Site icon Vistara News

VK Pandian: ಉತ್ತರಾಧಿಕಾರಿ ವದಂತಿ ಬೆನ್ನಲ್ಲೇ ವಿ.ಕೆ.ಪಾಂಡಿಯನ್‌ ರಾಜಕೀಯ ನಿವೃತ್ತಿ; ಬಿಜೆಡಿ ಸೋಲಿಗೆ ಹೊಣೆ ಹೊತ್ತು ವಿದಾಯ!

VK Pandian

VK Pandian Quits Active Politics After BJD Loses Odisha

ಭುವನೇಶ್ವರ: ಒಡಿಶಾ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜು ಜನತಾದಳ ಪಕ್ಷವು (BJD) ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ (Naveen Patnaik) ಅವರ ಆಪ್ತ, ಬಿಜೆಡಿ ನಾಯಕ ವಿ.ಕೆ. ಪಾಂಡಿಯನ್‌ (VK Pandian) ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ. ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌ ಅವರಿಗೆ ವಿ.ಕೆ. ಪಾಂಡಿಯನ್‌ ಅವರೇ ಉತ್ತರಾಧಿಕಾರಿಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ ವಿ.ಕೆ.ಪಾಂಡಿಯನ್‌ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ.

“ನವೀನ್‌ ಪಟ್ನಾಯಕ್‌ ಅವರಿಗೆ ನೆರವು ನೀಡಬೇಕು, ಅವರ ಜತೆ ನಿಲ್ಲಬೇಕು ಎಂಬ ಒಂದೇ ಕಾರಣದಿಂದ ನಾನು ರಾಜಕೀಯ ಪ್ರವೇಶಿಸಿದೆ. ಆದರೆ, ನಾನೀಗ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದೇನೆ. ನನ್ನ ರಾಜಕೀಯ ಪಯಣದಲ್ಲಿ ಯಾರಿಗಾದರೂ ನೋವುಂಟು ಮಾಡಿದ್ದರೆ, ಅದಕ್ಕೆ ಕ್ಷಮೆಯಾಚಿಸುತ್ತೇನೆ. ಚುನಾವಣೆ ಪ್ರಚಾರದಲ್ಲಿ ನನ್ನ ವಿರುದ್ಧ ಅಭಿಯಾನ ಶುರುವಾಗಿ, ಅದು ಪಕ್ಷದ ಸೋಲಿಗೆ ಕಾರಣವಾಗಿದ್ದರೆ ಅದಕ್ಕೂ ಕ್ಷಮೆಯಾಚಿಸುತ್ತೇನೆ. ಬಿಜು ಪರಿವಾರಕ್ಕೂ ನಾನು ಕ್ಷಮೆ ಕೇಳುತ್ತೇನೆ” ಎಂದು ಅವರು ಹೇಳಿದ್ದಾರೆ.

ನವೀನ್ ಪಟ್ನಾಯಕ್‌ ಅವರಿಗೆ ವಿ.ಕೆ. ಪಾಂಡಿಯನ್‌ ಅವರು ತುಂಬ ಆಪ್ತರಾಗಿದ್ದರು. ನವೀನ್‌ ಪಟ್ನಾಯಕ್‌ ಅವರ ವಯಸ್ಸಿನ ಕಾರಣದಿಂದಾಗಿ ವಿ.ಕೆ.ಪಾಂಡಿಯನ್‌ ಅವರೇ ಬಿಜೆಡಿಯ ಉತ್ತರಾಧಿಕಾರಿಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ನರೇಂದ್ರ ಮೋದಿ ಅವರು ಒಡಿಶಾದಲ್ಲಿ ಚುನಾವಣೆ ಪ್ರಚಾರದ ವೇಳೆ, ಬಿಜೆಪಿ ಗೆದ್ದರೆ ಒಡಿಶಾ ಮೂಲದವರೇ ಸಿಎಂ ಆಗುತ್ತಾರೆ ಎಂದಿದ್ದರು. ವಿ.ಕೆ.ಪಾಂಡಿಯನ್‌ ಅವರು ತಮಿಳು ಮೂಲದವರಾದ ಕಾರಣ ಮೋದಿ ಪರೋಕ್ಷವಾಗಿ ತಿರುಗೇಟು ನೀಡಿದ್ದರು.

ಒಡಿಶಾದಲ್ಲಿ ಈ ಬಾರಿ ಬಿಜೆಪಿ ತನ್ನ ಹಳೆದ ದೋಸ್ತಿ ಬಿಜೆಡಿಗೆ ಭರ್ಜರಿ ಗುದ್ದು ನೀಡಿದ್ದು, ಒಟ್ಟು 147 ಸ್ಥಾನಗಳಲ್ಲಿ 78 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಡಿ ಕೇವಲ 51 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದಂತೆ ಕಾಂಗ್ರೆಸ್‌ 14 ಕ್ಷೇತ್ರಗಳಲ್ಲಿ ಗೆದ್ದಿದೆ. ಒಡಿಶಾದ 21 ಲೋಕಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲೂ ಬಿಜೆಡಿಯು ತೀವ್ರ ಮುಖಭಂಗ ಅನುಭವಿಸಿದೆ. 21 ಕ್ಷೇತ್ರಗಳ ಪೈಕಿ ಬಿಜೆಪಿಯು 20 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್‌ 1 ಕ್ಷೇತ್ರದಲ್ಲಿ ಗೆದ್ದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಡಿ ಈ ಬಾರಿ ಒಂದೂ ಕ್ಷೇತ್ರ ಗೆದ್ದಿಲ್ಲ.

ಇದನ್ನೂ ಓದಿ: Odisha: ಒಡಿಶಾದಲ್ಲಿ ಬಿಜೆಪಿಗೆ ಗೆಲುವು; ಸಿಎಂ ರೇಸ್‌ನಲ್ಲಿದ್ದಾರೆ ಐವರು ನಾಯಕರು, ಯಾರವರು?

Exit mobile version