ಕೆಲವು ಸೂಕ್ಷ್ಮ ಪೋಷಕಾಂಶಗಳು ನಮ್ಮ ದೇಹ ಸೇರುವುದು ನಮಗೆ ತಿಳಿಯುವುದೇ ಅವುಗಳ ಕೊರತೆಯಾದಾಗ! ಉದಾಹರಣೆಗೆ, ಬಿ12 ಜೀವಸತ್ವವನ್ನೇ (vitamin B12) ತೆಗೆದುಕೊಳ್ಳಿ. ಅದು ಯಾಕೆ ಬೇಕು, ಯಾವುದರಿಂದ ನಮಗೆ ದೊರೆಯುತ್ತದೆ ಇಂಥವೆಲ್ಲಾ ಬಹುಪಾಲು ತಿಳಿದಿರುವುದಿಲ್ಲ. ಈ ಬಗ್ಗೆ ನಾವು ಕೇಳುವುದೇ ಈ ಸತ್ವದ ಕೊರತೆಯೆಂದು ವೈದ್ಯರು ಮಾತ್ರೆ ಚೀಟಿ ಬರೆದಾಗ. ಏನಿದು ಮತ್ತು ನಮಗೆ ಯಾಕಾಗಿ ಬೇಕು? ಅದಿಲ್ಲದಿದ್ದರೆ ಏನಾಗುತ್ತದೆ? ಯಾವೆಲ್ಲಾ ಆಹಾರಗಳಿಂದ ದೊರೆಯುತ್ತದೆ ಎಂಬ ಬಗ್ಗೆ ಒಂದಿಷ್ಟು ಮಾಹಿತಿಯಿದು.
ಬಿ12 ಎಂಬುದು ಕರಗಬಲ್ಲ ವಿಟಮಿನ್‌ಗಳಲ್ಲಿ (vitamin B12) ಒಂದು. ಅಂದರೆ ಇದು ನಮ್ಮ ಜೀರ್ಣಾಂಗಗಳನ್ನು ದಾಟಿ ಹೊರಬೀಳದೆ, ಕರಗಿ ನಮ್ಮ ರಕ್ತವನ್ನು ಸೇರುತ್ತದೆ. ಈ ಜೀವಸತ್ವವನ್ನು ನಮ್ಮ ದೇಹ ವರ್ಷಾನುಗಟ್ಟಲೆ ಶೇಖರಿಸಿ ಇಟ್ಟುಕೊಳ್ಳಬಲ್ಲದು. ಹಾಗೂ ಹೆಚ್ಚಾದರೆ ಮೂತ್ರಪಿಂಡಗಳ ಮೂಲಕ ಹೊರಹೋಗುತ್ತದೆ. ಇದು ಸಾಮಾನ್ಯವಾಗಿ ಪ್ರಾಣಿಜನ್ಯ ಆಹಾರದಿಂದ ದೊರೆಯುವಂಥದ್ದು. ಸಸ್ಯಜನ್ಯ ಆಹಾರಗಳ ಮೂಲಕ ಇದರ ಲಭ್ಯತೆ ಅತೀ ಕಡಿಮೆ. ಆದರೆ ಇದನ್ನು ಕೃತಕವಾಗಿ ಸಿದ್ಧ ಮಾಡಬಹುದಾದ್ದರಿಂದ, ಪೂರಕಗಳ ಮೂಲಕ ದೇಹಕ್ಕೆ ನೀಡಬಹುದು.
Vitamin B12 ಯಾಕೆ ಬೇಕು?
ನಮ್ಮ ಮೆದುಳು ಮತ್ತು ನರಮಂಡಲ ಸಮರ್ಪಕವಾಗಿ ಕಾರ್ಯನಿರ್ವಹಿಸಲು, ಯೋಚಿಸುವ ಸಾಮರ್ಥ್ಯ ಉಳಿಸಿಕೊಳ್ಳಲು, ಕೆಂಪು ರಕ್ತ ಕಣಗಳ ಉತ್ಪತ್ತಿಗೆ, ವಂಶವಾಹಿಗಳ ಸೂಕ್ತ ನಿರ್ವಹಣೆಗೆ, ಕಣ್ಣುಗಳ ರಕ್ಷಣೆಗೆ ಮತ್ತು ದೇಹಕ್ಕೆ ಬೇಕಾಗುವ ಶಕ್ತಿ ಉತ್ಪಾದನೆಗೆ- ಇಂಥ ಕೆಲವು ಅತಿ ಮುಖ್ಯ ಕೆಲಸಗಳಿಗೆ ಬಿ12 ಜೀವಸತ್ವ ನಮಗೆ ಬೇಕು.
Vitamin B12 ಕೊರತೆಯಾದರೆ…?
ನಮ್ಮ ರಕ್ತದ ಗುಣಮಟ್ಟ ಸಮರ್ಪಕವಾಗಿ ಇರದು. ಅಂದರೆ ಸಾಕಷ್ಟು ಕೆಂಪು ರಕ್ತಕಣಗಳು ಉತ್ಪತ್ತಿಯಾಗದಿದ್ದರೆ ರಕ್ತದಲ್ಲಿ ಆಮ್ಲಜನಕದ ಮಟ್ಟವೂ ಕಡಿಮೆಯಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಈ ಸಮಸ್ಯೆಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಶಿಶುಗಳಲ್ಲಿ ತೂಕ ಏರದಿರುವುದು, ಕಿರಿಕಿರಿ, ವಾಂತಿ, ಬೆಳವಣಿಗೆಯ ಸಮಸ್ಯೆಗಳು ತೋರಬಹುದು. ವಯಸ್ಕರಲ್ಲಿ ಸುಸ್ತು, ಆಯಾಸ, ತಲೆನೋವು, ಖಿನ್ನತೆ, ತೂಕ ಇಳಿಕೆ, ಜೀರ್ಣಾಂಗದ ಸಮಸ್ಯೆಗಳು, ಮುಟ್ಟಿನ ತೊಂದರೆಗಳು- ಹೀಗೆ ಹಲವು ರೀತಿಯಲ್ಲಿ ಬಿ12 ಜೀವಸತ್ವದ ಕೊರತೆಯ ಲಕ್ಷಣಗಳು ಗೋಚರಿಸಬಹುದು.
Vitamin B12 ಎಷ್ಟು ಬೇಕು?
ವರ್ಷದೊಳಗಿನ ಶಿಶುಗಳಿಗೆ ದಿನಕ್ಕೆ ೦.೫ ಮೈಕ್ರೊ ಗ್ರಾಂ ಸಾಕಾಗುತ್ತದೆ. 1-3 ವರ್ಷದ ಮಕ್ಕಳಿಗೆ 0.9 ಮೈಕ್ರೊ ಗ್ರಾಂ, 4-8 ವರ್ಷದ ಮಕ್ಕಳಿಗೆ 1.2 ಮೈಕ್ರೊ ಗ್ರಾಂ, 9-13ರ ಮಕ್ಕಳಿಗೆ 1.8 ಮೈಕ್ರೊ ಗ್ರಾಂ, 14ರ ನಂತರ ಎಲ್ಲರಿಗೂ 2.4 ಮೈಕ್ರೊ ಗ್ರಾಂ, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಕ್ರಮವಾಗಿ 2.6 ಮತ್ತು 2.8 ಮೈಕ್ರೊ ಗ್ರಾಂಗಳಷ್ಟು ವಿಟಮಿನ್ ಬಿ12 ಬೇಕಾಗುತ್ತದೆ. ಅರೆ! ಉಳಿದೆಲ್ಲಾ ಸತ್ವಗಳನ್ನು ನಾವು ಗ್ರಾಂಗಳ ಲೆಕ್ಕದಲ್ಲಿ ಸೇವಿಸುವಾಗ ಇದು ಬರೀ ಮೈಕ್ರೊ ಗ್ರಾಂ ಲೆಕ್ಕದಲ್ಲಿ ಎಂದು ಹುಬ್ಬೇರಿಸಿದರೆ… ದೇಹಕ್ಕೆ ಬೇಕಾಗಿದ್ದು ಇಷ್ಟೇ ಪ್ರಮಾಣ. ಆದರೆ ಇದೂ ಕೆಲವೊಮ್ಮೆ ಕೊರತೆಯಾಗುತ್ತದಲ್ಲ!
Vitamin B12 ಹೇಗೆ ದೊರೆಯುತ್ತದೆ?
ಇದನ್ನು ನಮ್ಮ ಆಹಾರದ ಮೂಲಕವೇ ನಾವು ಪೂರೈಕೆ ಮಾಡಬೇಕು. ಇದು ಹೆಚ್ಚಾಗಿ ದೊರೆಯುವುದು ಪ್ರಾಣಿಜನ್ಯ ಆಹಾರಗಳಿಂದ. ಸಸ್ಯಜನ್ಯ ಆಹಾರಗಳಲ್ಲಿ ಇದರ ಲಭ್ಯತೆ ತೀರಾ ಕಡಿಮೆ. ಪ್ರಾಣಿಗಳ ಯಕೃತ್ತಿನಲ್ಲಿ ಈ ಅಂಶ ವಿಫುಲವಾಗಿ ದೊರೆಯುತ್ತದೆ. ಹಲವು ಜಾತಿಯ ಮೀನುಗಳು (ಭೂತಾಯಿ, ಗೆದರೆ ಇತ್ಯಾದಿ), ಬೆಳಚು ಮುಂತಾದ ಸಾಗರೋತ್ಪನ್ನಗಳಲ್ಲಿ ಇವು ತೀರಾ ಸಾಂದ್ರವಾಗಿರುತ್ತವೆ. ಚಿಕನ್ ಮತ್ತು ಮೊಟ್ಟೆಯಿಂದಲೂ ಈ ಸತ್ವ ದೊರೆಯುತ್ತದೆ. ಕೆಲವು ಬಗೆಯ ಯೀಸ್ಟ್‌ಗಳಿಂದ ಇದು ದೊರೆಯಬಹುದು, ಹಾಲು, ಮೊಸರು ಮತ್ತು ಚೀಸ್‌ನಿಂದಲೂ ಬಿ12 ಜೀವಸತ್ವ ದೇಹ ಸೇರುತ್ತದೆ. ಬಹಳಷ್ಟು ಸೀರಿಯಲ್ ಮತ್ತು ಜ್ಯೂಸ್‌ಗಳಲ್ಲಿ ಬಿ12 ಜೀವಸತ್ವವನ್ನು ಪೂರಕವಾಗಿ ಸೇರಿಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Monsoon Health Tips: ಮಳೆಗಾಲದಲ್ಲಿ ಹರಡುವ ಕಾಯಿಲೆಗಳಿಂದ ದೂರವಿರಲು ಸುಲಭ ಸೂತ್ರಗಳು!
Vitamin B12 ಕೊರತೆ ಹೇಗೆ ಉಂಟಾಗುತ್ತದೆ?
ಸಾಮಾನ್ಯವಾಗಿ ವೇಗನ್‌ಗಳು ಮತ್ತು ಸಸ್ಯಾಹಾರಿಗಳಿಗೆ ಇದರ ಕೊರತೆ ಎದುರಾಗುತ್ತದೆ. ಕಾರಣ, ವಿಟಮಿನ್ ಬಿ12 ಸಾಂದ್ರವಾಗಿ ದೊರೆಯುವುದು ಪ್ರಾಣಿಜನ್ಯ ಆಹಾರಗಳಿಂದ. ಸಸ್ಯಾಹಾರಿಗಳಿಗೆ ಇದರ ಲಭ್ಯತೆ ಕಡಿಮೆಯೇ. ಬಾಳೆಹಣ್ಣು, ಸೇಬು, ಕಿತ್ತಳೆ ಮತ್ತು ಬ್ಲೂಬೆರಿಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ತರಕಾರಿಗಳ ಪಟ್ಟಿ ನೋಡಿದರೆ ಕೆಲವು ಬಗೆಯ ಅಣಬೆಗಳು ಮತ್ತು ಬೀಟ್‌ರೂಟ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ವಿಟಮಿನ್ ಬಿ12 ದೊರೆಯುತ್ತದೆ. ಹಾಗಾಗಿ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ, ಬಿ12 ಜೀವಸತ್ವವನ್ನು ಹೀರಿಕೊಳ್ಳಲಾರದಂಥ ಸಮಸ್ಯೆ ಇದ್ದವರಿಗೆ ಪೂರಕ ಮಾತ್ರೆಗಳ ಮುಖಾಂತರ ಇದನ್ನು ನೀಡಲಾಗುತ್ತದೆ.
FAQ
ಸಸ್ಯಾಹಾರಿಗಳಿಗೆ ವಿಟಮಿನ್ ಬಿ12 ಹೇಗೆ ದೊರೆಯುತ್ತದೆ?
ಹಾಲು, ಮೊಸರು, ಚೀಸ್‌ಗಳು ಸಸ್ಯಾಹಾರಿಗಳಿಗೆ ಮುಖ್ಯವಾದ ವಿಟಮಿನ್ ಬಿ12 ಆಹಾರ. ಮೊಟ್ಟೆ ತಿನ್ನುವವರಿಗೆ ಅದರಿಂದಲೂ ದೊರೆಯುತ್ತದೆ. ಪೂರಕಗಳು ಅಗತ್ಯವಾದರೆ ವೈದ್ಯರನ್ನು ಕೇಳಬೇಕು.
ವೇಗನ್‌ಗಳಿಗೆ ಬಿ12 ಜೀವಸತ್ವ ಹೇಗೆ ದೊರೆಯುತ್ತದೆ?
ಬಾಳೆ, ಸೇಬು, ಕಿತ್ತಲೆ, ಕೆಲವು ಅಣಬೆಗಳು, ಬೀಟ್‌ರೂಟ್ ಮುಂತಾದ ಸಸ್ಯಾದಿಗಳಲ್ಲಿ ಬಿ12 ಜೀವಸತ್ವವಿದೆ. ವೇಗನ್‌ಗಳಿಗಾಗಿ ತಯಾರಿಸುವ ಸಸ್ಯಗಳ ಹಾಲಿನಲ್ಲಿ ಸಾಮಾನ್ಯವಾಗಿ ಬಿ12 ಜೀವಸತ್ವವನ್ನು ಸೇರಿಸಲಾಗುತ್ತದೆ.