Site icon Vistara News

Delhi MCD Election | ದೆಹಲಿಯಲ್ಲಿ ಬಿಜೆಪಿ ಲೋಕಲ್‌ ಕೋಟೆ ಭೇದಿಸಿದ ಆಪ್‌, ಗೆಲುವಿಗೆ ಪ್ರಮುಖ ಕಾರಣಗಳೇನು?

Delhi MCD Election Result

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಯು ಕಳೆದ ೧೫ ವರ್ಷಗಳಿಂದ ಕಟ್ಟಿಕೊಂಡಿದ್ದ ‘ಲೋಕಲ್‌ ಕೋಟೆ’ಯನ್ನು ಆಮ್‌ ಆದ್ಮಿ ಪಕ್ಷವು ಭೇದಿಸಿದೆ. ಇದು ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು (Delhi MCD Election), ದೆಹಲಿಯಲ್ಲಿ ಇನ್ನು ಅರವಿಂದ ಕೇಜ್ರಿವಾಲ್‌ ಪಕ್ಷದ ‘ಡಬಲ್‌ ಎಂಜಿನ್‌’ ಸರ್ಕಾರದ ಆಡಳಿತ ನಡೆಯಲಿದೆ. ಹಾಗಾದರೆ, ರಾಷ್ಟ್ರ ರಾಜಧಾನಿಯಲ್ಲಿ ಆಪ್‌ ಗೆಲುವಿಗೆ ಕಾರಣಗಳೇನು? ರಾಷ್ಟ್ರೀಯ ಪಕ್ಷವೊಂದನ್ನು ಆಪ್‌ನಂತಹ ಪ್ರಾದೇಶಿಕ ಪಕ್ಷವು ಹೇಗೆ ಮಕಾಡೆ ಮಲಗಿಸಿತು ಎಂಬುದರ ಪ್ರಮುಖ ಅಂಶಗಳು ಇಲ್ಲಿವೆ.

೧. ದೆಹಲಿ ಮಾದರಿ ಆಡಳಿತ
ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಎಂಟು ವರ್ಷದಲ್ಲಿ ಆಡಳಿತ ನಡೆಸುತ್ತಿರುವ ಅರವಿಂದ ಕೇಜ್ರಿವಾಲ್‌ ಅವರು, ‘ದೆಹಲಿ ಮಾಡೆಲ್’‌ ಎಂಬ ಉತ್ತಮ ಆಡಳಿತವು ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದಾರೆ. ಉಚಿತವಾಗಿ ವಿದ್ಯುತ್‌ ಪೂರೈಕೆ, ಉತ್ತಮ ಶಾಲೆಗಳ ನಿರ್ಮಾಣ, ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವುದು, ಅದರ ಪ್ರಚಾರದಿಂದಾಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಜನರು ಬಿಜೆಪಿಯಿಂದ ಆಪ್‌ನತ್ತ ವಾಲಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

೨. ಆಡಳಿತ ವಿರೋಧಿ ಅಲೆ
ಕಳೆದ ೧೫ ವರ್ಷದಿಂದ ದೆಹಲಿ ಮಹಾನಗರ ಪಾಲಿಕೆಯ ಗದ್ದುಗೆಯಲ್ಲಿರುವ ಬಿಜೆಪಿಯು ಆಡಳಿತ ವಿರೋಧಿ ಅಲೆ ಎದುರಿಸುತ್ತಿತ್ತು. ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದು ಸಹಜವಾಗಿಯೇ, ಹತ್ತಾರು ‘ಉಚಿತ ಕೊಡುಗೆಗಳ’ ಭರವಸೆ ನೀಡಿದ ಆಮ್‌ ಆದ್ಮಿ ಪಕ್ಷದ ಮೇಲೆ ಜನರ ಭರವಸೆ ಮೂಡಿತು.

೩. ಬಿಜೆಪಿ ಅಸ್ತ್ರಗಳೇ ಆಪ್‌ನ ಪ್ರತ್ಯಸ್ತ್ರ
ದೆಹಲಿಯಲ್ಲಿ ಆಪ್‌ ಸರ್ಕಾರದ ಮೇಲೆ ಬಿಜೆಪಿ ಸರ್ಕಾರ ಹೂಡಿದ ಅಸ್ತ್ರಗಳನ್ನೇ ಆಪ್‌ ಪ್ರತ್ಯಸ್ತ್ರಗಳನ್ನಾಗಿ ಮಾಡಿತು. ಅಬಕಾರಿ ಪ್ರಕರಣದಲ್ಲಿ ಮನೀಷ್‌ ಸಿಸೋಡಿಯಾ ಅವರ ಮನೆಗಳ ಮೇಲೆ ದಾಳಿ, ಇ.ಡಿ, ಸಿಬಿಐ ಬಳಕೆಯನ್ನು ಆಪ್‌ ವಿರೋಧಿಸಿತು. ನಮ್ಮ ಮೇಲೆ ಕೇಂದ್ರ ಸರ್ಕಾರ ಗುರಾಣಿ ಬಳಸುತ್ತಿದೆ, ದೆಹಲಿಯನ್ನು ನಾವು ಅಭಿವೃದ್ಧಿಪಡಿಸುವುದು ಬಿಜೆಪಿಗೆ ಇಷ್ಟವಿಲ್ಲ ಎಂದೆಲ್ಲ ಹೇಳಿತು. ಇದು ಕೂಡ ಬಿಜೆಪಿಗೆ ಮುಳುವಾಯಿತು ಎನ್ನಲಾಗುತ್ತಿದೆ.

ಲೋಕಸಭೆ ಫೈನಲ್‌ ಗೆಲ್ಲುವುದೇ ಆಪ್‌?
ದೆಹಲಿಯಲ್ಲಿ ವಿಧಾನಸಭೆ ಚುನಾವಣೆಯನ್ನು ‘ಸೆಮಿ ಫೈನಲ್’‌ ಎಂದು ಕರೆದರೆ, ಮಹಾನಗರ ಪಾಲಿಕೆ ಚುನಾವಣೆಯನ್ನು ‘ಕ್ವಾರ್ಟರ್‌ ಫೈನಲ್‌’ ಎನ್ನಲಾಗುತ್ತದೆ. ಇವರೆಡನ್ನೂ ಗೆದ್ದವರು, ಲೋಕಸಭೆ ಚುನಾವಣೆಯ ‘ಫೈನಲ್’‌ ಗೆಲ್ಲುತ್ತಾರೆ ಎಂಬ ಮಾತಿದೆ. ಈಗಾಗಲೇ ಆಪ್‌, ಕ್ವಾರ್ಟರ್‌ ಫೈನಲ್‌ ಹಾಗೂ ಸೆಮಿಫೈನಲ್‌ನಲ್ಲಿ ಗೆದ್ದಿದೆ. ಹಾಗಾಗಿ, ೨೦೨೪ರ ‘ಫೈನಲ್‌’ನಲ್ಲೂ ಗೆಲುವು ಸಾಧಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ | Delhi MCD Election| 134 ವಾರ್ಡ್​ಗಳನ್ನು ಗೆದ್ದ ಆಪ್​; ಪ್ರಧಾನಿ ನರೇಂದ್ರ ಮೋದಿಯವರಿಂದ ಆಶೀರ್ವಾದ ಕೋರಿದ ಕೇಜ್ರಿವಾಲ್​

Exit mobile version