ಹೊಸದಿಲ್ಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಹಾಡಿ ಹೊಗಳಿದ್ದಾರೆ. ಮೋದಿಯವರನ್ನು ʻಅತ್ಯಂತ ಬುದ್ಧಿವಂತ ವ್ಯಕ್ತಿ’ ಎಂದು ಬಣ್ಣಿಸಿದ್ದು, ʼಅವರ ನಾಯಕತ್ವದಲ್ಲಿ ಭಾರತವು ಅಭಿವೃದ್ಧಿಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದೆʼ ಎಂದಿದ್ದಾರೆ.
ಪುಟಿನ್ ಅವರು ಆರ್ಥಿಕ ಭದ್ರತೆ ಮತ್ತು ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ರಷ್ಯಾ ಮತ್ತು ಭಾರತದ ನಡುವೆ ಮತ್ತಷ್ಟು ಸಹಕಾರದ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ರಷ್ಯಾದ ಮಾಧ್ಯಮ ಆರ್‌ಟಿ ನ್ಯೂಸ್‌ನಲ್ಲಿ ಅವರ ಈ ಹೇಳಿಕೆ ಪ್ರಕಟವಾಗಿದೆ.
ಕಾರ್ಯಕ್ರಮವೊಂದರಲ್ಲಿ ವ್ಲಾಡಿಮಿರ್ ಪುಟಿನ್, ʻʻಪ್ರಧಾನಿ ಮೋದಿ ಅವರೊಂದಿಗೆ ನಾವು ಉತ್ತಮ ರಾಜಕೀಯ ಸಂಬಂಧವನ್ನು ಹೊಂದಿದ್ದೇವೆ. ಅವರು ತುಂಬಾ ಬುದ್ಧಿವಂತ ವ್ಯಕ್ತಿ. ಅವರ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದೆ. ಭಾರತ ಮತ್ತು ರಷ್ಯಾ ಎರಡರ ಆಸಕ್ತಿಯೂ ಒಂದೇ ಆಗಿದ್ದು, ಜತೆಯಾಗಿ ಕೆಲಸ ಮಾಡುತ್ತಿವೆʼʼ ಎಂದಿದ್ದಾರೆ. ಕಳೆದ ತಿಂಗಳು 8ನೇ ಈಸ್ಟರ್ನ್ ಎಕನಾಮಿಕ್ ಫೋರಂ ಅನ್ನು ಉದ್ದೇಶಿಸಿ ಮಾತನಾಡಿದ್ದ ಪುಟಿನ್, ಮೇಡ್ ಇನ್ ಇಂಡಿಯಾ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗಾಗಿ ಮೋದಿಯನ್ನು ಶ್ಲಾಘಿಸಿದ್ದರು.
ಭಾರತದಲ್ಲಿ G20 ಶೃಂಗಸಭೆಯಲ್ಲಿ (G20 summit delhi) ʼದಿಲ್ಲಿ ಘೋಷಣೆʼಯನ್ನು (Delhi Pact) ಅಂಗೀಕರಿಸಿದ ನಂತರ ಪುಟಿನ್ ಅವರ ಈ ಹೇಳಿಕೆ ಬಂದಿದೆ. ದಿಲ್ಲಿ ಘೋಷಣೆಯಲ್ಲಿ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಶಾಂತಿ ಸ್ಥಾಪಿಸಲು ಕರೆ ನೀಡಲಾಗಿದೆ. ಆದರೆ ಇದರ ಹೊಣೆಯನ್ನು ರಷ್ಯಾದ ಮೇಲೆ ಹಾಕಲಾಗಿಲ್ಲ. ಆದರೆ ಕಳೆದ ಸಲ ಬಾಲಿಯಲ್ಲಿ ಮಾಡಲಾದ G20 ಘೋಷಣೆಯಲ್ಲಿ ರಷ್ಯವನ್ನು ಖಂಡಿಸಲಾಗಿತ್ತು.
G-20 ಹೊಸದಿಲ್ಲಿ ಹೇಳಿಕೆಯನ್ನು ಮಾಸ್ಕೋ ಸ್ವಾಗತಿಸಿದೆ. ಇದನ್ನು ʻಮೈಲಿಗಲ್ಲು’ ಎಂದು ಕರೆದಿದೆ. ಈ ಅವಧಿಯಲ್ಲಿ ಮೋದಿಯವರ ಸಕ್ರಿಯ ಪಾತ್ರವನ್ನು ಅವರು ಪ್ರಶಂಸಿಸಿದ್ದಾರೆ. ಕಳೆದ ಬಾರಿ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉಲ್ಲೇಖಸಿ, ಭಾರತದ ಈ ಯಶಸ್ಸಿನಿಂದ ನಾವು ಪಾಠ ಕಲಿಯಬೇಕು ಎಂದು ಸಲಹೆ ನೀಡಿದ್ದರು.
ಇದನ್ನೂ ಓದಿ: Vladimir Putin: ಭಾರತವನ್ನು ನೋಡಿ ಕಲಿಯಬೇಕಿದೆ; ಮೇಕ್ ಇನ್ ಇಂಡಿಯಾ, ಮೋದಿಗೆ ಪುಟಿನ್ ಜೈಕಾರ