ನವದೆಹಲಿ: ಪ್ರತಿಪಕ್ಷಗಳ ವಿರೋಧದ ನಡುವೆಯೇ ಬಹುಚರ್ಚಿತ ವಕ್ಫ್ ತಿದ್ದುಪಡಿ ವಿಧೇಯಕವನ್ನು (Waqf Amendment Bill) ಸಂಸತ್(Parliament Session)ನಲ್ಲಿ ಗುರುವಾರ ಮಂಡಿಸಲಾಗಿದೆ. ಇದೀಗ ಈ ಮದೂದೆಯ ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿಗೆ ಕೇಂದ್ರ ಸರ್ಕಾರ ಕಳುಹಿಸಿದೆ. ಇಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ (Union Minister of Minority Affairs) ಕಿರಣ್ ರಿಜಿಜು (Kiren Rijiju) ಮಸೂದೆಯನ್ನು ಮಂಡಿಸಿದ್ದಾರೆ. ಅಷ್ಟೇ ಅಲ್ಲ, ವಕ್ಫ್ ಕಾಯ್ದೆಗೆ (Waqf Act) ತಿದ್ದುಪಡಿ ತರುವ ಕುರಿತು ಪ್ರತಿಪಕ್ಷಗಳ ಆರೋಪಗಳಿಗೆ ನಿದರ್ಶನಗಳ ಸಮೇತ ಮರುತ್ತರ ನೀಡಿದ್ದಾರೆ.
“ವಕ್ಫ್ ಕಾಯ್ದೆಗೆ ತಿದ್ದುಪಡಿ ಕುರಿತು ಹಲವು ತನಿಖಾ ವರದಿಗಳನ್ನು ಆಧರಿಸಿಯೇ ತೀರ್ಮಾನಿಸಲಾಗಿದೆ. ವಕ್ಫ್ ಮಂಡಳಿಯು ಪರಮಾಧಿಕಾರವನ್ನು ಬಳಸಿಕೊಂಡು ತಿರುಚಿರಪಳ್ಳಿ ಎಂಬ ಇಡೀ ಗ್ರಾಮವನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ಇದರಲ್ಲಿ ಧರ್ಮ ನೋಡಬೇಡಿ, ಗ್ರಾಮದಲ್ಲಿ 1,500 ವರ್ಷಗಳ ಇತಿಹಾಸ ಇರುವ ಸುಂದರೇಶ್ವರ ದೇವಾಲಯ ಇದೆ. ಆದರೂ, ವಕ್ಫ್ ಆಸ್ತಿ ಎಂದು ಘೋಷಿಸಲಾಯಿತು. ಇದಷ್ಟೇ ಅಲ್ಲ, ಸೂರತ್ ಮುನ್ಸಿಪಲ್ ಕಾರ್ಪೊರೇಷನ್‌ನ ಕೇಂದ್ರ ಕಚೇರಿಯನ್ನೇ ವಕ್ಫ್ ಆಸ್ತಿ ಎಂಬುದಾಗಿ ಘೋಷಿಸಲಾಗಿದೆ ಎಂದರೆ ನೀವು ಕಲ್ಪನೆ ಮಾಡಿಕೊಳ್ಳಬೇಕು” ಎಂದು ಪ್ರತಿಪಕ್ಷಗಳ ಆರೋಪಗಳಿಗೆ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ.
I moved for leave to introduce The Mussalman Wakf (Repeal) Bill, 2024 to repeal the Mussalman Wakf Act, 1923 in Lok Sabha today.
— Kiren Rijiju (@KirenRijiju) August 8, 2024
Also introduced the Bill in the house.#Parliament pic.twitter.com/fih2Ta64ul
“ನಾನು ಒಬ್ಬ ಬೌದ್ಧ ಧರ್ಮೀಯನಾಗಿದ್ದೇನೆ. ನಾನು ಹಿಂದು ಅಲ್ಲ, ಮುಸ್ಲಿಂ ಅಲ್ಲ. ಆದರೆ, ಎಲ್ಲ ಧರ್ಮಗಳನ್ನು ನಾನು ಗೌರವಿಸುತ್ತೇನೆ. ಇದರಲ್ಲಿ ಧಾರ್ಮಿಕ ವಿಷಯವನ್ನು ಹುಡುಕಬೇಡಿ. ಪುರಸಭೆ ಕಚೇರಿ ಹೇಗೆ ಖಾಸಗಿ ಆಸ್ತಿ ಆಗುತ್ತದೆ? ಪುರಸಭೆ ಕಚೇರಿಯನ್ನು ಹೇಗೆ ವಕ್ಫ್ ಆಸ್ತಿ ಎಂಬುದಾಗಿ ಘೋಷಿಸಲಾಗುತ್ತದೆ? ಇದೆಲ್ಲವನ್ನು ಗಮನಿಸಿಯೇ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ” ಎಂದು ತಿಳಿಸಿದರು.
ಏನೆಲ್ಲ ಬದಲಾವಣೆ?
ದೇಶದ ಯಾವುದೇ ಆಸ್ತಿಯನ್ನು ವಕ್ಫ್ ಮಂಡಳಿ ಆಸ್ತಿ ಎಂಬುದಾಗಿ ಘೋಷಿಸವ, ಅದನ್ನು ಯಾರೂ ಕೋರ್ಟ್‌ನಲ್ಲೂ ಪ್ರಶ್ನಿಸಲು ಸಾಧ್ಯವಾಗದಂತಹ ಪರಮಾಧಿಕಾರವನ್ನು ವಕ್ಫ್ ಕಾಯ್ದೆಯು ನೀಡಿದೆ. ಆದರೆ, ಈ ಪರಮಾಧಿಕಾರವನ್ನು ರದ್ದುಗೊಳಿಸುವುದು ಪ್ರಮುಖ ಬದಲಾವಣೆಯಾಗಿದೆ. ಇನ್ನು, ಆಯಾ ರಾಜ್ಯಗಳ ವಕ್ಫ್ ಮಂಡಳಿಗಳಲ್ಲಿ ಇಬ್ಬರು ಹೆಣ್ಣುಮಕ್ಕಳು ಕಡ್ಡಾಯವಾಗಿ ಇರುವುದು, ವಕ್ಫ್ ಮಂಡಳಿ ಆಸ್ತಿ ಕುರಿತು ಜಿಲ್ಲಾಧಿಕಾರಿ ತೀರ್ಮಾನ ತೆಗೆದುಕೊಳ್ಳುವುದು ಸೇರಿ ಹಲವು ಬದಲಾವಣೆ ಮಾಡಲಾಗುತ್ತದೆ.
ಅಷ್ಟೇ ಅಲ್ಲ, ಸಮಿತಿಯಲ್ಲಿ ಒಬ್ಬ ಕೇಂದ್ರ ಸಚಿವ, ಮೂವರು ಸಂಸದರು, ಮೂರು ಮುಸ್ಲಿಂ ಸಂಘಟನೆಗಳ ಮುಖಂಡರು ಹಾಗೂ ಮೂವರು ಮುಸ್ಲಿಂ ಕಾನೂನು ತಜ್ಞರು ಇರಲಿದ್ದಾರೆ. ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ಇಬ್ಬರು ಜಡ್ಜ್‌ಗಳು ಸಮಿತಿಯ ಸದಸ್ಯರಾಗಿರುತ್ತಾರೆ. ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂಬುದಾಗಿ ಘೋಷಿಸುವ ಮೊದಲು ನೋಟಿಸ್ ನೀಡಬೇಕು. ಆ ಕುರಿತು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ವಕ್ಫ್ ಆಸ್ತಿಗಳ ಸರ್ವೇಯನ್ನು ಜಿಲ್ಲಾಧಿಕಾರಿ ಎದುರು ಮಾಡಬೇಕು. ಮಂಡಳಿಯ ನಿರ್ಧಾರ ಪ್ರಶ್ನಿಸಿ 90 ದಿನಗಳಲ್ಲಿ ಆಸ್ತಿಯ ಮಾಲೀಕರು ಅಥವಾ ಸಂಬಂಧಪಟ್ಟವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಅಧಿಕಾರ ನೀಡಲಾಗಿದೆ.
ಆಸ್ತಿಯ ಬದಲು ಹಣಕಾಸು ನೆರವು ಬಂದರೆ, ಆ ಹಣವನ್ನು ಕೇಂದ್ರ ಸರ್ಕಾರ ಸಲಹೆಯಂತೆ ವಿಧವೆಯರು, ವಿಚ್ಛೇದನ ಪಡೆದವರು ಹಾಗೂ ಅನಾಥರ ಕಲ್ಯಾಣಕ್ಕೆ ವಿನಿಯೋಗಿಸಬೇಕು. ವಕ್ಫ್ ಮಂಡಳಿಯನ್ನು ವಿರೋಧಿಸುತ್ತಿರುವ ಬೋಹ್ರಾ ಹಾಗೂ ಆಗಾಖಾನಿ ಸಮುದಾಯದವರಿಗೆ ಪ್ರತ್ಯೇಕ ಮಂಡಳಿಸಲು ಪ್ರಸ್ತಾಪಿಸಲಾಗಿದೆ.
ಏನಿದು ವಕ್ಫ್ ಕಾಯ್ದೆ?
ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಕಾರಣಕ್ಕಾಗಿ ದಾನವಾಗಿ ನೀಡಿದ ಭೂಮಿಯನ್ನು ನಿಯಂತ್ರಿಸುವ ದಿಸೆಯಲ್ಲಿ 1995ರಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದಕ್ಕೆ ಮುಸ್ಲಿಂ ಕಾನೂನನ್ನು ಕೂಡ ಅನ್ವಯ ಮಾಡಲಾಗಿದೆ. ಧಾರ್ಮಿಕ ಕಾರಣಕ್ಕಾಗಿ ನೀಡಿದ ಆಸ್ತಿಯು ವಕ್ಫ್ ಮಂಡಳಿ ವ್ಯಾಪ್ತಿಗೆ ಬರುತ್ತದೆ. ಅಷ್ಟೇ ಅಲ್ಲ, ಯಾವುದೇ ಆಸ್ತಿಯನ್ನು ವಕ್ಫ್ ಮಂಡಳಿಯು ತನ್ನ ಆಸ್ತಿಯನ್ನು ಘೋಷಿಸುವ ಜತೆಗೆ ಅದನ್ನು ವಶಕ್ಕೆ ಪಡೆಯುವ ಪರಮಾಧಿಕಾರ ಹೊಂದಿದೆ. ಇದು ಜನರ ಅಸಮಾಧಾನಕ್ಕೂ ಕಾರಣವಾಗಿದೆ.
ಇದನ್ನೂ ಓದಿ: Waqf Board: ಜಾಮಾ ಮಸೀದಿ ಸೇರಿ ವಕ್ಫ್ ಬೋರ್ಡ್‌ಗೆ ಕಾಂಗ್ರೆಸ್ ನೀಡಿದ 123 ಆಸ್ತಿ ಸ್ವಾಧೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ!