Site icon Vistara News

Congress President | ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ, ಗೆಹ್ಲೋಟ್‌ ದ್ವಿಪದವಿ ಆಸೆಗೆ ತಣ್ಣೀರೆರಚಿದ ರಾಹುಲ್‌ ಗಾಂಧಿ

Rahul Gandhi Gehlot

ತಿರುವನಂತಪುರಂ: ರಾಜಸ್ಥಾನ ಮುಖ್ಯಮಂತ್ರಿ ಹುದ್ದೆಯನ್ನೂ ಉಳಿಸಿಕೊಂಡು, ಎಐಸಿಸಿ ಅಧ್ಯಕ್ಷ ಹುದ್ದೆಯ (Congress President) ಮೇಲೆ ಕಣ್ಣಿಟ್ಟಿದ್ದ ಅಶೋಕ್ ಗೆಹ್ಲೋಟ್‌ (Ashok Gehlot) ಆಸೆಗೆ ರಾಹುಲ್‌ ಗಾಂಧಿ (Rahul Gandhi) ತಣ್ಣೀರೆರಚಿದ್ದಾರೆ. ಕೇರಳದಲ್ಲಿ ನಡೆಸುತ್ತಿರುವ ಭಾರತ್‌ ಜೋಡೊ ಯಾತ್ರೆ (Bharat Jodo Yatra) ಮಧ್ಯೆಯೇ ಸುದ್ದಿಗೋಷ್ಠಿ ನಡೆಸಿದ ಅವರು, “ಉದಯಪುರದಲ್ಲಿ ನಡೆದ ಚಿಂತನಾ ಶಿಬಿರದಲ್ಲಿ ಕೈಗೊಂಡ ಒಬ್ಬ ವ್ಯಕ್ತಿಗೆ ಒಂದು ಹುದ್ದೆ (One Man One Post) ಎಂಬ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ” ಎಂದು ಸ್ಪಷ್ಟಪಡಿಸಿದರು. ಆ ಮೂಲಕ ಎರಡು ಹುದ್ದೆ ಮೇಲೆ ಕಣ್ಣಿಟ್ಟಿದ್ದ ಗೆಹ್ಲೋಟ್‌ ಉತ್ಕಟ ಬಯಕೆಗೆ ಇತಿಶ್ರೀ ಹಾಡಿದರು.

ರಾಜಸ್ಥಾನ ಮುಖ್ಯಮಂತ್ರಿಯಾಗಿರುವ ಅಶೋಕ್‌ ಗೆಹ್ಲೋಟ್‌ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಇದೇ ದಿಸೆಯಲ್ಲಿ ಅವರು ಶಾಸಕರ ಸಭೆ ನಡೆಸಿ ಬಲ ಪ್ರದರ್ಶನ ಮಾಡಿದ್ದಾರೆ. ಹಾಗೆಯೇ, ಮುಖ್ಯಮಂತ್ರಿ ಹುದ್ದೆ ಉಳಿಸಿಕೊಂಡೇ ಅಧ್ಯಕ್ಷರಾಗುವ ಇಚ್ಛೆ ಹೊಂದಿದ್ದಾರೆ. ಆದರೆ, ರಾಹುಲ್‌ ಹೇಳಿಕೆಯಿಂದ ಗೆಹ್ಲೋಟ್‌ ಅವರಿಗೆ ಸ್ಪಷ್ಟ ಸಂದೇಶ ರವಾನೆಯಾದಂತಾಗಿದೆ.

ಸ್ಪರ್ಧಿಸಲ್ಲ ಎಂಬುದರ ಸುಳಿವು ಕೊಟ್ಟ ರಾಹುಲ್‌

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂಬುದರ ಕುರಿತು ರಾಹುಲ್‌ ಗಾಂಧಿ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. “ಯಾರೇ ಕಾಂಗ್ರೆಸ್‌ ಅಧ್ಯಕ್ಷರಾದರೂ ಅವರು ಸಿದ್ಧಾಂತಗಳ ಪ್ರತಿನಿಧಿಯಾಗಿ, ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಭಾರತದ ಕುರಿತು ದೂರದೃಷ್ಟಿ ಹೊಂದಿರಬೇಕು” ಎಂದು ಹೇಳಿದ್ದಾರೆ. ಹಾಗಾಗಿ, ಹಲವು ದಶಕಗಳ ಬಳಿಕ ಗಾಂಧಿ ಕುಟುಂಬದ ಹೊರತಾದವರು ಪಕ್ಷದ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಅಕ್ಟೋಬರ್‌ ೧೭ರಂದು ಕಾಂಗ್ರೆಸ್‌ ಚುನಾವಣೆ ನಡೆಯಲಿದೆ.

ಕಮಲ್‌ನಾಥ್‌ ಸೇರಿ ಹಲವರ ಸ್ಪರ್ಧೆ?

ಅಶೋಕ್‌ ಗೆಹ್ಲೋಟ್‌, ಶಶಿ ತರೂರ್‌ ಮಾತ್ರವಲ್ಲ, ಇನ್ನೂ ಹಲವು ನಾಯಕರು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎಂದು ತಿಳಿದುಬಂದಿದೆ. ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌, ಕೇಂದ್ರದ ಮಾಜಿ ಸಚಿವರಾದ ಮನೀಶ್‌ ತಿವಾರಿ, ಪೃಥ್ವಿರಾಜ್‌ ಚೌಹಾಣ್‌, ಮಲ್ಲಿಕಾರ್ಜುನ ಖರ್ಗೆ ಸೇರಿ ಇನ್ನೂ ಮುಂತಾದ ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | Shashi Tharoor | ತರೂರ್‌ಗೆ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆ ನೀಡಲು ಸೋನಿಯಾ ಅಸ್ತು, ದಶಕಗಳ ಬಳಿಕ ಗಾಂಧಿಯೇತರರಿಗೆ ಗಾದಿ?

Exit mobile version