ಹೊಸದಿಲ್ಲಿ; ಯೆಮೆನ್‌ನ ಹೌತಿ ಬಂಡುಕೋರರಿಂದ (Houthi Rebels) ವ್ಯಾಪಾರಿ ಹಡಗುಗಳ ಮೇಲೆ ಪದೇ ಪದೆ ದಾಳಿ ನಡೆಯುತ್ತಿರುವುದರ ಪರಿಣಾಮ, ತೈಲ ಪೂರೈಕೆಯ (Oil supply) ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಇದರಿಂದ ಭಾರತ ಉಪಖಂಡದಲ್ಲಿ ಶೀಘ್ರವೇ ತೈಲ ಬೆಲೆ ಏರಿಕೆಯಾಗುವ (Oil Price hike) ಸಂಭವ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಹೌತಿ ಬಂಡುಕೋರರಿಂದಾಗಿ ಕೆಂಪು ಸಮುದ್ರದಲ್ಲಿ ತಲೆದೋರುತ್ತಿರುವ ನಿರಂತರ ಸಂಘರ್ಷಗಳು ವಿಶ್ವಾದ್ಯಂತ ಪೂರೈಕೆ ಸರಪಳಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ವರ್ಲ್ಡ್ ಎಕನಾಮಿಕ್ ಫೋರಮ್ (WEF) ಅಧ್ಯಕ್ಷರಾದ ಬೋರ್ಜ್ ಬ್ರೆಂಡೆ ಅವರ ಪ್ರಕಾರ, ಈ ಪರಿಸ್ಥಿತಿಯು ಭಾರತದಂತಹ ತೈಲ ಆಮದುಗಳನ್ನು ಅವಲಂಬಿಸಿರುವ ರಾಷ್ಟ್ರಗಳಿಗೆ ತೈಲ ಬೆಲೆಯಲ್ಲಿ $10-20 (₹820- ₹1640) ಏರಿಕೆಗೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಹೆಚ್ಚಳವು ಭಾರತೀಯ ಆರ್ಥಿಕತೆಯ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದಿದ್ದಾರೆ.
ಸೂಯೆಜ್ ಕಾಲುವೆಯ ಅಡೆತಡೆಯು ವಿಶ್ವಾದ್ಯಂತ ಪೂರೈಕೆ ಸರಪಳಿಗೆ ಹಾನಿಯನ್ನುಂಟುಮಾಡಲಿದೆ ಎಂದು ಕಳವಳ ವ್ಯಕ್ತಪಡಿಸಿರುವ ಬ್ರೆಂಡೆ, ಈ ಪ್ರದೇಶದಲ್ಲಿ ಹೌತಿ ದಾಳಿಯನ್ನು ಶೀಘ್ರವಾಗಿ ನಿಲ್ಲಿಸುವ ಭರವಸೆಯನ್ನು ವ್ಯಕ್ತಪಡಿಸಿದರು. ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಾರ್ಷಿಕ WEF ಸಭೆಯ 54ನೇ ಆವೃತ್ತಿಯಲ್ಲಿ ಬ್ರೆಂಡೆ ಈ ಹೇಳಿಕೆಗಳನ್ನು ನೀಡಿದ್ದಾರೆ.
ಕೆಂಪು ಸಮುದ್ರದಲ್ಲಿನ ಹಡಗುಗಳ ಮೇಲಿನ ದಾಳಿಯು ವಿಶ್ವದ ಪ್ರಮುಖ ಹಡಗು ಮಾರ್ಗಗಳಲ್ಲಿ ವ್ಯಾಪಾರವನ್ನು ಅಡ್ಡಿಪಡಿಸಿದೆ. ಹಡಗುಗಳು ಸುರಕ್ಷಿತ ಮಾರ್ಗಕ್ಕಾಗಿ ದಕ್ಷಿಣ ಆಫ್ರಿಕಾದ ಸುತ್ತಲೂ ಸುತ್ತಿ ಬರುವುದರಿಂದ ಸಾಗಣೆ ಸಮಯ 10- 15 ದಿನಗಳು ಹೆಚ್ಚಾಗುತ್ತಿದೆ.
ವ್ಯಾಪಾರ ವಿಸ್ತರಣೆಯು ಕಳೆದ ವರ್ಷ 3.4 ಶೇಕಡಾದಿಂದ 0.8 ಶೇಕಡಾಕ್ಕೆ ಇಳಿದಿದೆ ಎಂದು ಬ್ರೆಂಡೆ ಒತ್ತಿ ಹೇಳಿದರು. ಇದರ ಹೊರತಾಗಿಯೂ, ಕೆಂಪು ಸಮುದ್ರದ ಬಿಕ್ಕಟ್ಟಿನ ನಡುವೆಯೂ ಜಾಗತಿಕ ವ್ಯಾಪಾರವು ಈ ವರ್ಷ ಸಾಧಾರಣ ಚೇತರಿಕೆಯನ್ನು ಅನುಭವಿಸಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.
“ಆದರೆ ಕೆಂಪು ಸಮುದ್ರವನ್ನು ಮುಚ್ಚಲು ಸಾಧ್ಯವಿಲ್ಲ. ವಾರಗಟ್ಟಲೆ ಸೂಯೆಜ್ ಕಾಲುವೆಯನ್ನು ಮುಚ್ಚುವುದು ಸಹ ಜಾಗತಿಕ ಪೂರೈಕೆ ಸರಪಳಿಯ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ತೈಲ ಬೆಲೆಗಳ ಮೇಲೆ ಮತ್ತು ದೊಡ್ಡ ತೈಲ-ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ನಮಗೆ ತಿಳಿದಿದೆ. ಉದಾಹರಣೆಗೆ, ಭಾರತದಂತಹ ದೇಶಗಳಲ್ಲಿ $10-20 ಹೆಚ್ಚಳವು ಆರ್ಥಿಕತೆಯ ಮೇಲೆ ಬಹಳ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ” ಎಂದು ಬ್ರೆಂಡೆ ಉಲ್ಲೇಖಿಸಿದ್ದಾರೆ.
ಭಾರತದ ಆರ್ಥಿಕ ಪ್ರಗತಿಯನ್ನು ಶ್ಲಾಘಿಸಿದ ಡಬ್ಲ್ಯುಇಎಫ್ ಮುಖ್ಯಸ್ಥರು, ಡಿಜಿಟಲ್ ಆರ್ಥಿಕತೆಯಲ್ಲಿ ದೇಶದ ಬೆಳವಣಿಗೆಯು ಇತರ ಕ್ಷೇತ್ರಗಳಲ್ಲಿನ ಬೆಳವಣಿಗೆಗಿಂತ ಎರಡು ಪಟ್ಟು ವೇಗವಾಗಿದೆ ಎಂದು ಶ್ಲಾಘಿಸಿದರು.
ಇದನ್ನೂ ಓದಿ: Oil production: ಕೃಷ್ಣಾ-ಗೋದಾವರಿ ಡೀಪ್ ವಾಟರ್ ಬ್ಲಾಕ್‌ನಿಂದ ತೈಲ ಉತ್ಪಾದನೆ ಶುರು!