Site icon Vistara News

Wayanad Landslide: ವಯನಾಡು ದುರಂತದಲ್ಲಿ ಸಾವಿನ ಸಂಖ್ಯೆ 150ಕ್ಕೆ ಏರಿಕೆ; ಇಂದೂ ಭಾರಿ ಮಳೆಯ ಮುನ್ಸೂಚನೆ, ಮುಂದುವರಿದ ಕಾರ್ಯಾಚರಣೆ

Wayanad Landslide

ತಿರುವನಂತಪುರಂ: ಮಳೆಯ ರುದ್ರ ನರ್ತನಕ್ಕೆ ದೇವರನಾಡು ಕೇರಳ ಅಕ್ಷರಶಃ ಕಂಗಾಲಾಗಿ ಹೋಗಿದೆ. ರಾಜ್ಯ ಕಂಡು ಕೇಳರಿಯದ ದುರಂತ ವಯನಾಡಿನಲ್ಲಿ ಸಂಭವಿಸಿದ್ದು, ಭೀಕರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 150ರ ಗಡಿ ದಾಟಿದೆ (Wayanad Landslide). 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಇಂದೂ (ಜುಲೈ 31) ವಯನಾಡು ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಆತಂಕ ಮೂಡಿಸಿದೆ.

ಭಾರತ ಹವಾಮಾನ ಇಲಾಖೆ (India Meteorological Department) ಬುಧವಾರವೂ ವಯನಾಡು ಸೇರಿದಂತೆ ಉತ್ತರ ಕೇರಳದ ವಿವಿಧೆಡೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದೆ. ʼʼಜುಲೈ 31 ಮತ್ತು ಆಗಸ್ಟ್ 1ರಂದು ವಯನಾಡು ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಆಗಸ್ಟ್ 2ರಂದುಈ ಭಾಗಗಳಲ್ಲಿ ಮಳೆಯ ಪ್ರಮಾನ ಇನ್ನೂ ಹೆಚ್ಚಾಗಲಿದೆ. ಇಂದು ಕೇರಳದಲ್ಲಿ ಗಂಟೆಗೆ 30-40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆಯಿದೆʼʼ ಎಂದು ಐಎಂಡಿ ತಿಳಿಸಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಕಾಸರಗೋಡು, ಕಣ್ಣೂರು, ಕೋಝಿಕೋಡ್, ವಯನಾಡು, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಇಡುಕ್ಕಿ, ಎರ್ನಾಕುಲಂ, ಅಲಪ್ಪುಳ ಮತ್ತು ಪತ್ತನಂತೊಟ್ಟ ಜಿಲ್ಲೆಗಳ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಜತೆಗೆ ನಡೆಯಲಿರುವ ಪರೀಕ್ಷೆಗಳನ್ನೂ ಮುಂದೂಡಲಾಗಿದೆ.

ಭಾರಿ ದುರಂತ

ಭಾರೀ ಮಳೆಯ ನಡುವೆ ಮಂಗಳವಾರ ಬೆಳಗ್ಗೆ ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಜತೆಗೆ ನಾಲ್ಕು ಗಂಟೆ ಅವಧಿಯಲ್ಲಿ ಸಂಭವಿಸಿದೆ ಮೂರು ದೊಡ್ಡ ಭೂಕುಸಿತ ವಯನಾಡು ಜಿಲ್ಲೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಮುಂಡಕೈ, ಚೂರಲ್‌ಮಲ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಹೆಚ್ಚು ಹಾನಿಗೊಳಗಾಗಿದ್ದು, ಇಲ್ಲಿ ಎಲ್ಲೆಂದರಲ್ಲಿ ಮಣ್ಣು, ಕಲ್ಲು ಬಂಡೆ, ಕೆಸರಿನ ರಾಶಿಯೇ ಕಂಡು ಬರುತ್ತಿದೆ. ಮನೆ, ಶಾಲೆ ಮುಳುಗಡೆಯಾಗಿದ್ದು, ರಸ್ತೆ, ಸೇತುವೆ ಕೊಚ್ಚಿ ಹೋಗಿ ಸಂಪರ್ಕವೇ ಕಡಿತಗೊಂಡಿದೆ. ಇದು ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದ್ದು, ಸೇನಾ ಸಿಬ್ಬಂದಿ ತಾತ್ಕಾಲಿಕ ಸೇತುವೆ ನಿರ್ಮಿಸಿ ಸಂತ್ರಸ್ತರನ್ನು ಪಾರು ಮಾಡುತ್ತಿದ್ದಾರೆ.

ಈ ದುರಂತ ಎಷ್ಟು ಭೀಕರವಾಗಿದೆ ಎಂದರೆ ನದಿಯಲ್ಲಿ ಕೊಚ್ಚಿಕೊಂಡು ಹೋದ ಸ್ಥಳೀಯರ ಶವ ಪಕ್ಕದ ಜಿಲ್ಲೆ ಮಲ್ಲಪ್ಪುರಂನಲ್ಲಿ ಸಿಕ್ಕಿದೆ. ಇನ್ನು ಮಣ್ಣು, ಕಲ್ಲುಬಂಡೆಗಳ ರಾಶಿಯಲ್ಲಿ ಮೃತದೇಹಗಳು ಕಂಡು ಬಂದಿದ್ದು, ಗುರುತೇ ಸಿಗದಷ್ಟು ನಜ್ಜುಗುಜ್ಜಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡವರಿಗೆ ಮೆಪ್ಪಾಡಿ ಆರೋಗ್ಯ ಕೇಂದ್ರ, ವಿಮ್ಸ್ ಆಸ್ಪತ್ರೆ, ಬತ್ತೇರಿ ತಾಲೂಕು ಆಸ್ಪತ್ರೆ, ನಿಲಂಬೂರ್ ಜಿಲ್ಲಾಸ್ಪತ್ರೆ ಮುಂತಾದೆಡೆ ಚಿಕಿತ್ಸೆ ನೀಡಲಾಗುತ್ತಿದೆ.

ರಕ್ಷಣಾ ಕಾರ್ಯಾಚರಣೆ

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA), ಅಗ್ನಿಶಾಮಕ ದಳ, ನಾಗರಿಕ ರಕ್ಷಣೆ, ಎನ್‌ಡಿಆರ್‌ಎಫ್‌ ಮತ್ತು ಸ್ಥಳೀಯ ತುರ್ತು ಪ್ರತಿಕ್ರಿಯೆ ತಂಡಗಳ ಸದಸ್ಯರುರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜತೆಗೆ ಕಣ್ಣೂರಿನ ಡಿಎಸ್‌ಸಿ ಕೇಂದ್ರದ ಸುಮಾರು 200 ಭಾರತೀಯ ಸೇನಾ ಸಿಬ್ಬಂದಿ ಮತ್ತು ಕೋಝಿಕೋಡ್‌ನ 122 ಟಿಎ ಬೆಟಾಲಿಯನ್ ಸದಸ್ಯರು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಇವರೊಂದಿಗೆ ಎರಡು ವಾಯುಪಡೆಯ ಹೆಲಿಕಾಪ್ಟರ್‌ಗಳು, ಒಂದು ಎಂಐ -17 ಮತ್ತು ಎಎಲ್ಎಚ್ ಕೂಡ ಕೈಜೋಡಿಸಿದೆ.

ಇದನ್ನೂ ಓದಿ: Wayanad Landslide Explainer: ಪ್ರಕೃತಿ ಮೇಲೆ ಮಾನವನ ವಿಕೃತಿ; ವಯನಾಡು ಭೂಕುಸಿತಕ್ಕೆ ಇಲ್ಲಿದೆ ಕಾರಣಗಳ ಪಟ್ಟಿ

Exit mobile version