ಬೆಂಗಳೂರು: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಇನ್ನೂ ಮುಂದುವರಿದಿದ್ದು, ನ್ಯಾಯಾಲಯ ಕಟಕಟೆಗೂ ಏರಿದೆ. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ತಪ್ಪಾಗಿದ್ದನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡು, ತಪ್ಪುಗಳನ್ನು ತಿದ್ದಲು ಸುತ್ತೋಲೆ ಹೊರಡಿಸಿದೆ. ಜಿ7 ಶೃಂಗದಲ್ಲಿ ಪ್ರಧಾನಿ ಮೋದಿ ಭಾಗಿ ಸೇರಿ ದೇಶ, ವಿದೇಶ, ರಾಜ್ಯದಲ್ಲಿ ಘಟಿಸಿದ ಪ್ರಮುಖ ಘಟನೆಗಳ ಗುಚ್ಛ ವಿಸ್ತಾರ TOP 10 NEWS.
1. Maha Politics: ಶಿಂಧೆ ಟೀಮ್‌ಗೆ ಸುಪ್ರೀಂ ರಿಲೀಫ್, ವಿಚಾರಣೆ ಜುಲೈ 11ಕ್ಕೆ ಮುಂದೂಡಿಕೆ, ಅಲ್ಲಿವರೆಗೆ 16 ಶಾಸಕರು ಸೇಫ್
ಮಹಾರಾಷ್ಟ್ರದ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಮತ್ತು ಟೀಮ್ ಡೆಪ್ಯೂಟಿ ಸ್ಪೀಕರ್ ನರಹರಿ ಜೈರ್ವಾಲ್ ಅವರ ತೀರ್ಮಾನಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜುಲೈ ೧೧ಕ್ಕೆ ಮುಂದೂಡಿದೆ. ಅದುವರೆಗೆ ಯಾವುದೇ ಶಾಸಕರನ್ನು ಅನರ್ಹಗೊಳಿಸುವಂತಿಲ್ಲ ಎಂದು ಹಿರಿಯ ವಕೀಲರ ಮೂಲಕ ಡೆಪ್ಯೂಟಿ ಸ್ಪೀಕರ್ ಅವರಿಗೆ ಸೂಚಿಸಿದೆ. ಈ ಬೆಳವಣಿಗೆ ಏಕನಾಥ್ ಶಿಂಧೆ ಗ್ರೂಪ್‌ಗೆ ದೊಡ್ಡ ರಿಲೀಫ್ ನೀಡಿದ್ದರೆ, ಉದ್ಧವ್ ಠಾಕ್ರೆ ಬಣಕ್ಕೆ ಭಾರಿ ಹಿನ್ನಡೆಯಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ೧೬ ಶಾಸಕರಿಗೆ ಅನರ್ಹತೆ ನೋಟಿಸ್ ಜಾರಿ ಮಾಡಿದ ಡೆಪ್ಯೂಟಿ ಸ್ಪೀಕರ್ ಅವರಿಗೆ ಸುಪ್ರೀಂ ಕೋರ್ಟ್ ಹಲವು ಪ್ರಶ್ನೆಗಳನ್ನು ಕೇಳಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
2. ಪಠ್ಯ ಪರಿಷ್ಕರಣೆ ಎಡವಟ್ಟಿಗೆ 8 ಕಡೆ ತೇಪೆ: ಮಕ್ಕಳು ಎರಡೆರಡು ಪುಸ್ತಕ ಓದುವ ತೊಂದರೆ
ಪಠ್ಯಪುಸ್ತಕ ಪರಿಷ್ಕರಣೆ ನಂತರ ರಾಜ್ಯಾದ್ಯಂತ ವಿವಾದ ಭುಗಿಲೆದ್ದರೂ ಅದನ್ನು ಕೇಳದೆ ಪುಸ್ತಕ ಮುದ್ರಣ ಮಾಡಿ ಹಂಚಲು ಆರಂಭಿಸಿದ ರಾಜ್ಯ ಸರ್ಕಾರ ಈಗ ತೇಪೆ ಹಚ್ಚಲು ಮುಂದಾಗಿದೆ. ಸಾರ್ವಜನಿಕ ವಲಯದಿಂದ, ಶಿಕ್ಷಣ ತಜ್ಞರಿಂದ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಂದ ಸೇರಿ ಎಲ್ಲ ಅಭಿಪ್ರಾಯಗಳನ್ನೂ ಪರಿಗಣಿಸಿ ಈಗ ತಿದ್ದೋಲೆ ಮೂಲಕ ತಪ್ಪು ಸರಿಪಡಿಸಿಕೊಳ್ಳಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ ಸರ್ಕಾರದ ಎಡವಟ್ಟಿನಿಂದಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎರಡೆರಡು ಪುಸ್ತಕ ಹಿಡಿದು ಓದಬೇಕಾದ ಪರಿಸ್ಥಿತಿ ಎದುರಾಗಿದೆ. ಅಷ್ಟೆ ಅಲ್ಲದೆ ತನ್ನ ಎಡವಟ್ಟಿಗೆ ಶಿಕ್ಷಣ ಇಲಾಖೆ ಸಮರ್ಥನೆಯನ್ನೂ ಮಾಡಿಕೊಂಡಿದೆ.(ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೩. Kempegowda Jayanti | ವಿಧಾನಸೌಧ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ: ಸಿಎಂ ಬೊಮ್ಮಾಯಿ ಘೋಷಣೆ ವಿಧಾನಸೌಧದ ಆವರಣದಲ್ಲಿ ಒಂದು ವರ್ಷದೊಳಗೆ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಘೋಷಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ (ಜೂನ್ 27) ನಡೆದ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿಯೇ ವಿಧಾನಸೌಧವಿದೆ. ಕೆಂಪೇಗೌಡರ ಪ್ರತಿಮೆ ಇಲ್ಲಿ ಇರಬೇಕಾದ್ದು ಸಹಜ. ಈಗಾಗಲೇ ಇಲ್ಲಿ ಅವರ ಪ್ರತಿಮೆ ಇರಬೇಕಾಗಿತ್ತು. ನಾವು ಅದನ್ನು ಮಾಡುತ್ತೇವೆ ಎಂದು ಅವರು ಹೇಳಿದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
4. ಜಿ7 ಶೃಂಗದಲ್ಲಿ ಪ್ರಧಾನಿ ಮೋದಿ; ಬೈಡೆನ್, ಮ್ಯಾಕ್ರನ್, ಟ್ರುಡೊ ಜತೆ ದ್ವಿಪಕ್ಷೀಯ-ಸೌಹಾರ್ದಯುತ ಚರ್ಚೆ
ಜಿ7 ಶೃಂಗಸಭೆಗಾಗಿ ಜರ್ಮನಿಗೆ (G-7 Summit in Germany) ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಇಂದು (ಜೂ.27) ಯುಎಸ್ ಅಧ್ಯಕ್ಷ ಜೋ ಬೈಡನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮತ್ತು ಸ್ನೇಹಯುತ ಮಾತುಕತೆ ನಡೆಸಿದ್ದಾರೆ. ಇವರನ್ನೆಲ್ಲ ಭೇಟಿಯಾದ ಕ್ಷಣದ ಫೋಟೋಗಳನ್ನು ನರೇಂದ್ರ ಮೋದಿ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೂ.26ರಂದು ಪ್ರಧಾನಿ ನರೇಂದ್ರ ಮೋದಿ ಜರ್ಮಿನಿಗೆ ತೆರಳಿದ್ದು, ಅಲ್ಲಿನ ಸ್ಕ್ಲೋಸ್ ಎಲ್ಮೌ ಎಂಬ ಹೋಟೆಲ್‌ನಲ್ಲಿ 48ನೇ ಜಿ7 ಶೃಂಗಸಭೆ ನಡೆಯುತ್ತಿದೆ. ಜಿ7 ಗುಂಪಿನಲ್ಲಿರುವ ವಿಶ್ವನಾಯಕರು ಪಾಲ್ಗೊಂಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೫. President Election: ನಾಮಪತ್ರ ಸಲ್ಲಿಸಿದ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ
ಪ್ರತಿಪಕ್ಷಗಳ ಜಂಟಿ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಇಂದು ನಾಮಪತ್ರ ಸಲ್ಲಿಸಿದ್ದಾರೆ. ೪ ಸೆಟ್‌ಗಳ ನಾಮಪತ್ರವನ್ನು ರಾಷ್ಟ್ರಪತಿ ಚುನಾವಣೆಯ ರಿಟರ್ನಿಂಗ್ ಅಧಿಕಾರಿ ಪಿ.ಸಿ.ಮೋಡಿ ಅವರಿಗೆ ನೀಡಿದರು. ಈ ವೇಳೆ ಎನ್‌ಸಿಪಿ ನಾಯಕ ಶರದ್ ಪವಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, ಜಮ್ಮು-ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ಆರ್‌ಎಲ್‌ಡಿಯ ಜಯಂತ್ ಸಿನ್ಹಾ, ಸಿಪಿಐ (ಎಂ) ಪ್ರಮುಖ ಸೀತಾರಾಮ್ ಯೆಚೂರಿ, ಡಿಎಂಕೆಯ ಎ ರಾಜಾ, ಸಿಪಿಐನ ಡಿ.ರಾಜಾ, ತೆಲಂಗಾಣ ರಾಷ್ಟ್ರಸಮಿತಿ ನಾಯಕ ಕೆ.ಟಿ.ರಾಮರಾವ್ (ಸಿಎಂ ಕೆಸಿಆರ್ ಮಗ) ಸೇರಿ ಸುಮಾರು 14ಪಕ್ಷಗಳ ನಾಯಕರು ಹಾಜರಿದ್ದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
6. Agnipath | ರಾಜ್ಯದಾದ್ಯಂತ ಕಾಂಗ್ರೆಸ್ ಪ್ರತಿಭಟನೆ; ಯೋಜನೆ ಕೈಬಿಡಲು ಒತ್ತಾಯ
ಸೇನಾ ನೇಮಕಾತಿಗೆ ಸಂಬಂಧಿಸಿದ ಅಗ್ನಿಪಥ್ ಯೋಜನೆ ವಿರೋಧಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಕೇವಲ ನಾಲ್ಕು ವರ್ಷಗಳ ಅಲ್ಪಾವಧಿಗೆ ಸೈನಿಕರನ್ನು ನೇಮಕ ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರ ಭಾರತೀಯ ಸೇನೆಗೆ ಮಾರಕವಾಗಲಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಕೂಡಲೇ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೭. ಅಗ್ನಿಪಥ್‌ಗೆ ಭರ್ಜರಿ ಡಿಮಾಂಡ್, ವಾಯುಪಡೆಯ 3,000 ಹುದ್ದೆಗಳಿಗೆ 3 ದಿನಗಳಲ್ಲಿ 56,960 ಅರ್ಜಿ ಸ್ವೀಕಾರ ಆರಂಭದಲ್ಲಿ ತೀವ್ರ ಹಿಂಸಾತ್ಮಕ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಸೇನೆಯ ಹೊಸ ನೇಮಕಾತಿ ಯೋಜನೆ ಅಗ್ನಿಪಥ್‌ಗೆ ಇದೀಗ ಭರ್ಜರಿ ಬೇಡಿಕೆ ವ್ಯಕ್ತವಾಗಿದೆ. ಭಾರತೀಯ ವಾಯಪಡೆ ಅಗ್ನಿಪಥ್ ಯೋಜನೆಯ ಅಡಿಯಲ್ಲಿ ೩,೦೦೦ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಶುರು ಮಾಡಿದೆ. ಈ ೩ ಸಾವಿರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ ಮೂರೇ ದಿನಗಳಲ್ಲಿ ಬರೊಬ್ಬರಿ ೫೬,೯೬೦ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಬಗ್ಗೆ ವಾಯುಪಡೆ ಟ್ವೀಟ್ ಮಾಡಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೮. ಆಲಿಯಾ ಭಟ್ ಗರ್ಭಿಣಿ; ಮದುವೆಯಾಗಿ 2 ತಿಂಗಳಿಗೆ ಸಿಹಿಸುದ್ದಿ ಕೊಟ್ಟ ಸ್ಟಾರ್ ದಂಪತಿ
ಎರಡೂವರೆ ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ಸ್ಟಾರ್ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಈಗ ಒಂದು ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಆಲಿಯಾ ಭಟ್ ಗರ್ಭಿಣಿಯಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಲ್ಟ್ರಾಸೌಂಡ್ ತಪಾಸಣೆಯ ಫೋಟೋವನ್ನೂ ಹಂಚಿಕೊಂಡು, “ನಮ್ಮ ಮಗು ಶೀಘ್ರದಲ್ಲೇ ಬರಲಿದೆ” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ನವೆಂಬರ್‌ನಲ್ಲಿ ನಟಿಗೆ ಹೆರಿಗೆ ಆಗಲಿದೆ ಎಂದು ವರದಿಗಳು ಹೇಳಿವೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇದೇ ವರ್ಷ ಏಪ್ರಿಲ್ 14ರಂದು ಮುಂಬೈನ ಬಾಂದ್ರಾದಲ್ಲಿ ವಿವಾಹವಾಗಿದ್ದರು. ಇದೀಗ ಮನೆಗೆ ಹೊಸ ಪುಟ್ಟ ಅತಿಥಿಯನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಜೀವನದಲ್ಲಿ ಪಾಲಕರಾಗಿ ಹೊಸ ಅಧ್ಯಾಯ ಶುರು ಮಾಡಲು ಸಿದ್ಧರಾಗಿರುವ ಸ್ಟಾರ್ ದಂಪತಿಗೆ ಅವರ ಆಪ್ತರು, ಬಂಧು-ಬಳಗ, ಬಾಲಿವುಡ್‌ನ ಇತರ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
9. wimbeldon 2022 | ಪ್ರಶಸ್ತಿ ಮೇಲೆ ಹಲವರ ಕಣ್ಣು; ಜೊಕೊವಿಕ್, ಇಗಾ ಅಲ್ದೆ ಇನ್ಯಾರೆಲ್ಲ ಫೇವರಿಟ್?
ವರ್ಷದ ಮೂರನೇ ಗ್ರ್ಯಾನ್ ಸ್ಲಾಮ್ ವಿಂಬಲ್ಡನ್ ಸೋಮವಾರ (ಜೂನ್ ೨೭) ಆರಂಭವಾಗಲಿದ್ದು, ಉಕ್ರೇನ್ ಮೇಲಿನ ದಾಳಿಗೆ ಖಂಡಿಸಿ ರಷ್ಯಾದ ಆಟಗಾರರಿಗೆ ಆಯೋಜಕರು ನಿಷೇಧ ಹೇರಿರುವ ಕಾರಣ ಪ್ರತಿಷ್ಠಿತ ಟೂರ್ನಿ ಕಳೆಗುಂದಲಿದೆ ಎಂದು ಟೆನಿಸ್ ಕ್ಷೇತ್ರದ ಪಂಡಿತರು ಆಭಿಪ್ರಾಯಪಟ್ಟಿದ್ದಾರೆ. ಅದಾಗ್ಯೂ ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ಹಾಗೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಪ್ರಶಸ್ತಿ ಫೇವರಿಟ್ ಆಗಿದ್ದು, ಇನ್ನೂ ಹಲವರು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೧೦. ಕಾಂಕ್ರೀಟು ಜಂಗಲ್‌ನೊಳಗೂ ನಿಜವಾದ ಕಾಡುಗಳಿವೆ, ಒಮ್ಮೆ ನೋಡಿ
ಬೆಂಗಳೂರಿನಂಥ ಕಾಂಕ್ರೀಟು ಕಾಡಿನಲ್ಲಿ ಬೆಳಗ್ಗೆದ್ದು ವಾಕ್ ಹೋಗಲು, ಜಾಗ್ ಮಾಡಲು ಬೇಕಾದಷ್ಟು ಜಾಗಗಳಿವೆ. ಬೀದಿಗೊಂದರಂತೆ ಪಾರ್ಕ್ ಇದೆ. ಏರಿಯಾದಲ್ಲೊಂದು ದೊಡ್ಡ ಪಾರ್ಕ್ ಅಥವಾ ಇನ್ನೂ ಸ್ವಲ್ಪ ಅಡ್ಡಾಡಿ ಹುಡುಕಿದರೆ, ದಟ್ಟ ಮರಗಳಿರುವ ಹಳೇ ಜಾಗಗಳು, ಗಲ್ಲಿಗಳ ಸುತ್ತಿ ಬಳಸಿದರೆ ಚೆಂದದೊಂದು ವಾಕ್ ಮುಗಿಸಿ ಬೆಳಗಿನ ಗಾಳಿ ಕುಡಿದು ಬರಬಹುದು. ಆದರೂ, ಪ್ರಕೃತಿ, ಪರಿಸರದ ಸಂಗ ಬಯಸುವವರು ಬೆಂಗಳೂರಿನೊಳಗೆ ಪ್ರತಿದಿನ ವಾಕ್‌ಗೆ, ವೀಕೆಂಡ್ ವಾಕ್‌ಗೆ ಅಂತೆಲ್ಲ ಹೊಸ ಜಾಗಗಳ ಹುಡುಕಾಟ ಇದ್ದೇ ಇರುತ್ತದೆ. ಹೆಸರೇ ಹೇಳುವಂತೆ ಬೆಂಗಳೂರು ಉದ್ಯಾನ ನಗರಿ. ಬಹುಶಃ, ಬೆಂಗಳೂರಲ್ಲಿರುವಷ್ಟು ಉದ್ಯಾನ ಭಾರತದ ಯಾವ ಮಹಾನಗರಿಯಲ್ಲೂ ಇರಲಿಕ್ಕಿಲ್ಲ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)