Site icon Vistara News

ವಿಸ್ತಾರ TOP 10 NEWS | ನೂಪುರ್‌ ಕ್ಷಮೆ ಕೋರಲಿ ಎಂದ ʼಸುಪ್ರೀಂʼನಿಂದ ರಾಜಣ್ಣ ಕ್ಷಮೆಯಾಚನೆವರೆಗಿನ ಪ್ರಮುಖ ಸುದ್ದಿಗಳಿವು

Vistara top 10 01072022

ಬೆಂಗಳೂರು: ಒಂದೇ ಒಂದು ಹೇಳಿಕೆಯಿಂದ ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಕುರಿತು ಸುಪ್ರೀಂಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ್ದು, ದೇಶದ ಕ್ಷಮೆಯಾಚಿಸಬೇಕು ಎಂದು ಕಟುವಾಗಿ ತಿಳಿಸಿದೆ. ಈ ನಡುವೆ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುರಿತು ಆಡಿದ ಅಪದ್ಧ ಮಾತಿಗೆ ಮಧುಗಿರಿ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಕ್ಷಮೆಯಾಚಿಸಲು ನಿರ್ಧರಿಸಿದ್ದಾರೆ. ರಾಜಸ್ಥಾನದ ಕನ್ಹಯ್ಯ ಲಾಲ್‌ ಹತ್ಯೆ ಮಾಡಿದವರಿಗೆ ಮುಂಬೈ ಭಯೋತ್ಪಾದಕ ದಾಳಿ ನಂಟಿದೆಯೇ ಎಂಬ ಪ್ರಶ್ನೆ ಮೂಡಿದೆ ಎಂಬುದು ಸೇರಿದಂತೆ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಭದ್ರತಾ ವ್ಯವಸ್ಥೆಗೇ ಬೆದರಿಕೆ ಒಡ್ಡಿದ ನೂಪುರ್‌ ಶರ್ಮಾ ದೇಶದ ಕ್ಷಮೆ ಕೋರಬೇಕು: ಸುಪ್ರೀಂಕೋರ್ಟ್‌
ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಇಡೀ ದೇಶದ ಕ್ಷಮೆ ಕೋರಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ನೂಪುರ್‌ ಶರ್ಮಾ ಪಾಲ್ಗೊಂಡ ಡಿಬೇಟ್‌ ಅನ್ನು ನಾವು ವೀಕ್ಷಿಸಿದ್ದೇವೆ. ಅದರಲ್ಲಿ ನೂಪುರ್‌ ಶರ್ಮಾರನ್ನು ಹೇಗೆ ಪ್ರಚೋದಿಸಲಾಯಿತು ಎಂಬುದನ್ನೂ ನೋಡಿದ್ದೇವೆ. ಆದರೆ ನಂತರ ಅವಳಾಡಿದ ಮಾತು, ಕೊನೆಯಲ್ಲಿ ನಾನೊಬ್ಬ ವಕೀಲೆ ಎಂದು ಹೇಳಿಕೊಂಡಿದ್ದೆಲ್ಲ ನಾಚಿಕೆಗೇಡು ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಸೂರ್ಯಕಾಂತ್‌ ಹೇಳಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

2. Rajasthan murder: ಕನ್ಹಯ್ಯ ಲಾಲ್‌ ಹಂತಕರಿಗೆ mumbai terror ಲಿಂಕ್‌? ಏನಿದು 2611 ?
ರಾಜಸ್ಥಾನದ ಉದಯಪುರದಲ್ಲಿ ನಡೆದ ಹಿಂದೂ ಟೇಲರ್‌ ಕನ್ಹಯ್ಯ ಲಾಲ್‌ ಹತ್ಯೆಗೂ 2008ರಲ್ಲಿ ಮುಂಬಯಿಯಲ್ಲಿ ಸಂಭವಿಸಿದ, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಉಗ್ರ ದಾಳಿಗೂ ಸಂಬಂಧ ಇದೆಯಾ?
ಕನ್ಹಯ್ಯ ಲಾಲ್‌ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಘಟನೆಯ ಎಲ್ಲ ಆಯಾಮಗಳ ಬೆನ್ನು ಹತ್ತಿದ್ದು ಈ ವೇಳೆ ಹಂತಕರಾದ ಮೊಹಮ್ಮದ್‌ ರಿಯಾಜ್‌ ಅಟ್ಟಾರಿ ಮತ್ತು ಗೌಸ್‌ ಮೊಹಮ್ಮದ್‌ಗೂ ಮುಂಬಯಿ ದಾಳಿಗೂ (Mumbai terror) ಸಂಬಂಧ ಇರುವ ಅಂಶ ಬಯಲಾಗಿದೆ. ೨೬/೧೧ ಘಟನೆಯನ್ನು ನೆನಪಿಸುವ ನೋಂದಣಿ ಸಂಖ್ಯೆಯನ್ನು ಉದಯಪುರದ ಕನ್ಹಯ್ಯ ಲಾಲ್‌ ಹಂತಕರು ತಮ್ಮ ವಾಹನಕ್ಕೆ ಬಳಸಿರುವುದು ಈಗ ಹಲವು ಗುಮಾನಿಗಳಿಗೆ ಕಾರಣವಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೩. ಬಂಗಾರದ ಆಮದು ಸುಂಕ 7.5%ರಿಂದ 12.5ಕ್ಕೆ ಹೆಚ್ಚಳ, ಮತ್ತಷ್ಟು ದುಬಾರಿಯಾಗಲಿದೆ ಚಿನ್ನ
ಭಾರತ ಬಂಗಾರದ ಖರೀದಿಯನ್ನು ನಿರುತ್ತೇಜನಗೊಳಿಸಲು ಆಮದು ಸುಂಕವನ್ನು ಶೇ.೭.೫ರಿಂದ ಶೇ.೧೨.೫ಕ್ಕೆ ಶುಕ್ರವಾರ ಹೆಚ್ಚಿಸಿದೆ. ಇದರ ಪರಿಣಾಮ ಚಿನ್ನ ಮತ್ತಷ್ಟು ದುಬಾರಿಯಾಗುವುದು ಖಚಿತ. ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಚಿನ್ನ ಖರೀದಿಸುವ ಎರಡನೇ ರಾಷ್ಟ್ರವಾಗಿದೆ. ಆದರೆ ಬಹುತೇಕ ಚಿನ್ನದ ಬೇಡಿಕೆಯನ್ನು ಆಮದು ಮಾಡುವ ಮೂಲಕ ಭರಿಸಲಾಗುತ್ತಿದೆ. ಡಾಲರ್‌ ಎದುರು ರೂಪಾಯಿ ಇತ್ತೀಚೆಗೆ ಗಣನೀಯ ದುರ್ಬಲವಾಗಿರುವ ಹಿನ್ನೆಲೆಯಲ್ಲಿ ಬಂಗಾರದ ಆಮದು ವಿತ್ತೀಯ ಕೊರತೆಗೆ ಕಾರಣವಾಗುತ್ತಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

4. ದೇವೇಗೌಡರನ್ನು ಭೇಟಿಯಾಗಿ ಕ್ಷಮೆಯಾಚಿಸುವೆ, ಆದರೆ ಬೆದರಿಕೆಗೆ ಜಗ್ಗುವುದಿಲ್ಲ: ಕೆ.ಎನ್‌. ರಾಜಣ್ಣ
ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಈಗಲೇ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ. ಸದ್ಯದಲ್ಲೆ ನಾಲ್ವರ ಮೇಲೆ ಹೋಗುತ್ತಾರೆ ಎಂದು ಆಡಿದ ಮಾತು ವಿವಾದವಾಗುತ್ತಿರುವುದನ್ನು ಗಮನಿಸಿದ ಮಧುಗಿರಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ನಾಯಕ ಕೆ.ಎನ್‌. ರಾಜಣ್ಣ ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ. ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದರೂ ಈ ಬಗ್ಗೆ ವಾದ ಮಾಡಲು ಹೋಗುವುದಿಲ್ಲ. ಖುದ್ದಾಗಿ ಎಚ್‌.ಡಿ. ದೇವೇಗೌಡರನ್ನು ಭೇಟಿ ಮಾಡಿ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

5. UAV | ಭಾರತೀಯ ಸೇನೆಯ ಚಾಲಕರಹಿತ ವಿಮಾನ ಚಿತ್ರದುರ್ಗದಲ್ಲಿ ಮೊದಲ ಯಶಸ್ವಿ ಹಾರಾಟ
ಚಾಲಕ ರಹಿತ ವಿಮಾನದ ಮೊದಲ ಹಾರಾಟವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಚಿತ್ರದುರ್ಗದಲ್ಲಿ ಯಶಸ್ವಿಯಾಗಿ ನಡೆಸಿದೆ. ಮಾನವ ರಹಿತ ವೈಮಾನಿಕ ವಾಹನವನ್ನು (UAV) ಅಟಾನಮಸ್‌ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್’ ಎಂದು ಕರೆಯಲಾಗುತ್ತದೆ. ಕರ್ನಾಟಕದ ಚಿತ್ರದುರ್ಗದ ವೈಮಾನಿಕ ಟೆಸ್ಟ್ ರೇಂಜ್‌ನಲ್ಲಿ ಇದರ ಹಾರಾಟ ನಡೆಸಲಾಯಿತು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೬. ಆಗಸ್ಟ್‌ನಲ್ಲಿ ವಿಧಾನಮಂಡಲ ಅಧಿವೇಶನ: ಸಂಪುಟ ಸಭೆಯಲ್ಲಿ ವಿವಿಧ ತೀರ್ಮಾನಗಳು
ಕರ್ನಾಟಕ ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಆಗಸ್ಟ್‌ನಲ್ಲಿ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಮಾಡಲಾಗಿದೆ. ಸಂಪುಟ ಸಭೆಯ ನಂತರ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
ಚುನಾವಣೆಗೆ ʻನಮ್ಮ ಕ್ಲಿನಿಕ್‌ʼ ಟ್ರಂಪ್‌ ಕಾರ್ಡ್‌: ರಾಜ್ಯಾದ್ಯಂತ ತಲೆಯೆತ್ತಲಿವೆ ಸರ್ಕಾರಿ ಚಿಕಿತ್ಸಾಲಯ

7. Maha politics: ಜುಲೈ 4ರಂದು ಶಿಂಧೆ ವಿಶ್ವಾಸಮತ ಯಾಚನೆ, ತಡೆ ನೀಡುವಂತೆ ಸುಪ್ರೀಂ ಮೊರೆ ಹೊಕ್ಕ ಉದ್ಧವ್‌ ಟೀಮ್‌ಗೆ ನಿರಾಸೆ
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶಿವಸೇನೆಯ ಬಂಡಾಯ ಬಣದ ನಾಯಕ ಏಕನಾಥ್‌ ಶಿಂಧೆ ಅವರು ಜುಲೈ ೪ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವ ನಿರೀಕ್ಷೆ ಇದೆ. ಜುಲೈ ೨ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಈ ನಡುವೆ ವಿಶ್ವಾಸ ಮತ ಯಾಚನೆಗೆ ತಡೆಯಾಜ್ಞೆ ನೀಡಬೇಕು ಎಂಬ ಉದ್ಧವ್‌ ಠಾಕ್ರೆ ಬಣದ ಬೇಡಿಕೆಯನ್ನು ಸುಪ್ರೀಂಕೋರ್ಟ್‌ ತಳ್ಳಿ ಹಾಕಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೮. Mid Size SUV ಕಾರು ಬಿಡುಗಡೆಗೆ ಮಾರುತಿ ಸುಜುಕಿ ಸಿದ್ಧತೆ
ಭಾರತದ ಕಾರು ಮಾರುಕಟ್ಟೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಾಲು ಪಡೆದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು ಇದುವರೆಗೂ Mid Size SUV ಕಾರನ್ನು ಮಾರುಕಟ್ಟೆಗೆ ಬಿಟ್ಟಿಲ್ಲ. ಟಾಟಾ, ಮಹೀಂದ್ರಾ, ಕಿಯಾ ಮತ್ತು ಹ್ಯುಂಡೈ ಸೇರಿದಂತೆ ಪ್ರಮುಖ ಕಂಪನಿಗಳು ಈ ಸೆಗ್ಮೆಂಟ್‌ನಲ್ಲಿ ಹಲವು ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟು ಯಶಸ್ಸು ಪಡೆದುಕೊಂಡಿವೆ. ಈ ಕೊರತೆ ನೀಗಿಸುವ ಉದ್ದೇಶದಿಂದ ಮಾರುತಿ ಸುಜುಕಿ ಕಂಪನಿಯು ಜುಲೈ ಮೂರನೇ ವಾರದಲ್ಲಿ Mid Size SUV ಕಾರೊಂದನ್ನು ಘೋಷಣೆ ಮಾಡಲಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

9. ಪುರಿ ಜಗನ್ನಾಥ ದೇಗುಲದ ಗೋಪುರದ ಮೇಲೆ ಹಕ್ಕಿಗಳು-ವಿಮಾನ ಹಾರಾಡುವುದಿಲ್ಲವೇಕೆ?; ಇಲ್ಲಿದೆ ಕಾರಣ
ಒಡಿಶಾದ ಪುರಿ ಜಗನ್ನಾಥ ಯಾತ್ರೆ ವಿಶ್ವವಿಖ್ಯಾತ. ಜಗನ್ನಾಥ ದೇವರ ವೈಭವದ ಉತ್ಸವ ಶುಕ್ರವಾರದಿಂದ ಪ್ರಾರಂಭವಾಗಿದ್ದು, ಜುಲೈ 12ರವರೆಗೆ ನಡೆಯುತ್ತದೆ. ಮೂರು ರಥಗಳ ಮೆರವಣಿಗೆ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಅಲ್ಲಿನ ವೈಭವ ಎಷ್ಟು ಕಣ್ಮನ ಸೆಳೆಯುತ್ತದೆಯೋ, ದೇಗುಲಕ್ಕಿರುವ ವಿಶೇಷತೆಗಳೂ ಅಷ್ಟೇ ಗಮನ ಸೆಳೆಯುತ್ತವೆ. ಪುರಿ ಜಗನ್ನಾಥ ದೇವಳ ಅಚ್ಚರಿಗಳ ಲೋಕ ಎಂದರೂ ತಪ್ಪಾಗಲಾರದು. ಅದರಲ್ಲೊಂದು ಬಹುಮುಖ್ಯವಾಗಿ, ʻದೇವಾಲಯದ ಗೋಪುರದ ಮೇಲ್ಭಾಗದಲ್ಲಿ ಹಕ್ಕಿಗಳಾಗಲೀ, ವಿಮಾನ-ಹೆಲಿಕಾಪ್ಟರ್‌ಗಳಾಗಲಿ ಎಂದಿಗೂ ಹಾರಾಡುವುದಿಲ್ಲʼ ಎಂಬುದು. ಇದೊಂದು ಅಚ್ಚರಿ-ಕುತೂಹಲದ ವಿಷಯ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

10. Pavitra Lokesh | ಸುಚೇಂದ್ರ ಪ್ರಸಾದ್ ಜತೆ ಮದುವೆ ಆಗಿರಲಿಲ್ಲ, ನರೇಶ್‌ ಜತೆಗೂ ಆಗಿಲ್ಲ: ಪವಿತ್ರಾ ಲೋಕೇಶ್‌
ತೆಲುಗು ನಟ ನರೇಶ್‌ ಜತೆಗಿನ ಸಂಬಂಧದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ನಟಿ ಪವಿತ್ರಾ ಲೋಕೇಶ್‌ (Pavitra Lokesh) ಶುಕ್ರವಾರ (ಜೂನ್‌ 29) ಮೈಸೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ಮದುವೆ ಆಗಿಲ್ಲ. ನಾನೇಕೆ ವಿಚ್ಛೇದನ ತೆಗೆದುಕೊಳ್ಳಬೇಕು? ಎಂದು ಪ್ರಶ್ನಿಸಿರುವ ಪವಿತ್ರಾ ಲೋಕೇಶ್‌, ನರೇಶ್‌ ಜತೆಗೂ ಮದುವೆ ಆಗಿಲ್ಲ ಎಂದಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

Exit mobile version