ಬೆಂಗಳೂರು: ಮತದಾರರ ದತ್ತಾಂಶಗಳನ್ನು (Voter Data) ಅಕ್ರಮವಾಗಿ ಸಂಗ್ರಹಿಸಲಾಗುತ್ತಿರುವ ಕುರಿತ ವುಚಾರವನ್ನು ರಾಷ್ಟ್ರೀಯ ಮಟ್ಟದ ಜತೆಗೆ ಗುಜರಾತ್‌ನಲ್ಲಿ ನಡೆಯುತ್ತಿರುವ ಚುನಾವಣೆಯತ್ತಲೂ ತೆಗೆದುಕೊಂಡು ಹೋಗಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ರಾಜ್ಯ ಸರ್ಕಾರ ಹಾಗೂ ಪೊಲೀಸ್ ತನಿಖೆಯ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಲೇ ಕೇಂದ್ರ ಚುನಾವಣಾ ಆಯೋಗಕ್ಕೆ ಮಂಗಳವಾರ ದೂರು ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸಹ ಈ ಸಂದರ್ಭದಲ್ಲಿ ಜತೆಗಿರಲಿದ್ದಾರೆ.
ಚಿಲುಮೆ ಸಂಸ್ಥೆಯ ಮೂಲಕ ಅಕ್ರಮವಾಗಿ ದತ್ತಾಂಶ ಸಂಗ್ರಹವಾಗುತ್ತಿದೆ ಎಂದು ಈಗಾಗಲೆ ಚುನಾವಣಾ ಆಯೋಗ, ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ಬಿಬಿಎಂಪಿ ವತಿಯಿಂದ ಹಾಗೂ ಕೆಪಿಸಿಸಿ ವತಿಯಿಂದಲೂ ದೂರು ನೀಡಲಾಗಿದೆ. ಇದೀಗ ಪ್ರಮುಖ ಆರೋಪಿ ರವಿಕುಮಾರ್‌ನನ್ನು ನೆಲಮಂಗಲ ಬಳಿ ಭಾನುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗಕ್ಕೆ ದೂರು
ಇದೀಗ ರಾಜ್ಯ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದರೂ ಈ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ಕಾಂಗ್ರೆಸ್ ಮುಂದಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಂಗಳವಾರ ಭೇಟಿಗೆ ಅವಕಾಶ ನೀಡುವಂತೆ ಮುಖ್ಯ ಚುನಾವಣಾ ಆಯುಕ್ತರಲ್ಲಿ ಸಮಯ ಕೇಳಿದ್ದೇವೆ. ನಮ್ಮ ಹತ್ತಿರ ಅನೇಕ ಮಾಹಿತಿ ಇವೆ. ಪೊಲೀಸ್ ಅಧಿಕಾರಿಗಳು ಏನು ಮಾಡುತ್ತಾ ಇದ್ದಾರೆ ಎಂದು ಗಮನಿಸುತ್ತಿದ್ದೇವೆ.
ನಮ್ಮಕಡೆ ಏನೇನು MOUಗಳಿವೆ, ಡಿಟೈಲ್ ತನಿಖೆ ಮಾಡಿದ್ದೇವೆ. ಮ್ಯಾಪಿಂಗ್ ಯಾವ ರೀತಿ ಮಾಡಿದ್ದಾರೆ, ಅದಕ್ಕೆ ಅನುಮತಿ ಇದೆಯೇ ಎಂದು ನೋಡುತ್ತಿದ್ದೇವೆ. ನಮಗೆ ಹೈರ್ ಅಫೀಸರಿಂದ ಆದೇಶ ಬಂತು, ಆದೇಶ ಬಂದಿದ್ದಕ್ಕೆ ನಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಅಧಿಕಾರಿಗಳು ಮಾಧ್ಯಮಗಳಲ್ಲಿ ಹೇಳಿದ್ದಾರೆ. ಯಾರು ಹೈರ್ ಅಫೀಸರ್, ಯಾರೋ ಒಬ್ಬರು ,ಇಬ್ಬರು. 15,000 ರೂ.ಗೆ ಕೆಲಸಕ್ಕೆ ಬಂದಿರುವರನ್ನು ಅರೆಸ್ಟ್ ಮಾಡುವುದಲ್ಲ. ಯಾರು ಕಿಂಗ್ ಪಿನ್ ಇದ್ದಾರೆ, ಯಾರು ಮಂತ್ರಿಗಳು ಇದ್ದಾರೆ, ಯಾರು ಶಾಸಕರು ಇದ್ದಾರೆ ಎನ್ನುವ ದಾಖಲಾತಿಗಳು ನಮಗೆ ಕಡೆ ಇವೆ.
ಶಾಸಕರು ರೆಕಮೆಂಡ್ ಮಾಡಿರುವ ದಾಖಲಾತಿ, ಶಾಸಕರು, ಮಂತ್ರಿಗಳು ಪೋನ್‌ನಲ್ಲಿ ಮಾತಾಡಿದ್ದ ದಾಖಲೆಯೂ ಇದೆ. ರಾಜರಾಜೇಶ್ವರಿ ನಗರ, ಮಲ್ಲೇಶ್ವರ, ಬೊಮ್ಮನಹಳ್ಳಿ, ಮಹದೇವಪುರ ಸೇರಿ 28 ಕ್ಷೇತ್ರದ AROಗಳ ಮೇಲೆ ಕೇಸ್ ದಾಖಲು ಆಗಬೇಕು. ಪೊಲೀಸರು ಏನು ಮಾಡುತ್ತಾರೆ ಎಂದು ನೋಡುತ್ತಾಇದ್ದೇವೆ.
ಯಾವ ರೀತಿ ಈ ಪ್ರಕರಣವನ್ನು ಮುಚ್ಚಿಹಾಕಲು ನೋಡುತ್ತಾ ಇದ್ದಾರೆ ನೋಡುತ್ತಾ ಇದ್ದೇವೆ. ಹಿಂದೆ ರೇಪ್ ಕೇಸ್, 40% ಕಮಿಷನ್ ಸೇರಿ ಅನೇಕ ಪ್ರಕರಣಗಳಲ್ಲಿ ಸಿಎಂ ಯಡಿಯೂರಪ್ಪ, ಕ್ಲೀನ್ ಹ್ಯಾಂಡ್ ಎಂದು ಹೇಳಿದ್ದರು. ಅವರ ಮಂತ್ರಿಗಳನ್ನು ರಕ್ಷಣೆ ಮಾಡಲು ಬಿ ರಿಪೋರ್ಟ್ ಬರೆಸಿದ್ದಾರೆ. ಇದನ್ನು ಕೂಡ ಮುಚ್ಚಿಹಾಕುವ ಅನುಮಾನವಿದೆ ಎಂದಿದ್ದಾರೆ.
2013ರಿಂದಲೂ ತನಿಖೆ ಮಾಡುತ್ತೇವೆ ಎಂದಿರುವ ಸಿಎಂ ಬೊಮ್ಮಾಯಿ ಅವರ ಮಾತಿಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ಸಿಎಂ ಮಾತನ್ನು ನಾವು ಸ್ವಾಗತ ಮಾಡುತ್ತೇವೆ. ನಮ್ಮದು ಮಾಡಲಿ, ಅವರದ್ದೂ ಮಾಡಲಿ. ನಾವು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ಮತದಾನವನ್ನು ಮಾರುತ್ತಿದ್ದಾರೆ. ದತ್ತಾಂಶ ಕೊಟ್ಟು ಮಾರಾಟ ಮಾಡುತ್ತಿದ್ದಾರೆ. ಎಷ್ಟೆಷ್ಟು ಹಣ, ಎಷ್ಟು ಕಲೆಕ್ಟ್ ಆಗುತ್ತಿತ್ತು ಎಲ್ಲಾ ಮಾಹಿತಿ ನಮ್ಮ ಕಡೆ ಇದೆ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ನಾಳೆ ಅಥವಾ ನಾಡಿದ್ದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಇಲ್ಲಿ ಏನು ಅಕ್ರಮ ನಡೆದಿದೆ ಎಂಬ ಕುರಿತು ದೂರು ಕೊಡುತ್ತೇವೆ. ಜನರ ಖಾಸಗಿ ಮಾಹಿತಿಯನ್ನು ಕಲೆ ಹಾಕಿದ್ದಾರೆ ಇವರು. ಇದು ಅತ್ಯಂತ ಗಂಭೀರ ವಿಚಾರ. ಕರ್ನಾಟಕ ಅಷ್ಟೆ ಅಲ್ಲ ಬೇರೆ ರಾಜ್ಯದ ಚುನಾವಣೆ ಕೂಡ ಇದೆ. ಅಲ್ಲೂ ಅಕ್ರಮ ನಡೆದಿದೆ ಎನ್ನುವ ಶಂಕೆ ಇದೆ.
ಹಾಗಾಗಿ ಚುನಾವಣೆ ಆಯೋಗದ ಮುಂದೆ ಹೋಗುತ್ತೇವೆ. ಇಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇಬೇಕು. ಯಾರು ಭಾಗಿಯಾಗಿದ್ದಾರೆ ಅವರ ಮೇಲೆ ದೂರು ದಾಖಲಾಗಬೇಕು. ವೋಟರ್ ಲಿಸ್ಟ್ ಮತ್ತೆ ತಯಾರಿ ಮಾಡಬೇಕು. ಈಗ ಮಾಡಿರುವ ಡಾಟಾ ಕಲೆಕ್ಷನ್ ಕೈ ಬಿಡಬೇಕು. ಇದರಿಂದ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯುತ್ತದೆ. ಇವಿಎಂ ಮಷಿನ್‌ಗೂ ಆಕ್ಸಸ್ ಕೊಟ್ಟಿದ್ದಾರೆ. ಇದು ಕೂಡ ಆತಂಕದ ವಿಚಾರ. ಪ್ರಜಾಪ್ರಭುತ್ವದ ಕಗ್ಗೊಲೆ ಇದು.
ಬೇರೆ ರಾಜ್ಯದಲ್ಲಿಯೂ ಹೀಗೆ ಆಗಿದೆಯೇ ಎನ್ನುವುದನ್ನು ನೋಡಬೇಕು. ಹಾಗಾಗಿ ನಾಳೆ ಡಿಕೆಶಿ, ಸುರ್ಜೆವಾಲಾ ಸೇರಿ ಹಲವರು ದೂರು ಕೊಡುತ್ತೇವೆ. ಬೆಂಗಳೂರು ನಂತರ ಇಡೀ ರಾಜ್ಯದ ಡಾಟಾ ಸಿಕ್ಕಿದೆ. ಹಾಗಾಗಿ ಇಡೀ ರಾಜ್ಯಾದ್ಯಂತ ಮಾಡಲು ಹೊರಟಿದ್ದಾರೆ. ಪಕ್ಷಗಳು ಕೂಡ ಈ ಡಾಟಾ ವನ್ನು ಉಪಯೋಗಿಸಿಕೊಳ್ಳುತ್ತಾರೆ. ಉಚಿತವಾಗಿ ಹೀಗೆ ಮಾಡಿದ್ದೇವೆ ಅಂದರೆ ಅದು ಸರಿಯಲ್ಲ. ಫ್ರೀಯಾಗಿ ಮಾಡೋದಿಕ್ಕು ಒಂದು ರೂಲ್ಸ್ ಇರುತ್ತಲಾ? ಆ ಸಂಸ್ಥೆಗೆ ಯುವಕರು ಹೋಗಿದ್ದಾರೆ. ಅವರಿಗೆ ನಿರುದ್ಯೋಗ ಸಮಸ್ಯೆ ಇದ್ದಿದ್ದರಿಂದ ಹೋಗಿದ್ದಾರೆ. ಅವರ ತಪ್ಪಲ್ಲ ಎಂದರು.
ರಾಜ್ಯಾದ್ಯಂತ ಹರಡಿದ ಚಿಲುಮೆ ಜಾಲ
ಚಿಲುಮೆ ಸಂಸ್ಥೆ ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾರರ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಈ ಹಿಂದೆ ಆರೋಪಿಸಲಾಗಿತ್ತು. ಆದರೆ ಇದೀಗ ರಾಜ್ಯದ ವಿವಿಧೆಡೆ ಈ ಸಂಸ್ಥೆ ಮತದಾರರ ಮಾಹಿತಿ ಸಂಗ್ರಹಿಸಿರುವ ಆರೋಪ ಕೇಳಿಬಂದಿದೆ.
ರಾಜ್ಯಾದ್ಯಂತ ಈ ಸಂಸ್ಥೆ ಶಾಸಕರನ್ನು ಸಂಪರ್ಕ ಮಾಡಿದೆ. ಮತದಾರರ ಸಂಪೂರ್ಣ ಮಾಹಿತಿಯನ್ನು ನಿಮಗೆ ಕೊಡುತ್ತೇವೆ ಎಂದು ಶಾಸಕರಿಗೆ ತಿಳಿಸಿತ್ತು. ಬೆಂಗಳೂರಿನಲ್ಲೂ, ಬಿಜೆಪಿ ಅಷ್ಟೆ ಅಲ್ಲದೆ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಅವರನ್ನೂ ಸಂಪರ್ಕಿಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಶಾಸಕಿಯನ್ನು ಸಂಪರ್ಕಿಸಿರುವ ಮಾಹಿತಿಯು ಕಾಲ್ ಡೀಟೇಲ್ಸ್ ಮೂಲಕ ಪೊಲೀಸರಿಗೆ ಲಭ್ಯವಾಗಿದೆ. ಆದರೆ ಈ ರೀತಿ ಯಾರೂ ತನ್ನನ್ನು ಸಂಪರ್ಕಿಸಿಲ್ಲ ಎಂದು ಶಾಸಕಿ ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Voter data | ವಕೀಲರ ಭೇಟಿಗೆ ಬಂದಿದ್ದ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿ ಕುಮಾರ್ ಸೆರೆ