Site icon Vistara News

Wayanad Landslide: ‘ಪ್ರೀತಿಯ ಯೋಧರೇ…ʼ ಭಾರತೀಯ ಸೇನೆಗೆ 3ನೇ ತರಗತಿ ಬಾಲಕ ಬರೆದ ಪತ್ರದಲ್ಲೇನಿದೆ?

wayanad Landslide

ವಯನಾಡ್‌: ಕೇರಳದ ವಯನಾಡಿನ ಭೂಕುಸಿತ(Wayanad Landslide)ಕ್ಕೆ ಬಲಿಯಾದವರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಎ ಆಗುತ್ತಲೇ ಇದ್ದು, 360ರ ಗಡಿ ದಾಟಿದೆ. ಈ ನಡುವೆ ರಕ್ಷಣಾ ಕಾರ್ಯಾಚರಣೆ(Rescue Operation)ಯೂ ಅಷ್ಟೇ ಬಿರುಸಿನಲ್ಲಿ ಸಾಗುತ್ತಿದೆ. ಭಾರತೀಯ ಸೇನೆ(Indian Army) ಪ್ರಾಣವನ್ನು ಪಣಕ್ಕೀಡು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಈ ನಡುವೆ ಭಾರತೀಯ ಸೇನೆಯ ಅವಿರತ ಶ್ರಮವನ್ನು ಮೆಚ್ಚಿ ಮೂರನೇ ತರಗತಿ ಬಾಲಕನೋರ್ವ ಭಾರತೀಯ ಸೇನೆಗೆ ಪತ್ರ ಬರೆದಿದ್ದಾನೆ. ಈ ಹೃದಯಸ್ಪರ್ಶಿ ಪತ್ರ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಕೇರಳದ IMLP ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ರಾಯನ್‌ ಮಲಯಾಳಂನಲ್ಲಿ ಈ ಪತ್ರ ಬರೆದಿದ್ದು, ಆತ್ಮೀಯ ಭಾರತೀಯ ಸೇನೆ, ನನ್ನ ಪ್ರೀತಿಯ ವಯನಾಡ್ ಭಾರಿ ಭೂಕುಸಿತದಿಂದ ಅಪ್ಪಳಿಸಿತು ಮತ್ತು ವಿನಾಶವನ್ನು ಸೃಷ್ಟಿಸಿತು. ಶಿಲಾಖಂಡರಾಶಿಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ನೀವು ರಕ್ಷಿಸುತ್ತಿರುವುದನ್ನು ನೋಡಿ ನನಗೆ ಹೆಮ್ಮೆ ಮತ್ತು ಸಂತೋಷವಾಯಿತು. ನೀವು ಬಿಸ್ಕತ್ತುಗಳನ್ನು ಸೇವಿಸಿ ನಿಮ್ಮ ಹಸಿವು ನೀಗಿಸಿಕೊಂಡು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವುದನ್ನು ನಾನು ವಿಡಿಯೋದಲ್ಲಿ ನೋಡಿದ್ದೇನೆ. ಜನರ ರಕ್ಷಣೆಗಾಗಿ ಸೇತುವೆಯನ್ನು ನಿರ್ಮಿಸುತ್ತಿದ್ದೀರಿ. ಆ ದೃಶ್ಯ ನನ್ನ ಮನಸ್ಸನ್ನು ನಾಟಿದೆ. ಮುಂದೊಂದು ದಿನ ನಾನು ಭಾರತೀಯ ಸೇನೆಯನ್ನು ಸೇರಲು ಮತ್ತು ನನ್ನ ರಾಷ್ಟ್ರವನ್ನು ರಕ್ಷಿಸಲು ಬಯಸುತ್ತೇನೆ ಎಂದು ಬರೆದಿದ್ದಾನೆ.

ಬಾಲಕನ ಪತ್ರಕ್ಕೆ ಸೇನೆ ಪ್ರತಿಕ್ರಿಯೆ

ಬಾಲಕನ ಹೃದಯಸ್ಪರ್ಶಿ ಪತ್ರಕ್ಕೆ ಭಾರತೀಯ ಸೇನೆ ಪ್ರತಿಕ್ರಿಯಿಸಿದ್ದು, “ಯುವ ಯೋಧನಿಗೆ” ಧನ್ಯವಾದಗಳು ಎಂದು ಬರೆದಿದೆ. ನಿಮ್ಮ ಹೃತ್ಪೂರ್ವಕ ಮಾತುಗಳು ನಮ್ಮನ್ನು ಆಳವಾಗಿ ಮುಟ್ಟಿವೆ. ಪ್ರತಿಕೂಲ ಸಮಯದಲ್ಲಿ, ನಾವು ಭರವಸೆಯ ದಾರಿದೀಪವಾಗಲು ಗುರಿ ಹೊಂದಿದ್ದೇವೆ ಮತ್ತು ನಿಮ್ಮ ಪತ್ರವು ಈ ಧ್ಯೇಯವನ್ನು ಪುನರುಚ್ಚರಿಸುತ್ತದೆ. ನೀವು ಸಮವಸ್ತ್ರವನ್ನು ಧರಿಸುವ ದಿನಕ್ಕಾಗಿ ನಾವು ಕಾತುರದಿಂದ ಕಾಯುತ್ತಿದ್ದೇವೆ ಮತ್ತು ನಿಮ್ಮ ಧೈರ್ಯ ಮತ್ತು ಸ್ಫೂರ್ತಿಗಾಗಿ ನಾವು ಒಟ್ಟಾಗಿ ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದೆ. ಇದೀಗ ಈ ಪತ್ರಗಳೂ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್‌ ಆಗುತ್ತಿದೆ.

ಇದನ್ನೂ ಓದಿ: Wayanad landslide: ವಯನಾಡ್‌ ಭೂಕುಸಿತ ಸಂತ್ರಸ್ತರಿಗೆ 100 ಮನೆ ನಿರ್ಮಾಣ: ಕೇರಳ ಸಿಎಂಗೆ ಸಿದ್ದರಾಮಯ್ಯ ಭರವಸೆ

Exit mobile version