ಗಾಂಧಿನಗರ: ಗುಜರಾತ್‌ನಲ್ಲಿ ಕಳೆದ ೨೭ ವರ್ಷ ಅಧಿಕಾರದ ಬರ ಅನುಭವಿಸಿದ ಕಾಂಗ್ರೆಸ್‌ಗೆ ಮತ್ತೆ ೫ ವರ್ಷ ಅಧಿಕಾರ ಮರೀಚಿಕೆಯಾಗಿದೆ. ಕಳೆದ ಬಾರಿ ತೀವ್ರ ಸ್ಪರ್ಧೆಯೊಡ್ಡಿದ್ದ ಕಾಂಗ್ರೆಸ್ ಈ ಬಾರಿ ಹೀನಾಯವಾಗಿ (Gujarat Election Result) ಸೋತಿದೆ. ಬಿಜೆಪಿಯ ಭದ್ರಕೋಟೆಯನ್ನು ಭೇದಿಸಲು ಸಶಕ್ತ ಪಕ್ಷವಾಗಿ ಹೊರಹೊಮ್ಮುವಲ್ಲಿ ಅದು ವಿಫಲವಾಗಿದೆ. ಹಾಗಾದರೆ, ಕಾಂಗ್ರೆಸ್ ಸೋಲಿಗೆ ಕಾರಣಗಳೇನು? ಇಲ್ಲಿದೆ ಮಾಹಿತಿ.
೧. ಪ್ರಧಾನಿ ನರೇಂದ್ರ ಮೋದಿ ಅಲೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುಜರಾತ್ ತವರು ರಾಜ್ಯ. ಅಲ್ಲಿಂದಲೇ ಗೆಲುವು ಸಾಧಿಸಿ, ಅಲ್ಲಿಯೇ ಆಡಳಿತ ನಡೆಸಿ ಅವರು ದೆಹಲಿ ಗದ್ದುಗೆ ಏರಿದ್ದಾರೆ. ಹಾಗಾಗಿ, ಗುಜರಾತ್‌ನ ಜನ ಮೋದಿ ಅವರನ್ನು ಬಿಟ್ಟುಕೊಟ್ಟಿಲ್ಲ. ಅದರಲ್ಲೂ, ಈ ಬಾರಿ ಅವರು ೨೭ ರ‍್ಯಾಲಿ ನಡೆಸಿ, ೧೬ ವಿಧಾನಸಭೆ ಕ್ಷೇತ್ರಗಳ ಮೂಲಕ ಹಾದು ಹೋಗುವ ಐತಿಹಾಸಿಕ ಸುದೀರ್ಘ ರೋಡ್ ಶೋ ನಡೆಸಿ ಜನರ ವಿಶ್ವಾಸ ಹೆಚ್ಚಿಸಿಕೊಂಡರು. ಎರಡು ತಿಂಗಳಿಂದ ಅಮಿತ್ ಶಾ ಗುಜರಾತ್‌ನಲ್ಲಿಯೇ ಬೀಡುಬಿಟ್ಟರು. ಇದು ಕಾಂಗ್ರೆಸ್‌ಅನ್ನು ಗುಜರಾತ್‌ನಲ್ಲಿ ಮುಳುಗಿಸಿತು.
೨. ಅಹ್ಮದ್ ಪಟೇಲ್ ಅನುಪಸ್ಥಿತಿ
೨೦೧೭ರಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ ೭೭ ಕ್ಷೇತ್ರ ಗೆದ್ದಿದ್ದೇ ಅಹ್ಮದ್ ಪಟೇಲ್ ಎಂಬ ಜನಪ್ರಿಯ ನಾಯಕನ ಶ್ರಮದಿಂದ. ಅದರಲ್ಲೂ, ಅದೇ ವರ್ಷ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸಿದ್ದು, ಕಾರ್ಯಕರ್ತರನ್ನು ಒಗ್ಗೂಡಿಸಿದ್ದು ಅವರ ಹೆಗ್ಗಳಿಕೆಯಾಗಿತ್ತು. ಆದರೆ, ಅಹಮದ್ ನಿಧನರಾಗಿದ್ದಾರೆ. ಈ ಬಾರಿ ಗುಜರಾತ್‌ನಲ್ಲಿ ಅಹ್ಮದ್ ಪಟೇಲರ್‌ರಂತಹ ಬಲಾಢ್ಯ ಮತ್ತು ಅನುಭವಿ ನಾಯಕರ ಅನುಪಸ್ಥಿತಿ ಹಾಗೂ ಪಟೇಲ್ ಸಮುದಾಯದ ಪ್ರಬಲ ನಾಯಕರ ಕೊರತೆಯು ಕಾಂಗ್ರೆಸ್‌ಗೆ ಇನ್ನಿಲ್ಲದಂತೆ ಕಾಡಿತು. ಹಾಗಾಗಿಯೇ, ಬಿಜೆಪಿಗೆ ಕನಿಷ್ಠ ಸ್ಪರ್ಧೆಯೊಡ್ಡುವಲ್ಲಿಯೂ ವಿಫಲವಾಯಿತು.
೩. ಪ್ರಚಾರದ ಕೊರತೆ, ಜನಪ್ರಿಯ ನಾಯಕರ ಅಭಾವ
ಗುಜರಾತ್‌ನಲ್ಲಿ ಕಾಂಗ್ರೆಸ್ ನಾಯಕ ಯಾರು? ಮುಖ್ಯಮಂತ್ರಿ ಯಾರಾಗಬಹುದು ಎಂಬ ಪ್ರಶ್ನೆ ಕೇಳಿದರೆ ಬೇರೆ ರಾಜ್ಯದವರು ಬಿಡಿ, ಗುಜರಾತ್‌ನವರಿಗೇ ಉತ್ತರ ಕಂಡುಕೊಳ್ಳುವುದು ಕಷ್ಟ. ಪ್ರಿಯಾಂಕಾ ವಾದ್ರಾ, ಮಲ್ಲಿಕಾರ್ಜುನ ಖರ್ಗೆಯವರೇ ಗುಜರಾತ್‌ನಲ್ಲಿ ಪ್ರಚಾರ ಕೈಗೊಂಡರು. ಗುಜರಾತ್‌ನಲ್ಲಿ ಜನಪ್ರಿಯ ನಾಯಕರೇ ಇಲ್ಲದಂತಾಯಿತು. ಅತ್ತ, ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿರುವ ರಾಹುಲ್ ಗಾಂಧಿ ಅವರು ಕೇವಲ ಎರಡು ರ‍್ಯಾಲಿ ನಡೆಸಲಷ್ಟೇ ಸಾಧ್ಯವಾಯಿತು. ಕಾಂಗ್ರೆಸ್‌ಗೆ ಕನಿಷ್ಠಪಕ್ಷ, ಸಿಎಂ ಅಭ್ಯರ್ಥಿಯನ್ನು ಘೋಷಿಸಲೂ ಆಗಲಿಲ್ಲ.
೪. ಕಾಂಗ್ರೆಸ್ ನಾಯಕರ ಪಕ್ಷಾಂತರ ಪರ್ವ
ಗುಜರಾತ್ ಕಾಂಗ್ರೆಸ್‌ನಲ್ಲಿ ನಾಯಕತ್ವ ಬಿಕ್ಕಟ್ಟು, ಪಕ್ಷದ ನಾಯಕರಿಗೆ ಮಣೆ ಹಾಕದ ಪರಿಣಾಮ ಒಂದಷ್ಟು ನಾಯಕರು ಪಕ್ಷಾಂತರ ಮಾಡಿದ್ದು ನುಂಗಲಾರದ ತುತ್ತಾಯಿತು. ೧೧ ಬಾರಿ ಗೆದ್ದ ಶಾಸಕ ಮೋಹನ್ ಸಿಂಗ್ ರಾತ್ವಾ, ಭಾವೇಶ್ ಕತಾರ, ಹಿಮಾಂಶು ವ್ಯಾಸ್, ಹಾರ್ದಿಕ್ ಪಟೇಲ್ ಸೇರಿ ಹಲವು ಪ್ರಮುಖ ನಾಯಕರು ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದರು. ಇದರಿಂದಾಗಿ ಕಾಂಗ್ರೆಸ್‌ಗೆ ಪಕ್ಷ ಸಂಘಟನೆ, ಪ್ರಬಲ ಸಮುದಾಯದವರ ಮತಗಳನ್ನು ಸೆಳೆಯುವುದು ದುಸ್ತರವಾಯಿತು.
5. ಚುನಾವಣೆ ರಣತಂತ್ರ, ಚರ್ಚೆಯ ವಿಷಯಗಳ ಅಭಾವ
ಗುಜರಾತ್‌ನಲ್ಲಿ ಬಿಜೆಪಿಗೆ ನರೇಂದ್ರ ಮೋದಿ ಫ್ಯಾಕ್ಟರ್ ಒಂದೇ ಅನುಕೂಲವಾಗುತ್ತದೆ. ಪ್ರಯೋಗಕ್ಕೆ ಮುಂದಾದ ಆಮ್ ಆದ್ಮಿ ಪಕ್ಷವೂ ಜನರಿಗೆ ಉಚಿತ ಭರವಸೆ, ಉತ್ತಮ ಶಾಲೆಗಳ ನಿರ್ಮಾಣ, ಮನೆ ಮನೆ ಪ್ರಚಾರ ಕೈಗೊಂಡು ದೆಹಲಿ ಮಾಡೆಲ್ ಆಡಳಿತದ ವಿಷಯಗಳನ್ನಿಟ್ಟುಕೊಂಡು ಜನರನ್ನು ತಲುಪುವ ಪ್ರಯತ್ನ ಮಾಡಿತು. ಆದರೆ, ಕಾಂಗ್ರೆಸ್ ನಾಯಕರ ಬತ್ತಳಿಕೆಯೇ ಬರಿದಾಗಿತ್ತು. ಹೊಸ ವಿಷಯಗಳನ್ನು ಕಾಯಿನ್ ಮಾಡುವುದು ಬಿಡಿ, ಕೇಂದ್ರ ಸರ್ಕಾರದ ಬೆಲೆಯೇರಿಕೆ, ಪೆಟ್ರೋಲ್, ಡೀಸೆಲ್ ದರ ಇಳಿಕೆ, ರಾಜ್ಯದಲ್ಲಿರುವ ಆಡಳಿತ ವಿರೋಧಿ ಅಲೆಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿಯೂ ಕಾಂಗ್ರೆಸ್ ಹಿಂದುಳಿಯಿತು.
ಇದನ್ನೂ ಓದಿ | Gujarat Election Result | ಗುಜರಾತ್‌ನಲ್ಲಿ ಮುಗಿಲು ಮುಟ್ಟಿದ ಬಿಜೆಪಿ ಸಂಭ್ರಮಾಚರಣೆ, ಇಲ್ಲಿವೆ ಫೋಟೊಗಳು