ನವದೆಹಲಿ: ಭಾರತ ಹಾಗೂ ರಷ್ಯಾ ನಡುವಿನ ಉತ್ತಮ ಸಂಬಂಧಕ್ಕೆ ದಶಕಗಳ ಇತಿಹಾಸವಿದೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆತ್ಮೀಯ ಸ್ನೇಹಿತರಾಗಿದ್ದಾರೆ. ಇದೇ ಕಾರಣಕ್ಕೆ, ರಷ್ಯಾ ಹಾಗೂ ಉಕ್ರೇನ್ ಸಮರದ ನಡುವೆಯೂ ಭಾರತಕ್ಕೆ ರಷ್ಯಾ ಕಚ್ಚಾತೈಲ ಪೂರೈಸಿದೆ. ಇದರ ಬೆನ್ನಲ್ಲೇ, ವ್ಲಾಡಿಮಿರ್ ಪುಟಿನ್ ಅವರು ನರೇಂದ್ರ ಮೋದಿ ಅವರನ್ನು ಹಾಡಿ (Putin Praises Modi) ಹೊಗಳಿದ್ದಾರೆ.
ಮಾಸ್ಕೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪುಟಿನ್, ಮೋದಿ ಅವರ ಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. “ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಆತ್ಮೀಯ ಸ್ನೇಹಿತರು. ಅದರಲ್ಲೂ, ನರೇಂದ್ರ ಮೋದಿ ಅವರು ಕೆಲ ವರ್ಷಗಳಿಂದ ಜಾರಿಗೆ ತಂದ ಮೇಕ್ ಇನ್ ಇಂಡಿಯಾ ಯೋಜನೆಯು ಅಭಿವೃದ್ಧಿಗೆ ಕಾರಣವಾಗಿದೆ. ಹಾಗೆಯೇ, ಮೇಕ್ ಇನ್ ಇಂಡಿಯಾ ಯೋಜನೆಯಿಂದ ಭಾರತದ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ” ಎಂದು ಪುಟಿನ್ ಹೇಳಿದರು.
ಮೋದಿ ಅವರು ಜಾರಿಗೆ ತಂದ ಮೇಕ್ ಇನ್ ಇಂಡಿಯಾ ಯೋಜನೆಯನ್ನು ರಷ್ಯಾಗೆ ಅನ್ವಯವಾಗುವಂತೆ ಪುಟಿನ್ ಉದಾಹರಣೆ ನೀಡಿದರು. “ಮೇಕ್ ಇನ್ ಇಂಡಿಯಾ ಯೋಜನೆಯಿಂದಾಗಿ ಸ್ಥಳೀಯವಾಗಿಯೇ ಉತ್ಪಾದನೆ ಹೆಚ್ಚಾಗಿದೆ. ಇದು ಭಾರತದ ಆರ್ಥಿಕತೆಯ ಏಳಿಗೆಗೆ ಕಾರಣವಾಗಿದೆ. ರಷ್ಯಾ ಕೂಡ ಸ್ಥಳೀಯ ಉತ್ಪಾದನೆಗೆ ಆದ್ಯತೆ ನೀಡುತ್ತಿದೆ. ಆದರೆ, ಸ್ಥಳೀಯ ಉತ್ಪಾದನೆಗೆ ಆದ್ಯತೆ ನೀಡುತ್ತಿಲ್ಲ ಎಂಬ ವರದಿಗಳು ಸತ್ಯಕ್ಕೆ ದೂರ” ಎಂದು ತಿಳಿಸಿದರು.
2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ಬಳಿಕ ಜಗತ್ತಿನ ಹಲವು ರಾಷ್ಟ್ರಗಳು ರಷ್ಯಾ ಮೇಲೆ ಹತ್ತಾರು ನಿರ್ಬಂಧ ಹೇರಿದವು. ಹೀಗಿದ್ದರೂ, ಭಾರತ ಸರ್ಕಾರವು ರಷ್ಯಾದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಂಡಿತು. ಭಾರತದ ತೀರ್ಮಾನದ ಕುರಿತು ಅಮೆರಿಕ, ಬ್ರಿಟನ್ ಆಕ್ಷೇಪ ವ್ಯಕ್ತಪಡಿಸಿದರೂ ದ್ವಿಪಕ್ಷೀಯ ಸಂಬಂಧದ ಮೇಲೆ ಅದು ಪರಿಣಾಮ ಬೀರಲಿಲ್ಲ. ಹಾಗಂತ, ಮೋದಿ ಅವರು ರಷ್ಯಾ ಆಕ್ರಮಣವನ್ನು ಸಮರ್ಥಿಸಿಕೊಳ್ಳಲಿಲ್ಲ. ಬದಲಾಗಿ, ಪುಟಿನ್ ಅವರಿಗೇ “ಇದು ಯುದ್ಧದ ಕಾಲವಲ್ಲ” ಎಂದು ಹೇಳಿ ಶಾಂತಿ-ಮಾತುಕತೆಯ ಪ್ರಸ್ತಾಪ ಮಾಡಿದ್ದರು.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ