯಾಗಿದೆ. ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಬಡ್ಡಿ ದರ (ರೆಪೊ ದರ) ಪರಿಷ್ಕರಣೆ ಸೇರಿದಂತೆ ಹಣಕಾಸು ಪರಾಮರ್ಶೆ ಸಮಿತಿಯ ವಿವರಗಳನ್ನು ನೀಡಿದ್ದಾರೆ. ಆರ್‌ಬಿಐ ರೆಪೊ ದರ ಏರಿಕೆಯ ಪರಿಣಾಮ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್‌ ಸಾಲ ದುಬಾರಿಯಾಗಲಿದೆ. ಇಎಂಐ ಕಂತು ಹೆಚ್ಚಲಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

2. ಬೆಲೆ ಏರಿಕೆ, ಜಿಎಸ್‌ಟಿ ಸೇರಿ ಅನೇಕ ವಿಚಾರಗಳನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ
ಬೆಲೆ ಏರಿಕೆ-ಜಿಎಸ್​ಟಿ ಹೆಚ್ಚಳ, ನಿರುದ್ಯೋಗ ಮತ್ತಿತರ ಸಮಸ್ಯೆಗಳನ್ನು ವಿರೋಧಿಸಿ ಸಂಸತ್ತಿನ ಒಳಗೆ ನಿರಂತರವಾಗಿ ಗದ್ದಲ-ಗಲಾಟೆ ಎಬ್ಬಿಸುತ್ತಿರುವ ಕಾಂಗ್ರೆಸ್​ ಇಂದು ರಾಷ್ಟ್ರಪತಿ ಭವನ ಚಲೋ, ಪ್ರಧಾನಿ ನಿವಾಸದತ್ತ ಮೆರವಣಿಗೆಯನ್ನೂ ಹಮ್ಮಿಕೊಳ್ಳಲು ಯೋಜನೆ ರೂಪಿಸಿತ್ತು. ಆದರೆ ದೆಹಲಿ ಪೊಲೀಸರು ಯಾವುದಕ್ಕೂ ಅನುಮತಿ ಕೊಟ್ಟಿರಲಿಲ್ಲ. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಜಲಫಿರಂಗಿ ಪ್ರಯೋಗಿಸಿದರು. ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿ ಅನೇಕರನ್ನು ಪೊಲೀಸರು ವಶಕ್ಕೆ ಪಡೆದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

3. BBMP ಮೀಸಲಾತಿ: ವಿಕಾಸಸೌಧಕ್ಕೆ ಮುತ್ತಿಗೆ, UD ಕಚೇರಿ ಬೋರ್ಡ್‌ ಬದಲಿಸಿದ ಕಾಂಗ್ರೆಸ್‌ ನಾಯಕರು
ಮನಬಂದಂತೆ ಬಿಬಿಎಂಪಿ ವಾರ್ಡ್‌ ಮೀಸಲಾತಿ ಪ್ರಕಟಿಸಲಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ ನಾಯಕರು ನಂತರ ವಿಕಾಸಸೌಧಕ್ಕೆ ತೆರಳಿ ನಗರಾಭಿವೃದ್ಧಿ ಕಚೇರಿ ಫಲಕವನ್ನು ʻಆರ್‌ಎಸ್‌ಎಸ್‌ ಕಚೇರಿ, ಬಿಜೆಪಿ ಕಚೇರಿʼ ಎಂದು ಬದಲಾಯಿಸಿದರು. ಬಿಬಿಎಂಪಿ ವಾರ್ಡ್‌ ಮರುವಿಂಡಣೆ ವೇಳೆಯೇ ಬಿಜೆಪಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಬುಧವಾರ ಸಂಜೆ ಪ್ರಕಟಿಸಿದ ವಾರ್ಡ್‌ ಮೀಸಲಾತಿ ಕರಡು ಅಧಿಸೂಚನೆಯಲ್ಲಿಯೂ ಇದೇ ರೀತಿ ವರ್ತನೆ ಮಾಡಲಾಗಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಶಾಸಕರಾದ ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ, ದಿನೇಶ್‌ ಗುಂಡೂರಾವ್‌, ಜಮೀರ್‌ ಅಹ್ಮದ್‌ ಖಾನ್‌, ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌, ಸಂಸದ ಡಿ.ಕೆ. ಸುರೇಶ್‌ ಮತ್ತಿತರರು ಸುದ್ದಿಗೋಷ್ಠಿ ನಡೆಸಿದರು. ನಂತರ ವಿಕಾಸಸೌಧಕ್ಕೆ ತೆರಳಿ ನಾಮಫಲಕ ಬದಲಾಯಿಸಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

4. ನವೆಂಬರ್‌ 1ಕ್ಕೆ ಪುನೀತ್‌ ರಾಜಕುಮಾರ್‌ಗೆ ಕರ್ನಾಟಕ ರತ್ನ ಪ್ರದಾನ; ಸಿಎಂ ಬೊಮ್ಮಾಯಿ ಘೋಷಣೆ
ಕನ್ನಡ ಚಿತ್ರರಂಗದ ಪ್ರೀತಿಯ ನಟ ಡಾ. ಪುನೀತ್‌ ರಾಜಕುಮಾರ್‌ ಅವರಿಗೆ ನವೆಂಬರ್‌ ೧ರಂದು ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ವಿಶೇಷ ಸಂದರ್ಭದಲ್ಲಿ ಕರ್ನಾಟಕ ರತ್ನ ಡಾ. ರಾಜಕುಮಾರ್ ಮತ್ತು ಡಾ.ಪುನೀತ್ ರಾಜಕುಮಾರ್ ಸ್ಮರಣಾರ್ಥ ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿರುವ “ಫಲಪುಷ್ಪ ಪ್ರದರ್ಶನ”ವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಪುನೀತ್‌ ರಾಜಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನವನ್ನು ಪ್ರದಾನ ಮಾಡಲಿದ್ದೇವೆ ಎಂದು ತಿಳಿಸಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

5. ಮುಂದುವರಿದ ಮಳೆ ಆರ್ಭಟ, ಭೂಕುಸಿತ; ಉಕ್ಕಿದ ನದಿಗಳು, ಕೊಚ್ಚಿ ಹೋದ ವಾಹನಗಳು
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಭೂಕುಸಿತ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು ಭಾರಿ ಆತಂಕವನ್ನು ಸೃಷ್ಟಿಸಿವೆ. ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಭೂಕುಸಿತ ಮತ್ತು ಜಲಸ್ಫೋಟದ ಅಬ್ಬರ ಮುಂದುವರಿದಿದೆ. ಹೀಗಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ.
ಕೊಡಗು ಜಿಲ್ಲೆಯ ಭಾಗಮಂಡಲ ಭಾಗದಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು, ಭಾಗಮಂಡಲಕ್ಕೆ ಸಂಪರ್ಕವೇ ಇಲ್ಲವಾಗಿದೆ. ಇಲ್ಲಿ ಭೂಮಿಯೇ ಬಿರಿದ ರೀತಿಯಲ್ಲಿ ಗುಡ್ಡ ಭಾಗ ಕುಸಿದಿದೆ. ಸಂಪಾಜೆ ಭಾಗದಲ್ಲಿ ಪುಷ್ಪಗಿರಿ ಪ್ರದೇಶದಲ್ಲಿ ಉಂಟಾಗಿರುವ ಜಲಸ್ಪೋಟದಿಂದ ಇಲ್ಲಿನ ನದಿಗಳೆಲ್ಲ ಕೆಸರು ನೀರಿನೊಂದಿಗೆ ಉಕ್ಕಿ ಹರಿಯುತ್ತಿವೆ. ಹೀಗಾಗಿ ಹಲವಾರು ಮನೆಗಳು ಉರುಳಿ ಬಿದ್ದಿವೆ. ಜತೆಗೆ ಪೇಟೆಯ ಅಂಗಡಿಗಳಿಗೆಲ್ಲ ಕೆಸರು ನೀರು ನುಗ್ಗಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ
Heavy Rain | ಧಾರಾಕಾರ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ರೈತ

6. ಶಮನವಾಯ್ತಾ ಸಿದ್ದರಾಮಯ್ಯ-ಕನಕ ಶ್ರೀಗಳ ನಡುವಿನ ಮುನಿಸು?
ಮಾಜಿ ಮುಖ್ಯಮಂತ್ರಿ, ಕುರುಬ ಸಮುದಾಯ ಪ್ರಮುಖ ನಾಯಕ ಸಿದ್ದರಾಮಯ್ಯ ಮತ್ತು ಹರಿಹರ ತಾಲೂಕು ಬೆಳ್ಳೂಡಿ ಕನಕ ಗುರುಪೀಠ ಶಾಖಾ ಮಠದ ಶ್ರೀ ನಿರಂಜನಾನಂದಪುರಿ ನಡುವಿನ ಎರಡು ವರ್ಷಗಳ ಮುಸಿಸು ಶಮನವಾದಂತಿದೆ. ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು, ಮೀಸಲಾತಿ ಹೆಚ್ಚಿಸಬೇಕು ಎಂದು ಶ್ರೀ ನಿರಂಜನಾನಂದಪುರಿ ಶ್ರೀಗಳ ಸಾರಥ್ಯದಲ್ಲಿ ಹೋರಾಟಕ್ಕೆ ಕೆ.ಎಸ್.ಈಶ್ವರಪ್ಪ ಬೆಂಬಲ ನೀಡಿದ್ದು, ಸಿದ್ದರಾಮಯ್ಯ ಬೆಂಬಲ ನೀಡಿರಲಿಲ್ಲ ಎಂಬ ಕಾರಣಕ್ಕೆ ಇಬ್ಬರ ನಡುವೆ ಮುನಿಸು ಉಂಟಾಗಿತ್ತು. ಸಂಪೂರ್ಣ ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. ತನ್ನದೇ ಮಗುವನ್ನು 4ನೇ ಮಹಡಿಯಿಂದ ಕೆಳಗೆಸೆದು ಕೊಂದ ತಾಯಿ, ಬೆಂಗಳೂರಲ್ಲಿ ಭೀಕರ ಘಟನೆ
ತಾಯಿಯೊಬ್ಬಳು ತನ್ನದೇ ಮಗುವನ್ನು ನಾಲ್ಕನೇ ಮಹಡಿಯಿಂದ ಕೆಳಗೆ ಎಸೆದು ಹತ್ಯೆ ಮಾಡಿದ ಭಯಾನಕ ವಿದ್ಯಮಾನ ಬೆಂಗಳೂರಿನಲ್ಲಿ ನಡೆದಿದೆ. ಕೊನೆಗೆ ಆಕೆಯೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದಾಳೆ. ಈ ಮಹಿಳೆ ದಂತವೈದ್ಯೆಯಾಗಿ ಕೆಲಸ ಮಾಡುತ್ತಿದ್ದು, ತಾನೇ ಕೈಯಾರೆ ಮಗುವನ್ನು ಮೇಲಿಂದ ಕೆಳಗೆ ಎಸೆದಿದ್ದಾಳೆ. ಕೊನೆಗೆ ತಾನೂ ಧುಮುಕಲು ಯತ್ನಿಸಿದ್ದಳು. ಈ ವೇಳೆ ಕೆಲವರು ಓಡಿ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಪ್ರಸವ ಪೂರ್ವ ತಪಾಸಣೆ, ಪ್ರಸವ ನಂತರದಲ್ಲಿ ಮಾನಸಿಕ ಆರೋಗ್ಯದ ಕುರಿತು ಈ ಘಟನೆ ನಾಗರಿಕ ಸಮಾಜದಲ್ಲಿ ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

8. CWG- 2022 | ಕಾಮನ್ವೆಲ್ತ್‌ನಲ್ಲಿ ಮೊದಲ ಬೆಳ್ಳಿ ಪದಕ ಗೆದ್ದ ಭಾರತದ ಲಾಂಗ್‌ಜಂಪರ್‌ ಮುರಳಿ ಶ್ರೀಶಂಕರ್‌
ರಾಷ್ಟ್ರೀಯ ದಾಖಲೆಯ ಒಡೆಯ ಭಾರತದ ಲಾಂಗ್‌ ಜಂಪರ್‌ ಇಂಗ್ಲೆಂಡ್‌ನ ಬರ್ಮಿಂಗ್ಹಮ್‌ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್‌ ಗೇಮ್ಸ್‌ನ (CWG-2022) ಪುರುಷರ ಲಾಂಗ್ ಜಂಪ್‌ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ. ಇದು ಕಾಮನ್ವೆಲ್ತ್‌ ಇತಿಹಾಸದಲ್ಲಿ ಭಾರತಕ್ಕೆ ಲಭಿಸುತ್ತಿರುವ ಚೊಚ್ಚಲ ಲಾಂಗ್‌ ಜಂಪ್‌ ಬೆಳ್ಳಿ. ೧೯೭೮ರ ಎಡ್ಮಾಂಟನ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಸುರೇಶ್‌ ಬಾಬು ಅವರು ಕಂಚಿನ ಪದಕ ಗೆದ್ದಿದ್ದರು. ಗುರುವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದ ಮುರಳಿ ರಜತ ಪದಕ್ಕೆ ಮುತ್ತಿಟ್ಟರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

9. ಎಲೆಕ್ಷನ್‌ ಹವಾ ಸರಣಿಯಲ್ಲಿ ಹುಬ್ಬಳ್ಳಿ-ಧಾರವಾಡ ಕ್ಷೇತ್ರ ಸಮೀಕ್ಷೆ ಆರಂಭ
ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ನಡೆಯುತ್ತಿರುವ ಸಿದ್ಧತೆ, ಸ್ಥಿತಿಗತಿ ಕುರಿತು ಹುಬ್ಬಳ್ಳಿ-ಧಾರವಾಡದ ಸರಣಿ ಶುಕ್ರವಾರ ಆರಂಭವಾಗಿದೆ. ಈಗಾಗಲೆ ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ʻಎಲೆಕ್ಷನ್‌ ಹವಾʼ ಪ್ರಕಟವಾಗಿದ್ದು, ಸಂಪೂರ್ಣ ರಾಜ್ಯದ ರಾಜಕೀಯ ವಾತಾವರಣದ ಚಿತ್ರಣವನ್ನು ಕಾಣಬಹುದಾಗಿದೆ. ಹುಬ್ಬಳ್ಳಿ-ಧಾರವಾಡದ ʻನವಲಗುಂದ ವಿಧಾನಸಭಾ ಕ್ಷೇತ್ರʼದ ಚಿತ್ರಣವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

10. Bigg Boss Kannada | ಶನಿವಾರದಿಂದ ಮೆಗಾ ಶೋ ಆರಂಭ; ಇಬ್ಬರು ಹೋಗುವುದು ಕನ್ಫರ್ಮ್!!
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್‌ ಬಾಸ್‌ (Bigg Boss Kannada) ಈ ಬಾರಿ ಎರಡು ಕಾರ್ಯಕ್ರಮ ನಡೆಯಲಿದ್ದು, ಮೊದಲಿಗೆ ಮಿನಿ ಬಿಗ್‌ ಬಾಸ್‌ (BiggBoss Kannada OTT) ಆರಂಭವಾಗಲಿದೆ. ಇದರಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ. ಈ ಮಿನಿ ಬಿಗ್‌ ಬಾಸ್‌ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಪ್ರಸಾರವಾಗಲಿದೆ. ಟಿವಿಯಲ್ಲಿ ಪ್ರಸಾರವಾಗುವುದಿಲ್ಲ ಎಂದು ಚಾನೆಲ್‌ ತಿಳಿಸಿದೆ. ಆಗಸ್ಟ್ 6ರ ಸಂಜೆ 7 ಗಂಟೆಯಿಂದ ಒಟಿಟಿ ಬಿಗ್ ಬಾಸ್ ಮೊದಲ ಸೀಸನ್ ಆರಂಭವಾಗಲಿದೆ. ನಿರೂಪಕ ಹಾಗೂ ಪತ್ರಕರ್ತ ಸೋಮಣ್ಣ ಮಾಚಿಮಾಡ ಹಾಗೂ ಪುಟ್ಟ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ಸಾನ್ವಿ ಅಯ್ಯರ್‌ ಬಿಗ್‌ಬಾಸ್‌ ಮನೆಗೆ ಹೋಗುವುದು ಕನ್ಫರ್ಮ್‌ ಆಗಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

Exit mobile version