ಮಾಸ್ಕೊ: ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ, ನೀತಿಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಷ್ಯಾದ ವ್ಲಾಡಿವೊಸ್ಟೊಕ್‌ನಲ್ಲಿ ನಡೆದ 8ನೇ ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ (EEF) ಮಾತನಾಡಿದ ವ್ಲಾಡಿಮಿರ್ ಪುಟಿನ್, “ನಾವು ಭಾರತದ ಮೇಕ್ ಇನ್ ಇಂಡಿಯಾ ಅಭಿಯಾನ ನೋಡಿ ಕಲಿಯಬೇಕಿದೆ” ಎಂದು ಹೇಳಿದ್ದಾರೆ.
“1990ರಲ್ಲಿ ರಷ್ಯಾದಲ್ಲಿ ದೇಶೀಯವಾಗಿ ಕಾರುಗಳ ಉತ್ಪಾದನೆಯಾಗುತ್ತಿರಲಿಲ್ಲ. ಆದರೆ, ಈಗ ರಷ್ಯಾದಲ್ಲಿಯೇ ಕಾರುಗಳ ಉತ್ಪಾದನೆಯಾಗುತ್ತಿದೆ. ಆದರೂ, ದೇಶೀಯವಾಗಿ ಕಾರು ಉತ್ಪಾದನೆಯಲ್ಲಿ ನಮ್ಮ ಸಹಭಾಗಿತ್ವ ದೇಶವಾದ ಭಾರತವನ್ನು ನೋಡಿ ಕಲಿಯಬೇಕು. ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಮೂಲಕ ದೇಶೀಯವಾಗಿಯೇ ಕಾರುಗಳ ಉತ್ಪಾದನೆಗೆ ಆದ್ಯತೆ ನೀಡಿರುವುದು ಸರಿಯಾಗಿದೆ. ಇದನ್ನು ನೋಡಿ ನಾವೂ ಕಲಿಯಬೇಕು” ಎಂದು ಪುಟಿನ್ ಹೇಳಿದ್ದಾರೆ.
Russian President Vladimir Putin praises PM Modi ji's policies. Says, he is "doing the right thing in promoting the Make in India programme". @makeinindia pic.twitter.com/pdpEW2ERjJ
— Amit Rakshit 🇮🇳 (@amitrakshitbjp) September 13, 2023
ಎರಡನೇ ಬಾರಿ ಮೇಕ್ ಇನ್ ಇಂಡಿಯಾಗೆ ಶ್ಲಾಘನೆ
ಕೆಲ ತಿಂಗಳ ಹಿಂದೆಯೂ ವ್ಲಾಡಿಮಿರ್ ಪುಟಿನ್ ಅವರು ಮೇಕ್ ಇನ್ ಇಂಡಿಯಾವನ್ನು ಮೆಚ್ಚಿದ್ದರು. ಮಾಸ್ಕೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪುಟಿನ್, “ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಆತ್ಮೀಯ ಸ್ನೇಹಿತರು. ಅದರಲ್ಲೂ, ನರೇಂದ್ರ ಮೋದಿ ಅವರು ಕೆಲ ವರ್ಷಗಳಿಂದ ಜಾರಿಗೆ ತಂದ ಮೇಕ್ ಇನ್ ಇಂಡಿಯಾ ಯೋಜನೆಯು ಅಭಿವೃದ್ಧಿಗೆ ಕಾರಣವಾಗಿದೆ. ಹಾಗೆಯೇ, ಮೇಕ್ ಇನ್ ಇಂಡಿಯಾ ಯೋಜನೆಯಿಂದ ಭಾರತದ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ” ಎಂದು ಹೇಳಿದ್ದರು.
ಇದನ್ನೂ ಓದಿ: PM Modi: ಉಕ್ರೇನ್ ವಿರುದ್ಧದ ಯುದ್ಧ ಕೊನೆಗಾಣಿಸುವಂತೆ ಪುಟಿನ್ ಮನವೊಲಿಸಲು ಪ್ರಧಾನಿ ಮೋದಿಗೆ ಸಾಧ್ಯ ಎಂದ ಅಮೆರಿಕ
2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ಬಳಿಕ ಜಗತ್ತಿನ ಹಲವು ರಾಷ್ಟ್ರಗಳು ರಷ್ಯಾ ಮೇಲೆ ಹತ್ತಾರು ನಿರ್ಬಂಧ ಹೇರಿದವು. ಹೀಗಿದ್ದರೂ, ಭಾರತ ಸರ್ಕಾರವು ರಷ್ಯಾದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಂಡಿತು. ಭಾರತದ ತೀರ್ಮಾನದ ಕುರಿತು ಅಮೆರಿಕ, ಬ್ರಿಟನ್ ಆಕ್ಷೇಪ ವ್ಯಕ್ತಪಡಿಸಿದರೂ ದ್ವಿಪಕ್ಷೀಯ ಸಂಬಂಧದ ಮೇಲೆ ಅದು ಪರಿಣಾಮ ಬೀರಲಿಲ್ಲ. ಹಾಗಂತ, ಮೋದಿ ಅವರು ರಷ್ಯಾ ಆಕ್ರಮಣವನ್ನು ಸಮರ್ಥಿಸಿಕೊಳ್ಳಲಿಲ್ಲ. ಬದಲಾಗಿ, ಪುಟಿನ್ ಅವರಿಗೇ “ಇದು ಯುದ್ಧದ ಕಾಲವಲ್ಲ” ಎಂದು ಹೇಳಿ ಶಾಂತಿ-ಮಾತುಕತೆಯ ಪ್ರಸ್ತಾಪ ಮಾಡಿದ್ದರು. ಹಾಗೆಯೇ, ಭಾರತದಲ್ಲಿ ನಡೆದ ಜಿ 20 ಶೃಂಗಸಭೆಗೆ ವ್ಲಾಡಿಮಿರ್ ಪುಟಿನ್ ಆಗಮಿಸದೆ ದೂರ ಉಳಿದಿದ್ದು ಕೂಡ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಮೋದಿ ಹಾಗೂ ಮೇಕ್ ಇನ್ ಇಂಡಿಯಾ ಕುರಿತು ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.