ನವದೆಹಲಿ: ದಶಕಗಳಿಂದಲೂ ನಾನಾ ಸ್ವರೂಪದ ಭಯೋತ್ಪಾದನೆಯು ಭಾರತವನ್ನು ಘಾಸಿಗೊಳಿಸುವ ಪ್ರಯತ್ನವನ್ನು ಮಾಡುತ್ತಿದೆ. ಆದರೆ, ದೇಶವು ಭಯೋತ್ಪಾದನೆಯ ವಿರುದ್ಧ ಧೈರ್ಯವಾಗಿ ಹೋರಾಡಿ ಯಶಸ್ವಿಯಾಗುತ್ತಿದೆ ಎಂದು ಭಯೋತ್ಪಾದನೆ ನಿಗ್ರಹ ಹಣಕಾಸು ಕುರಿತ ಮೂರನೇ ‘ನೋ ಮನಿ ಫಾರ್ ಟೆರರ್’ (ಎನ್‌ಎಂಎಫ್‌ಟಿ) ಸಚಿವರ ಸಮ್ಮೇಳನದ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.
ಈ ಸಮಾವೇಶವು ಭಾರತದಲ್ಲಿ ನಡೆಯುತ್ತಿರುವುದು ಸೂಕ್ತವಾಗಿದೆ. ಯಾಕೆಂದರೆ, ಭಯೋತ್ಪಾದನೆಯನ್ನು ಜಗತ್ತು ಗಂಭೀರವಾಗಿ ಪರಿಗಣಿಸಲು ಆರಂಭಿಸಲು ಮುಂದಾಗುವುದಕ್ಕಿಂತ ಮುಂಚೆಯೇ ನಮ್ಮ ದೇಶವು ಅದರ ಭಯಾನಕ ಪರಿಣಾಮಗಳನ್ನು ಅನುಭವಿಸಿದೆ. ಕಳೆದ ಕೆಲವು ದಶಕಗಳಿಂದಲೂ ಬೇರೆ ಬೇರೆ ರೂಪದ ಭಯೋತ್ಪಾದನೆಯು ದೇಶವನ್ನು ಘಾಸಿಗೊಳಿಸುವ ಪ್ರಯತ್ನ ಮಾಡಿದೆ. ಆದರೆ, ನಾವು ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದೇವೆ ಎಂದು ಪ್ರಧಾನಿ ಹೇಳಿದರು.
ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ವಿಶಾಲ, ವ್ಯವಸ್ಥಿತ ಮತ್ತು ಸಕ್ರಿಯವಾಗಿರುವಂಥ ಪ್ರತಿಕ್ರಿಯೆ ಅಗತ್ಯವಾಗಿದೆ. ಒಂದು ವೇಳೆ ನಮ್ಮ ಪ್ರಜೆಗಳು ಸುರಕ್ಷಿತವಾಗಿರಬೇಕು ಎನ್ನುವಿರಾದರೆ, ಮನೆಯ ಬಾಗಿಲು ತನಕ ಭಯೋತ್ಪಾದನೆ ಬರೋವರೆಗೆ ಕಾಯುವುದ ಬೇಡ. ನಾವು ಉಗ್ರರ ಬೆನ್ನಟ್ಟಿ ಹೋಗೋಣ, ಅವರ ಬೆಂಬಲದ ಜಾಲವನ್ನು ಭೇದಿಸೋಣ ಮತ್ತು ಅವರಿಗೆ ದೊರೆಯುವ ಆರ್ಥಿಕ ನೆರವನ್ನು ಕಡಿತ ಮಾಡೋಣ ಎಂದು ಪ್ರಧಾನಿ ಹೇಳಿದರು.
ಎಲ್ಲ ಉಗ್ರರ ಕೃತ್ಯಗಳು ಸಮಾನ ಕ್ರಮ ಮತ್ತು ಆಕ್ರೋಶಕ್ಕೆ ಅರ್ಹವಾಗಿವೆ. ಇದು ಎಲ್ಲರಿಗೂ ಗೊತ್ತಿರುವಂಥದ್ದೇ, ಉಗ್ರ ಸಂಘಟನೆಗಳು ಅನೇಕ ಮೂಲಗಳಿಂದ ಹಣವನ್ನು ಪಡೆದುಕೊಳ್ಳುತ್ತವೆ. ಈ ಪೈಕಿ ಮೊದಲನೆಯದು ಸರ್ಕಾರಿ ಪ್ರಾಯೋಜಕತ್ವ. ನಿರ್ದಿಷ್ಟವಾಗಿ ಕೆಲವು ರಾಷ್ಟ್ರಗಳು ತಮ್ಮ ವಿದೇಶಾಂಗ ನೀತಿಯ ಭಾಗವಾಗಿ ಉಗ್ರರಿಗೆ ನೆರವು ಒದಗಿಸುತ್ತಿವೆ. ಉಗ್ರ ಸಂಘಟನೆಗಳಿಗೆ ರಾಜಕೀಯ, ಸೈದ್ಧಾಂತಿಕ ಮತ್ತು ಆರ್ಥಿಕವಾಗಿ ನೆರವು ನೀಡುತ್ತವೆ ಎಂದು ಹೆಸರು ಹೇಳದೇ ಪಾಕಿಸ್ತಾನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಕಿಡಿ ಕಾರಿದರು.
ಇದನ್ನೂ ಓದಿ | PM Modi | ಪೆನ್, ಗನ್ -ಎರಡೂ ಬಗೆಯ ನಕ್ಸಲರನ್ನು ಬಗ್ಗು ಬಡಿಯುತ್ತೇವೆ: ಪ್ರಧಾನಿ ಮೋದಿ