Site icon Vistara News

PM Modi Japan Visit: ಪಾಕ್‌ ಜತೆ ಸಂಬಂಧ ಬೇಕು, ಆದರೆ… ಜಪಾನ್‌ನಲ್ಲಿ ಮೋದಿ ಹೇಳಿದ್ದೇನು?

Want Normal Relations But... What PM Modi Said on India-Pakistan Ties In Japan

Want Normal Relations But... What PM Modi Said on India-Pakistan Ties In Japan

ಟೋಕಿಯೊ: ಜಿ-7 ಶೃಂಗಸಭೆಯ ಹಿನ್ನೆಲೆಯಲ್ಲಿ ಜಪಾನ್‌ನ ಹಿರೋಶಿಮಾಗೆ (PM Modi Japan Visit) ತೆರಳಿರುವ ನರೇಂದ್ರ ಮೋದಿ ಅವರಿಗೆ ಅದ್ಧೂರಿಯಾಗಿ ಸ್ವಾಗತ ಸಿಕ್ಕಿದೆ. ಅದರಲ್ಲೂ, ಅನಿವಾಸಿ ಭಾರತೀಯರು ಮೋದಿ ಅವರಿಗಾಗಿ ತಾಸುಗಟ್ಟಲೆ ಕಾದು, ಸ್ವಾಗತ ಕೋರಿದ್ದಾರೆ. ಇದೇ ವೇಳೆ ಮೋದಿ ಅವರು ಅನಿವಾಸಿ ಭಾರತೀಯರ ಜತೆ ಮಾತುಕತೆ ನಡೆಸಿದ್ದಾರೆ. ಇನ್ನು, ಜಿ-7 ಶೃಂಗಸಭೆಯ ಮಧ್ಯೆಯೇ ನಿಕ್ಕೇಯಿ ಏಷ್ಯಾ (Nikkei Asia) ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ಭಾರತ-ಪಾಕಿಸ್ತಾನ ಸಂಬಂಧದ ಕುರಿತು ಪ್ರಸ್ತಾಪಿಸಿದ್ದಾರೆ.

“ನೆರೆ ರಾಷ್ಟ್ರವಾದ ಪಾಕಿಸ್ತಾನದ ಜತೆ ನಾವು ಉತ್ತಮ ಸಂಬಂಧ ಹೊಂದಲು ಬಯಸುತ್ತೇವೆ. ಆದರೆ, ಪಾಕಿಸ್ತಾನವು ಉಗ್ರವಾದದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಮುಂದಾಗುವುದಿಲ್ಲ. ಭಯೋತ್ಪಾದನೆ ಮುಕ್ತ ವಾತಾವರಣ ನಿರ್ಮಿಸಲು ಪಾಕಿಸ್ತಾನವು ಕನಿಷ್ಠ ಪ್ರಯತ್ನವನ್ನೂ ಮಾಡುವುದಿಲ್ಲ. ಇದರಿಂದಾಗಿ ಎರಡೂ ರಾಷ್ಟ್ರಗಳ ಸಂಬಂಧ ಗಟ್ಟಿಯಾಗಿಲ್ಲ” ಎಂದು ಹೇಳಿದರು.

“ಪಾಕಿಸ್ತಾನವು ಉಗ್ರರನ್ನು ಪೋಷಣೆ ಮಾಡುವ ಕುರಿತು, ಗಡಿ ಭಯೋತ್ಪಾದನೆಗೆ ಉತ್ತೇಜನ ನೀಡುವ ಕುರಿತು ಈಗಾಗಲೇ ಭಾರತ ಹಲವು ಬಾರಿ ಕಳವಳ ವ್ಯಕ್ತಪಡಿಸಿದೆ. ಉಗ್ರವಾದ ಹಾಗೂ ಸಂಧಾನಗಳೆರಡಕ್ಕೂ ಆಸ್ಪದವಿಲ್ಲ ಎಂದು ಭಾರತ ಸ್ಪಷ್ಟವಾಗಿ ತಿಳಿಸಿದೆ. ನೆರೆಯ ರಾಷ್ಟ್ರದ ಜತೆ ಉತ್ತಮ ಸಂಬಂದ ಹೊಂದಬೇಕು, ದ್ವಿಪಕ್ಷೀಯ ವ್ಯಾಪಾರಗಳಿಗೆ ಆದ್ಯತೆ ನೀಡಬೇಕು ಎಂಬುದು ಭಾರತದ ಉದ್ದೇಶವಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: PM Modi Japan Visit: ಜಪಾನ್‌ನಲ್ಲಿ ನರೇಂದ್ರ ಮೋದಿಗೆ ಸಿಕ್ಕ ಅದ್ಧೂರಿ ಸ್ವಾಗತ ಹೇಗಿತ್ತು? ಇಲ್ಲಿವೆ ಫೋಟೊಗಳು

ಚೀನಾ ಬಿಕ್ಕಟ್ಟಿನ ಕುರಿತು ಹೇಳಿದ್ದೇನು?

ಗಡಿಯಲ್ಲಿ ಚೀನಾ ಜತೆ ಉಂಟಾಗಿರುವ ಸಂಘರ್ಷದ ಕುರಿತ ಪ್ರಶ್ನೆಗೆ ಉತ್ತರಿಸಿದ ಮೋದಿ, “ನಮ್ಮ ದೇಶದ ಸಾರ್ವಭೌಮತ್ವವನ್ನು ಕಾಪಾಡಲು ನಾವು ಸಕಲ ರೀತಿಯಲ್ಲಿ ಬದ್ಧರಾಗಿದ್ದೇವೆ” ಎಂದು ಹೇಳಿದರು. “ಗಡಿಯಲ್ಲಿ ಶಾಂತಿ ಸ್ಥಾಪನೆ ಹಾಗೂ ಯಥಾಸ್ಥಿತಿ ಕಾಪಾಡುವುದರಿಂದ ಭಾರತ ಹಾಗೂ ಚೀನಾದ ದ್ವಿಪಕ್ಷೀಯ ಸಂಬಂಧ ಸರಿಯಾಗಿರುತ್ತದೆ. ಪರಸ್ಪರ ಸಹಕಾರ, ಸಮ್ಮತಿ, ಶಾಂತಿ ಸ್ಥಾಪನೆಯಿಂದ ಮಾತ್ರ ಸಂಬಂಧ ವೃದ್ಧಿಯಾಗಲು ಸಾಧ್ಯ. ಇದರಿಂದ ಎರಡೂ ದೇಶಗಳಿಗೆ ಅನುಕೂಲವಾಗುವ ಜತೆಗೆ, ಜಗತ್ತಿಗೂ ನೆರವಾಗಲಿದೆ” ಎಂದರು.

Exit mobile version