ನವದೆಹಲಿ: ಕರ್ನಾಟಕ ಸೇರಿ ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೂರನೇ ಹಂತದ ಮತದಾನವು ಮೇ 7ರಂದು ನಡೆದಿದ್ದು, ಮತದಾನ ಪ್ರಮಾಣದ (Voter Turnout) ಕುರಿತು ಚುನಾವಣೆ ಆಯೋಗವು ನಿಖರ ಮಾಹಿತಿ ಒದಗಿಸಿದೆ. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿದೆ. ಕರ್ನಾಟಕದಲ್ಲಿ ಶೇ.71.84ರಷ್ಟು ಮತದಾನ ದಾಖಲಾಗಿದೆ ಎಂಬುದಾಗಿ ಚುನಾವಣೆ ಆಯೋಗವು (Election Commission) ಮಾಹಿತಿ ನೀಡಿದೆ.
ಅಸ್ಸಾಂನಲ್ಲಿ ಅತಿ ಹೆಚ್ಚು ಮತದಾನ
ಮೂರನೇ ಹಂತದಲ್ಲಿ ಅಸ್ಸಾಂನಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿದೆ. ಅಸ್ಸಾಂನಲ್ಲಿ ಶೇ.85.45, ಗೋವಾದಲ್ಲಿ ಶೇ.76.06, ಉತ್ತರ ಪ್ರದೇಶ ಶೇ.57.55 ಹಾಗೂ ಬಿಹಾರದಲ್ಲಿ ಶೇ.59.15ರಷ್ಟು ಮತದಾನ ದಾಖಲಾಗಿದೆ. ಕರ್ನಾಟಕದ 14 ಸೇರಿ ಒಟ್ಟು 93 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಪಶ್ಚಿಮ ಬಂಗಾಳ ಹೊರತುಪಡಿಸಿ ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿಯೇ ಮತದಾನ ನಡೆದಿತ್ತು.
ರಾಜ್ಯವಾರು ಮತದಾನ ಪ್ರಮಾಣ
ದೇಶದ ಹಲವೆಡೆ ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಇದು ಕೂಡ 2019ರ ಲೋಕಸಭೆ ಚುನಾವಣೆಗಿಂತ ಕಡಿಮೆ ಪ್ರಮಾಣದ ಮತದಾನವಾಗಿದೆ ಎಂದು ತಿಳಿದುಬಂದಿದೆ. ಏಪ್ರಿಲ್ 19ರಿಂದ ಲೋಕಸಭೆ ಚುನಾವಣೆ ಆರಂಭವಾಗಿದ್ದು, ಇದುವರೆಗೆ ಮೂರು ಹಂತಗಳ ಮತದಾನ ಮುಕ್ತಾಯವಾಗಿದೆ. ಜೂನ್ 1ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕದಲ್ಲಿ ಜಿಲ್ಲಾವಾರು ಮತದಾನ ಪ್ರಮಾಣ
ಮೇ 13ರಂದು 4ನೇ ಹಂತದ ಮತದಾನ
ಮೇ 13ರಂದು ನಾಲ್ಕನೇ ಹಂತದ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. 10 ರಾಜ್ಯಗಳ 96 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರ 5, ಜಮ್ಮು-ಕಾಶ್ಮೀರ 1, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 13 ರಂದು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಮೋದಿಯಿಂದ ಯೋಗಿ ಆದಿತ್ಯನಾಥ್ ರಾಜಕೀಯ ಜೀವನ ಶೀಘ್ರದಲ್ಲೇ ಖತಂ; ಕೇಜ್ರಿವಾಲ್ ಸ್ಫೋಟಕ ಭವಿಷ್ಯ