Site icon Vistara News

Viral Video: ರಣರಂಗವಾದ ಆರತಕ್ಷತೆ; ವಧು-ವರರ ಕಡೆಯವರ ಹೊಡೆದಾಟದ ಕತೆ!

Wedding reception turns into boxing ring and chair throw at each other, Viral Video

ಲಕ್ನೋ: ಉತ್ತರ ಪ್ರದೇಶದ (Uttar Pradesh) ಲಕ್ನೋದ (Lucknow) ಅಮೀನಾಬಾದ್‌ನಲ್ಲಿ ಆಯೋಜಿಸಲಾಗಿದ್ದ ವಿವಾಹದ ಆರತಕ್ಷತೆ (Wedding Reception) ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ(Video Viral). ವರ ಮತ್ತು ವಧುವಿನ ಕಡೆಯವರ ನಡುವಿನ ತೀವ್ರ ಜಟಾಪಟಿಯೇ ಇದಕ್ಕೆ ಕಾರಣ. ಕೆಲವು ವರದಿಗಳ ಪ್ರಕಾರ, ಡಿಜೆ ನೃತ್ಯದ ಸಮಯದಲ್ಲಿ ಘರ್ಷಣೆ ಸಂಭವಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಎರಡೂ ಕಡೆಯವರು ಪ್ಲಾಸ್ಟಿಕ್ ಕುರ್ಚಿಗಳಿಂದ ಪರಸ್ಪರ ಎಸೆದು ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದೆ. ದುರದೃಷ್ಟವಶಾತ್, ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿರುವ ಮಹಿಳೆಯರ ಮೇಲೂ ಕುರ್ಚಿಗಳನ್ನು ಎಸೆಯಲಾಗಿದ್ದು, ಅವರು ಗಾಯಗೊಂಡಿದ್ದಾರೆ. ಅಮೀನಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಗೆ ನವಾಬ್ ಪಾರ್ಕ್ ಬಳಿಯ ಬುದ್ಧ ಲಾಲ್ ಬದ್ಲು ಪ್ರಸಾದ್ ಧರ್ಮಶಾಲಾದಲ್ಲಿ ಈ ಘಟನೆ ನಡೆದಿದೆ.

ಫೆಬ್ರವರಿ 9ರ ಶುಕ್ರವಾರ ರಾತ್ರಿ ಡಿಜೆಗೆ ನೃತ್ಯ ಮಾಡುವಾಗ ಘರ್ಷಣೆ ಶುರುವಾಗಿದೆ. ಕುರ್ಚಿಗಳ ಮೂಲಕ ಎರಡೂ ಕಡೆಯುವರು ಹೊಡೆದಾಟ ಆರಂಭಿಸಿದ್ದಾರೆ. ಪರಿಣಾಮವಾಗಿ, ಕನಿಷ್ಠ ಮೂರು ಅತಿಥಿಗಳ ತಲೆಗೆ ಗಾಯಗಳಾಗಿವೆ. ಮೊದಲಿಗೆ ಜಗಳವು ಎರಡೂ ಪಕ್ಷಗಳ ಕೆಲವು ಸದಸ್ಯರ ನಡುವೆ ಸಂಭವಿಸಿತು. ಆದರೆ, ಬಳಿಕ ವರ ಮತ್ತು ವಧುವಿನ ಕುಟುಂಬದವರ ನಡುವಿನ ಜಗಳವಾಗಿ ಮಾರ್ಪಟ್ಟಿತು. ಹೊಡೆದಾಟದಲ್ಲಿ ಪಾಲ್ಗೊಂಡವರಿಗೆ ಗಾಯಗಳಾಗಿವೆ. ಆದರೆ, ಜಗಳವನ್ನು ಬಿಡಿಸಲು ಬಂದ ಮಹಿಳೆಯರ ಮೇಲೂ ಹಲ್ಲೆ ಮಾಡಲಾಗಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಘರ್ಷಣೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು. ನಂತರ ವಾಗ್ವಾದದಲ್ಲಿ ಭಾಗಿಯಾದ ಎರಡೂ ಕಡೆಯವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಸದ್ಯಕ್ಕೆ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. ಆದಾಗ್ಯೂ, ಪೊಲೀಸರು ಈ ಕುರಿತು ತನಿಖೆಯನ್ನು ಆರಂಭಿಸಿದ್ದಾರೆ.

ಗಂಭೀರ ಗಾಯಗೊಂಡವರನ್ನು ವಜೀರ್‌ಗಂಜ್‌ನ ಅಕ್ಷರ ಎಂದು ಗುರುತಿಸಲಾಗಿದೆ. ಜೊತೆಗೆ ಕೈಸರ್‌ಬಾಗ್‌ನ ಮಹಾಕ್ ಮತ್ತು ಬಲ್ವಂತ್ ಸೋಂಕರ್ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ. ಮದುವೆಯ ಆರತಕ್ಷತೆಯಲ್ಲಿ ನಡೆದ ಈ ಭಾರೀ ಹೊಡೆದಾಟದ ಹಿಂದಿನ ಕಾರಣವನ್ನು ತಿಳಿಯಲು ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಹುಲಿ ಬೆಕ್ಕಿನ ಹಿರಿಯಣ್ಣ ಎನ್ನುವುದು ಇದಕ್ಕೆ; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

Exit mobile version