ಬೆಂಗಳೂರು: 2024ರ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ರಾಷ್ಟ್ರ ರಾಜಕಾರಣದಲ್ಲಿ ಒಂದೊಂದೇ ಬೆಳವಣಿಗೆಗಳು ಗರಿಗೆದರುತ್ತಿವೆ. ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ತೊರೆದಿದ್ದಾರೆ. ರಾಜ್ಯದಲ್ಲಿ ಮಳೆ ಅನಾಹುತಗಳು ಮುಂದುವರಿದಿವೆ. ರಾಜ್ಯ ರಾಜಕಾರಣದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆದಿದೆ ಎನ್ನುವುದು ಸೇರಿ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Bihar Politics | ಬಿಹಾರ ಮುಖ್ಯಮಂತ್ರಿ ಹುದ್ದೆಗೆ ನಿತೀಶ್ ಕುಮಾರ್ ರಾಜೀನಾಮೆ; ಉರುಳಿ ಬಿತ್ತು ಮೈತ್ರಿ ಸರ್ಕಾರ
ಬಿಹಾರ ರಾಜಕೀಯದಲ್ಲಿ ಕೊನೆಗೂ ಅಂದುಕೊಂಡಂತೇ ಆಗಿದೆ. ರಾಜ್ಯಪಾಲ ಫಗು ಚೌಹಾಣ್ರನ್ನು ಭೇಟಿ ಮಾಡಿದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿಯೊಂದಿಗಿನ ಮೈತ್ರಿ ಕಡಿತವನ್ನು ಅಧಿಕೃತಗೊಳಿಸಿದ್ದಾರೆ. ಅಲ್ಲಿಗೆ ಬಿಹಾರದ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಪತನಗೊಂಡಂತಾಗಿದೆ. ಕಳೆದ ಎರಡು ದಿನಗಳಿಂದಲೂ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವೆ ಅಸ್ಥಿರತೆ ಉಂಟಾಗಿತ್ತು. ಎಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆ ನಿತೀಶ್ ಕುಮಾರ್ ಅವರು ರಾಜ್ಯಪಾಲರ ಭೇಟಿಗೆ ಸಮಯಾವಕಾಶ ಕೋರಿದ್ದರು. ಅಂತೆಯೇ, ಇಂದು ಸಂಜೆ 4 ಗಂಟೆ ಹೊತ್ತಿಗೆ ಪಟನಾದಲ್ಲಿರುವ ರಾಜಭವನದಲ್ಲಿ, ರಾಜ್ಯಪಾಲ ಫಗು ಚೌಹಾಣ್ರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ | Bihar Politics | ಮತ್ತೆ ಮಗ್ಗಲು ಹೊರಳಿಸಿದ ನಿತೀಶ್; ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗುವ ಆಸೆ!
2. ರಾಜ್ಯದಲ್ಲಿ ಮುಂದುವರಿದ ಮಳೆ ಅನಾಹುತ, ಮುಂದಿನ 48 ಗಂಟೆಯಲ್ಲಿ ಭಾರೀ ಮಳೆ
ರಾಜ್ಯದಲ್ಲಿ ಅನೇಕ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಇನ್ನೂ ನಿಂತಿಲ್ಲ. ಪ್ರಾಣ ಹಾನಿ, ಆಸ್ತಿ ಪಾಸ್ತಿ ಹಾನಿ, ಬೆಳೆ ಹಾನಿ ಮುಂದುವರಿದಿದೆ.
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ರಾಜ್ಯ ಹೆದ್ದಾರಿ ಬಿರುಕು ಬಿಟ್ಟಿದೆ
ಶಿವಮೊಗ್ಗದಲ್ಲಿ ಭಾರೀ ಮಳೆಗೆ ಮಾಜಿ ಕಾರ್ಪೊರೇಟರ್ ಮನೆ ಕುಸಿತವಾಗಿದೆ, ಭದ್ರಾ ಜಲಾನಯನದಲ್ಲಿ ಪ್ರವಾಹ ಭೀತಿ ಎದುರಾಗಿದೆ
ಅಣಶಿ ಗುಡ್ಡ ಮತ್ತೆ ಕುಸಿದಿದ್ದರಿಂದ ಕಾರವಾರ-ಬೆಳಗಾವಿ ಹೆದ್ದಾರಿ ಸಂಚಾರ ಬಂದ್ ಆಗಿದೆ, ಚಿಕ್ಕಮಗಳೂರಿನ ಸಾತ್ಕೊಳದಲ್ಲಿ ನಿಯಂತ್ರಣ ತಪ್ಪಿ ಕಾರಿನೊಂದಿಗೆ ಹಳ್ಳಕ್ಕೆ ಬಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ
ಚಿಕ್ಕೋಡಿಯಲ್ಲಿ ಮೊಹರಂ ಪೂಜೆ ಹೊತ್ತಿಗೆ ಗೋಡೆ ಕುಸಿದು ನಾಲ್ವರಿಗೆ ಗಂಭೀರ ಗಾಯವಾಗಿದೆ
ಮೊಹರಂನಲ್ಲಿ ಮೆರೆದ ಅಪ್ಪು ಪ್ರೀತಿ: ಮೆರವಣಿಗೆಯಲ್ಲಿ ಪುನೀತ್ ಫೋಟೊ ಹಿಡಿದು ಕುಣಿದ ಅಭಿಮಾನಿಗಳು
3. ಕರ್ನಾಟಕದಲ್ಲಿ 3ನೇ ಮುಖ್ಯಮಂತ್ರಿ ಪ್ರತಿಷ್ಠಾಪನೆ ಕಸರತ್ತು: ಕಾಂಗ್ರೆಸ್ ಗೇಲಿ
ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಮೂರನೇ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಈ ಕುರಿತು ಕಾಂಗ್ರೆಸ್ ಟ್ವಿಟರ್‌ನಲ್ಲಿ ಪ್ರಕಟಿಸಲಾಗಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲಾಗಿದೆ. ಈ ಮಾತಿಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
4. ಸೌಹಾರ್ದ ಸಂಭ್ರಮ| ಈ ಊರಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ, ಹಿಂದೂಗಳಿಂದಲೇ ಮೊಹರಂ!
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಚಿಕ್ಕ ಗ್ರಾಮವಾದ ಹರ್ಲಾಪುರದಲ್ಲಿ ಮಂಗಳವಾರ ಮೊಹರಂ ಹಬ್ಬದ ಆಚರಣೆ ನಡೆಯಿತು. ಸಾಮಾನ್ಯವಾಗಿ ಏನೆಲ್ಲ ಪ್ರಕ್ರಿಯೆಗಳು ನಡೆಯಬೇಕೋ ಅದೆಲ್ಲವನ್ನೂ ಭಕ್ತಿಯಿಂದ ನಡೆಸಲಾಯಿತು. ವಿಶೇಷವೆಂದರೆ ಇದೆಲ್ಲವನ್ನೂ ಮಾಡಿದ್ದು ಮುಸ್ಲಿಮರಲ್ಲ.. ಹಿಂದೂಗಳು. ಯಾಕೆಂದರೆ, ಈ ಊರಿನಲ್ಲಿ ಒಬ್ಬೇ ಒಬ್ಬ ಮುಸ್ಲಿಮರಿಲ್ಲ. ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ!. ಈ ನಡುವೆ, ರಾಜ್ಯದ ಹಲವು ಕಡೆ ಮೊಹರಂ ಮೆರವಣಿಗೆಯಲ್ಲಿ ಪುನೀತ್ ರಾಜ್‌ಕುಮಾರ್ ಫೋಟೊಗಳನ್ನು ಬಳಸಿರುವುದು ಗಮನ ಸೆಳೆದಿದೆ. ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
5. ವಿಸ್ತಾರ Explainer | ನಮ್ಮ ರಾಷ್ಟ್ರಧ್ವಜ ಆರೋಹಿಸುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮನೆ ಮನೆಗಳ ಮೇಲೆ ರಾಷ್ಟ್ರಧ್ವಜ ಆರೋಹಣ ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಗರಿಕರಿಗೆ ಕರೆ ನೀಡಿದ್ದಾರೆ. ʼಹರ್ ಘರ್ ತಿರಂಗಾʼ ಎಂದು ಈ ಅಭಿಯಾನವನ್ನು ಕರೆಯಲಾಗಿದೆ. ಪ್ರತಿ ದೇಶದ ಪ್ರತಿ ಪ್ರಜೆಯಲ್ಲೂ ದೇಶಭಕ್ತಿಯ ಭಾವನೆಗಳನ್ನು ಉದ್ದೀಪಿಸುವುದು ಈ ಅಭಿಯಾನದ ಆಶಯ. ಆ.13ರಿಂದ ಆ.15ರ ನಡುವೆ ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ತಿರಂಗಾ ಹಾರಾಡುವಂತೆ ಮಾಡುವ ಗುರಿ ಕೇಂದ್ರ ಸರ್ಕಾರದ್ದಾಗಿದೆ. ಸುಮಾರು 1.6 ಲಕ್ಷ ಅಂಚೆ ಕಚೇರಿಗಳಲ್ಲಿ ತ್ರಿವರ್ಣಧ್ವಜ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
6. ವಿಸ್ತಾರ Explainer | ವಿರೋಧದ ನಡುವೆ ವಿದ್ಯುತ್ ವಿತರಣೆಯ ಖಾಸಗೀಕರಣಕ್ಕೆ ವಿಧೇಯಕ ಮಂಡನೆ
ಕೇಂದ್ರ ವಿದ್ಯುತ್ ಸಚಿವ ಆರ್.ಕೆ ಸಿಂಗ್ ಅವರು ಸೋಮವಾರ ಲೋಕಸಭೆಯಲ್ಲಿ ಮಂಡಿಸಿರುವ ವಿದ್ಯುತ್ ತಿದ್ದುಪಡಿ ವಿಧೇಯಕ ೨೦೨೨ (Electricity (Amendment) Bill 2022) ವಿವಾದಕ್ಕೀಡಾಗಿದೆ. ೨೦೦೩ರ ವಿದ್ಯುತ್ ಕಾಯಿದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಸಚಿವರು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೂ ಕಳುಹಿಸಿದ್ದಾರೆ. ಮತ್ತೊಂದು ಕಡೆ ಪಂಜಾಬ್‌ನಲ್ಲಿ ಈ ವಿಧೇಯಕವನ್ನು ರೈತರು ವಿರೋಧಿಸುತ್ತಿದ್ದಾರೆ. ಪ್ರತಿಪಕ್ಷಗಳು ವಿರೋಧಿಸುತ್ತಿವೆ. ಏಕೆ ಹೀಗಾಗಿದೆ? ವಿಧೇಯಕದಲ್ಲಿ ಏನಿದೆ? ಇಲ್ಲಿದೆ ವಿವರ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
7. CWG- 2022 | ಬರ್ಮಿಂಗ್ಹಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ಸಾಧನೆಗಳೇನು?
ಕಾಮನ್ವೆಲ್ತ್ ಒಕ್ಕೂಟಗಳ ಮಹಾ ಕ್ರೀಡಾ ಸಂಗ್ರಾಮ ಕಾಮನ್ವೆಲ್ತ್ ಗೇಮ್ಸ್ ಸೋಮವಾರ ಸಮಾಪ್ತಿಗೊಂಡಿದೆ. ಇಂಗ್ಲೆಂಡ್‌ನ ಬರ್ಮಿಂಗ್ಹಮ್ ನಗರದಲ್ಲಿ ಉದ್ಘಾಟನಾ ಸಮಾರಂಭ ಸೇರಿ ಒಟ್ಟು ೧೧ ದಿನಗಳ ಕಾಲ ಈ ಪ್ರತಿಷ್ಠಿತ ಕ್ರೀಡಾಕೂಟ ನಡೆಯಿತು. ವಿಶ್ವದ ೫೦೫೪ ಕ್ರೀಡಾಪಟುಗಳು ಭಾಗವಹಿಸಿದ್ದ ಈ ಕ್ರೀಡಾ ಜಾತ್ರೆಗೆ ಭಾರತವೂ ೧೦೬ ಪುರುಷರ ಹಾಗೂ ೧೦೪ ಮಹಿಳೆಯರು ಸೇರಿ ೨೧೦ ಕ್ರೀಡಾಪಟುಗಳನ್ನು ಕಳುಹಿಸಿತ್ತು. ಇವರೆಲ್ಲರ ಸಾಧನೆಯ ಹಿನ್ನೆಲೆಯಲ್ಲಿ ಭಾರತಕ್ಕೆ ೬೧ ಪದಕಗಳು ಸಿಕ್ಕಿವೆ. ೨೨ ಚಿನ್ನದ ಪದಕ, ೧೬ ರಜತ ಪದಕ, ೨೩ ಕಂಚಿನ ಪದಕಗಳು ಭಾರತೀಯರ ಮುಡಿಗೇರಿದೆ. ಅಂಕಪಟ್ಟಿಯಲ್ಲೂ ಭಾರತಕ್ಕೆ ೪ನೇ ಸ್ಥಾನ ದೊರಕಿದ್ದು ಕೂಡ ಕಡಿಮೆ ಸಾಧನೆಯೇನು ಅಲ್ಲ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
8. RSS ಎನ್ನುವುದು ಮೇಲ್ಜಾತಿಯವರ ಅಸೋಸಿಯೇಷನ್: ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ
ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಎನ್ನುವುದು ಮೇಲ್ಜಾತಿಯವರ ಒಂದು ಅಸೋಸಿಯೇಷನ್. ಆರ್‌ಎಸ್‌ಎಸ್, ಎಬಿವಿಪಿ, ಹಿಂದು ಜಾಗರಣ ವೇದಿಕೆ, ಬಜರಂಗದಳ ಇವೆಲ್ಲವೂ ಮೇಲ್ಜಾತಿಯ ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅರೋಪಿಸಿದ್ದಾರೆ. ಭಾರತ ಬಿಟ್ಟು ತೊಲಗಿ ದಿನಾಚರಣೆ ಪ್ರಯುಕ್ತ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
9. ವಿಸ್ತಾರ 5G Info| ನಿಮ್ಮ ಮೊಬೈಲ್ 5G ಸಪೋರ್ಟ್ ಮಾಡುತ್ತಿದೆಯೇ ಎಂದು ತಿಳಿಯುವುದು ಹೇಗೆ?
ದೇಶದಲ್ಲಿ ಮೊದಲ ಬಾರಿಗೆ ಕ್ರಾಂತಿಕಾರಕ ೫ಜಿ ನೆಟ್‌ವರ್ಕ್ ಆರಂಭವಾಗುವ (ವಿಸ್ತಾರ ೫G Info) ಸಮಯ ಸಮೀಪಿಸಿದೆ. ಹೀಗಾಗಿ ಅನೇಕ ಮಂದಿಯಲ್ಲಿ ತಮ್ಮ ಮೊಬೈಲ್ ಅಥವಾ ಸ್ಮಾರ್ಟ್‌ಫೋನ್ ೫ಜಿ ನೆಟ್ ವರ್ಕ್ ಅನ್ನು ಸಪೋರ್ಟ್ ಮಾಡುವುದೇ ಅಥವಾ ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕೇ ಎಂಬ ಪ್ರಶ್ನೆ ಉಂಟಾಗಬಹುದು. ಹಾಗಾದರೆ ನೀವು ಸುಲಭವಾಗಿ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್, ೫ಜಿ ನೆಟ್‌ವರ್ಕ್ ಅನ್ನು ಸಪೋರ್ಟ್ ಮಾಡುವುದೇ ಎಂಬುದನ್ನು ತಿಳಿಯಬಹುದು. ಇದಕ್ಕೆ ನೀವು ಮಾಡಬೇಕಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.
10. ಶಾಸಕ ಜಮೀರ್ ಧ್ವಜಾರೋಹಣ ಮಾಡೋದು ಬೇಡ; ಶಾಂತಿಸಭೆಯಲ್ಲಿ ಹಿಂದು ಸಂಘಟನೆಗಳ ಒತ್ತಾಯ
ಚಾಮರಾಜಪೇಟೆ ಮೈದಾನದಲ್ಲಿ ಆ.15 ರಂದು ಶಾಸಕ ಜಮೀರ್ ಅಹ್ಮದ್‌ಗೆ ಧ್ವಜಾರೋಹಣ ಮಾಡಲು ಅವಕಾಶ ನೀಡಬಾರದು. ನಮಗೆ ಅನುಮತಿ ಕೊಡಲಿ-ಬಿಡಲಿ ಧ್ವಜಾರೋಹಣ ಮಾಡಿಯೇ ತೀರುವೆವು ಎಂದು ಹಿಂದು ಸಂಘಟನೆಗಳು ಶಾಂತಿ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿವೆ. ಸ್ವಾತಂತ್ರ್ಯ ದಿನಾಚರಣೆಯಂದು ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣಕ್ಕೆ ಹಿಂದು ಸಂಘಟನೆಗಳು ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಠಾಣೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಮಂಗಳವಾರ ಹಿಂದು ಮುಖಂಡರ ಶಾಂತಿಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಹಿಂದು ಸಂಘಟನೆಗಳ ಮನವಿಗಳನ್ನು ಪೊಲೀಸರು ಆಲಿಸಿದ್ದು, ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.