Site icon Vistara News

Wayanad Landslide: ವಯನಾಡು ಭೂಕುಸಿತ: ದುರಂತದ ಮಧ್ಯೆಯೂ ಭರವಸೆಯ ಕಿರಣ; ಸಂತ್ರಸ್ತರ ರಕ್ಷಣೆಯೇ ರೋಚಕ

Wayanad Landslide

ತಿರುವನಂತಪುರಂ: ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ (Wayanad Landslide) 340ಕ್ಕೂ ಹೆಚ್ಚು ಮಂದಿಯ ಪ್ರಾಣವನ್ನು ಕಸಿದುಕೊಂಡಿದ್ದು, ನೂರಾರು ಮಂದಿ ಕಾಣೆಯಾಗಿದ್ದಾರೆ (Wayanad Landslide). ನಾಪತ್ತೆಯಾದವರ ರಕ್ಷಣೆಗಾಗಿ ಸೇನೆ, ಅರಣ್ಯ ಇಲಾಖೆ ಸಿಬ್ಬಂದಿ, ಎನ್‌ಡಿಆರ್‌ಎಫ್‌ ಪಡೆ, ಸ್ಥಳೀಯರು, ವಿವಿಧ ಸಂಘ ಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿವೆ. ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಲಾಗುತ್ತದೆ. ಈ ಮಧ್ಯೆ ದಟ್ಟ ಅರಣ್ಯದೊಳಗೆ ಆಹಾರವಿಲ್ಲದೆ ಜೀವ ಕೈಯಲ್ಲಿ ಹಿಡಿದು ಕುಳಿತಿದ್ದ ಬುಡಕಟ್ಟು ಕುಟುಂಬವೊಂದನ್ನು ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಕಾಪಾಡಿದೆ. ಮಗುವನ್ನು ಅಧಿಕಾರಿಗಳು ಎತ್ತಿಕೊಂಡು ಬರುತ್ತಿರುವ ಫೊಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral News).

ಮೆಪ್ಪಾಡಿಯ ಸೂಜಿಪ್ಪಾರ ಜಲಪಾತವಿರುವ ಎರಾಕುಂಡ್‌ ಅರಣ್ಯ ಪ್ರದೇಶದಲ್ಲಿದ್ದ ಕೃಷ್ಣನ್‌, ಅವರ ಪತ್ನಿ ಶಾಂತಾ ಮತ್ತು ನಾಲ್ಕು ಮಕ್ಕಳನ್ನು ಒಳಗೊಂಡ ಕುಟುಂಬವನ್ನು ನಾಲ್ವರು ಅರಣ್ಯಾಧಿಗಳ ಗುಂಪು ಸತತ ಎಂಟು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. 10 ಹಗ್ಗಗಳನ್ನು ಸೇರಿಸಿ ಕಟ್ಟಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಕಲ್ಪೆಟ್ಟ ರೇಂಜ್‌ ಫಾರೆಸ್ಟ್‌ ಆಫೀಸರ್‌ ಕೆ.ಆಶೀಫ್‌, ಮುಂಡಕೈ ಸೆಕ್ಷನ್‌ ಫಾರೆಸ್ಟ್‌ ಆಫೀಸರ್‌ ಜಯಚಂದ್ರನ್‌, ಕಲ್ಪೆಟ್ಟ ರೇಂಜ್‌ ಬೀಟ್‌ ಫಾರೆಸ್ಟ್‌ ಆಫೀಸರ್‌ ಕೆ.ಅನಿಲ್‌ ಕುಮಾರ್‌ ಮತ್ತು ಕಲ್ಪೆಟ್ಟ ಆರ್‌.ಆರ್‌.ಡಿ. ಅನೂಪ್‌ ತೋಮಸ್‌ ಅವರನ್ನೊಳಗೊಂಡ ಗುಂಪು ಅತ್ಯಂತ ಸಾಹಸಿಕವಾಗಿ ಈ ಆದಿವಾಸಿ ಕುಟುಂಬನ್ನು ಕಾಪಾಡಿದೆ.

ಕಾಡಿನಲ್ಲಿ ಗುಡಿಸಲೊಂದರಲ್ಲಿ ಜೀವಿಸುತ್ತಿದ್ದ ಈ ಕುಟುಂಬ ಆಹಾರವಿಲ್ಲದೆ ಕಾಡಿನಲ್ಲಿ ಅಲೆದಾಡುತ್ತಿದ್ದಾಗ ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಬಳಿಕ ಅರಣ್ಯಾಧಿಕಾರಿಗಳು ಅವರನ್ನು ಕರೆದೊಯ್ಯಲು ಮುಂದಾಗಿದ್ದಾರೆ. ಮೊದ ಮೊದಲು ಅವರು ಬರಲು ನಿರಾಕರಿಸಿದರು. ಬಳಿಕ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಸಿದ ಬಳಿಕ ನಮ್ಮೊಂದಿಗೆ ಬರಲು ಒಪ್ಪಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪೈಕಿ ಚಿಕ್ಕ ಚಿಕ್ಕ ಮಕ್ಕಳಿಗೆ ಬಟ್ಟೆ ಇರಲಿಲ್ಲ. ಚಳಿಯಿಂದ ನಡುಗುತ್ತಿದ್ದರು. ನಮ್ಮ ಬಟ್ಟೆಯನ್ನು ಅವರಿಗೆ ತೊಡಿಸಿ ಎದೆಗವುಚಿಕೊಂಡು ಅವರನ್ನು ಹೊರ ಕರೆ ತಂದೆವು ಎಂದು ಅವರು ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ರಾತ್ರಿ ಇಡಿ ಕಾವಲು ನಿಂರ ಕಾಡಾನೆ

ಇನ್ನು ದುರಂತದಿಂದ ಪಾರಾಗಿ ಸದ್ಯ ಮೇಪ್ಪಾಡಿ ಜಿಎಚ್‌ಎಸ್‌ಎಸ್‌ನಲ್ಲಿರುವ ಚುರಲ್​​ಮಲದ ಸುಜಾತಾ ಅವರದ್ದು ಇನ್ನೊಂದು ರೋಚಕ ಅನುಭವ. ಮಂಗಳವಾರ ದುರಂತದಿಂದ ಪಾರಾಗಿ ಓಡಿ ಬಂದಿದ್ದ ತಮಗೆ ಕಾಡಾನೆಯೊಂದು ಕಾವಲಾಗಿ ನಿಂತಿರುವ ಅಪರೂಪದ ಕ್ಷಣವನ್ನು ಅವರು ಹಂಚಿಕೊಂಡಿದ್ದಾರೆ. ಮಂಗಳವಾರ ಮುಂಜಾನೆ ಭೂಕುಸಿತದಿಂದ ಸುಜಾತಾ ಅವರ ಮನೆ ನೆಲಸಮವಾಗಿತ್ತು. ಈ ವೇಳೆ ಅವರು ಮತ್ತು ಕುಟುಂಬದ ನಾಲ್ವರು ಸಿಕ್ಕಿ ಬಿದ್ದಿದ್ದರು. ಕೂಡಲೇ ಅವರ ಮಗ ಗಿಗೀಶ್ ಪ್ರತಿಯೊಬ್ಬರನ್ನೂ ಹೊರಗೆ ಕರೆ ತಂದಿದ್ದರು.

ಸುತ್ತಲೂ ನೀರು ಆವರಸಿತ್ತು. ಹೇಗೋ ಈಜುತ್ತಾ ಬೆಟ್ಟದ ಬಳಿ ಬಂದಿದ್ದರು. ಎಲ್ಲರ ಕೈಕಾಲುಗಳಿಗೆ ಗಾಯವಾಗಿತ್ತು. ಅಲ್ಲಿಗೆ ಬಂದಾಗ ದೊಡ್ಡ ಕಾಡಾನೆಯೊಂದು ಎದುರಾಗಿತ್ತು. ʼʼನಾವು ಒಂದು ದೊಡ್ಡ ದುರಂತದಿಂದ ತಪ್ಪಿಸಿಕೊಂಡು ಬಂದಿದ್ದೀವಿ. ನೀನು ನಮಗೇನೂ ಮಾಡಬೇಡಪ್ಪ ಎಂದು ನಾನು ಆನೆಯ ಮುಂದೆ ನಿಂತು ಕಣ್ಣೀರು ಹಾಕಿದೆ. ಆಣೆಗೂ ಕರಣೆ ಉಕ್ಕಿತ್ತು. ಬಳಿಕ ಬೆಳಗಾಗುವವರೆಗೆ ನಾವು ಆನೆಯ ಕಾಲ ಹತ್ತಿರವೇ ಸಮಯ ಕಳೆದೆವು. ಬೆಳಗ್ಗೆ ಎಲ್ಲಿಂದಲೂ ಬಂದವರು ನಮ್ಮನ್ನು ಕರೆದುಕೊಂಡು ಈ ಕಾಳಜಿ ಕೇಂದ್ರಕ್ಕೆ ತಲುಪಿಸಿದರುʼʼ ಎಂದು ಸುಜಾತಾ ವಿವರಿಸಿದ್ದಾರೆ.

ಇದನ್ನೂ ಓದಿ: Wayanad Landslide: ಭೂಕುಸಿತದ ಹಾಟ್‌ಸ್ಪಾಟ್‌ಗಳಲ್ಲಿ ಕಾಮಗಾರಿಗೆ ಅನುಮತಿ ನೀಡಿದ್ದೇಕೆ? ಹಸಿರು ನ್ಯಾಯ ಮಂಡಳಿ ಪ್ರಶ್ನೆ

Exit mobile version