ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವುದು ಎಂದರೆ ತುಂಬ ಜನರಿಗೆ ಎಲ್ಲಿಲ್ಲದ ಖುಷಿ. ಸಮಯದ ಉಳಿತಾಯ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ವಿಮಾನಗಳಲ್ಲಿ ಗಗನಸಖಿಯರ ಸೇವೆ ಪಡೆಯುತ್ತ, ಆಗಸದಿಂದ ಭೂಮಿಯನ್ನು ನೋಡುತ್ತ, ಮೋಡಗಳನ್ನು ಹತ್ತಿರದಿಂದ ವೀಕ್ಷಿಸುತ್ತ, ಆರಾಮವಾಗಿ ಪ್ರಯಾಣಿಸುವ ಖುಷಿಯನ್ನು ತುಂಬ ಜನ ಇಷ್ಟಪಡುತ್ತಾರೆ. ಆದರೆ, ಇತ್ತೀಚೆಗೆ ಏರ್ ಇಂಡಿಯಾ ವಿಮಾನವೊಂದರಲ್ಲಿ (Air India Flight) ಪ್ರಯಾಣಿಸಿದವರಿಗೆ ಭೀಕರ ಅನುಭವವಾಗಿದೆ. ವಿಮಾನದಲ್ಲಿ ಬ್ಯಾಗ್ ಇರಿಸುವ ಸ್ಥಳದಿಂದ (Overhead Bins) ನೀರು ಸೋರಿದ್ದೇ ಪ್ರಯಾಣಿಕರ ಕೆಟ್ಟ ಅನುಭವಕ್ಕೆ ಕಾರಣವಾಗಿದೆ.
ಹೌದು, ವಿಮಾನವೊಂದರ ಓವರ್‌ಹೆಡ್ ಬಿನ್ಸ್‌ನಿಂದ ನೀರು ಸೋರಿದ್ದು, ವ್ಯಕ್ತಿಯೊಬ್ಬರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ಏರ್ ಇಂಡಿಯಾ, ನಮ್ಮ ವಿಮಾನದಲ್ಲಿ ಪ್ರಯಾಣಿಸಿ. ಇದು ಟ್ರಿಪ್ ಅಲ್ಲ, ಪುಳಕಿತರಾಗುವ ಸರದಿ ನಿಮ್ಮದಾಗಲಿ” ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ವಿಡಿಯೊವನ್ನು ಲಕ್ಷಾಂತರ ಜನ ನೋಡಿದ್ದು, ಪ್ರಯಾಣಿಕರು ಅನುಭವಿಸಿದ ಕಷ್ಟದ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರುವ ವಿಡಿಯೊ ಇಲ್ಲಿದೆ
Air India ….
— JΛYΣƧΉ (@baldwhiner) November 29, 2023
fly with us – it's not a trip …
it's an immersive experience pic.twitter.com/cEVEoX0mmQ
“ಅಯ್ಯೋ ದೇವರೆ, ಎಂಥ ಕೆಟ್ಟ ಅನುಭವ ಇದು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರೋ, “ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಟಿಕೆಟ್ ಮೊತ್ತವನ್ನು ರಿಫಂಡ್ ಮಾಡಬೇಕು” ಎಂದು ಆಗ್ರಹಿಸಿದ್ದಾರೆ. “ಯಾರೋ ಲಗೇಜ್ ಕ್ಯಾಬಿನ್‌ನಲ್ಲಿ ನೀರಿನ ಬಾಟಲಿ ಇಟ್ಟಿರಬೇಕು, ಅದರಿಂದಾಗಿ ನೀರು ಸೋರಿದೆ” ಎಂದು ಇನ್ನೊಬ್ಬರು ಹೇಳಿದ್ದಾರೆ. ಹಾಗೆಯೇ, “ವಿಮಾನದ ಎ.ಸಿಯಲ್ಲಿ ಸಮಸ್ಯೆ ಇರಬೇಕು. 2018ರಲ್ಲಿ ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ಆಗಮಿಸುವಾಗ ನನಗೂ ಹೀಗೆಯೇ ಸಮಸ್ಯೆಯಾಯಿತು. ಏನೂ ತೊಂದರೆಯಾಗಲ್ಲ ಎಂದು ವಿಮಾನದ ಸಿಬ್ಬಂದಿ ಹೇಳಿದರು. 10 ನಿಮಿಷದ ಬಳಿಕ ಸರಿಯಾಯಿತು” ಎಂದು ತಮಗಾದ ಅನುಭವವನ್ನು ಮಗದೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Air India: ನಿಯಮ ಉಲ್ಲಂಘಿಸಿದ ಏರ್ ಇಂಡಿಯಾಗೆ ಬಿತ್ತು 10 ಲಕ್ಷ ರೂ. ದಂಡ!
ಏರ್ ಇಂಡಿಯಾ ವಿಮಾನದಲ್ಲಿ ಇತ್ತೀಚೆಗೆ ಪ್ರಯಾಣಿಕರು ಅನುಚಿತವಾಗಿ ವರ್ತಿಸಿದ ಪ್ರಕರಣಗಳು ಹೆಚ್ಚು ಸುದ್ದಿಯಾಗುತ್ತಿವೆ. ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ, ಹಲ್ಲೆ, ಥಳಿತದಂತಹ ಪ್ರಕರಣಗಳು ಸುದ್ದಿಯಾಗಿವೆ. ಕೆಲ ದಿನಗಳ ಹಿಂದಷ್ಟೇ ಪರಿಹಾರ ನಿಯಮಗಳನ್ನು ಪಾಲಿಸದ್ದರಿಂದ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯವು(DGCA) ಏರ್ ಇಂಡಿಯಾಗೆ 10 ಲಕ್ಷ ರೂಪಾಯಿ ದಂಡ ವಿಧಿಸಿತ್ತು.
ದೆಹಲಿ, ಕೊಚ್ಚಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ವಿಮಾನಯಾನ ಸಂಸ್ಥೆಗಳ ತಪಾಸಣೆ ನಡೆಸಿದ ನಂತರ, ಸಂಬಂಧಿತ ನಾಗರಿಕ ವಿಮಾನಯಾನ ಅಗತ್ಯತೆಯ (ಸಿಎಆರ್) ನಿಬಂಧನೆಗಳನ್ನು ಏರ್ ಇಂಡಿಯಾ ಅನುಸರಿಸುತ್ತಿಲ್ಲ ಎಂದು ನಿಯಂತ್ರಕರು ಕಂಡುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಡಿಜಿಸಿಎ ದಂಡವನ್ನು ವಿಧಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ