Site icon Vistara News

ವಿಸ್ತಾರ ಸಂಪಾದಕೀಯ: ರೈಲ್ವೇ ಸುರಕ್ಷತೆಗೆ ಮತ್ತಷ್ಟು ಗಮನ ಹರಿಸಬೇಕಿದೆ

Train Safety

ಲಕ್ನೋದಿಂದ ರಾಮೇಶ್ವರಂಗೆ ತೆರಳುತ್ತಿದ್ದ ಪ್ರವಾಸಿ ರೈಲಿನ ಕೋಚ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 10 ಮಂದಿ ಸಾವಿಗೀಡಾಗಿದ್ದಾರೆ. ಗಾಯಗೊಂಡವರ ಸಂಖ್ಯೆಯೂ ಹೆಚ್ಚಾಗಿದೆ. ಶನಿವಾರ ಮುಂಜಾನೆ ಮದುರೈ ರೈಲ್ವೆ ಜಂಕ್ಷನ್ ಬಳಿ ನಿಂತಿದ್ದ ಭಾರತ್ ಗೌರವ್ ವಿಶೇಷ ಪ್ರವಾಸಿ ಕೋಚ್‌ನ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ದುರಂತ ಸಂಭವಿಸಲು ಪ್ರಮುಖ ಕಾರಣ ಪ್ರಯಾಣಿಕರೊಬ್ಬರು ಅಕ್ರಮವಾಗಿ ಬಳಸಿದ ಎಲ್‌ಪಿಜಿ ಸಿಲಿಂಡರ್ ಎಂದು ತಿಳಿದುಬಂದಿದೆ. 1989ರ ರೈಲ್ವೆ ಕಾಯಿದೆಯ ಸೆಕ್ಷನ್ 67, 164 ಮತ್ತು 165 ರ ಅಡಿಯಲ್ಲಿ ಪ್ರಯಾಣಿಕರು ರೈಲಿನಲ್ಲಿ ಗ್ಯಾಸ್ ಸಿಲಿಂಡರ್‌ಗಳು, ಕ್ರ್ಯಾಕರ್‌, ಆ್ಯಸಿಡ್​, ಸೀಮೆ ಎಣ್ಣೆ, ಪೆಟ್ರೋಲ್, ಥರ್ಮಿಕ್ ವೆಲ್ಡಿಂಗ್ ಮತ್ತು ಸ್ಟೌ ಹಾಗೂ ಸ್ಫೋಟಕಗಳಂತಹ ಬೆಂಕಿಯುಂಟಾಗುವ ವಸ್ತುಗಳನ್ನು ಸಾಗಿಸುವುದು ಶಿಕ್ಷಾರ್ಹ ಅಪರಾಧ. ಇದೀಗ ಈ ದುರಂತಕ್ಕೆ ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ರೈಲ್ವೆಯಲ್ಲಿ ಇಂಥ ನಿರ್ಲಕ್ಷ್ಯ, ಸುರಕ್ಷತೆಗೆ ಆದ್ಯತೆ ನೀಡದ ಪ್ರಮಾದಗಳಿಂದಾಗಿ ಇತ್ತೀಚೆಗೆ ಹಲವು ಅನಾಹುತಗಳು ಸಂಭವಿಸಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಉದ್ಯಾನ್‌ ಎಕ್ಸ್‌ಪ್ರೆಸ್‌ನಲ್ಲಿ ಸಂಭವಿಸಿದ ಅಗ್ನಿ ಅನಾಹುತವನ್ನು ನೆನಪಿಸಿಕೊಳ್ಳಬಹುದು. ಪುಣ್ಯವಶಾತ್‌ ಪ್ರಯಾಣಿಕರು ಇಳಿದು ಹೋಗಿದ್ದರಿಂದ ಯಾರಿಗೂ ಏನೂ ಅಪಾಯವಾಗಿರಲಿಲ್ಲ. ಇದಕ್ಕೆ ಶಾರ್ಟ್‌ ಸರ್ಕ್ಯುಟ್‌ ಕಾರಣ ಎಂದು ಹೇಳಲಾಗಿದೆ. ಅಧಿಕಾರಿಗಳು ವಿದ್ಯುತ್‌ ಸಂಪರ್ಕದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಿದೆ. ಇಂಥ ಆಕಸ್ಮಿಕಗಳು ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಕೆಲವೊಮ್ಮೆ ಸಿಗ್ನಲ್‌ ಬದಲಾವಣೆಯ ಹೊತ್ತಿನಲ್ಲಿ ಆಗುವ ಮನುಷ್ಯ ಪ್ರಮಾದಗಳಿಂದ ಭಾರೀ ಅನಾಹುತಗಳು ಸಂಭವಿಸುತ್ತವೆ. ಇದಕ್ಕೆ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿ 293 ಮಂದಿಯನ್ನು ಬಲಿ ತೆಗೆದುಕೊಂಡ ಅವಘಡವೇ ನಿದರ್ಶನ. ಹಾಗೆಯೇ ಕೆಲವು ವೈಯಕ್ತಿಕ ದಾಳಿ ಪ್ರಕರಣಗಳೂ ನಡೆದಿವೆ. ಕೆಲವು ತಿಂಗಳ ಹಿಂದೆ ಕೇರಳದ ಆಲಪ್ಪುರ- ಕಣ್ಣೂರು ಎಕ್ಸ್‌ಪ್ರೆಸ್‌ನಲ್ಲಿ ದುಷ್ಕರ್ಮಿಯೊಬ್ಬ ಬೋಗಿಗೆ ಪೆಟ್ರೋಲ್‌ ಸುರಿದು ಬೆಂಕಿ ಕೊಟ್ಟಿದ್ದ. ಆಗ ಕೆಲವು ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು. ಇದೇ ತಿಂಗಳಲ್ಲಿ ಜೈಪುರ- ಮುಂಬಯಿ ರೈಲಿನಲ್ಲಿ ಆರ್‌ಪಿಎಫ್‌ ಜವಾನನೊಬ್ಬ ಹತಾಶೆಯಿಂದ ದಾಳಿ ನಡೆಸಿ ನಾಲ್ಕು ಮಂದಿಯನ್ನು ಕೊಂದುಹಾಕಿದ್ದಾನೆ.

ಇಂಥ ಪ್ರಕರಣಗಳು ಹೆಚ್ಚುತ್ತ ಹೋದರೆ ರೈಲ್ವೆ ಪ್ರಯಾಣದ ಸುರಕ್ಷತೆಯ ಬಗ್ಗೆ ಅನುಮಾನ, ಆತಂಕಗಳು ಮೂಡುತ್ತವೆ. ಭಾರತೀಯ ರೈಲ್ವೇಯು ಪ್ರಯಾಣಿಕರ ಸುರಕ್ಷತೆಗಾಗಿ ಮಾಡುತ್ತಿರುವ ವೆಚ್ಚ ಸಣ್ಣದೇನಲ್ಲ. 2017-2018 ಮತ್ತು 2021-2022ರ ಆರ್ಥಿಕ ವರ್ಷಗಳ ನಡುವೆ ಸುರಕ್ಷತಾ ಕ್ರಮಗಳಿಗಾಗಿ ಇಲಾಖೆ ರೂ. 1 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ. ಇದರಲ್ಲಿ ಟ್ರ್ಯಾಕ್ ನವೀಕರಣದ ಮೇಲೆ ಹೆಚ್ಚಿನ ಗಮನ ಹರಿಸಿದೆ. 2014-2015 ಮತ್ತು 2023-2024 (ಬಜೆಟ್ ಅಂದಾಜು) ನಡುವೆ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಗಳ ವೆಚ್ಚ 70,274 ಕೋಟಿ ರೂ.ಗಳಿಂದ 1,78,012 ಕೋಟಿ ರೂ.ಗೆ ತಲುಪಿದೆ. ಆದರೆ ಬೆಂಕಿ ಆಕಸ್ಮಿಕ, ವಿದ್ಯುತ್‌ ಆಘಾತ, ಸಶಸ್ತ್ರ ದಾಳಿ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿಲ್ಲ. ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು (CCRS) ನೀಡಿದ 2021-2022ರ ವಾರ್ಷಿಕ ವರದಿಯಲ್ಲಿ, ಭಾರತೀಯ ರೈಲ್ವೆಯಲ್ಲಿ ಲೋಕಲ್‌ ರೈಲುಗಳು ಮತ್ತು MEMU (ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲುಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಗಮನ ಸೆಳೆದಿದ್ದಾರೆ. ಈ ರೈಲುಗಳಲ್ಲಿ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಗಳ ಅನುಪಸ್ಥಿತಿ ಇದೆ ಎಂದಿದ್ದಾರೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಜಿ20 ಶೃಂಗ, ಸಾರೋಣ ಭಾರತದ ಉತ್ತುಂಗ

ಮುಂಬೈ ಉಪನಗರ ಒಂದರಲ್ಲಿಯೇ ಪ್ರತಿದಿನ 70 ಲಕ್ಷ ಪ್ರಯಾಣಿಕರು ರೈಲಿನಲ್ಲಿ ಓಡಾಡುತ್ತಾರೆ. ಇಂಥ ಭಾರೀ ಜನದಟ್ಟಣೆ ಇದ್ದರೂ ಇವು ಶಾಖ ಮತ್ತು ಹೊಗೆ ಶೋಧಕಗಳಂತಹ ಪ್ರಮುಖ ಅಗ್ನಿ ಸುರಕ್ಷತೆ ಕ್ರಮಗಳನ್ನು ಹೊಂದಿಲ್ಲವಂತೆ. CCRS ಅವುಗಳ ಸ್ಥಾಪನೆ ತುರ್ತು ಅಗತ್ಯ ಎಂದಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರೈಲುಗಳಲ್ಲಿ ಸ್ವಯಂಚಾಲಿತ ಅಗ್ನಿಶಾಮಕ ವ್ಯವಸ್ಥೆಗಳಿರಬೇಕು ಎಂದು CCRS ಶಿಫಾರಸು ಮಾಡಿದೆ. ರೈಲ್ವೆಯ ಎಲ್ಲಾ ಕೋಚ್‌ಗಳಲ್ಲಿ ರೆಕಾರ್ಡಿಂಗ್ ಸಾಮರ್ಥ್ಯವಿರುವ CCTV ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಿದೆ. ವಿಮಾನಗಳಲ್ಲಿ ಬಳಸುವ ಕಪ್ಪು ಪೆಟ್ಟಿಗೆಗಳಂತೆಯೇ ಇವು ಕೆಲಸ ಮಾಡಬೇಕು. ಹಾಗೆಯೇ ಸಶಸ್ತ್ರ ದಾಳಿ, ಬಾಂಬ್‌ ಅಳವಡಿಕೆಯಂಥ ಭಯೋತ್ಪಾದಕ ಕೃತ್ಯಗಳನ್ನು ಪತ್ತೆ ಹಚ್ಚುವ ಉಪಕ್ರಮಗಳು ಬೇಕು. ಹಳಿ ಬದಲಾವಣೆಗೆ ಅಳವಡಿಸಲಾದ ʼಕವಚ್‌ʼನಂಥ ತಂತ್ರಜ್ಞಾನಗಳ ಬಳಪಡಿಸುವಿಕೆಯಂತೂ ಹೇಗೂ ಬೇಕಿದೆ. ಒಟ್ಟಿನಲ್ಲಿ ಸುರಕ್ಷತೆ ರೈಲ್ವೆಯಲ್ಲಿ ಆದ್ಯತೆಯಾಗಬೇಕಿದೆ.

Exit mobile version