Site icon Vistara News

Wayanad Landslide: ವಯನಾಡು ದುರಂತ: 6 ದಿನಗಳ ಬಳಿಕ ಒಡತಿಯನ್ನು ಕಂಡ ಶ್ವಾನದ ಸಂಭ್ರಮ ಹೇಗಿದೆ ನೋಡಿ

Wayanad Landslide

ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ 360ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ (Wayanad Landslide). ಅವಶೇಷಗಳಡಿ ಸಿಲುಕಿದವರನ್ನು, ನಾಪತ್ತೆಯಾದವರನ್ನು ಹುಡುಕುವ ಕಾರ್ಯ ಭರದಿಂದ ಸಾಗುತ್ತಿದೆ. ಈ ಮಹಾನ್‌ ಕಾರ್ಯಕ್ಕೆ ಸೇನೆಯೂ ಕೈ ಜೋಡಿದೆ. ಜತೆಗೆ ಶ್ವಾನದಳದ ಮೂಲಕವೂ ಕಾರ್ಯಾಚರಣೆ ನಡಯುತ್ತಿದೆ. ಈ ಮಧ್ಯೆ ದುರಂತ ನಡೆದು 6 ದಿನಗಳಿಂದ ಅಲೆದಾಡುತ್ತಿದ್ದ ಸಾಕುನಾಯಿಯೊಂದು ತನ್ನವರನ್ನು ಪತ್ತೆ ಹಚ್ಚಿ ಸಂತಸ ವ್ಯಕ್ತಪಡಿಸಿದ ಹೃದಯಸ್ಪರ್ಶಿ ಘಟನೆಯೂ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ (Viral Video).

ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ವಯನಾಡಿನ ಮೆಪ್ಪಾಡಿಯಲ್ಲಿ ಜುಲೈ 30ರ ಮುಂಜಾನೆ ಸುಮಾರು 2 ಗಂಟೆ ಮತ್ತು 4 ಗಂಟೆಗೆ ನಡೆದ ಭೀಕರ ಭೂಕುಸಿತದಿಂದ ಮಣ್ಣಿನ ರಾಶಿ, ಕಲ್ಲು ಬಂಡೆ, ಮರಗಳ ದಿಮ್ಮಿ ತೇಲಿ ಬಂದು ಇಡೀ ಊರನ್ನೇ ಮುಚ್ಚಿ ಹಾಕಿದೆ. ಜತೆಗೆ ನದಿಯೂ ಮೇರೆ ಮೀರಿ, ಪಥ ಬದಲಾಯಿಸಿ ಹರಿದು ಇನ್ನಷ್ಟು ನಾಶ ನಷ್ಟಕ್ಕೆ ಕಾರಣವಾಗಿದೆ.

ಈ ಭೀಕರ ದುರಂತದಿಂದ ಪಾರಾದವರನ್ನು ಸುರಕ್ಷಿತ ಸ್ಥಳದಲ್ಲಿ ತೆರೆಯಲಾದ ನಿರಾಶ್ರಿತರ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಂತಹವರ ಪೈಕಿ ಈ ಶ್ವಾನದ ಮನೆಯವರೂ ಇದ್ದರು. ಇವರ ಮನೆ ಕುಸಿದು ಬಿದ್ದಿತ್ತು. ಹೀಗಾಗಿ ಅವರು ಸುರಕ್ಷಿತ ಜಾಗಕ್ಕೆ ತೆರಳಿದ್ದರು. ಆದರೆ ಆ ವೇಳೆ ಶ್ವಾನ ಇವರೊಂದಿಗೆ ಇರಲಿಲ್ಲ.

ಇತ್ತ ಮನೆಯ ಬಳಿ ಬಂದ ಶ್ವಾನ ತನ್ನವರನ್ನು ಕಾಣದೆ ಕಂಗಾಲಾಗಿತ್ತು. ಮನೆಯವರನ್ನು ಹುಡುಕುತ್ತ ಅಲ್ಲೇ ನೋವಿನಿಂದ ಓಡಾಡಿಕೊಂಡಿತ್ತು. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಕಾರಣ ಮತ್ತು ಪ್ರತಿಕೂಲ ಹವಾಮಾನ ಇದ್ದುದರಿಂದ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಸ್ವಯಂ ಸೇವಕರಲ್ಲದವರು ಆಗಮಿಸುವಂತಿರಲಿಲ್ಲ. ಹೀಗಾಗಿ ಈ ಶ್ವಾನದ ವಾರಸುದಾರರು ಮನೆ ಇದ್ದ ಜಾಗಕ್ಕೆ ಬಂದಿರಲಿಲ್ಲ. ಇತ್ತ ಸ್ವಯಂ ಸೇವಕರು ಆಹಾರ ನೀಡುತ್ತಿದ್ದರೂ ಮನೆಯವರನ್ನು ಕಾಣದೆ ಶ್ವಾನ ಯಾವುದನ್ನೂ ಮುಟ್ಟುತ್ತಿರಲಿಲ್ಲ. ದಿನ ಅತ್ತ ಇತ್ತ ಓಡಾಡಿ ತನ್ನವರಿಗಾಗಿ ಶೋಧ ಕಾರ್ಯ ನಡೆಸುತ್ತಲೇ ಇತ್ತು.

ಇದೀಗ ಮಳೆ ಕಡಿಮೆಯಾಗಿದೆ. ಶೋಧ ಕಾರ್ಯವೂ ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಸ್ಥಳೀಯರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಭಾನುವಾರ ಈ ಶ್ವಾನದ ಮಾಲಕರು ತಮ್ಮ ಮನೆ ಇರುವ ಜಾಗಕ್ಕೆ ಬಂದಿದ್ದಾರೆ. ಈ ವೇಳೆ ಇವರನ್ನು ನೋಡಿ ಶ್ವಾನದ ಖುಷಿಗೆ ಪಾರವೇ ಇಲ್ಲ. ತನ್ನ ಒಡತಿಯನ್ನು ಕಂಡಾಗ ಓಡೋಡಿ ಬಂದು ತಬ್ಬಿಕೊಂಡಿದೆ. ಅವರ ಮೈಮೇಲೆ ಹತ್ತಿ ಬಾಲ ಅಲ್ಲಾಡಿಸಿ ಖುಷಿಯನ್ನು ವ್ಯಕ್ತಪಡಿಸಿದೆ. ಮಾಲಕಿಯೂ ಅಳಬೇಡ ಎಂದು ಹೇಳಿ ಅದನ್ನು ಸಂತೈಸಿದ್ದಾರೆ. ಶ್ವಾನದ ಪ್ರೀತಿ ಕಂಡು ಅಲ್ಲಿದ್ದವರು ಒಂದು ಕ್ಷಣ ಮೂಕರಾಗಿದ್ದಾರೆ.

ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಶ್ವಾನದ ಮಮತೆಗೆ ಹಲವರು ಭಾವುಕರಾಗಿದ್ದಾರೆ. ಸಾವಿರಾರು ಮಂದಿ ಲೈಕ್‌ ಬಟನ್‌ ಒತ್ತಿದ್ದಾರೆ.

ಇದನ್ನೂ ಓದಿ: Wayanad landslide: ವಯನಾಡ್‌ ಭೂಕುಸಿತ ಸಂತ್ರಸ್ತರಿಗೆ 100 ಮನೆ ನಿರ್ಮಾಣ: ಕೇರಳ ಸಿಎಂಗೆ ಸಿದ್ದರಾಮಯ್ಯ ಭರವಸೆ

Exit mobile version