Site icon Vistara News

ವಿಸ್ತಾರ ವಿಶೇಷ | ಹಿಮಾಚಲ ಪ್ರದೇಶದಲ್ಲಿ ಇಂದು ಮತದಾನ, ಬಿಜೆಪಿ ಭದ್ರಕೋಟೆ ಭೇದಿಸುವುದೇ ಕಾಂಗ್ರೆಸ್?

Gujarat Himachal Election Result

| ಬಿ. ಸೋಮಶೇಖರ್‌, ಬೆಂಗಳೂರು

ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ, ಭಾರಿ ಪೈಪೋಟಿ ಇರುವ ಹಿಮಾಚಲ ಪ್ರದೇಶದಲ್ಲಿ ಶನಿವಾರ (ನವೆಂಬರ್‌ 12) ವಿಧಾನಸಭೆ ಚುನಾವಣೆ (Himachal Pradesh Election 2022) ನಡೆಯಲಿದೆ. ಹಾಗಾಗಿ, ಮತದಾರ ಯಾರಿಗೆ ಒಲಿಯಲಿದ್ದಾನೆ ಎಂಬ ಕುತೂಹಲ, ನಿರೀಕ್ಷೆ ಹೆಚ್ಚಾಗಿದೆ. ಒಟ್ಟು 68 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, 7,884 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಶಾಂತಿಯುತ ಹಾಗೂ ಪಾರದರ್ಶಕವಾಗಿ ಮತದಾನ ನಡೆಸಲು ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ, ಅಲ್ಲೆಲ್ಲ ಭಾರಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಡಿಸೆಂಬರ್‌ 8ರಂದು ಫಲಿತಾಂಶ ಪ್ರಕಟವಾಗಲಿದ್ದು, 412 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಶನಿವಾರವೇ ನಿರ್ಧರಿಸಲಿದ್ದಾರೆ. ಇನ್ನು ರಾಜ್ಯದಲ್ಲಿ ಬಿಜೆಪಿಯು ಬಲಿಷ್ಠವಾಗಿದ್ದು, ಆಡಳಿತ ವಿರೋಧಿ ಅಲೆಯನ್ನೂ ದಾಟಿ ಮತ್ತೆ ಗೆಲುವಿನ ನಗೆ ಬೀರಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಕ್ಷವು ತೀರ್ವ ಸ್ಪರ್ಧೆಯೊಡ್ಡುತ್ತಿದ್ದು, ಫಲಿತಾಂಶದ ಬಗ್ಗೆ ಕುತೂಹಲವಿದೆ.

ಒಟ್ಟು ಸ್ಥಾನ-68, ಮ್ಯಾಜಿಕ್‌ ನಂಬರ್‌-35, ಕಣದಲ್ಲಿರುವ ಅಭ್ಯರ್ಥಿಗಳು-412, ಫಲಿತಾಂಶ-ಡಿಸೆಂಬರ್‌ 8

ಬಿಜೆಪಿಗೆ ಏಕೆ ಪ್ರತಿಷ್ಠೆಯ ಕಣ?

ಹಿಮಾಚಲ ಪ್ರದೇಶದ ಚುನಾವಣೆಯು 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದಿದೆ. ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಅವರ ಆಡಳಿತದ ಬಗ್ಗೆ ಉತ್ತಮ ಅಭಿಪ್ರಾಯವಿದ್ದರೂ, ಆಡಳಿತ ವಿರೋಧಿ ಅಲೆಯು ಪ್ರತಿಯೊಂದು ಚುನಾವಣೆಯಲ್ಲೂ ಕಾಡಲಿದೆ. ಅದರಲ್ಲೂ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ತವರು ರಾಜ್ಯವು ಹಿಮಾಚಲ ಪ್ರದೇಶವಾದ ಕಾರಣ ಗೆಲುವಿನ ಕುರಿತು ಬಿಜೆಪಿ ಹೆಚ್ಚಿನ ಲೆಕ್ಕಾಚಾರ ಹಾಕುತ್ತಿದೆ.

2017ರ ಚುನಾವಣೆ ಫಲಿತಾಂಶ-ಬಿಜೆಪಿ 44, ಕಾಂಗ್ರೆಸ್‌ 21, ಸ್ವತಂತ್ರ ಅಭ್ಯರ್ಥಿಗಳು 2, ಸಿಪಿಎಂ 1

ಬಿಜೆಪಿಯೇ ಮತ್ತೆ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ತಿಳಿಸಿದರೂ ಬಿಜೆಪಿ ಅಬ್ಬರದ ಪ್ರಚಾರ ಮಾಡಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಹಲವಾರು ರ‍್ಯಾಲಿಗಳನ್ನು ನಡೆಸುವ ಮೂಲಕ ಗೆಲುವಿಗೆ ಕಸರತ್ತು ನಡೆಸಿದ್ದಾರೆ. ಇನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ಅನುರಾಗ್‌ ಠಾಕೂರ್‌ ಸೇರಿ ಬಿಜೆಪಿಯ ಘಟಾನುಘಟಿಗಳೇ ಹಿಮಾಚಲ ಪ್ರದೇಶದಲ್ಲಿ ರ‍್ಯಾಲಿ, ಚುನಾವಣೆ ಸಭೆಗಳನ್ನು ನಡೆಸುವ ಮೂಲಕ ರಣತಂತ್ರ ರೂಪಿಸಿದ್ದಾರೆ. ಆದರೆ, ಈ ಎಲ್ಲ ರಣತಂತ್ರಗಳ ಯಶಸ್ಸನ್ನು ಫಲಿತಾಂಶವೊಂದೇ ನಿರ್ಧರಿಸಬೇಕಿದೆ.

ಯಾವ ಪಕ್ಷ ಎಷ್ಟು ಕ್ಷೇತ್ರದಲ್ಲಿ ಸ್ಪರ್ಧೆ: ಬಿಜೆಪಿ, ಕಾಂಗ್ರೆಸ್‌, ಆಪ್-68, ಬಿಎಸ್‌ಪಿ-53, ಸಿಪಿಐ(ಎಂ)-11

ಬಿಜೆಪಿ ಕೋಟೆ ಭೇದಿಸುವುದೇ ಕಾಂಗ್ರೆಸ್?‌

ರಾಜ್ಯದಲ್ಲಿ ಕಾಂಗ್ರೆಸ್‌ 2014ರಿಂದಲೂ ಸೋಲನುಭವಿಸಿದ್ದು, ಈ ಬಾರಿ ಹೊಸ ಹುಮ್ಮಸ್ಸಿನೊಂದಿಗೆ ಕಣಕ್ಕೆ ಇಳಿದಿದೆ. ಅದರಲ್ಲೂ, ನಾಯಕತ್ವ ಬಿಕ್ಕಟ್ಟನ್ನು ಶಮನಗೊಳಿಸಲು, ಪಕ್ಷದ ಆಂತರಿಕ ಚುನಾವಣೆ ನಡೆಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇದರಿಂದಾಗಿ ತಾತ್ಕಾಲಿಕವಾಗಿ ಕಾಂಗ್ರೆಸ್‌ ನಾಯಕತ್ವ ಬಿಕ್ಕಟ್ಟು ಬಗೆಹರಿದಂತಾಗಿದೆ. ಆದರೆ, ಇದು ಚುನಾವಣೆ ಫಲಿತಾಂಶದ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇಲ್ಲಿ ಕಾಂಗ್ರೆಸ್ಸಿಗೆ ಆರು ಬಾರಿಯ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಅವರ ಅನುಪಸ್ಥಿತಿಯು ಪ್ರಮುಖವಾಗಿ ಕಾಡಲಿದೆ. ಅದರಲ್ಲೂ, ನಕಲಿ ಪದವಿ ಪ್ರಮಾಣಪತ್ರ ಮಾರಾಟದಂತಹ ಪ್ರಕರಣಗಳನ್ನು ದೊಡ್ಡದಾಗಿ ಬಿಂಬಿಸುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ.

ಪ್ರಮುಖರ ಸ್ಪರ್ಧೆ: ಜೈರಾಮ್‌ ಠಾಕೂರ್‌ (ಬಿಜೆಪಿ), ಮುಕೇಶ್‌ ಅಗ್ನಿಹೋತ್ರಿ (ಕಾಂಗ್ರೆಸ್)‌, ಸುರ್ಜೀತ್‌ ಸಿಂಗ್‌ (AAP)

ಲೋಕಸಭೆ ಚುನಾವಣೆ ದೃಷ್ಟಿಯಿಂದಲೂ ಕಾಂಗ್ರೆಸ್‌ಗೆ ಹಿಮಾಚಲ ಪ್ರದೇಶ ಚುನಾವಣೆ ಪ್ರಮುಖವಾಗಿದೆ. ಆದರೆ, ಭಾರತ್‌ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರು ಹಿಮಾಚಲ ಪ್ರದೇಶದಲ್ಲಿ ಪ್ರಚಾರ ಕೈಗೊಂಡಿಲ್ಲ. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರೇ ಹೆಚ್ಚಿನ ಪ್ರಚಾರ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸೇರಿ ಕೆಲವು ನಾಯಕರು ಪ್ರಚಾರ ಕೈಗೊಂಡಿದ್ದರೂ ರಾಹುಲ್‌ ಗಾಂಧಿ ಅವರ ಅಭಾವ ಕಂಡುಬಂದಿದೆ. ಇನ್ನು ಕೇವಲ ಎರಡು ವರ್ಷದಲ್ಲಿ 9 ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಕಾಂಗ್ರೆಸ್‌ಗೆ ಇಲ್ಲೂ ಸೋಲುಂಟಾದರೆ ದೊಡ್ಡ ಮುಖಭಂಗ ಎಂದೇ ವಿಶ್ಲೇಷಿಸಲಾಗಿದೆ.

‘ಆಪ್‌’ಗೆ ಒಲಿಯುವನೇ ‘ಆಮ್‌ ಆದ್ಮಿ’?

ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿರುವ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಹಿಮಾಚಲ ಪ್ರದೇಶದಲ್ಲೂ ಮುನ್ನಡೆ ಸಾಧಿಸಲು ಹತ್ತಾರು ರಣತಂತ್ರ ರೂಪಿಸಿದೆ. ಜನರಿಗೆ ಸಾಲು ಸಾಲು ಭರವಸೆ, ಹತ್ತಾರು ಉಚಿತ ಯೋಜನೆಗಳ ಘೋಷಣೆಗಳ ಮೂಲಕ ಜನರ ಮನಸೆಳೆಯಲು ಯತ್ನಿಸಲಾಗಿದೆ. ಆದರೆ, ರಾಜ್ಯದಲ್ಲಿ ಆಮ್‌ ಆದ್ಮಿ ಪಕ್ಷದ ಸದೃಢ ನಾಯಕರ ಕೊರತೆ ಇರುವುದರಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ಅನ್ನು ಮೀರಿಸಿ, ಆಪ್‌ ಮುನ್ನಡೆ ಸಾಧಿಸುವುದು ಕಷ್ಟ ಎನ್ನಲಾಗುತ್ತಿದೆ. ಇನ್ನು, ಚುನಾವಣೆ ಪೂರ್ವ ಸಮೀಕ್ಷೆಗಳನ್ನು ಗಮನಿಸಿದ ಬಳಿಕ ಆಪ್‌ಗೆ ಹೆಚ್ಚಿನ ಅನುಕೂಲ ಆಗುವುದು ಕಷ್ಟಸಾಧ್ಯ.

ಚುನಾವಣೆ ಕಣದ ಪ್ರಮುಖ ವಿಷಯಗಳು ಯಾವವು?

ಬಿಜೆಪಿ, ಕಾಂಗ್ರೆಸ್‌ ಹಾಗೂ ಆಪ್‌ ಮಧ್ಯೆ ತೀವ್ರ ಪೈಪೋಟಿ ಇರುವುದರಿಂದ ಮೂರೂ ಪಕ್ಷಗಳು ಹತ್ತಾರು ವಿಷಯಗಳೊಂದಿಗೆ ಜನರ ಗಮನ ಸೆಳೆಯಲು ಮುಂದಾಗಿವೆ. ಅದರಲ್ಲೂ, ಬಿಜೆಪಿಯು ಏಕರೂಪ ನಾಗರಿಕ ಸಂಹಿತೆ (UCC) ಜಾರಿ, 12ನೇ ತರಗತಿ ಪಾಸಾಗುವ ವಿದ್ಯಾರ್ಥಿನಿಯರಿಗೆ ಮಾಸಿಕ 2,500 ವಿದ್ಯಾರ್ಥಿ ವೇತನ ಸೇರಿ ಹಲವು ಭರವಸೆ ನೀಡಿದೆ. ಮತ್ತೊಂದೆಡೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆ (Old Pension Scheme) ಜಾರಿಗೊಳಿಸುವುದಾಗಿ ತಿಳಿಸಿದೆ. ರಾಜ್ಯದಲ್ಲಿ 1.9 ಲಕ್ಷ ಜನ ನಿವೃತ್ತ ನೌಕರರಿದ್ದು, ಸದ್ಯ 2.25 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇದು ದೊಡ್ಡ ವೋಟ್‌ ಬ್ಯಾಂಕ್‌ ಆದ ಕಾರಣ, ಹಳೆಯ ಪಿಂಚಣಿ ಯೋಜನೆಯು ಚರ್ಚೆಯ ವಿಷಯವಾಗಿದೆ. ಹಾಗಾಗಿ, ಕಾಂಗ್ರೆಸ್‌ ಈ ವಿಷಯವನ್ನು ಮುನ್ನೆಲೆಗೆ ತಂದು ಜನರ ವಿಶ್ವಾಸ ಗಳಿಸಲು ಯತ್ನಿಸಿದೆ. ಅತ್ತ, ಉಚಿತ ಕೊಡುಗೆಗಳ ಭರವಸೆ ಮೂಲಕ ಮತದಾರರ ಮನವೊಲಿಸಲು ಆಪ್‌ ಪ್ರಯತ್ನ ಮಾಡಿದೆ.

ಹಳೆಯ ಪಿಂಚಣಿ ಯೋಜನೆ ಜಾರಿಗಾಗಿ ಒತ್ತಾಯಿಸಿ ಪ್ರತಿಭಟನೆ.

ಒಟ್ಟಿನಲ್ಲಿ ಲೋಕಸಭೆ ಚುನಾವಣೆ ಸೇರಿ ಹಲವು ದೃಷ್ಟಿಯಿಂದ ಹಿಮಾಚಲ ಪ್ರದೇಶದ ಚುನಾವಣೆಯು ಬಿಜೆಪಿ, ಕಾಂಗ್ರೆಸ್‌, ಆಪ್‌ಗೆ ಪ್ರಮುಖವಾಗಿದ್ದು, ಸುಮಾರು 55 ಲಕ್ಷ ಮತದಾರರ ಕೃಪಾಕಟಾಕ್ಷ ಯಾರ ಮೇಲೆ ಇರಲಿದೆ ಎಂಬುದಕ್ಕೆ ಫಲಿತಾಂಶದವರೆಗೆ ಕಾಯಬೇಕಿದೆ.

ಇದನ್ನೂ ಓದಿ | ಹಿಮಾಚಲ ಪ್ರದೇಶ, ಗುಜರಾತ್​​ನಲ್ಲಿ​ ಚುನಾವಣೋತ್ತರ ಸಮೀಕ್ಷೆ ನಡೆಸುವಂತಿಲ್ಲ: ಚುನಾವಣಾ ಆಯೋಗದ ಆದೇಶ

Exit mobile version