Site icon Vistara News

Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

Covishield

We Disclosed All Rare Side-Effects: Covid Vaccine Maker Amid Safety Row

ಪುಣೆ: ಲಸಿಕೆಯ ಅಡ್ಡಪರಿಣಾಮದ ಕುರಿತು ಭಾರತ ಸೇರಿ ಜಗತ್ತಿನಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬ್ರಿಟಿಷ್ ಔಷಧೀಯ ದೈತ್ಯ ಅಸ್ಟ್ರಾಜೆನಿಕಾ (AstraZeneca) ಕಂಪನಿಯು ಕೊರೊನಾ ನಿರೋಧಕ ಲಸಿಕೆ ಕೋವಿಶೀಲ್ಡ್ (Covishield Vaccine)‌ ಅನ್ನು ಜಾಗತಿಕ ಮಟ್ಟದಲ್ಲಿ ಹಿಂಪಡೆಯಲು ಮುಂದಾಗಿದೆ. ಇದರ ಬೆನ್ನಲ್ಲೇ, ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಉತ್ಪಾದಿಸಿದ್ದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (SII) ಕಂಪನಿಯು, “ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮದ ಕುರಿತು ಇದಕ್ಕೂ ಮೊದಲೇ ಬಹಿರಂಗಪಡಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ಅಸ್ಟ್ರಾಜೆನಿಕಾ ಸಹಯೋಗದಲ್ಲಿಯೇ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದೆ. ಜಾಗತಿಕವಾಗಿ ಅಡ್ಡ ಪರಿಣಾಮದ ಕುರಿತು ಚರ್ಚಿಸುತ್ತಿರುವ ಬೆನ್ನಲ್ಲೇ ಕಂಪನಿಯು ಸ್ಪಷ್ಟನೆ ನೀಡಿದೆ. “ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS ಸೇರಿ ಎಲ್ಲ ವಿರಳ ಅಡ್ಡ ಪರಿಣಾಮಗಳ ಕುರಿತು ಈಗಾಗಲೇ ಮಾಹಿತಿ ಬಹಿರಂಗಪಡಿಸಲಾಗಿದೆ” ಎಂದು ಸೀರಂ ಸಂಸ್ಥೆಯ ವಕ್ತಾರರೊಬ್ಬರು ಪ್ರಕಟಣೆ ತಿಳಿಸಿದ್ದಾರೆ.

2021ರಲ್ಲೇ ಉತ್ಪಾದನೆ ಸ್ಥಗಿತ

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಕೋಟ್ಯಂತರ ಡೋಸ್‌ಗಳನ್ನು ಜನರಿಗೆ ನೀಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಬಳಿಕ ಅಂದರೆ, 2021ರ ಡಿಸೆಂಬರ್‌ನಿಂದಲೇ ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂಬುದಾಗಿ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಮಾಹಿತಿ ನೀಡಿದೆ. ಅಷ್ಟೇ ಅಲ್ಲ, ಲಸಿಕೆಯ ಬಾಟಲಿ ಮೇಲೆಯೇ ಅಡ್ಡ ಪರಿಣಾಮದ ಕುರಿತು ಎಚ್ಚರಿಕೆ ನೀಡಿತ್ತು.

ಕೋವಿಶೀಲ್ಡ್‌ ಲಸಿಕೆ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂಬುದನ್ನು ಈ ಹಿಂದೆ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದ ಅಸ್ಟ್ರಾಜೆನಿಕಾ ಕಂಪನಿಯು ಈಗ ವ್ಯಾಪಾರ ಉದ್ದೇಶದಿಂದ ಎಲ್ಲ ಮಾರುಕಟ್ಟೆಗಳಿಂದ ತನ್ನ ಈ ಲಸಿಕೆಯನ್ನು ತೆಗೆದು ಹಾಕುವುದಾಗಿ ಘೋಷಿಸಿದೆ.

ತಜ್ಞರು ಹೇಳುವುದಿಷ್ಟು

ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ ಅಡ್ಡ ಪರಿಣಾಮದ ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಅವರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದಾರೆ. ಕೋವಿಶೀಲ್ಡ್ ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳು ಮಾತ್ರ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮವನ್ನು ಅನುಭವಿಸುತ್ತಾರೆ. ಭಾರತದಲ್ಲಿ ಇದರ ಪ್ರಮಾಣ ಇನ್ನೂ ಕಡಿಮೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: Covishield vaccine: ಕೋವಿಶೀಲ್ಡ್‌ ಲಸಿಕೆಯಿಂದ ಸೈಡ್‌ ಎಫೆಕ್ಟ್‌ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Exit mobile version