ಬೆಂಗಳೂರು: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ʻವಿಸ್ತಾರ ನ್ಯೂಸ್ʼಗೆ ಅವರು ವಿಶೇಷ ಸಂದರ್ಶನ ನೀಡಿದ್ದಾರೆ. ಸಿದ್ದರಾಮೋತ್ಸವದ ಜತೆಗೆ ಒಟ್ಟಾರೆ ರಾಜಕಾರಣದ ಕುರಿತೂ ಅನೇಕ ಕುತೂಹಲಕರ ಅಂಶಗಳನ್ನು ಅವರು ಹೊರಹಾಕಿದ್ದಾರೆ. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ ಮುಂದುವರಿದಿದೆ. ಶಿವಸೇನೆ ಮುಖಂಡ ಸಂಜಯ ರಾವತ್ ಬಂಧನವಾಗಿದೆ. ಒಬಿಸಿ ಮೀಸಲಾತಿಗೆ ವೀರಶೈವ ಲಿಂಗಾಯತ ಸಮುದಾಯ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಇವೂ ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Siddaramotsava | ನಾನೂ ಸಿಎಂ ಆಕಾಂಕ್ಷಿ ಅನ್ನೋದರಲ್ಲಿ ತಪ್ಪೇನಿದೆ?: ಸಿದ್ದರಾಮಯ್ಯ ವಿಶೇಷ ಸಂದರ್ಶನ
ವಿಸ್ತಾರ ನ್ಯೂಸ್: ಹುಟ್ಟು ಹಬ್ಬವೇ ಬೇಡ ಎನ್ನುತ್ತಿದ್ದ ನೀವು ಈ ಬಾರಿ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವುದರ ಮರ್ಮವೇನು?
ಸಿದ್ದರಾಮಯ್ಯ: ನನ್ನ ಹುಟ್ಟುಹಬ್ಬ ಆಚರಣೆ ಚರ್ಚೆ ಆಗಬಾರದು. ನಾನು ಎಂದೂ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ಇದೇ ಮೊದಲ ಬಾರಿಗೆ ಒಪ್ಪಿಗೆ ಕೊಟ್ಟಿರುವೆ. ಇದೇ ಮೊದಲು, ಇದೇ ಕೊನೆ. ಮುಂದೆ ಎಂದೂ ಹುಟ್ಟು ಹಬ್ಬ ಮಾಡಿಕೊಳ್ಳುವುದಿಲ್ಲ. ನಾನು 75 ದಾಟಿದ್ದೇನೆ. ಹೀಗಾಗಿ ಅಮೃತ ಮಹೋತ್ಸವ ಮಾಡೋಣ ಎಂದು ಹಿತೈಷಿಗಳು ಹೇಳಿದ್ದಕ್ಕೆ ಒಪ್ಪಿಕೊಂಡಿದ್ದೇನೆ ಅಷ್ಟೆ. ದಾವಣಗೆರೆ ನಗರ ರಾಜ್ಯಕ್ಕೆ ಕೇಂದ್ರ ಸ್ಥಾನದಲ್ಲಿ ಇರೋದರಿಂದ ಅಲ್ಲಿಯೇ ಮಾಡಿ ಎಂದು ಹೇಳಿದ್ದೇನೆ. (ಸಂಪೂರ್ಣ ಸಂದರ್ಶನ ಓದಲು ಹಾಗೂ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ)
2. ಸಿದ್ದರಾಮೋತ್ಸವದಲ್ಲಿ ಡಿ.ಕೆ. ಶಿವಕುಮಾರ್ ಮಾಡಬೇಕಿದ್ದ ಭಾಷಣ ಲೀಕ್: ಸಿದ್ದುಗೆ ಹೇಳಿದರೇ ಬುದ್ಧಿ?
ರಾಜ್ಯ ಕಾಂಗ್ರೆಸ್‌ನಲ್ಲಿ ಈಗಾಗಲೆ ಚರ್ಚೆ, ವಿವಾದ, ವಾಗ್ವಾದಕ್ಕೆ ಕಾರಣವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಲು ಸಿದ್ಧಪಡಿಸಿಟ್ಟುಕೊಂಡಿದ್ದರು ಎನ್ನಲಾದ ಭಾಷಣ ಲೀಕ್ ಆಗಿದೆ. ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸುತ್ತಿದ್ದು, ಡಿ.ಕೆ. ಶಿವಕುಮಾರ್ ಭಾಷಣ ಸಹ ಇರಲಿದೆ. ಈ ಕಾರ್ಯಕ್ರಮಕ್ಕೆ ಶಿವಕುಮಾರ್ ತಂಡ ಭಾಷಣವನ್ನು ಸಿದ್ಧಪಡಿಸಿಕೊಂಡಿದ್ದು, ಅದು ಅಚಾನಕ್ಕಾಗಿ ವಾಟ್ಸ್‌ಆಪ್ ಗುಂಪಿನ ಮೂಲಕ ಸೋರಿಕೆ ಆಗಿದೆ. ತಪ್ಪಿನ ಅರಿವಾದ ನಂತರ ತಂಡ, ಈ ಪೋಸ್ಟನ್ನು ಅಳಿಸಿಹಾಕಿದೆ. ಅಷ್ಟರಲ್ಲಾಗಲೇ ಅದರಲ್ಲಿರುವ ಪಠ್ಯ ಎಲ್ಲೆಡೆ ಹರಿದಾಡುತ್ತಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
3. CWG- 2022 | ಅಚಿಂತ ಶೆಯುಲಿಗೆ ಸ್ವರ್ಣ, ಭಾರತಕ್ಕೆ ಮೂರನೇ ಚಿನ್ನ, ಆರನೇ ಪದಕ
ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ (CWG- 2022) ಭಾರತದ ವೇಟ್‌ಲಿಫ್ಟರ್ ಅಚಿಂತ ಶೆಯುಲಿ ಬಂಗಾರದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ೬ಕ್ಕೇರಿದೆ. ಭಾನುವಾರ ರಾತ್ರಿ ನಡೆದ ೭೩ ಕೆ.ಜಿ ವಿಭಾಗದ ಫೈನಲ್‌ನಲ್ಲಿ ಒಟ್ಟಾರೆ ೩೧೩ ಕೆ.ಜಿ ಭಾರ ಎತ್ತಿದ ಅಚಿಂತ ಶೆಯುಲಿ ಪದಕಕ್ಕೆ ಮುತ್ತಿಟ್ಟರು. ಇದರೊಂದಿಗೆ ತಮ್ಮ ಚೊಚ್ಚಲ ಕಾಮನ್ವೆಲ್ತ್ ಗೇಮ್ಸ್‌ನಲ್ಲಿಯೇ ಬೃಹತ್ ಸಾಧನೆ ಮಾಡಿದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
4. ಶಿವಸೇನೆ ಸಂಸದ ಸಂಜಯ್ ರಾವತ್‌ಗೆ ಆಗಸ್ಟ್ 4 ರವರೆಗೆ ಇಡಿ ಕಸ್ಟಡಿ; 8 ದಿನಗಳ ಮನವಿಗೆ ಇಲ್ಲ ಸಮ್ಮತಿ
ಪಾತ್ರಾ ಚಾಲ್ ಭೂಹಗರಣದಲ್ಲಿ ಬಂಧಿತರಾಗಿರುವ ಶಿವ ಸೇನೆ ಸಂಸದ ಸಂಜಯ್ ರಾವತ್‌ರನ್ನು ಆಗಸ್ಟ್ 4ರವರೆಗೆ ಇಡಿ (ಜಾರಿ ನಿರ್ದೇಶನಾಲಯ) ಕಸ್ಟಡಿಗೆ ನೀಡಿ, ಮುಂಬೈನ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ((PMLA) ನ್ಯಾಯಾಲಯ ಆದೇಶ ಹೊರಡಿಸಿದೆ. ಸಂಜಯ್ ರಾವತ್‌ರನ್ನು ಎಂಟು ದಿನಗಳವರೆಗೆ ನಮ್ಮ ಕಸ್ಟಡಿಗೆ ನೀಡಿ ಎಂದು ಇಡಿ ಅಧಿಕಾರಿಗಳು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ನ್ಯಾಯಾಧೀಶರು ʼಸಂಜಯ್ ರಾವತ್‌ಗೆ ಆಗಸ್ಟ್ 4ರವರೆಗೆ ಇಡಿ ಕಸ್ಟಡಿ ಸಾಕು ಎಂದು ನನ್ನ ಅಭಿಪ್ರಾಯʼ ಎಂದು ಜಡ್ಜ್ ಹೇಳಿದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
5. ಚಾಮರಾಜನಗರದಿಂದ ದೂರಾಗಲಿಲ್ಲ ಶಾಪಗ್ರಸ್ತ ಹಣೆಪಟ್ಟಿ: ಮುಂದುವರಿದ ಮೂಢನಂಬಿಕೆ
ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾಗಿರುವ, ಪವಾಡ ಪುರುಷ ಮಲೆ ಮಾದಪ್ಪನ ಕರ್ಮಭೂಮಿ, ಜಾನಪದ ಕ್ಷೇತ್ರದಲ್ಲಿ ಮಂಟೇಸ್ವಾಮಿ ಹಾಡುಗಳ ಮೂಲಕ ಗುರುತರ ಹೆಗ್ಗುರುತು ಮೂಡಿಸಿರುವ ರಾಜ್ಯದ ಗಡಿ ಭಾಗದ ಚಾಮರಾಜನಗರ ಇಂದಿಗೂ ಶಾಪಗ್ರಸ್ತ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಕಳಚಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಚಾಮರಾಜನಗರ ಜಿಲ್ಲೆಯಾಗಿ 25 ವರ್ಷ ಪೂರ್ಣಗೊಂಡಿದ್ದರೂ ರಾಜಕಾರಣಿಗಳ ಪಾಲಿಗೆ ದೂರದ ಬೆಟ್ಟವೇ ಆಗಿದೆ. (ಈ ಕುರಿತು ವಿಶೇಷ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
6. OBC Reservation | ಪಟ್ಟುಹಿಡಿದ ವೀರಶೈವ ಸಮುದಾಯದಿಂದ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ
ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ (OBC Reservation) ಸಮುದಾಯವನ್ನು ಸೇರಿಸುವಂತೆ ವೀರಶೈವ ಲಿಂಗಾಯತರು ಪಟ್ಟುಹಿಡಿದಿದ್ದು, ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಈಶ್ವರ್ ಖಂಡ್ರೆ, ಒಬಿಸಿ ಪಟ್ಟಿಯಲ್ಲಿರುವ ನ್ಯೂನತೆ ಸರಿಪಡಿಸಬೇಕು. ವೀರಶೈವ ಸಮುದಾಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಹಕ್ಕನ್ನು ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಿದ್ದೇವೆ. ಕೂಡಲೇ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಲಾಗುವುದು ಎಂದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
7. BBMP ಚುನಾವಣೆ ಸಿದ್ಧತೆಗೆ ಆರಂಭದಲ್ಲೇ ವಿಘ್ನ: ಬಿಜೆಪಿ ಸಭೆಯಿಂದ ಹೊರನಡೆದ ಸಚಿವ ಅಶ್ವತ್ಥನಾರಾಯಣ
ಎರಡು ವರ್ಷದಿಂದ ನನೆಗುದಿಗೆ ಬಿದ್ದಿರುವ ಬಿಬಿಎಂಪಿ ಚುನಾವಣೆಗಳು ನಡೆಯುವುದು ಬಹುತೇಕ ಖಚಿತ ಎನ್ನುವಂತೆ ಬಿಜೆಪಿ ಗಂಭೀರತೆ ಪಡೆದುಕೊಂಡಿದ್ದು, ಸಭೆ ನಡೆಸಿ ಚರ್ಚಿಸಿದೆ. ಆದರೆ ಚುನಾವಣೆ ಉಸ್ತುವಾರಿ ನೇಮಕ ಮಾಡುವ ಕುರಿತು ಮೊದಲ ಸಭೆಯಲ್ಲೆ ಅಸಮಾಧಾನ ಭುಗಿಲೆದ್ದಿದ್ದು, ಆರ್. ಅಶೋಕ್ ನೇತೃತ್ವಕ್ಕೆ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಆಕ್ರೋಶ ಹೊರಹಾಕಿದ್ದಾರೆ. ನಂತರ ಪ್ರತಿಕ್ರಿಯಿಸಿದ ಆರ್. ಅಶೊಕ್, ಕಾಂಗ್ರೆಸ್‍ನಲ್ಲಿ ಇರುವಂತೆ ಸಿಎಂ ಹುದ್ದೆ ವಿಚಾರ, ಇತರ ವಿಚಾರಗಳಲ್ಲಿ ನಮ್ಮಲ್ಲಿ ಭಿನ್ನಮತ ಇಲ್ಲ. ನಾವೆಲ್ಲರೂ ಸಾಮೂಹಿಕವಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸಲಿದ್ದೇವೆ ಎಂದಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
8. ಅಂಜನಾದ್ರಿಯೇ ಹನುಮ ಜನ್ಮಸ್ಥಳ; ನಂಬಿಕೆಗಿಂತ ಬೇರೆ ಪುರಾವೆ ಬೇಕಿಲ್ಲ: ಸಿಎಂ ಬೊಮ್ಮಾಯಿ
ಆಂಜನೇಯ ಹುಟ್ಟಿದ್ದು ಅಂಜನಾದ್ರಿ ಬೆಟ್ಟದಲ್ಲಿ ಎನ್ನುವುದಕ್ಕೆ ಐತಿಹಾಸಿಕವಾಗಿ ಸಾವಿರಾರು ವರ್ಷಗಳಿಂದ ಇದು ಕಿಷ್ಕಿಂದೆಯಾಗಿತ್ತು ಎನ್ನುವ ನಂಬಿಕೆಗಿಂತ ಇನ್ನೊಂದು ಪುರಾವೆ ಬೇಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇತ್ತೀಚಿನ ದಿನಗಳಲ್ಲಿ ಆಂಜನೇಯನ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆಗಳಿವೆ. ಮೂಲತಃ ಆಂಜನೇಯ ಹುಟ್ಟಿದ್ದು, ಅಂಜನಾದ್ರಿ ಬೆಟ್ಟದಲ್ಲಿಯೇ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಿದ್ದೇವೆ. ಈ ಕುರಿತು ಕರ್ನಾಟಕ, ಆಂಧ್ರಪ್ರದೇಶ ಬೇರೆ ಬೇರೆಯಾಗಿ ಘೋಷಣೆ ಮಾಡಬೇಕಿಲ್ಲ. ಇಡೀ ಭಾರತವಾಸಿಗಳು ಈ ವಿಷಯವನ್ನು ನಂಬಿದ್ದಾರೆ ಹಾಗೂ ಎಲ್ಲರಿಗೂ ವಿಶ್ವಾಸವಿದೆ ಎಂದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
9. GOOD NEWS| ವಾಣಿಜ್ಯ ಬಳಕೆಯ LPG ಸಿಲಿಂಡರ್ ದರದಲ್ಲಿ 36 ರೂ. ಇಳಿಕೆ
ವಾಣಿಜ್ಯೋದ್ದೇಶಕ್ಕೆ ಬಳಸುವ ಅಡುಗೆ ಅನಿಲ (ಎಲ್‌ಪಿಜಿ) ದರದಲ್ಲಿ ಸೋಮವಾರ ಪ್ರತಿ ಸಿಲಿಂಡರ್‌ಗೆ ೩೬ ರೂ. ಇಳಿಕೆಯಾಗಿದೆ. ೧೯ ಕೆ.ಜಿ ತೂಕದ ಸಿಲಿಂಡರ್‌ಗೆ ಈ ದರ ಕಡಿತ ಅನ್ವಯವಾಗಲಿದೆ. ದಿಲ್ಲಿಯಲ್ಲಿ ಈಗ ವಾಣಿಜ್ಯೋದ್ದೇಶದ ೧೯ ಕೆ.ಜಿ ಎಲ್‌ಪಿಜಿ ಸಿಲಿಂಡರ್ ದರ ೧,೯೭೬ ರೂ.ಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ೨,೧೦೦ ರೂ.ಗಳಿಂದ ೨,೦೬೩ ರೂ.ಗೆ ತಗ್ಗಿದೆ. ಕಳೆದ ಜುಲೈ ೬ರಂದು ಕೂಡ ೧೯ ಕೆ.ಜಿ ಸಿಲಿಂಡರ್‌ನ ದರದಲ್ಲಿ ೮.೫ ರೂ. ದರ ಕಡಿತ ಉಂಟಾಗಿದೆ. ಜುಲೈ ೬ರಂದು ೧೪.೧ ಕೆ.ಜಿ ಸಿಲಿಂಡರ್ ದರದಲ್ಲಿ ೫೦ ರೂ. ಏರಿಸಲಾಗಿತ್ತು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
10. Kannada Bigg Boss | ಮೊಟ್ಟ ಮೊದಲ ಬಾರಿಗೆ ವೂಟ್‌ನಲ್ಲಿ ಬಿಗ್ ಬಾಸ್: ಕಿಚ್ಚ ಹೇಳಿದ್ದೇನು?
ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಬಿಗ್ ಬಾಸ್ (Bigg Boss Kannada) ಅನ್ನು ಈ ಬಾರಿ ಕಿರುತೆರೆಯಲ್ಲಿ ನೋಡುವ ಭಾಗ್ಯವಿಲ್ಲ. ಈಗ ಮಿನಿ ಬಿಗ್ ಬಾಸ್ ಆರಂಭವಾಗುತ್ತಿದ್ದು, ಒಟಿಟಿ ಪ್ಲಾಟ್‌ಫಾರ್ಮ್‌ಗೆ ಶಿಫ್ಟ್ ಆಗಿದೆ. ಈ ಬಗ್ಗೆ ಬಿಗ್‌ಬಾಸ್ ನಿರೂಪಣೆ ಹೊಣೆ ಹೊತ್ತಿರುವ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸುದ್ದಿಗೋಷ್ಠಿ ನಡೆಸಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)